ಜಾತಿಗಣತಿಗೆ ಎಳ್ಳುನೀರು ಬಿಟ್ಟ ಕರ್ನಾಟಕ ಸರ್ಕಾರ; ಹೈಕಮಾಂಡ್‌ ಅಣತಿಯಂತೆ ಹೊಸ ಜಾತಿಗಣತಿಗೆ ನಿರ್ಧಾರ
ಕನ್ನಡ ಸುದ್ದಿ  /  ಕರ್ನಾಟಕ  /  ಜಾತಿಗಣತಿಗೆ ಎಳ್ಳುನೀರು ಬಿಟ್ಟ ಕರ್ನಾಟಕ ಸರ್ಕಾರ; ಹೈಕಮಾಂಡ್‌ ಅಣತಿಯಂತೆ ಹೊಸ ಜಾತಿಗಣತಿಗೆ ನಿರ್ಧಾರ

ಜಾತಿಗಣತಿಗೆ ಎಳ್ಳುನೀರು ಬಿಟ್ಟ ಕರ್ನಾಟಕ ಸರ್ಕಾರ; ಹೈಕಮಾಂಡ್‌ ಅಣತಿಯಂತೆ ಹೊಸ ಜಾತಿಗಣತಿಗೆ ನಿರ್ಧಾರ

ಜಾತಿಗಣತಿಗೆ ಎಳ್ಳು ನೀರು ಬಿಟ್ಟ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ, ಪಕ್ಷದ ಹೈಕಮಾಂಡ್‌ ಅಣತಿಯಂತೆ ಹೊಸ ಜಾತಿಗಣತಿಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಸಿದ್ದರಾಮಯ್ಯ ಸರ್ಕಾರ, ನಾಳೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಜಾತಿಗಣತಿಗೆ ಎಳ್ಳುನೀರು ಬಿಟ್ಟ ಕರ್ನಾಟಕ ಸರ್ಕಾರ, ಪಕ್ಷದ ಹೈಕಮಾಂಡ್‌ ಅಣತಿಯಂತೆ ಹೊಸ ಜಾತಿಗಣತಿಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಾಳೆ ಸಚಿವ ಸಂಪುಟ ಸಭೆ ನಡೆಯಲಿದೆ.
ಜಾತಿಗಣತಿಗೆ ಎಳ್ಳುನೀರು ಬಿಟ್ಟ ಕರ್ನಾಟಕ ಸರ್ಕಾರ, ಪಕ್ಷದ ಹೈಕಮಾಂಡ್‌ ಅಣತಿಯಂತೆ ಹೊಸ ಜಾತಿಗಣತಿಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಾಳೆ ಸಚಿವ ಸಂಪುಟ ಸಭೆ ನಡೆಯಲಿದೆ.

ಬೆಂಗಳೂರು: ಕರ್ನಾಟಕದಲ್ಲಿ ನಡೆಸಿದ ಜಾತಿ ಗಣತಿ ವರದಿ 10 ವರ್ಷಗಳಷ್ಟು ಹಳೆಯದಾಗಿದ್ದು, ಹೊಸದಾಗಿ ಜಾತಿಗಣತಿ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಜಾತಿಗಣತಿಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಪಕ್ಷದ ವರಿಷ್ಠರು ಹೊಸದಾಗಿ ಜಾತಿ ಗಣತಿ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಸೂಚನೆ ನೀಡಿದ್ದಾರೆ. ಕಾಲಮಿತಿಯಲ್ಲಿ ಜಾತಿಗಣತಿ ನಡೆಸಲೂ ವರಿಷ್ಠರು ಸಲಹೆ ನೀಡಿದ್ದಾರೆ.

ಜಾತಿ ಸಮೀಕ್ಷೆಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಪ್ರಬಲ ವಿರೋಧ ವ್ಯಕ್ತಪಡಿಸಿದ್ದವು. ಈ ಎರಡೂ ಪ್ರಬಲ ಕೋಮುಗಳ ಸಚಿವರು, ಶಾಸಕರು, ಮಠಾಧೀಶರು ಮತ್ತು ಮುಖಂಡರ ಒತ್ತಡಕ್ಕೆ ಸರ್ಕಾರ ಮಣಿದಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಜಾತಿಗಣತಿ ನಡೆಸುವ ಸಂಬಂಧ ಚರ್ಚಿಸಲು ಜೂನ್ 12 , ನಾಡಿದ್ದು ಗುರುವಾರ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಎಲ್ಲಾ ಜಾತಿಗಳ ಹೊಸ ಅಂಕಿಅಂಶ ಸಂಗ್ರಹಣೆಗೆ ನಿರ್ಧರಿಸಲಾಗಿದ್ದು, ಹಳೆ ಜಾತಿಗಣತಿ ವರದಿಗೆ ಹೊಸ ಅಂಕಿ ಸಂಖ್ಯೆ ಸೇರ್ಪಡೆ ಮಾಡಲಾಗುತ್ತದೆ. ಜಾತಿಗಳ ಮರು ಸೇರ್ಪಡೆಗೆ ಮತ್ತೆ ಸಮೀಕ್ಷೆ ನಡೆಸಲಾಗುತ್ತದೆ. ಆನ್ ಲೈನ್ ನಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿಯ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ. ಜಾತಿ ಗಣತಿಯ ಅಂಕಿ ಅಂಶಗಳನ್ನು ಕುರಿತು ಪ್ರಭಾವಿ ಸಮುದಾಯಗಳಾದ ವೀರಶೈವ ಲಿಂಗಾಯತ ಮತ್ತಿತರ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದವು. ಈ ವರದಿಯಲ್ಲಿ ಜಾತಿ ಜಾತಿಗಳ ಜನಸಂಖ್ಯೆ ಕುರಿತು ಗೊಂದಲ ಇದೆ ಎಂದು ಅಸಮಾಧಾನವನ್ನು ಹೊರಹಾಕಿದ್ದವು. ಈ ನಿಟ್ಟಿನಲ್ಲಿ ಗುರುವಾರದ ಸಚಿವ ಸಂಪುಟ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ವರಿಷ್ಠರಾದ ಕೆಸಿ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜತೆ ಚರ್ಚೆ ನಡೆಸಿದ ನಂತರ ಹೈಕಮಾಂಡ್‌ ಹೊಸದಾಗಿ ಜಾತಿಗಣತಿ ನಡೆಸಲು ಸೂಚಿಸಿದೆ.

ಜಾತಿ ಲೆಕ್ಕಾಚಾರ ಹೀಗಿದೆ

ಪರಿಶಿಷ್ಟ ಜಾತಿ-1.08 ಕೋಟಿ; ಪರಿಶಿಷ್ಟ ಪಂಗಡ-42 ಲಕ್ಷ; ಮುಸಲ್ಮಾನ-75 ಲಕ್ಷ; ಲಿಂಗಾಯತ- 73 ಲಕ್ಷ; ಒಕ್ಕಲಿಗ-70 ಲಕ್ಷ; ಕುರುಬ-45 ಲಕ್ಷ; ಮರಾಠಾ-16 ಲಕ್ಷ; ಈಡಿಗ-14 ಲಕ್ಷ; ವಿಶ್ವಕರ್ಮ-15 ಲಕ್ಷ; ಬೆಸ್ತ- 14.50 ಲಕ್ಷ; ಬ್ರಾಹ್ಮಣ-15 ಲಕ್ಷ; ಕ್ರೈಸ್ತ-12 ಲಕ್ಷ; ಯಾದವ- 10.50 ಲಕ್ಷ; ಉಪ್ಪಾರ -7 ಲಕ್ಷ.

