ಡಿಜಿಟಲ್ ಅರೆಸ್ಟ್‌ಗೆ ಭಯಬೀಳದೇ ಸಮರ್ಥವಾಗಿ ಉತ್ತರಿಸಿ, ಆನ್‌ಲೈನ್ ಹೂಡಿಕೆ ಮುನ್ನ ನೂರು ಬಾರಿ ಯೋಚಿಸಿ: ಸಿಐಡಿ ಎಸ್‌ಪಿ ಅನೂಪ್‌ಶೆಟ್ಟಿ
ಕರ್ನಾಟಕದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರೂ ಕೂಡ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಆದರೆ ಆನ್‌ಲೈನ್ ವಂಚಕರ ಮೋಸದ ಜಾಲಕ್ಕೆ ಸಿಲುಕುವವರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಲೇ ಇದೆ. ವಿದ್ಯಾವಂತರೇ ಎಡವಿ ಬೀಳುತ್ತಿರುವುದು ಆತಂಕದ ಸಂಗತಿ. ಡಿಜಿಟಲ್ ಸುರಕ್ಷೆ ವಿಚಾರದಲ್ಲಿ ಮುನ್ನೆಚ್ಚರಿಕೆ ಹೇಗಿರಬೇಕು ಎನ್ನುವ ಮಾಹಿತಿ ಇಲ್ಲಿದೆ

“ನಿಮಗೆ ಯಾರಾದರೂ ಕರೆ ಮಾಡಿ ಸಿಬಿಐ ಅಥವಾ ಇನ್ನಾವುದೇ ತನಿಖಾ ಸಂಸ್ಥೆ ಹೆಸರು ಹೇಳುವುದು, ನಿಮ್ಮ ವಿರುದ್ದ ಹಣ ಅಥವಾ ಅಧಿಕಾರ ದುರುಪಯೋಗದ ಆರೋಪಗಳಿವೆ ಎಂದು ಯಾರಾದರೂ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಬೇಕಿದೆ ಎಂದು ಹೆದರಿಸಿದರೆ ತಕ್ಷಣ ಎಚ್ಚರವಹಿಸಿ. ಅವರು ಹೇಳಿದ ರೀತಿ ಹಣ ವರ್ಗಾವಣೆ ಮಾಡಬೇಡಿ. ಯಾವುದೇ ಸೂಕ್ಷ್ಮ ಅಥವಾ ಮೋಸಕ್ಕೆ ಕಾರಣವಾಗುವ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಅವರು ಬೆದರಿಕೆ ಹಾಕಿದರೆ, ‘ಕಾನೂನುಬದ್ಧ ನೊಟೀಸ್ ಕಳುಹಿಸಲು ಸೂಚಿಸಿ. ಯಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನುವ ವಿವರ ಕೇಳಿ. ನಮ್ಮ ವಕೀಲರ ಮೂಲಕ ಉತ್ತರ ನೀಡುತ್ತೇವೆ’ ಎಂದು ಸ್ಪಷ್ಟವಾಗಿ ತಿಳಿಸಿ. ಪೊಲೀಸರು ವಾಟ್ಸ್‌ಆಪ್ ಕರೆ ಮಾಡುವುದಿಲ್ಲ. ಅನಗತ್ಯ ಭಯಕ್ಕೆ ಒಳಗಾಗದೆ ಸರಿಯಾಗಿ ಉತ್ತರಿಸಿ. ಕೂಡಲೇ ಪೊಲೀಸರ ಗಮನಕ್ಕೂ ತನ್ನಿ. ಸೈಬರ್ ವಂಚನೆಯಾಗಿದ್ದರೆ ‘1930’ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡುವುದನ್ನು ಮರೆಯಬೇಡಿ”.
- ಇದು ಕರ್ನಾಟಕದ ಅಪರಾಧ ತನಿಭಾ ವಿಭಾಗ( ಸಿಐಡಿ) ಸೈಬರ್ ಘಟಕದ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ಅವರು ನೀಡುವ ಮಾಹಿತಿ.
ಕರ್ನಾಟಕದಲ್ಲಿನ ಸೈಬರ್ ಅಪರಾಧ ಪ್ರಕರಣಗಳು, ವಂಚನೆ ಜಾಲ, ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳು, ಹಣ ಕಳೆದುಕೊಂಡವರು ಇಲ್ಲವೇ ತೊಂದರೆಗೆ ಒಳಗಾದವರು ತುರ್ತು ಕ್ರಮ ಕೈಗೊಳ್ಳುವ ಕುರಿತಾಗಿ ಅವರು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಜಾಲತಾಣದ ಪ್ರತಿನಿಧಿ ಉಮೇಶ ಭಟ್ಟ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ಮಾಹಿತಿ ಹಂಚಿಕೊಂಡರು. ಅವರದೇ ಮಾತಿನ ಅಕ್ಷರ ರೂಪ ಇಲ್ಲಿದೆ.
ಠಾಣೆಗೆ ಬಂದು ಉತ್ತರಿಸುವುದಾಗಿ ತಿಳಿಸಿ
ಕರ್ನಾಟಕದಲ್ಲಿ ಸಿಐಡಿ ಇಂಥ ಹಲವು ಅಪರಾಧ ಪ್ರಕರಣಗಳ ತನಿಖೆ ನಡೆಸುತ್ತಿದೆ. ಈ ಕುರಿತು ವಿಶೇಷವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಜನ ವಂಚನೆಗೆ ಒಳಗಾಗುವ ಮುನ್ನ, ಡಿಜಿಜಲ್ ಅರೆಸ್ಟ್ ಎನ್ನುವ ಹೊಸ ಅವತಾರದ ಕುರಿತಾಗಿ ತಿಳಿದುಕೊಳ್ಳಬೇಕು. ಅಂಥ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಬಗ್ಗೆಯೂ ತಿಳಿಸಲಾಗುತ್ತಿದೆ. ಹೆಚ್ಚಿನ ಹಣದ ಆಸೆಗೆ ನಿಮ್ಮ ಇರುವ ಹಣವನ್ನೂ ಕಳೆದುಕೊಳ್ಳಬೇಡಿ. ಅನಾಮಧೇಯ ಕರೆಗಳನ್ನು ಸ್ವೀಕರಿಸುವ ಮುನ್ನ ಎಚ್ಚರವಹಿಸಿ. ನಿಮ್ಮ ಬೆದರಿಸಿ ಹಣ ಕೀಳುವ ಪ್ರಯತ್ನ ಮಾಡುತ್ತಿದ್ದರೆ ಜಾಗೃತರಾಗಿ. ನಿಮಗೆ ಕರೆ ಮಾಡಿದವರು ಯಾರೇ ಇದ್ದರೂ ಅವರಿಂದ ನಿಖರ ಮಾಹಿತಿ ಕೇಳಿ. ಸಂಬಂಧಿತ ಠಾಣೆಯಲ್ಲಿ ಮಾತನಾಡುವೆ ಎಂದು ಉತ್ತರ ನೀಡಿ.
ಭಯ ಬೀಳದೇ ಕರೆ ಎದುರಿಸಿ
ಯಾವುದೇ ಅಪರಾಧ ತನಿಖಾ ಸಂಸ್ಥೆಗಳು ಇಲ್ಲವೇ ನ್ಯಾಯಾಲಯಗಳು ಬೆದರಿಕೆ ಹಾಕಿ ಆನ್‌ಲೈನ್‌ನಲ್ಲಿ ವಿಚಾರಣೆ ಮಾಡುವುದಿಲ್ಲ. ಅದರಲ್ಲೂ ಲೈವ್ ವಿಚಾರಣೆ ಮಾಡುವ ಪ್ರಕ್ರಿಯೆಯಂತೂ ಇಲ್ಲವೇ ಇಲ್ಲ. ಕೆಲ ಪ್ರಕರಣಗಳಲ್ಲಿ ಪೊಲೀಸ್ ಡ್ರೆಸ್ ಹಾಕಿಕೊಂಡು ಬಂದು ಅಮಾಯಕರನ್ನು ಹೆದರಿಸುವ ಪ್ರಯತ್ನಗಳೂ ನಡೆದಿದೆ. ಅವರು ಪೊಲೀಸ್ ಅಧಿಕಾರಿಯೋ ಅಲ್ಲವೋ ಎನ್ನುವುದನ್ನು ಅವರ ಮುಖಭಾವ ಹಾಗೂ ಚಟುವಟಿಕೆಯಿಂದಲೂ ತಿಳಿದುಕೊಳ್ಳಬೇಕು. ವಿಡಿಯೋ ಕಾಲ್ ಮಾಡಿ ನಿಮ್ಮ ಬಟ್ಟೆ ಬಿಚ್ಚಿ ಎಂದು ತಿಳಿಸುವಂತಹ ಚಟುವಟಿಕೆಗಳು ಡಿಜಿಟಲ್ ಅರೆಸ್ಟ್‌ನ ಭಾಗವಾಗಿರುತ್ತವೆ. ಹೀಗೆ ಹೇಳುವುದು ವಂಚನೆಯ ಹಂತ ಎನ್ನುವುದನ್ನು ತಿಳಿದುಕೊಳ್ಳಬೇಕು.
ಅತಿಯಾಸೆಗೆ ಬಲಿಯಾಗದಿರಿ
ಮನುಷ್ಯನ ಬಳಿ ಹಣ ಇದ್ದರೂ ಅದನ್ನು ದ್ವಿಗುಣಗೊಳಿಸಿಕೊಳ್ಳುವ ಇಲ್ಲವೇ ಹೆಚ್ಚು ಮಾಡಿಕೊಳ್ಳುವ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಉಳಿತಾಯ ಮಾಡಿಕೊಂಡು ಬಂದ ಹಣವನ್ನು ಬಳಸಿಯೇ ಬದುಕು ರೂಪಿಸಿಕೊಳ್ಳಬೇಕಾದ ಸನ್ನಿವೇಶಗಳೂ ಇರಬಹುದು. ಹೀಗಿರುವಾಗ ವಾಟ್ಸ್‌ಆಪ್ ಮೂಲಕ ವಹಿವಾಟು ನಡೆಸಲು ಹೋಗಲೇಬೇಡಿ. ಗೊತ್ತಿಲ್ಲದವರು ಇದ್ದಾಗ ಹಣ ಹೂಡಿಕೆ ಮಾಡುವುದು ಬೇಡ ಎನ್ನುವ ಸಲಹೆಯನ್ನು ನೀಡಲಾಗುತ್ತಿದೆ. ವಯಸ್ಸಾದವರೇ ಇಂಥ ಕರೆಗಳನ್ನು ನಂಬಿ ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ವಾಟ್ಸ್‌ಆಪ್, ಟೆಲಿಗ್ರಾಂ ಸಹಿತ ವಿವಿಧ ಸಾಮಾಜಿಕ ಮಾಧ್ಯಮ ಬಳಸಿಯೇ ಅವರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಯುವಕರು, ಹಿರಿಯರು, ಮಹಿಳೆಯರನ್ನು ಗುರಿಯಾಗಿಟ್ಟುಕೊಂಡೂ ಜಾಗೃತಿ ಮೂಡಿಸುವ ಕೆಲಸ ನಡೆದಿದೆ.
ಕರೆ ಮಾಡುವುದನ್ನು ಮರೆಯಬೇಡಿ
ಡಿಜಿಟಲ್ ಅರೆಸ್ಟ್ ಆಗಿ ಮೋಸ ಮಾಡಿದ್ದರೆ ಇಲ್ಲವೇ ಆನ್‌ಲೈನ್ ವಂಚನೆಗೆ ಒಳಗಾಗಿದ್ದರೆ ಕೂಡಲೇ 1930 ಸಂಖ್ಯೆಗೆ ಕರೆ ಮಾಡಿ. ಆಗ ಬ್ಯಾಂಕ್‌ನವರು ನಿಮ್ಮ ಖಾತೆಯಲ್ಲಿನ ಹಣ ವರ್ಗಾವಣೆ ಆಗದಂತೆ ನೋಡಿಕೊಳ್ಳುತ್ತಾರೆ. ಮೋಸ ಆದ ಬ್ಯಾಂಕ್ ಖಾತೆ ಇಲ್ಲವೇ ಇತರೆ ಮಾಹಿತಿ ಇದ್ದರೆ ಹಣ ಹಿಂಪಡೆಯಲು ಸಾಧ್ಯವಾಗದಂತೆ ತಡೆಹಿಡಿಯಲೂಬಹುದು. ಇದರಿಂದ ಹೆಚ್ಚಿನ ಹಾನಿಯಾಗುವುದು ಖಂಡಿತವಾಗಿಯೂ ತಪ್ಪಲಿದೆ.
ಈ ವಿಚಾರ ಮರೆಯದಿರಿ
- ಅನಾಮಧೇಯ ಕರೆ ಎಂದು ಗೊತ್ತಾದಾಗ ಸ್ವೀಕರಿಸುವ ಮುನ್ನ ಎಚ್ಚರ ವಹಿಸಿ
- ವಾಟ್ಸ್‌ಆಪ್ ಮೂಲಕ ವಿಡಿಯೋ ಕರೆ ಬಂದರೆ ಕೂಡ ಗಮನ ವಹಿಸಿ
- ಬೆದರಿಕೆ ಹಾಕಿ ಡಿಜಿಟಲ್ ಅರೆಸ್ಟ್ ಮಾಡಲು ಪ್ರಯತ್ನಿಸಿದರೆ ಭಯ ಬೀಳಬೇಡಿ
- ಅವರು ಯಾರು, ಯಾವ ಸಂಸ್ಥೆ, ಪೊಲೀಸ್ ಠಾಣೆಯ ವಿವರ ಪಡೆದುಕೊಳ್ಳಿ
- ಅಂಥವರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಿ, ಭಯ ಬೀಳಬೇಡಿ
- ಹಣದ ಹೂಡಿಕೆ ವಿಚಾರದಲ್ಲಿ ಸಂಸ್ಥೆಯ ವಿಶ್ವಾಸಾರ್ಹತೆ ನೋಡಿಕೊಳ್ಳಿ
- ಆನ್‌ಲೈನ್ ಹೂಡಿಕೆ ಎಂದಾಗ ಹೆಚ್ಚಿನ ಎಚ್ಚರ ವಹಿಸಿ
- ಡಿಜಿಟಲ್ ಮೂಲಕ ವಂಚನೆಯಾಗಿದ್ದರೆ ಕೂಡಲೇ 1930 ಕರೆ ಮಾಡಿ, ವರದಿ ಮಾಡಿ
(ಸಂದರ್ಶನ: ಉಮೇಶ ಭಟ್ಟ)
