ಕನ್ನಡ ಸುದ್ದಿ  /  Karnataka  /  Karnataka Election 2023 Kpcc President Dk Shivakumar On Actors Sudeep And Darshan Campaign For Congress Jra

DK Shivakumar: ಸುದೀಪ್ ಹಾಗೂ ದರ್ಶನ್ ಬಿಜೆಪಿ ಸೇರಿಲ್ಲ, ಅವರು ಕಾಂಗ್ರೆಸ್ ಪರವೂ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ; ಡಿಕೆಶಿ

ಸುದೀಪ್ ಹಾಗೂ ದರ್ಶನ್ ಅವರು ಬಿಜೆಪಿ ಸೇರಿಲ್ಲ. ಅವರು ಸಿನಿಮಾ ನಟರು. ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಅವರು ನಮಗೆ ಉತ್ತಮ ಸ್ನೇಹಿತರು ಎಂದು ಡಿಕೆಶಿ ಹೇಳಿದ್ದಾರೆ.

ದರ್ಶನ್‌‌, ಸುದೀಪ್
ದರ್ಶನ್‌‌, ಸುದೀಪ್

ರಾಜ್ಯ ಚುನಾವಣಾ ಅಖಾಡವು ಚಲನಚಿತ್ರ ನಟರ ಪ್ರವೇಶದಿಂದ ಮತ್ತಷ್ಟು ಕುತೂಹಲ ಮೂಡಿಸಿದೆ. ಬಿಜೆಪಿ ಅಭ್ಯರ್ಥಿಗಳ ಪರ ನಟರಾದ ಸುದೀಪ್‌ ಹಾಗೂ ದರ್ಶನ್‌ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಮ್ಮುಖದಲ್ಲಿ ನಟ ಶಿವರಾಜ್‌ಕುಮಾರ್‌ ಪತ್ನಿ ಗೀತಾ ಶಿವರಾಜ್‌ಕುಮಾರ್‌ (Geeta Shivarajkumar) ಕಾಂಗ್ರೆಸ್‌ (Congress) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಗೀತಾ ಅವರು ಪಕ್ಷ ಸೇರ್ಪಡೆ ಕುರಿತು ಮಾತನಾಡಿದ ಡಿಕೆ ಶಿವಕುಮಾರ್,‌ ನಾನು ಅನೇಕ ದಿನಗಳಿಂದ ಅವರನ್ನು ಪಕ್ಷ ಸೇರಿಸಲು ಪ್ರಯತ್ನಿಸುತ್ತಿದ್ದೆ. ಅವರು ಅಂತಿಮವಾಗಿ ರಾಹುಲ್ ಗಾಂಧಿ ಅವರು ರಾಜ್ಯದ ಜನರಿಗೆ ಘೋಷಣೆ ಮಾಡಿರುವ ಜನಪರ ಕಾರ್ಯಕ್ರಮಗಳ ಬಲೆಗೆ ಬಿದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಟೀಕೆ ಮಾಡಿದ್ದರು. ಅವರ ಟೀಕೆಗೆ ನಮ್ಮ ಶಿವಣ್ಣನ ಧರ್ಮಪತ್ನಿ, ನಮ್ಮ ನಾಯಕರಾದ ಬಂಗಾರಪ್ಪ ಅವರ ಪುತ್ರಿ ಗೀತಾ ಅವರು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಅತ್ತ ಸುದೀಪ್ ಹಾಗೂ ದರ್ಶನ್ ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರೆ, ಗೀತಾ ಶಿವರಾಜ್‌ಕುಮಾರ್‌ ಅವರು ಕೈ ಪಕ್ಷ ಸೇರಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಡಿಕೆಶಿ, ಸುದೀಪ್ ಹಾಗೂ ದರ್ಶನ್ ಅವರು ಪಕ್ಷ ಸೇರಿಲ್ಲ. ಅವರು ಸಿನಿಮಾ ನಟರು. ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ದರ್ಶನ್ ಯಲಹಂಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಸುದೀಪ್ ಕೂಡ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಪ್ರಚಾರ ಮಾಡಬಹುದು. ಅವರು ನಮಗೆ ಉತ್ತಮ ಸ್ನೇಹಿತರು. ಈ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ ಎಂದರು.

