ರಾಜ್ಯದಲ್ಲಿ ಮತ್ತೊಂದು ಈಜುಕೊಳ ದುರಂತ, ಚಿಕ್ಕಮಗಳೂರು ಖಾಸಗಿ ರೆಸಾರ್ಟ್ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಪ್ರವಾಸಿಗ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  ರಾಜ್ಯದಲ್ಲಿ ಮತ್ತೊಂದು ಈಜುಕೊಳ ದುರಂತ, ಚಿಕ್ಕಮಗಳೂರು ಖಾಸಗಿ ರೆಸಾರ್ಟ್ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಪ್ರವಾಸಿಗ ಸಾವು

ರಾಜ್ಯದಲ್ಲಿ ಮತ್ತೊಂದು ಈಜುಕೊಳ ದುರಂತ, ಚಿಕ್ಕಮಗಳೂರು ಖಾಸಗಿ ರೆಸಾರ್ಟ್ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಪ್ರವಾಸಿಗ ಸಾವು

Swimming Pool Disaster: ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಈಜುಕೊಳ ದುರಂತವನ್ನೇ ನೆನಪಿಸುವಂತಹ ಇನ್ನೊಂದು ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇಲ್ಲಿನ ಖಾಸಗಿ ರೆಸಾರ್ಟ್‌ನ ಈಜುಕೊಳಕ್ಕೆ ಧುಮುಕಿದ್ದ ಕುಶಾಲನಗರ ಮೂಲದ ನಿಶಾಂತ್‌ ದುರ್ಮರಣಕ್ಕೀಡಾಗಿದ್ದಾರೆ. (ವರದಿ: ಹರೀಶ್, ಮಾಂಬಾಡಿ)

ಚಿಕ್ಕಮಗಳೂರು ಖಾಸಗಿ ರೆಸಾರ್ಟ್ ಸ್ವಿಮ್ಮಿಂಗ್‌ಪೂಲ್‌ (ಎಡಚಿತ್ರ) ದುರಂತ ಅಂತ್ಯ ಕಂಡ ನಿಶಾಂತ್ (ಬಲಚಿತ್ರ)
ಚಿಕ್ಕಮಗಳೂರು ಖಾಸಗಿ ರೆಸಾರ್ಟ್ ಸ್ವಿಮ್ಮಿಂಗ್‌ಪೂಲ್‌ (ಎಡಚಿತ್ರ) ದುರಂತ ಅಂತ್ಯ ಕಂಡ ನಿಶಾಂತ್ (ಬಲಚಿತ್ರ)

ಮಂಗಳೂರು: ಚಿಕ್ಕಮಂಗಳೂರಿನ ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಬಿದ್ದು ಪ್ರವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ಮಡಿಕೇರಿ ಕುಶಾಲನಗರದ ಮೂಲದ ಪ್ರವಾಸಿ ಮರಣ ಹೊಂದಿದ್ದಾರೆ. ಈಜಾಡಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್‌ ಆಗಿ ಈಜುಕೊಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯ ರೆಸಾರ್ಟ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ‌

ಕುಶಾಲನಗರದ ಮೊಬೈಲ್ ಶಾಪ್‌ನ ಮಾಲೀಕ ನಿಶಾಂತ್ ಸಾವನ್ನಪ್ಪಿದವರು. ನಿಶಾಂತ್ ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಸ್ನೇಹಿತರ ಜೊತೆ ತೆರಳಿದ್ದರು. ನಿಶಾಂತ್ ತಾವು ತಂಗಿದ್ದ ರೆಸಾರ್ಟ್‌ನ ಈಜುಕೊಳದಲ್ಲಿ ಈಜಲು ಇಳಿದಿದ್ದರು.

ನೀರಿಗೆ ಹಾರಿದ ವೇಳೆ ಕೈ ಕಾಲು ಆಡಿಸದ ಹಿನ್ನೆಲೆ ಸ್ನೇಹಿತರು ಅವರನ್ನು ಈಜುಕೊಳದಿಂದ ಹೊರ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಮೇಲೆತ್ತುವ ಮೊದಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಈ ಹಿಂದೆ ಮಂಗಳೂರಿನ ಈಜು ಕೊಳದಲ್ಲಿ ಮೂವರು ಯುವತಿಯರ ದುರಂತ ಸಾವಿನ ಘಟನೆಯನ್ನು ಈ ಘಟನೆ ನೆನಪಿಸುತ್ತದೆ.

ಮಂಗಳೂರಲ್ಲೂ ಇಂಥ ಘಟನೆ ನಡೆದಿತ್ತು

ಈಜುಕೊಳದಲ್ಲಿ ಮೂವರು ಯುವತಿಯರು ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ಬೀಚ್ ರೆಸಾರ್ಟ್‌ನಲ್ಲಿ ನಡೆದಿತ್ತು.

ಮಂಗಳೂರು ಹೊರವಲಯ ಉಚ್ಚಿಲ ಬೀಚ್ ಬಳಿಯ ರೆಸಾರ್ಟ್‌ನ ಈಜುಕೊಳದಲ್ಲಿ ಈಜಾಡುವಾಗ ಏಕಾಏಕಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ಕಳೆದ ವರ್ಷ ನಡೆದಿತ್ತು.

ಮೃತಪಟ್ಟವರನ್ನು ಮೈಸೂರು ಕುರುಬರಹಳ್ಳಿಯ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21ವರ್ಷ), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20ವರ್ಷ), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21ವರ್ಷ) ಎಂದು ಗುರುತಿಸಲಾಗಿತ್ತು.

ಸುರಕ್ಷತೆಗೆ ನೀಡಲಿ ಆದ್ಯತೆ

ಖಾಸಗಿ ರೆಸಾರ್ಟ್‌ಗಳಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡಲು ಹೋಗುವ ಪ್ರವಾಸಿಗರು ಈಗ ಸುರಕ್ಷತೆಯ ಬಗ್ಗೆ ಭಯ ಪಡುವಂತಾಗಿದೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ರೆಸಾರ್ಟ್ ಮಾಲೀಕರು ಎಚ್ಚೆತ್ತುಕೊಳ್ಳಬೇಕಿದೆ. ಮಾತ್ರವಲ್ಲ ರೆಸಾರ್ಟ್‌ನಲ್ಲಿನ ಈಜುಕೊಳಕ್ಕೆ ಸೂಕ್ತ ಸುರಕ್ಷತೆ ಒದಗಿಸಬೇಕು ಹಾಗೂ ಪ್ರವಾಸಿಗರ ಯೋಗಕ್ಷೇಮದ ಬಗ್ಗೆಯೂ ಗಮನ ಹರಿಸಬೇಕಾಗಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner