Kannada News  /  Karnataka  /  Karnataka Congress Government Lead By Siddaramiah To Expand Cabinet On Saturday: Who Will Be Taking As Ministers Kub
ಆರು ದಿನದ ಹಿಂದೆ ಕರ್ನಾಟಕದಲ್ಲಿ ರಚನೆಯಾದ ಕಾಂಗ್ರೆಸ್‌ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಶನಿವಾರ ನಡೆಯಲಿದ್ದು. ಇದಕ್ಕಾಗಿ ಸಿದ್ದರಾಮಯ್ಯ- ಡಿಕೆಶಿ ಜೋಡಿ ದಿಲ್ಲಿಯಲ್ಲಿ ಸಚಿವರ ಪಟ್ಟಿ ಹಾಗೂ ಖಾತೆ ಹಂಚಿಕೆಗೆ ಪ್ರಯತ್ನಿಸುತ್ತಿದೆ,
ಆರು ದಿನದ ಹಿಂದೆ ಕರ್ನಾಟಕದಲ್ಲಿ ರಚನೆಯಾದ ಕಾಂಗ್ರೆಸ್‌ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಶನಿವಾರ ನಡೆಯಲಿದ್ದು. ಇದಕ್ಕಾಗಿ ಸಿದ್ದರಾಮಯ್ಯ- ಡಿಕೆಶಿ ಜೋಡಿ ದಿಲ್ಲಿಯಲ್ಲಿ ಸಚಿವರ ಪಟ್ಟಿ ಹಾಗೂ ಖಾತೆ ಹಂಚಿಕೆಗೆ ಪ್ರಯತ್ನಿಸುತ್ತಿದೆ,

Siddaramaiah cabinet expansion: ಶನಿವಾರ ಸಿದ್ದು ಸಂಪುಟ ವಿಸ್ತರಣೆ, ಖಾತೆ ಹಂಚಿಕೆ: ಯಾರು ಇದ್ದಾರೆ ಅಂತಿ ಮ ಪಟ್ಟಿಯಲ್ಲಿ?

26 May 2023, 6:49 ISTHT Kannada Desk
26 May 2023, 6:49 IST

ಹಿರಿಯರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ಲೋಕಸಭೆ ಚುನಾವಣೆ ತಯಾರಿ ಭಾಗವಾಗಿಯೇ ಸಂಪುಟ ವಿಸ್ತರಣೆ ಕಸರತ್ತು ನಡೆದಿದೆ. ಜತೆಗೆ ಪಕ್ಷಕ್ಕೆ ಯುವ ಚೈತನ್ಯ ನೀಡುವುದು ಹೈ ಕಮಾಂಡ್‌ ಉದ್ದೇಶ.

ಬೆಂಗಳೂರು: ಕರ್ನಾಟಕದಲ್ಲಿನ ಬಹು ನಿರೀಕ್ಷಿತ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಮುಹೂರ್ತ ಶನಿವಾರ ನಿಗದಿಯಾಗಿದೆ. ಸಂಪುಟಕ್ಕೆ ಸೇರುವ ಶಾಸಕರ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಶುಕ್ರವಾರ ರಾತ್ರಿ ಹೊತ್ತಿಗೆ ಪೂರ್ಣಗೊಂಡು ರಾಜಭವನಕ್ಕೆ ರವಾನೆಯಾಗಲಿದೆ. ಶನಿವಾರ ಸಂಜೆ ವೇಳೆಗೆ ಖಾತೆಗಳನ್ನೂ ಹಂಚಿಕೆ ಮಾಡುವ ಸಾಧ್ಯತೆಗಳಿವೆ.

ಶನಿವಾರ ಬೆಳಗ್ಗೆ11.30 ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ 20 ರಿಂದ 24 ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪಕ್ಷದಲ್ಲಿನ ಮೂಲಗಳ ಪ್ರಕಾರ ಲಿಂಗಾಯಿತ, ಒಕ್ಕಲಿಗ ಸಮುದಾಯದ ಜತೆಗೆ ಹಿಂದುಳಿದ, ದಲಿತ ಸಮುದಾಯಕ್ಕೂ ಆದ್ಯತೆ ನೀಡಲಾಗಿದೆ.

ಬಹುಮತದೊಂದಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್‌ ಅವರ ನೇತೃತ್ವದ ಸರ್ಕಾರ ಕಳೆದ ವಾರ ಅಸ್ತಿತ್ವಕ್ಕೆ ಬಂದಿತ್ತು ಶನಿವಾರ ಇಬ್ಬರು ನಾಯಕರೊಂದಿಗೆ ಸಚಿವರಾಗಿ ಡಾ.ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಡಾ.ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್‌, ರಾಮಲಿಂಗಾರೆಡ್ಡಿ, ಸತೀಶ್‌ ಜಾರಕಿಹೊಳಿ. ಜಮೀರ್‌ ಅಹಮ್ಮದ್‌ ಖಾನ್‌,ಕ ಪ್ರಿಯಾಂಕ್‌ ಖರ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಒಂದೆರಡು ದಿನದಲ್ಲಿ ಸಂಪುಟ ವಿಸ್ತರಣೆ ಆಗಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಆದರೆ ಸಂಪುಟಕ್ಕೆ ಶಾಸಕರ ಸೇರ್ಪಡೆ ಹಾಗೂ ಖಾತೆ ಹಂಚಿಕೆ ಒತ್ತಡದಿಂದ ವಿಸ್ತರಣೆ ವಿಳಂಬವಾಗಿದೆ.

ಹಿರಿಯರಾದ ಆರ್.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ, ಬಸವರಾಜ ರಾಯರೆಡ್ಡಿ ಕೂಡ ಪಟ್ಟು ಹಿಡಿದಿದ್ದು, ಅವರ ಹೆಸರು ಪಟ್ಟಿಯಲ್ಲಿ ಇರಲಿದೆಯೇ ಎನ್ನುವ ಕುತೂಹಲವೂ ಇದೆ.

ಪ್ರಾದೇಶಿಕತೆ ಜತೆಗೆ ಸಾಮಾಜಿಕ ನ್ಯಾಯಕ್ಕೂ ಒತ್ತು ನೀಡಿ ಸಚಿವರನ್ನು ಸಂಪುಟಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಹಿರಿಯರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಮುಂದಿನ ಲೋಕಸಭೆ ಚುನಾವಣೆ ತಯಾರಿ ಭಾಗವಾಗಿಯೇ ಸಂಪುಟ ವಿಸ್ತರಣೆ ಕಸರತ್ತು ನಡೆದಿದೆ. ಜತೆಗೆ ಪಕ್ಷಕ್ಕೆ ಯುವ ಚೈತನ್ಯ ನೀಡುವುದು ಹೈ ಕಮಾಂಡ್‌ ಉದ್ದೇಶ. ಸದ್ಯ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರೇ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಸಮತೋಲನದ ಸಂಪುಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ಕಾರಣದಿಂದಲೇ ಸಚಿವರ ಪಟ್ಟಿ ಹಾಗೂ ಖಾತೆ ಹಂಚಿಕೆ ಒಂದೆರಡು ದಿನ ವಿಳಂಬವಾಗಿದೆ ಎನ್ನಲಾಗುತ್ತಿದೆ.

ಬಹುತೇಕ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಶುಕ್ರವಾರ ಖಾತೆಗಳನ್ನೂ ಅಂತಿಮಗೊಳಿಸಲಾಗುತ್ತಿದೆ. ರಾಹುಲ್‌ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್‌ ಒಂದು ಸುತ್ತಿನ ಮಾತುಕತೆ ನಡೆಸಿ ಸಂಜೆಯೇ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಹಿರಿಯ ಶಾಸಕರಾದ ಕೆ.ವೆಂಕಟೇಶ್‌, ಶಿವಾನಂದ ಪಾಟೀಲ, ಕೆ.ಎನ್‌.ರಾಜಣ್ಣ, ಶರಣಬಸಪ್ಪ ದರ್ಶನಾಪುರ, ಚಲುವರಾಯಸ್ವಾಮಿ ಅವರೊಂದಿಗೆ ಮಧುಬಂಗಾರಪ್ಪ, ಲಕ್ಸ್ಮಿ ಹೆಬ್ಬಾಳಕರ, ಬೈರತಿ ಸುರೇಶ್‌ ಸಹಿತ ಹಲವರಿಗೆ ಅವಕಾಶ ದೊರೆಯಬಹುದು.

ವಿಧಾನಪರಿಷತ್‌ನಲ್ಲಿ ಸಭಾ ನಾಯಕರಾಗಲು ಒಬ್ಬರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಪರಿಷತ್‌ ಪ್ರತಿನಿಧಿಯಾಗಿ ಹಿರಿಯ ಕಾಂಗ್ರೆಸ್‌ ನಾಯಕ, ರಾಯಚೂರು ಜಿಲ್ಲೆಯ ಎಸ್‌.ಎನ್‌.ಬೋಸರಾಜು ಅವರು ಸಂಪುಟ ಸೇರಲಿದ್ದಾರೆ. ಸಚಿವರಾಗಲು ಬಿ.ಕೆ.ಹರಿಪ್ರಸಾದ್‌, ಸಲೀಂ ಅಹಮದ್‌ ಕೂಡ ತೀವ್ರ ಲಾಬಿ ನಡೆಸಿದ್ದು ಇಬ್ಬರಿಗೂ ಅವಕಾಶ ಕಡಿಮೆ ಎಂದು ಹೇಳಲಾಗುತ್ತಿದೆ.

ಪ್ರಮುಖ ಖಾತೆಗೂ ಹಿರಿಯರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಜಲಸಂಪನ್ಮೂಲ, ಲೋಕೋಪಯೋಗಿ, ಕಂದಾಯ, ಇಂಧನ ಸೇರಿ ಪ್ರಮುಖ ಖಾತೆಗಳಿಗೆ ಡಿಕೆ ಶಿವಕುಮಾರ್‌, ಎಂ.ಬಿ.ಪಾಟೀಲ, ಪರಮೇಶ್ವರ್‌ ಅವರು ಪ್ರಯತ್ನ ನಡೆಸಿದ್ದಾರೆ. ಹಣಕಾಸು ಖಾತೆಯನ್ನು ಸಿದ್ದರಾಮಯ್ಯ ಅವರೇ ಉಳಿಸಿಕೊಳ್ಳಲಿದ್ದಾರೆ.

ಯಾರ ಹೆಸರಿದೆ?

ಕೆ.ವೆಂಕಟೇಶ( ಮೈಸೂರು)

ಪುಟ್ಟರಂಗಶೆಟ್ಟಿ( ಚಾಮರಾಜನಗರ)

ಕೆ.ಎನ್‌.ರಾಜಣ್ಣ( ತುಮಕೂರು)

ಶಿವಾನಂದ ಪಾಟೀಲ( ವಿಜಯಪುರ)

ಶರಣಬಸಪ್ಪ ದರ್ಶನಾಪುರ( ಯಾದಗಿರಿ)

ಎಸ್‌.ಎನ್‌.ಬೋಸರಾಜು( ರಾಯಚೂರು)

ದಿನೇಶ್‌ ಗುಂಡೂರಾವ್‌(ಬೆಂಗಳೂರು)

ಎಸ್‌.ಎಸ್‌.ಮಲ್ಲಿಕಾರ್ಜುನ( ದಾವಣಗೆರೆ)

ಎನ್‌.ಚಲುವರಾಯಸ್ವಾಮಿ( ಮಂಡ್ಯ)

ಬಿ.ಈಶ್ವರ ಖಂಡ್ರೆ( ಬೀದರ್‌)

ಲಕ್ಷ್ಮಿ ಹೆಬ್ಬಾಳಕರ್‌(ಬೆಳಗಾವಿ)

ಬೈರತಿ ಸುರೇಶ್‌( ಬೆಂಗಳೂರು)

ಮಧು ಬಂಗಾರಪ್ಪ(ಶಿವಮೊಗ್ಗ)

ಕೆ.ಎಂ.ಶಿವಲಿಂಗೇಗೌಡ(ಹಾಸನ)

ವಿನಯ ಕುಲಕರ್ಣಿ( ಧಾರವಾಡ)

ಮಂಕಾಳ ವೈದ್ಯ( ಉತ್ತರ ಕನ್ನಡ)

ಬಿ.ನಾಗೇಂದ್ರ( ಬಳ್ಳಾರಿ)

ಟಿ.ಡಿ.ರಾಜೇಗೌಡ( ಚಿಕ್ಕಮಗಳೂರು)

ಶಿವರಾಜ ತಂಗಡಗಿ(ಕೊಪ್ಪಳ)