ಸುದೀಪ್ ಅವರನ್ನು ನೀವು ಭೇಟಿ ಮಾಡಿ ಮಾತನಾಡಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆಶಿ, ಸುದೀಪ್ ಹಾಗೂ ನನ್ನ ನಡುವಣ ಸಂಭಾಷಣೆ, ನಮ್ಮ ಬಾಂಧವ್ಯ ನಮಗೆ ಮಾತ್ರ ಗೊತ್ತಿದೆ. ಎಲ್ಲವನ್ನು ಹೇಳಲು ಸಾಧ್ಯವಿಲ್ಲ ಎಂದರು.

ಗೀತಾ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಶಿವರಾಜಕುಮಾರ್ ಅವರು ತಮ್ಮ ಧರ್ಮಪತ್ನಿಯನ್ನು ಕಾಂಗ್ರೆಸ್ ಕಚೇರಿಗೆ ಕಳುಹಿಸಿಕೊಟ್ಟಿದ್ದು, ಅವರು ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದಾರೆ. ಇಬ್ಬರ ದೇಹ ಬೇರೆಯಾದರೂ ಇಬ್ಬರ ಮನಸ್ಸು ಒಂದೇ ಎಂದು ತಿಳಿಸಿದರು.

ಪಕ್ಷ ಹೇಳಿದಲ್ಲಿ ಹೋಗಿ ಪ್ರಚಾರ ಮಾಡಲು ಸಿದ್ಧ

ದೇಶದ ಹಳೆಯ ಪಕ್ಷ ಸೇರಿಕೊಂಡ ಬಗ್ಗೆ ಮಾತನಾಡಿದ ಗೀತಾ, ಕಾಂಗ್ರೆಸ್ ಐತಿಹಾಸಿಕ ಪಕ್ಷ. ಈ ಪಕ್ಷಕ್ಕೆ ಸೇರುತ್ತಿರುವುದು ಬಹಳ ಸಂತೋಷವಾಗುತ್ತಿದೆ. ನನ್ನನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡ ಸಹೋದರ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು. ನಾವು ಕನಕಪುರಕ್ಕೆ ಶಿಫ್ಟ್ ಆಗುತ್ತಿದ್ದೇವೆ ಎಂದು ಮಾಧ್ಯಮಗಳು ತಿಳಿಸುತ್ತಿದ್ದು, ಅದೂ ಕೂಡ ಸದ್ಯದಲ್ಲೇ ಆಗಲಿದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ತಂದೆ ಜತೆ ಕೆಲಸ ಮಾಡಿದ್ದು, ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ನನ್ನ ತಮ್ಮ ಮಧು ಕಾಂಗ್ರೆಸ್ ಸೇರಿದಾಗಲೇ ನಾನು ಕಾಂಗ್ರೆಸ್ ಜತೆಗಿದ್ದೆ. ಶಿವರಾಜಕುಮಾರ್ ಅವರು ಕೂಡ ಕಾಂಗ್ರೆಸ್ ಪಕ್ಷದ ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಅವರು ಚಿತ್ರೀಕರಣದಲ್ಲಿರುವುದರಿಂದ ಬಿಡುವು ಮಾಡಿಕೊಂಡು ಪ್ರಚಾರ ಮಾಡುತ್ತಾರೆ. ಪಕ್ಷ ನನಗೆ ಎಲ್ಲಿ ಹೇಳುತ್ತದೆಯೋ ಅಲ್ಲಿ ಹೋಗಿ ಪ್ರಚಾರ ಮಾಡಲು ಸಿದ್ಧನಿದ್ದೇನೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಗೀತಾ ಹೇಳಿದ್ದಾರೆ.

IPL_Entry_Point