Education News: ಖಾಸಗಿ ಶಾಲೆಗಳಲ್ಲಿ ಶುಲ್ಕ ಶೇ.10 ರಿಂದ ಶೇ.30ರಷ್ಟು ಹೆಚ್ಚಳ, ಆತಂಕದಲ್ಲಿ ಪೋಷಕರು; ಶಿಕ್ಷಣ ಇಲಾಖೆ ವಿರುದ್ದ ಅಸಮಾಧಾನ
Education News: ಕರ್ನಾಟಕದಲ್ಲಿ 2025-26ನೇ ಸಾಲಿನ ವರ್ಷಕ್ಕೆ ಪ್ರವೇಶಾತಿ ಪ್ರಕ್ರಿಯೆಗಳು ಶುರುವಾಗಿವೆ. ಆದರೆ ಈ ಬಾರಿ ಖಾಸಗಿ ಶಾಲೆಗಳು ಶೇ.10 ರಿಂದ ಶೇ.30ರಷ್ಟು ಶುಲ್ಕ ಹೆಚ್ಚಳ ಮಾಡಿರುವ ದೂರುಗಳು ಕೇಳಿ ಬರುತ್ತಿವೆ.ವರದಿ: ಎಚ್. ಮಾರುತಿ, ಬೆಂಗಳೂರು

ಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಶಾಲಾಶುಲ್ಕದಲ್ಲಿ ಶೇ.10 ರಿಂದ ಶೇ.30ರಷ್ಟು ಹೆಚ್ಚಳ ಮಾಡಲು ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ ಖಾಸಗಿ ಶಾಲೆಗಳು ನಿರ್ಧರಿಸಿವೆ. ಖಾಸಗಿ ಶಾಲೆಗಳ ಈ ನಿರ್ಧಾರದಿಂದ ಪೋಷಕರು ಕಂಗಾಲಾಗಿದ್ದು ಏಕಾಏಕಿ ಒಂದೇ ವರ್ಷದಲ್ಲಿ ಅವೈಜ್ಞಾನಿಕ ಶುಲ್ಕ ಹಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅನೇಕ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದ ಶುಲ್ಕವನ್ನು ಸಂಗ್ರಹಿಸಲು ಆರಂಭಿಸಿವೆ. ಕೆಲವು ಶಾಲೆಗಳು ಶೇ.10 ರಿಂದ 15ರಷ್ಟು ಶುಲ್ಕ ಹೆಚ್ಚಳ ಮಾಡಿದ್ದರೆ ಇನ್ನೂ ಕೆಲವು ಶಾಲೆಗಳು ಶೇ.30 ರವೆಗೆ ಶುಲ್ಕ ಹೆಚ್ಚಿಸಿವೆ. ಕಳೆದ ಐದು ವರ್ಷಗಳ ಶಾಲಾ ಶುಲ್ಕ ಹೆಚ್ಚಳ ವಿಪರೀತ ಹೆಚ್ಚಳವಾಗುತ್ತಿದೆ. ಐದು ವರ್ಷಗಳ ಹಿಂದೆ 1.2 ಲಕ್ಷದಷ್ಟಿದ್ದ ಶುಲ್ಕ ಈ ವರ್ಷ 2.1 ಲಕ್ಷಕ್ಕೆ ಏರಿಕೆಯಾಗಿದೆ. ಇದರ ಜತೆಗೆ ಸಾರಿಗೆ ಶುಲ್ಕವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ.
ಶಾಲಾ ಶುಲ್ಕ ಕೋವಿಡ್‌ಗೂ ಮುನ್ನ ಶೇ.10 ರಷ್ಟು ಶುಲ್ಕ ಏರಿಕೆಯಾಗುತ್ತಿತ್ತು. ಆದರೆ ಕೋವಿಡ್ ನಂತರದ ವರ್ಷಗಳಲ್ಲಿ ಶೇ.15-30 ರಷ್ಟು ಶುಲ್ಕ ಸಂಗ್ರಹಿಸಲಾಗುತ್ತಿದೆ. ಕೋವಿಡ್ ಅವಧಿಯಲ್ಲಿ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಈಗ ಅನಿವಾರ್ಯವಾಗಿ ಶುಲ್ಕ ಏರಿಕೆ ಮಾಡಬೇಕಾಗಿದೆ ಎಂದು ಖಾಸಗಿ ಶಾಲೆಗಳು ಸಮರ್ಥಿಸಿಕೊಳ್ಳುತ್ತಿವೆ. ಹಣದುಬ್ಬರವೇ ಶೇ.10ಕ್ಕಿಂತ ಕಡಿಮೆ ಇರುವಾಗ ಶಾಲೆಗಳು ಶೇ.10-30 ರಷ್ಟು ಶುಲ್ಕಹೆಚ್ಚಳ ಮಾಡುವುದು ಸರಿಯೇ ಎಂದು ಪೋಷಕರೊಬ್ಬರು ಪ್ರಶ್ನಿಸುತ್ತಾರೆ.
ಆದರೆ ಖಾಸಗಿ ಶಾಲೆಗಳ ಸಂಘದ ಕಾರ್ಯದರ್ಶಿ ಡಿ.ಶಶಿಕುಮಾರ್ ಶುಲ್ಕ ಏರಿಕೆಯನ್ನುಸಮರ್ಥಿಸಿಕೊಳ್ಳುತ್ತಾರೆ. ಶಾಲೆ ಎಂದರೆ ಕೇವಲ ಕಪ್ಪು ಹಲಗೆ, ಸೀಮೆ ಸುಣ್ಣ ಅಥವಾ ಡೆಸ್ಕ್ ಮಾತ್ರ ಅಲ್ಲ. ಹತ್ತಾರು ಖರ್ಚು ವೆಚ್ಚಗಳು ಇರುತ್ತವೆ. ಶೇ.20-30 ರಷ್ಟು ಹೆಚ್ಚಳ ಅವೈಜ್ಞಾನಿಕ ಎನ್ನುವುದನ್ನು ಒಪ್ಪುತ್ತೇ ನೆ. ಆದರೆ ಶೇ.10ರಿಂದ 15 ರಷ್ಟು ಅನಿವಾರ್ಯ ಎನ್ನುತ್ತಾರೆ.
ಸರ್ಕಾರ ಪ್ರತಿ ವರ್ಷ ಪಠ್ಯ ಪುಸ್ತಕಗಳ ಬೆಲೆಯನ್ನು ಹೆಚ್ಚಿಸುತ್ತಿದೆ. ಸಮವಸ್ತ್ರದ ಬೆಲೆಯೂ ಹೆಚ್ಚಳವಾಗುತ್ತಿದೆ. ಬೆಲೆ ಹೆಚ್ಚಳ ಕುರಿತು ಸರ್ಕಾರವನ್ನು ಯಾರೊಬ್ಬರೂ ಪ್ರಶ್ನಿಸಿಸುವುದಿಲ್ಲ. ಈ ವೆಚ್ಚವನ್ನು ಸರಿದೂಗಿಸಲು ಶಾಕಲೆಗಳು ಶುಲ್ಕ ಹೆಚ್ಚಿಸಿದರೆ ಎಲ್ಲರೂ ಪ್ರಶ್ನಿಸಲು ಮುಂದಾಗುತ್ತಾರೆ ಎನ್ನುತ್ತಾರೆ ಶಶಿಕುಮಾರ್. ಪ್ರತಿ ವರ್ಷ ಶಿಕ್ಷಕರ ಸಂಬಳವನ್ನು ಹೆಚ್ಚಿಸಬೇಕಾಗುತ್ತದೆ. ಇಲ್ಲವಾದಲ್ಲಿ ಶಿಕ್ಷಕರು ಹೆಚ್ಚು ಸಂಬಳ ಕೊಡುವ ಸಂಸ್ಥೆಗಳನ್ನು ಸೇರುತ್ತಾರೆ ಎಂದು ಖಾಸಗಿ ಶಾಲೆಯ ಸಂಸ್ಥಾಪಕರೊಬ್ಬರು ಅಭಿಪ್ರಾಯಪಡುತ್ತಾರೆ.
ಪ್ರತಿ ವರ್ಷ ಯಾವುದೇ ಶಾಲೆಯಲ್ಲಿ ಯಾವುದೇ ಅಭಿವೃದ್ಧಿ ಗೋಚರಿಸುವುದಿಲ್ಲ. ಆದರೂ ಶುಲ್ಕವನ್ನು ಮಾತ್ರ ಪ್ರತಿವರ್ಷ ಏರಿಕೆ ಮಾಡಲಾಗುತ್ತದೆ. ಈಗಾಗಲೇ ಪೋಷಕರ ಉದ್ಯೋಗಕ್ಕೆ ಕತ್ತರಿ ಬೀಳುತ್ತಿದೆ. ಸಂಬಳ ಕಡಿತ ಮಾಡಲಾಗುತ್ತಿದೆ. ತೆರಿಗೆ, ಬಡ್ಡಿ ದರ, ಮನೆ ಮತ್ತು ವಾಹನ ಸಾಲ ಮೊದಲಾದ ವೆಚ್ಚಗಳು ಇರುತ್ತವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಸರ್ಕಾರವೇ ಶಾಲಾ ಶುಲ್ಕವನ್ನು ನಿಯಂತ್ರಿಸುತ್ತದೆ. ಆದರೆ ಇದು ಕರ್ನಾಟಕದಲ್ಲಿ ಸಾಧ್ಯವಾಗಿಲ್ಲ. ಕೇಳಿದಷ್ಟು ಶುಲ್ಕ ಪಾವತಿ ಹೊರತುಪಡಿಸಿ ಪೋಷಕರಿಗೂ ಅನ್ಯ ಮಾರ್ಗವಿಲ್ಲ ಎಂದು ಪೋಷಕರು ಹೇಳುತ್ತಾರೆ.
ಶೇ.15 ರಂತೆ ಶುಲ್ಕ ಹೆಚ್ಚಳ ಮಾಡುತ್ತಾ ಹೋದರೆ ಎಲ್‌ಕೆಜಿ ಇಂದ 10 ನೇ ತರಗತಿಗ ಬರುವಷ್ಟರಲ್ಲಿ ಎಷ್ಟು ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಊಹಿಸಲೂ ಆಗದು. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸುತ್ತಾರೆ.
ವೃತ್ತಿಪರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲೂ ಪ್ರತಿ ವರ್ಷ ಶುಲ್ಕ ಹೆಚ್ಚಳ ಮಾಡುವುದಿಲ್ಲ ಆದರೆ ಶಾಲೆಗಳಲ್ಲಿ ಮಾತ್ರ ಪ್ರತಿ ವರ್ಷ ಮಾಡಲಾಗುತ್ತಿದೆ. ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವೇ ಇಲ್ಲವಾಗಿದೆ. ಇಂತಹ ವಿಷಯಗಳಲ್ಲಿ ನ್ಯಾಯಾಲಯಗಳಲ್ಲಿ ಸರ್ಕಾರ ಸೋಲುತ್ತಾ ಬರುತ್ತಿದೆ. ಖಾಸಗಿ ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಬುತೇಕ ಶಾಲೆಗಳ ಮಾಲೀಕರು ಜನಪ್ರತಿನಿಧಿಗಳೇ ಆಗಿರುವಾಗ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ವರದಿ: ಎಚ್. ಮಾರುತಿ, ಬೆಂಗಳೂರು