ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 22 ತಿಂಗಳು; 16 ಹಗರಣಗಳ ತನಿಖೆಗೆ ಆದೇಶ: 8 ಹಗರಣಗಳ ತನಿಖೆಗೆ ಎಸ್‌ಐಟಿ ರಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 22 ತಿಂಗಳು; 16 ಹಗರಣಗಳ ತನಿಖೆಗೆ ಆದೇಶ: 8 ಹಗರಣಗಳ ತನಿಖೆಗೆ ಎಸ್‌ಐಟಿ ರಚನೆ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 22 ತಿಂಗಳು; 16 ಹಗರಣಗಳ ತನಿಖೆಗೆ ಆದೇಶ: 8 ಹಗರಣಗಳ ತನಿಖೆಗೆ ಎಸ್‌ಐಟಿ ರಚನೆ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಶುರುಮಾಡಿ 22 ತಿಂಗಳು ಆಗಿದ್ದು, ಈ ಅವಧಿಯಲ್ಲಿ 16 ಹಗರಣಗಳ ತನಿಖೆಗೆ ಆದೇಶ ನೀಡಿದೆ. ಈ ಪೈಕಿ 8 ಹಗರಣಗಳ ತನಿಖೆಗೆ ಎಸ್‌ಐಟಿ ರಚನೆಯನ್ನೂ ಮಾಡಿದೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 22 ತಿಂಗಳು ಆಗಿದ್ದು, ಈ ಅವಧಿಯಲ್ಲಿ 16 ಹಗರಣಗಳ ತನಿಖೆಗೊಪ್ಪಿಸಿದೆ. (ಸಾಂಕೇತಿಕ ಚಿತ್ರ)
ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 22 ತಿಂಗಳು ಆಗಿದ್ದು, ಈ ಅವಧಿಯಲ್ಲಿ 16 ಹಗರಣಗಳ ತನಿಖೆಗೊಪ್ಪಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 22 ತಿಂಗಳು ಕಳೆದಿವೆ. ಈ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ 16 ಹಗರಣಗಳ ತನಿಖೆಗೆ ಆದೇಶ ನೀಡಿದೆ. ಈ ಹಗರಣಗಳೆಲ್ಲವೂ ಹಿಂದಿನ ಬಿಜೆಪಿ ಮತ್ತು ಜೆಡಿಎಸ್‌ ಸರ್ಕಾರದ ಹಗರಣಗಳಾಗಿವೆ. ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದಿದ್ದ ಶೇ.40 ಕಮೀಷನ್‌ ಆರೋಪದ ಹಗರಣ ಕುರಿತು ನ್ಯಾಯಮೂರ್ತಿ ಎಚ್.‌ ಎನ್.‌ ನಾಗಮೋಹನ್‌ ದಾಸ್‌ ಸಮಿತಿ ನೀಡಿರುವ ವರದಿ ಕುರಿತು ತನಿಖೆಗೆ ಎಸ್‌ ಐಟಿ ರಚಿಸುವ ನಿರ್ಧಾರ ಕೈಗೊಂಡಿರುವುದು ಹೊಸ ಸೇರ್ಪಡೆ ಅಷ್ಟೇ.

16 ಹಗರಣಗಳ ತನಿಖೆಗೆ ಆದೇಶ, 8 ಎಸ್‌ಐಟಿ ರಚನೆ

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ದ ಶೇ.40ರಷ್ಟು ಕಮೀಷನ್‌ ಆರೋಪ ಮಾಡಿತ್ತು. ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ತನಿಖೆಗಾಗಿ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಸಮಿತಿಯನ್ನು ರಚಿಸಿತ್ತು. ಈ ಮೂಲಕ ಎಸ್‌ ಐ ಟಿ ರಚಿಸಿರುವ ಪ್ರಕರಣಗಳ ಸಂಖ್ಯೆ 8 ಕ್ಕೆ ಏರಿದೆ. ಮೇ 2023 ರಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ನಂತರ ಮೊದಲ ಬಾರಿಗೆ ಸಾಕಷ್ಟು ವಿವಾದ ಹುಟ್ಟು ಹಾಕಿದ್ದ ಬಿಟ್‌ ಕಾಯಿನ್‌ ಹಗರಣದ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು.

ಎರಡನೆಯದಾಗಿ ಸಬ್‌ ಇನ್‌ ಸ್ಪೆಕ್ಟರ್‌ ನೇಮಕಾತಿ ಹಗರಣ ಕುರಿತು ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ತನಿಖಾ ಆಯೋಗವನ್ನು ರಚಿಸಿತ್ತು. ನಂತರ ಎಸ್‌ ಐಟಿ ರಚಿಸಿತ್ತು. ನಂತರ ಶೇ.40 ಕಮೀಷನ್‌ ಕುರಿತು ನಾಗಮೋಹನ್‌ ದಾಸ್‌ ಆಯೋಗ ರಚಿಸಿತ್ತು. ನಾರಾಯಣಪುರ ಎಡದಂಡೆ ನಾಲೆ ಹಗರಣ ಕುರಿತೂ ತನಿಖೆ ನಡೆಸಲು ಇದೇ ಆಯೋಗಕ್ಕೆ ಸೂಚಿಸಲಾಗಿತ್ತು. ಮುಂದುವರೆದು ಕೋವಿಡ್‌ -19 ಹಗರಣ ಕುರಿತು ನ್ಯಾಯಮೂರ್ತಿ ಜಾನ್‌ ಮೈಖೇಲ್‌ ಕುನ್ಹಾ ಆಯೋಗವನ್ನು ರಚಿಸಿತ್ತು. ನಂತರ ಎಸ್‌ ಐಟಿ ರಚನೆಯಾಗಿತ್ತು.

ಎಸ್‌ ಐಟಿ ರಚನೆಯಾದ ಮತ್ತೊಂದು ಹಗರಣ ಎಂದರೆ ಮುಡಾ ನಿವೇಶನ ಹಂಚಿಕೆ. ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬೆಲೆ ಬಾಳುವ 14 ನಿವೇಶನಗಳನ್ನು ಹಂಚಿಕೆ ಮಾಡಿದ ಆರೋಪ ಇದಾಗಿತ್ತು. ಇದೇ ಹಗರಣವನ್ನು ಮುಂದು ಮಾಡಿ ಬಿಜೆಪಿ ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಕೇಳಿದ್ದು ಇತಿಹಾಸ. ಈ ಹಗರಣ ಕುರಿತು ನ್ಯಾಯಮೂರ್ತಿ ಪಿ.ಎನ್.‌ ದೇಸಾಯಿ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು.

ಪ್ರಮುಖ ಹಗರಣಗಳಿವು

ಜೆಡಿಎಸ್‌ ಮುಖಂಡ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ, ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಆರೋಪ, ಕೇಂದ್‌ ಸಚಿವ ಎಚ್.‌ ಡಿ. ಕುಮಾರಸ್ವಾಮಿ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಆರೋಪ ಮತ್ತು ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ತನಿಖೆಗೆ ಎಸ್‌ ಐಟಿ ರಚಿಸಲಾಗಿತ್ತು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಲಿ (ಕೆಕೆಆರ್‌ ಡಿಬಿ) ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸೊಸೈಟಿ ಕುರಿತೂ ತನಿಖೆ ನಡೆಸಲು ಎಸ್‌ ಐಟಿ ರಚಿಸಲಾಗಿದೆ. ಕಿಯೋನಿಕ್ಸ್‌ ಮತ್ತು ಜಲ್‌ ಜೀವನ್‌ ಮಿಷನ್‌ ಹಗರಣ ಕುರಿತೂ ತನಿಖೆಗೆ ಎಸ್‌ ಐಟಿ ರಚಿಸಿರುವುದನ್ನು ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದು.

(ವರದಿ- ಎಚ್.‌ ಮಾರುತಿ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner