Congress on KS Eshwarappa: ಬಿಜೆಪಿಯ ಅವಮಾನ ಸಹಿಸದೆ ರಾಜಕೀಯದಿಂದಲೇ ಪಲಾಯನ; ಕೆಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿಗೆ ಕಾಂಗ್ರೆಸ್ ವ್ಯಂಗ್ಯ
ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯ ಅವಮಾನ ಸಹಿಸದೆ ರಾಜಕೀಯದಿಂದಲೇ ಪಲಾಯನ ಮಾಡಿದ್ದಾರೆ ಟೀಕಿಸಿದೆ.
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ(KS Eshwarappa) ಅವರು ಇವತ್ತು (ಏ.11) ಚುನಾವಣಾ ರಾಜಕೀಯಕ್ಕೆ ನಿವೃತ್ತಿ (Exit from Electoral Politics) ಹೇಳಿದ್ದಾರೆ. ಕೆಎಸ್ ಈಶ್ವರಪ್ಪ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ (Congress), ಟಿಕೆಟ್ ಘೋಷಣೆಯಾಗುವ ಬದಲು ವಿಕೆಟ್ ಬೀಳುತ್ತಿವೆ ಎಂದು ಟೀಕಿಸಿದೆ.
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಕಡೆಯಿಂದ ಅಭ್ಯರ್ಥಿಗಳ ಪಟ್ಟಿ ಹೊರಬರುವ ಬದಲು ರಾಜಕೀಯ ನಿವೃತ್ತಿ ಪಡೆಯುವವರ ಪಟ್ಟಿ ಹೊರಬರುತ್ತಿವೆ! ಟಿಕೆಟ್ ಘೋಷಣೆಯಾಗುವ ಬದಲು ವಿಕೆಟ್ ಬೀಳುತ್ತಿವೆ! ಮಂತ್ರಿಗಿರಿಗಾಗಿ ಲಾಭಿ ಮಾಡಿ ಸುಸ್ತಾದ ಕೆಎಸ್ ಈಶ್ವರಪ್ಪ ಈಗ ಟಿಕೆಟ್‌ಗೂ ಲಾಭಿ ನಡೆಸಿ ಸುಸ್ತಾದರು. ಬಿಜೆಪಿಯ ಅವಮಾನ ಸಹಿಸದೆ ರಾಜಕೀಯದಿಂದಲೇ ಪಲಾಯನ ಮಾಡಿದರು ಎಂದು ವ್ಯಂಗ್ಯವಾಡಿದೆ.
ಮತ್ತೊಂದು ಟ್ವೀಟ್ ನಲ್ಲಿ, ಟಿಕೆಟ್ ಘೋಷಣೆಯ ಮುನ್ನವೇ ವಿಕೆಟ್ ಪತನ ಶುರುವಾಗಿದೆ. ರನ್ ಬಾರಿಸದೆಯೇ ಆಲ್ ಔಟ್ ಆಗುವ ಎಲ್ಲಾ ಲಕ್ಷಣಗಳೂ ಬಿಜೆಪಿಯಲ್ಲಿ ಕಾಣುತ್ತಿವೆ! ಕರ್ನಾಟಕ ಬಿಜೆಪಿ ಈಗ ಸುಧಾರಿಸಿಕೊಂಡು, ಸಾವರಿಸಿಕೊಂಡು 5 ವರ್ಷ ಕಳೆದ ಮೇಲೆ ಚುನಾವಣೆಗೆ ಬನ್ನಿ! ಎಂದಿದೆ.
ಯಡಿಯೂರಪ್ಪನವರನ್ನುಕಣ್ಣೀರು ಹಾಕಿಸಿ ಪದಚ್ಯುತಿ ಮಾಡಲಾಯ್ತು. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಈಶ್ವರಪ್ಪನವರ ರಾಜಕೀಯವನ್ನೇ ಮುಗಿಸಿಯಾಯ್ತು. ಜಗದೀಶ್ ಶೆಟ್ಟರ್ ಕಾಲವೂ ಸನ್ನಿಹಿತ.
ಅಲ್ಲಿಗೆ ಬಿಜೆಪಿಯಲ್ಲಿ ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕತ್ವವನ್ನು ಕಿತ್ತು ನಾಗಪುರದ ನೌಕರರಾದ ಜೋಶಿ ಹಾಗೂ ಸಂತೋಷ ಕೂಟ ಆಪೋಷನ ತೆಗೆದುಕೊಂಡಾಯ್ತು! ಎಂದು ಕಾಂಗ್ರೆಸ್ ಆರೋಪಿಸಿದೆ.
ಮೊ-ಶಾ ಜೋಡಿಯ ಮಸಲತ್ತು ನೋಡಿದರೆ ಬೊಮ್ಮಾಯಿಯವರೂ ರಾಜಕೀಯ ನಿವೃತ್ತಿ ಘೋಷಿಸಿದರೆ ಯಾವುದೇ ಆಶ್ಚರ್ಯವಿಲ್ಲ! ಜೋಶಿ, ಸಂತೋಷರನ್ನು ಪ್ರತಿಷ್ಠಾಪಿಸಲು ಹವಣಿಸುತ್ತಿರುವ ಬೊಮ್ಮಾಯಿಯವರು ಅದೆಷ್ಟೇ ನಾಗಪುರದ ನೌಕರರು ಎನಿಸಿಕೊಂಡರೂ RSSಗೆ ಅಪಥ್ಯವೇ.. ಯಡಿಯೂರಪ್ಪರಂತೆ ಬೊಮ್ಮಾಯಿಯವರ ರಾಜಕೀಯ ಬದುಕೂ ದುರಂತ ಅಂತ್ಯ ಕಾಣಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಇನ್ನೊಂದು ಟ್ವೀಟ್ ನಲ್ಲಿ, ಯಡಿಯೂರಪ್ಪ - ಔಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ - ಔಟ್ ಈಶ್ವರಪ್ಪ - ಔಟ್, ಜಗದೀಶ್ ಶೆಟ್ಟರ್ - ಔಟ್? ಸಾವಿರ ತಲೆ ತೆಗೆದಾದರೂ ಸರಿ ಪ್ರಹ್ಲಾದ್ ಜೋಷಿ, ಬಿ ಎಲ್ ಸಂತೋಷರಿಗೆ ಜಾಗ ಮಾಡಿಕೊಡಲು ಅಮಿತ್ ಶಾ ತಯಾರಾಗಿದ್ದಾರೆ. ಸಂತೋಷ ಕೂಟದ ಆಟಕ್ಕೆ ಬಿಜೆಪಿಯ ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕರು ಹೀನಾಯ ಅವಮಾನ ಎದುರಿಸಿ ಹೊರನಡೆಯುತ್ತಿದ್ದಾರೆ ಎಂದು ಹೇಳಿದೆ.
ನೇರ ಕಸಾಯಿಖಾನೆಗೇ ಕಳಿಸುತ್ತಿರುವುದು ದುರಂತ!
ಬಿಎಸ್ ವೈ, ಈಶ್ವರಪ್ಪ, ಜಗದೀಶ್ ಶೆಟ್ಟರ್.. ಬಿಜೆಪಿ ಎಂಬ ಕಳೆಗೆ ನೀರು ಗೊಬ್ಬರ ಹಾಕಿ ಬೆಳೆಸಿದ ನಾಯಕರನ್ನು ಅಗೌರವದ ನಿರ್ಗಮನ ದಾರಿ ತೋರಿಸಿದೆ ಬಿಜೆಪಿ. "ನಾವೇ ಎಲ್ಲ" ಎನ್ನುತ್ತಿದ್ದವರಿಗೆ "ನೀವೇನೂ ಅಲ್ಲ" ಎನ್ನುತ್ತಿದೆ ಮೊ-ಶಾ ಜೋಡಿ. ಗೊಡ್ಡು ಹಸುಗಳನ್ನು ಗೋಶಾಲೆಗಾದರೂ ಬಿಡಬಹುದಿತ್ತು, ಆದರೆ ನೇರ ಕಸಾಯಿಖಾನೆಗೇ ಕಳಿಸುತ್ತಿರುವುದು ದುರಂತ!
ಚುನಾವಣಾ ರಾಜಕೀಯದಿಂದ ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರನ್ನು ಪರಿಗಣಿಸದಂತೆ ಕೇಳಿಕೊಳ್ಳುತ್ತೇನೆ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಪಕ್ಷಕ್ಕೆ ತಮ್ಮ 40 ವರ್ಷಗಳ ಸೇವೆಯಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳನ್ನು ನೀಡಿದ ಪಕ್ಷಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.