Jagadish Shettar: ಸಿಡಿ ಹೊರ ಬರುವ ಭಯಕ್ಕೆ ಬಿಜೆಪಿಯ 6 ಮಂತ್ರಿಗಳು ಸಿವಿಲ್ ಕೋರ್ಟ್‌ನಲ್ಲಿ ಸ್ಟೇ ತಂದಿದ್ದಾರೆ; ಜಗದೀಶ್ ಶೆಟ್ಟರ್ ಬಾಂಬ್
ಬಿಜೆಪಿಯಲ್ಲಿ 6-7 ಮಂತ್ರಿಗಳು ತಮ್ಮ ಸಿಡಿ ಹೊರಬಾರದು ಎಂಬ ಭಯಕ್ಕೆ ಸಿವಿಲ್ ಕೋರ್ಟಿನಲ್ಲಿ ಸ್ಟೇ ತಂದಿದ್ದಾರೆ. ಯಾವುದೇ ಸಮಯದಲ್ಲಾದರೂ ತಮ್ಮ ಸಿಡಿ ಹೊರ ಬರಬಹುದು ಎಂಬ ಭಯ ಅವರಿಗೆ ಕಾಡುತ್ತಿದೆ'' ಎಂದು ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಅಸಮಾಧಾನ ತೋರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿರುವ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಶೆಟ್ಟರ್ ಕಾಂಗ್ರೆಸ್ ಸೇರುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್ ನಾಯಕರು ಒಬ್ಬರಿಗೊಬ್ಬರು ಟೀಕಾ ಪ್ರಹಾರ ಆರಂಭಿಸಿದ್ದಾರೆ. ಜಗದೀಶ್ ಶೆಟ್ಟರ್ ಗೆಲ್ಲುವುದಿಲ್ಲ ಎಂದು ಬಿಎಸ್‌ವೈ ಹೇಳಿದರೆ, ಜಗದೀಶ್ ಶೆಟ್ಟರ್ ಬಿಜೆಪಿ ಸಿಡಿ ಬಾಂಬ್ ಸಿಡಿಸಿದರು.
ಯಡಿಯೂರಪ್ಪ ಏನೇ ಬೈಯ್ದರು ಅದು ಆಶೀರ್ವಾದ ಎಂದುಕೊಳ್ಳುತ್ತೇನೆ
ಮಾಜಿ ಸಿಎಂ ಯುಡಿಯೂರಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್, ತಮ್ಮನ್ನು ಸೋಲಿಸುತ್ತೇನೆ ಎಂದ ಬಿಎಸ್‌ವೈಗೆ ಟಾಂಗ್ ನೀಡಿದ್ದಾರೆ. ''ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಪಕ್ಷ ಕಟ್ಟಿದ್ದರು. ಆಗ ಅವರ ಸಿದ್ಧಾಂತ ಎಲ್ಲಿ ಹೋಗಿತ್ತು? ಅವರು ನನ್ನ ವಿರುದ್ಧ ಇಷ್ಟೆಲ್ಲಾ ಮಾತನಾಡುತ್ತಿದ್ದಾರೆ. ಆದರೆ ಅವರು ಏನೇ ಬೈದರೂ ಅದನ್ನು ಆಶೀರ್ವಾದ ಎಂದುಕೊಳ್ಳುತ್ತೇನೆ. ಬಹುಶ: ಅವರ ಬೈಗುಳ ನಾನು ಇಲ್ಲಿ ಗೆಲ್ಲಲು ಅವಕಾಶ ಮಾಡಿಕೊಡುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ಟೀಕೆ ಮಾಡುವವರು ನನ್ನನ್ನು ನೇರವಾಗಿ ಟೀಕೆ ಮಾಡಲಾಗದೆ ಯಡಿಯೂರಪ್ಪ ಅವರಿಂದ ಟೀಕೆ ಮಾಡಿಸುವುದು ಸರಿಯಲ್ಲ. ನಾನು ಬಿಜೆಪಿ ಬಿಟ್ಟ ಬಗ್ಗೆ ಪ್ರಶ್ನಿಸುವುದರಲ್ಲಿ ಅರ್ಥವೇ ಇಲ್ಲ. 50-60 ಮಂದಿ ಸೇರಿ ಲಿಂಗಾಯತ ಸಭೆ ಮಾಡಿದರೆ ಅದು ಸಮುದಾಯ ಸಭೆ ಆಗುವುದಿಲ್ಲ.''
ಸಿಡಿ ಹೊರ ಬರುವ ಭಯಕ್ಕೆ ಬಿಜೆಪಿ ಮಂತ್ರಿಗಳು ಸ್ಟೇ ತಂದಿದ್ದಾರೆ
''ನೈತಿಕತೆ ಬಗ್ಗೆ ಮಾತನಾಡುವ ನೈತಿಕತೆಯೇ ಬಿಜೆಪಿ ಪಕ್ಷದವರಿಗೆ. ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಮಣಿಕಂಠ್ ರಾಥೋಡ್ ವಿರುದ್ದ 80 ಕ್ರಿಮಿನಲ್ ಕೇಸ್‌ಗಳಿವೆ. ಬಿಜೆಪಿಯಲ್ಲಿ 6-7 ಮಂತ್ರಿಗಳು ತಮ್ಮ ಸಿಡಿ ಹೊರಬಾರದು ಎಂಬ ಭಯಕ್ಕೆ ಸಿವಿಲ್ ಕೋರ್ಟಿನಲ್ಲಿ ಸ್ಟೇ ತಂದಿದ್ದಾರೆ. ಯಾವುದೇ ಸಮಯದಲ್ಲಾದರೂ ತಮ್ಮ ಸಿಡಿ ಹೊರ ಬರಬಹುದು ಎಂಬ ಭಯ ಅವರಿಗೆ ಕಾಡುತ್ತಿದೆ'' ಎಂದು ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು
''ನನ್ನ ರಕ್ತದಲ್ಲಿ ಬರೆದುಕೊಡುತ್ತೇನೆ. ಯಾವ ಕಾರಣಕ್ಕೂ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ, ಅವರನ್ನು ಸೋಲಿಸುವ ಜವಾಬ್ದಾರಿ ನನ್ನದು, ಲಕ್ಷ್ಮಣ ಸವದಿಯನ್ನು ಸೋಲಿಸುವ ಜವಾಬ್ದಾರಿ ನಿಮ್ಮದು'' ಎಂದು ಯಡಿಯೂರಪ್ಪ ಮಂಗಳವಾರ ಅಥಣಿ ಪ್ರಚಾರದ ವೇಳೆ ಹೇಳಿದ್ದರು. ಅಲ್ಲದೆ ''ಮಹೇಶ್ ಕುಮಟಳ್ಳಿ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದು ನಿಶ್ಚಿತ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಕಾಂಗ್ರೆಸ್, ಮುಳುಗುತ್ತಿರುವ ಹಡಗು. ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದದ್ದು 5-6 ಸೀಟುಗಳು ಮಾತ್ರ. ಇಡೀ ದೇಶವನ್ನು ಕಾಂಗ್ರೆಸ್ ತಿರಸ್ಕರಿಸಿದ್ದಾರೆ'' ಎಂದು ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು.