Karnataka News: ಬಿಜೆಪಿ ಸರಕಾರದ ಹಗರಣಗಳಿಗೆ ಮರುಜೀವ: ಎಸ್‌ಐಟಿ ತನಿಖೆಗೆ ಮುಂದಾದ ಕಾಂಗ್ರೆಸ್ ಸರಕಾರ
ಬಿಜೆಪಿ ಸರಕಾರದ ಹಗರಣಗಳಿಗೆ ಮರುಜೀವ ನೀಡಲು ಮುಂದಾದ ಕಾಂಗ್ರೆಸ್ ಸರಕಾರ ವಿಶೇಷ ತನಿಖಾ ದಳ ರಚಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ನಿರ್ಧಾರ: ಯಾವ ಯಾವ ಹಗರಣಗಳ ತನಿಖೆ ನಡೆಯಲಿದೆ? ಇಲ್ಲಿದೆ ಪಟ್ಟಿ
ಬೆಂಗಳೂರು: ಜುಲೈ 3ರಿಂದ ಆರಂಭವಾಗುವ ಬಜೆಟ್ ಅಧಿವೇಶನಕ್ಕೆ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ.
ಪ್ರತಿಪಕ್ಷ ಬಿಜೆಪಿಯನ್ನು ಕಟ್ಟಿ ಹಾಕಲು ಈ ಹಿಂದಿನ ಸರಕಾರದ ಇಬ್ಬರು ಮುಖ್ಯಮಂತ್ರಿಗಳ ಅವಧಿಯಲ್ಲಿ ನಡೆದಿವೆ ಎನ್ನಲಾದ ಹಗರಣಗಳನ್ನು ಕುರಿತು ವಿಶೇಷ ತನಿಖಾ ದಳ ರಚನೆ ಕುರಿತು ಅಧಿವೇಶನದಲ್ಲಿಯೇ ಘೋಷಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಸರಕಾರದ ಮೂಲಗಳು ಖಚಿತಪಡಿಸಿವೆ.
ಈ ಮೂಲಕ ಸದನದಲ್ಲಿ ಪ್ರತಿಪಕ್ಷ ಬಿಜೆಪಿ ಧ್ವನಿಯನ್ನು ಅಡಗಿಸಲು ಸಜ್ಜಾಗುತ್ತಿದೆ.
ಸಚಿವರ ಒತ್ತಾಯ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗುತ್ತಿದ್ದಂತೆ ಬಿಜೆಪಿ ಸರಕಾರದ ಹಗರಣ ಮತ್ತು ಭ್ರಷ್ಟಾಚಾರ ಕುರಿತು ತನಿಖೆ ನಡೆಸುವಂತೆ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ ಸೇರಿದಂತೆ ಅನೇಕ ಸಚಿವರು ಮತ್ತು ಶಾಸಕರು ಸರಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದರು. ಈ ಸಂಬಂಧ ಸಚಿವ ಸಂಪುಟ ಸಭೆಗಳಲ್ಲಿ ಅನೌಪಚಾರಿಕವಾಗಿ ಹಲವು ಭಾರಿ ಚರ್ಚೆ ನಡೆದಿತ್ತು.
ವಿವಿಧ ಇಲಾಖೆಗಳ ಹಗರಣಗಳನ್ನು ಸಿಎಂ ಪಟ್ಟಿ ಮಾಡಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಬೆಂಗಳೂರಿನಲ್ಲಿ ನಡೆದಿರುವ ಹಗರಣಗಳನ್ನು ಕುರಿತು ಐದು ತಂಡಗಳನ್ನುರಚಿಸಲು ಉಪ ಮುಖ್ಯಮಂತಿ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.
ಬಿಟ್ ಕಾಯಿನ್ ಹಗರಣ
ಬಿಟ್ ಕಾಯಿನ್ ಹಗರಣ ಕುರಿತು ಬಿಜೆಪಿ ಸರಕಾರವೇ ತನಿಖೆಗೆ ಆದೇಶಿಸಿದ್ದರೂ ಅರ್ಧಕ್ಕೆ ನಿಂತು ಹೋಗಿತ್ತು. ಈಗ ಸರಕಾರ ಮರು ಜೀವ ನೀಡಲು ನಿರ್ಧರಿಸಿದೆ. ಈ ಹಗರಣದಲ್ಲಿ ರಾಜಕಾರಣಿಗಳ ಮಕ್ಕಳು ಮತ್ತು ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನುವುದು ಹಳೆಯ ಸುದ್ದಿ, ತನಿಖೆ ನಡೆದು ಸತ್ಕಾಂಶ ಹೊರಬಂದರೆ ಯಾರ ತಲೆ ದಂಡವಾಗುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ. ಈಗಾಗಲೇ ಬೆಂಗಳೂರು ನಗರ ಪೊಲಿಸ್ ಆಯುಕ್ತ ಬಿ.ದಯಾನಂದ್ ಅವರು ಸಿಐಡಿ ಡಿಜಿಪಿ ಅವರಿಗೆ ತನಿಖೆ ನಡೆಸುವಂತೆ ಪತ್ರ ಬರೆದಿದ್ದಾರೆ.
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕಿಜನ್ ಕೊರತೆಯಿಂದ ಹಲವಾರು ಮಂದಿ ಸಾವನ್ನಪಿದ ಪ್ರಕರಣ ಕುರಿತೂ ತನಿಖೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳೇ ಸುಳಿವು ನೀಡಿದ್ದಾರೆ. ಕೋವಿಡ್ ಕಾಲದಲ್ಲಿ ಮಾಸ್ಕ್ ಗಳ ಖರೀದಿ, ಯಂತ್ರೋಪಕರಣ ಗಳ ಖರೀದಿಯಲ್ಲಿ ಬಾರಿ ಪ್ರಮಾಣದ ಭಷ್ಟಾಚಾರ ನಡೆದಿದೆ ಎಂದು ಕೋಲಾಹಲವೆದ್ದಿತ್ತು.
ನಾಲ್ಕು ಮೆಡಿಕಲ್ ಕಾಲೇಜುಗಳ ನಿರ್ಮಾಣ, ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದಿರುವ ಹಗರಣ, ಗಂಗಾ ಕಲ್ಯಾಣ, 108 ಆಂಬುಲೆನ್ ಖರೀದಿ, ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ ಕುರಿತು ತನಿಖೆ ನಡೆಯುವ ಎಲ್ಲ ಸಾಧ್ಯತೆಗಳಿವೆ.
ಪಿಎಸ್ ಐ ನೇಮಕಾತಿ ಹಗರಣದಲ್ಲೂ ಪ್ರಭಾವಿಗಳು ಭಾಗಿಯಾಗಿದ್ದಾರೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲೂ ಅಕ್ರಮದ ವಾಸನೆ ಬಡಿದಿತ್ತು. ಜತೆಗೆ ಸರಕಾರದ ಸೋಲಿಗೆ ಪ್ರಮುಖ ಕಾರಣವಾಗಿದ್ದ ಶೇ.40 ರಷ್ಟು ಕಮೀಷನ್ ಕುರಿತೂ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಎಸ್‌ಐಟಿ ತನಿಖೆ ಸಾಧ್ಯತೆ
ಸಾಮಾನ್ಯವಾಗಿ ಹಗರಣಗಳನ್ನು ಕುರಿತು ಇಲಾಖಾವಾರು ತನಿಖೆ ನಡೆಸುವುದು ವಾಡಿಕೆ. ಒಂದು ವೇಳೆ ಭ್ರಷ್ಟಾಚಾರ ಮಿತಿ ಮೀರಿದ್ದರೆ ಅಥವಾ ಹಗರಣಕ್ಕೆ ಹಲವು ಆಯಾಮಗಳಿದ್ದರೆ ಮಾತ್ರ ವಿಶೇಷ ತನಿಖಾ ದಳ(ಎಸ್ ಐಟಿ) ರಚಿಸಲಾಗುತ್ತದೆ. ಬಿಜೆಪಿ ಸರಕಾರದ ಹಗರಣಗಳು ಹಲವು ಆಯಾಮಗಳನ್ನು ಹೊಂದಿರುವುರಿಂದ ಎಸ್ ಐಟಿ ತನಿಖೆ ನಡೆಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
ಅಕ್ರಮಗಳ ತನಿಖೆ ನಡೆಸಲು ಸರಕಾರ ನಿರ್ಧಾರ ಮಾಡಿರುವುದು ಬಿಜೆಪಿಗೆ ಹಿನ್ನೆಡೆಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಮುಂಬರುವ ಲೋಕಸಭಾ ಮತ್ತು ಬಿಬಿಎಂಪಿ ಚುನಾವಣೆವರೆಗೆ ಈ ಹಗರಣಗಳನ್ನು ಜೀವಂತವಾಗಿಡಲಾಗುತ್ತದೆ. ಅಷ್ಟರ ಮಟ್ಟಿಗೆ ಪ್ರತಿಪಕ್ಷ ಬಿಜೆಪಿಯನ್ನು ಕಟ್ಟಿ ಹಾಕುವುದು ಕಾಂಗ್ರೆಸ್ ಸರಕಾರದ ನಿರ್ಧಾರವಾಗಿದ್ದು ಈ ಏಟಿಗೆ ಎದಿರೇಟು ನೀಡಲು ಬಿಜೆಪಿ ಬಳಿ ಗ್ಯಾರಂಟಿ ಜಾರಿ ಒತ್ತಡ ಬಿಟ್ಟರೆ ಅಸ್ತ್ರಗಳೇ ಇದ್ದಂತಿಲ್ಲ.
( ವಿಶೇಷ ವರದಿ: ಎಚ್.ಮಾರುತಿ)
ವಿಭಾಗ