ಜೂನ್ 12ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಸಿಎಂ, ಡಿಸಿಎಂ ಜತೆ ಚರ್ಚೆ ನಡೆಸಿದ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮಾತನಾಡಿ, ಇಂದಿನ ಸಭೆಯಲ್ಲಿ ಜಾತಿ ಜನಗಣತಿ ಕುರಿತು ಚರ್ಚೆ ಮಾಡಿದ್ದೇವೆ. ಜೂನ್ 12 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ, ಜಾತಿ ಗಣತಿ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಹಲವಾರು ವಿಷಯಗಳನ್ನು ಕುರಿತು ಚರ್ಚೆ ನಡೆಸಸಲು ಸಿಎಂ, ಡಿಸಿಎಂ ಇಬ್ಬರನ್ನೂ ಹೈಕಮಾಂಡ್‌ ದೆಹಲಿಗೆ ಕರೆಸಿಕೊಂಡಿತ್ತು. ಸಭೆಯ ನಂತರ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌, ಜಾತಿಗಣತಿ ಕುರಿತೂ ಮಾತುಕತೆ ನಡೆಸಲಾಗಿದೆ. ಜಾತಿಗಣತಿ ಕುರಿತು ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ತಾತ್ವಿಕವಾಗಿ ಒಪ್ಪುತ್ತೇವೆ. ಆದರೆ ಕೆಲವು ಜಾತಿಗಳು ಜಾತಿಗಣತಿ ಕುರಿತು ಸಂಶಯ ವ್ಯಕ್ತಪಡಿಸಿದ್ದು ಕಳವಳಕಾರಿಯಾಗಿದೆ. ದಶಕದ ಹಿಂದ ನಡೆಸಲಾಗಿರುವ ಜಾತಿಗಣತಿ ಇಂದು ಹಳೆಯದ್ದಾಗಿದೆ. 60-80 ದಿನಗಳ ಒಳಗಾಗಿ ಹೊಸದಾಗಿ ಜಾತಿಗಣತಿ ನಡೆಸುವಂತೆಯೂ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿ ಜಾತಿ ಗಣತಿಯ ಮರು ಸಮೀಕ್ಷೆಗೆ ತೀರ್ಮಾನ ಮಾಡಲಾಗಿದೆ. ಮರು ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಎಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರವೂ ರಾಷ್ಟ್ರಮಟ್ಟದಲ್ಲಿ ಜನಗಣತಿ ಮತ್ತು ಜಾತಿಗಣತಿ ನಡೆಸಲು ನಿರ್ಧಾರ ಕೈಗೊಂಡಿರುವ ಬೆನ್ನಲ್ಲೇ ಕಾಂಗ್ರೆಸ್‌ ನಿರ್ಧಾರ ಮಹತ್ವ ಪಡೆದುಕೊಂಡಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- ಜಾತಿ ಗಣತಿ

ಸಿಎಂ ಸಿದ್ದರಾಮಯ್ಯ ಅವರ ಮೊದಲ ಸರ್ಕಾರದ ಅವಧಿಯಲ್ಲಿ ನಡೆಸಲಾಗಿದ್ದ ಜಾತಿ ಸಮೀಕ್ಷೆಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ವಿರೋಧಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೊನೆಗೂ ಮಣಿದಿದೆ. 2014-2017ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು ಇದನ್ನು ಜಾತಿ ಗಣತಿ ಎಂದೇ ಪರಿಗಣಿಸಲಾಗಿದೆ. ಈ ಸಮೀಕ್ಷೆಯ ಪ್ರಕಾರ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಜನಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ. ಜನರ ನಾಡಿಮಿಡಿತ ಹೇಗಿರುತ್ತದೆ ಎಂದು ತಿಳಿಯಲು ಸೋರಿಕೆ ಮಾಡಲಾಗಿತ್ತು. ಎಸ್ ಸಿ, ಎಸ್ ಟಿ, ಮುಸ್ಲಿಂ, ಕುರುಬ ಸಮುದಾಯಗಳ ಜನಸಂಖ್ಯೆ ಶೇ.50ರ ಆಸುಪಾಸಿನಲ್ಲಿದೆ ಮತ್ತು ಲಿಂಗಾಯತರ ಜನಸಂಖ್ಯೆ ಶೇ.14ಕ್ಕೆ ಮತ್ತು ಒಕ್ಕಲಿಗರ ಜನಸಂಖ್ಯೆ ಶೇ.11ಕ್ಕೆ ಕುಸಿದಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಇದೇ ಕಾರಣಕ್ಕೆ 2019ರಿಂದ ರಚನೆಯಾದ ಎಲ್ಲ ಸರ್ಕಾರಗಳೂ ವರದಿ ಸ್ವೀಕಾರಕ್ಕೆ ಹಿಂದೇಟು ಹಾಕುತ್ತಿದ್ದವು.

(ವರದಿ- ಎಚ್.ಮಾರುತಿ, ಬೆಂಗಳೂರು)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.