ಮೂರು ತಿಂಗಳಲ್ಲಿ 2ನೇ ಬಾರಿಗೆ ಹಾಲಿನ ದರ ಏರಿಕೆ; ಹಣ್ಣು, ತರಕಾರಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕನ ಮೇಲೆ ಬರೆ
Milk Rate Hike: ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಹಾಲಿನ ದರ ಏರಿಕೆಗೆ ಸರ್ಕಾರ ಸಜ್ಜಾಗಿದ್ದು, ಹಣ್ಣು, ತರಕಾರಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕನ ಮೇಲೆ ಬರೆ ಎಳೆದಿದೆ. ಪ್ರತಿಪಕ್ಷಗಳು ಟೀಕಿಸಿದರೆ, ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. (ವರದಿ-ಎಚ್. ಮಾರುತಿ)
ಬೆಂಗಳೂರು: ಮೂರು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಹಾಲಿನ ದರ (Milk Rate Hike) ಏರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಈಗಾಗಲೇ ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಶ್ರೀ ಸಾಮಾನ್ಯ ದಿನ ನಿತ್ಯದ ಜೀವನ ಸಾಗಿಸಲು ಪರದಾಡುತ್ತಿರುವುದು ಹೊಸದೇನಲ್ಲ. ಪೆಟ್ರೋಲ್, ಡೀಸೆಲ್, ಬೇಳೆ ಕಾಳುಗಳ ಬೆಲೆ ಏರುಮುಖಿಯಾಗಿದ್ದು, ಆಯಾ ತಿಂಗಳ ಆದಾಯವನ್ನು ಆಯಾ ತಿಂಗಳಿಗೆ ಸರಿದೂಗಿಸಲು ಹೆಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಹಾಲಿನ ಬೆಲೆ ಏರಿಕೆ ಮುಂದಾಗಿರುವುದರಿಂದ ತಿಂಗಳ ಖರ್ಚಿನ ವೆಚ್ಚ ಮತ್ತೆ ಹೆಚ್ಚಾಗಲಿದೆ.
ಪ್ರತಿ ಲೀಟರ್ ಗೆ 5 ರೂ.ಗಳನ್ನಾದರೂ ಹೆಚ್ಚಿಸುವಂತೆ ಹಾಲು ಉತ್ಪಾದಕರು ಮುಖ್ಯಮಂತ್ರಿಗಳ ಎದುರೇ ಬೇಡಿಕೆ ಇಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2-3 ರೂ ಒಳಗೆ ಹಾಲಿನ ದರ ಹೆಚ್ಚಿಸಲು ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಹಾಲು ಉತ್ಪಾದಕ ಸಂಘಗಳು ಪ್ರತಿ ಲೀಟರ್ ಗೆ 31 ರೂ. ನೀಡಿ ಖರೀದಿ ಮಾಡುತ್ತಿವೆ. ಗ್ರಾಹಕರಿಗೆ 41 ರೂ ಗೆ ಮಾರಾಟ ಮಾಡಲಾಗುತ್ತಿದೆ. ಬೆಲೆ ಏರಿಕೆ ಸಂಬಂಧ ಹಾಲು ಒಕ್ಕೂಟದ ನಿರ್ದೇಶಕರೊಂದಿಗೆ ಚರ್ಚೆ ನಡೆಸುವಂತೆ ಸಹಕಾರ ಸಚಿವ ಕೆಎನ್ ರಾಜಣ್ಣ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಬೇರೆ ರಾಜ್ಯದಲ್ಲಿ 56 ರಿಂದ 58 ರೂ
ಸಚಿವ ರಾಜಣ್ಣ ಪ್ರತಿಕ್ರಿಯಿಸಿ, ಇತರ ರಾಜ್ಯಗಳಿಗೆ ಹೋಲಿಸಿದರೆ ಹಾಲಿನ ಸಂಗ್ರಹ ದರ ಮತ್ತು ಮಾರಾಟ ದರ ಕಡಿಮೆ ಇದೆ. ಕೆಲವು ರಾಜ್ಯಗಳಲ್ಲಿ ಪ್ರತಿ ಲೀಟರ್ ಹಾಲನ್ನು 56-58 ರೂ ಗಳಿಗೆ ಮಾರಾಟ ಮಾಡಲಾಗುತ್ತಿದೆ. ಹಾಲು ಉತ್ಪಾದಕರಾದ ರೈತರು ಹಾಲು ಖರೀದಿ ದರವನ್ನು ಹೆಚ್ಚಿಸುವಂತೆ ಆಗ್ರಹಪಡಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಹಾಲಿನ ದರದ ಹೆಚ್ಚಳವವನ್ನು ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಹಾಲಿನ ದರ ಹೆಚ್ಚಳವಾದರೆ ಹೆಚ್ಚಳ ಮಾಡುವ 5 ರೂಗಳನ್ನು ರೈತರಿಗೆ ವರ್ಗಾಯಿಸಲಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ಜೂನ್ ನಲ್ಲಿ ಕೆಎಂಎಫ್ ಪ್ರತಿ ಲೀಟರ್ ಹಾಲಿಗೆ 2 ರೂ ಹೆಚ್ಚಳ ಮಾಡಿತ್ತು. ಜೊತೆಗೆ ಅರ್ಧ ಲೀಟರ್ ಹಾಲಿಗೆ 50 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ದರ ಏರಿಕೆಗೂ ಮುನ್ನವೇ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಪೆಟ್ರೋಲ್, ಡೀಸೆಲ್ ಸರ ಹೆಚ್ಚಳ ಮಾಡಿದಾಗ ವಿಪಕ್ಷಗಳು ಏಕೆ ಪ್ರಶ್ನಿಸಲಿಲ್ಲ ಎಂದು ಪ್ರಶ್ನಿಸಿದ ಸಚಿವ ರಾಜಣ್ಣ, ರೈತರಿಗೆ ಸಹಾಯ ಮಾಡಲು ಹಾಲಿನ ದರವನ್ನು ಹೆಚ್ಚಿಸಿದರೆ ಖಂಡಿಸುವುದು ಏಕೆ ಎಂದು ಮರು ಪ್ರಶ್ನೆ ಮಾಡುತ್ತಾರೆ.
ಪ್ರಹ್ಲಾದ ಜೋಷಿ ಪ್ರಶ್ನೆ
ಆದರೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸರ್ಕಾರದ ನಡೆಯನ್ನು ಶಂಕಿಸಿದ್ದಾರೆ. ಏರಿಕೆ ಮಾಡುವ ಹಣವನ್ನು ರೈತರಿಗೆ ಹೆಚ್ಚೆಂದರೆ 2 ತಿಂಗಳು ವರ್ಗಾವಣೆ ಮಾಡಬಹುದು. ಆ ನಂತರ ಸರ್ಕಾರೇ ಆ ಹಣವನ್ನು ಉಳಿಸಿಕೊಳ್ಳಲಿದೆ ಎಂದು ಟೀಕಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಮಾಗಡಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾತನಾಡುತ್ತಾ, ರೈತರು ಮತ್ತು ಸಹಕಾರ ಸಂಘಗಳು ದರ ಏರಿಕೆಗೆ ಮನವಿ ಮಾಡಿಕೊಂಡಿವೆ ಎಂದು ಹೇಳಿದ್ದರು.