ಕನ್ನಡ ಸುದ್ದಿ  /  Karnataka  /  Karnataka Election 2023 Opinion Lingayat Support To Bjp In Karnataka Is A Double Edged Sword Uks

Political Analysis: ಬಿಜೆಪಿ ಪಾಲಿಗೆ ಲಿಂಗಾಯತರ ಬೆಂಬಲ ಎರಡು ಅಲಗಿನ ಕತ್ತಿ, ಯಾರಿಗೂ ಅದು ಶಾಶ್ವತ ಅಲ್ಲ; ಎ ನಾರಾಯಣ ವಿಶ್ಲೇಷಣೆ

Karnataka Assembly Elections 2023 Opinion: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಯಾರನ್ನು ಬೆಂಬಲಿಸಬಹುದು ಎನ್ನುವ ಬಗ್ಗೆ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಮುದಾಯದ ನಡೆಯ ಹಲವು ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿವಿಯ ಸಾರ್ವಜನಿಕ ನೀತಿ ಮತ್ತು ಆಡಳಿತ ಪ್ರಾಧ್ಯಾಪಕ ಎ.ನಾರಾಯಣ.

ಮೇಲ್ನೋಟಕ್ಕೆ ಬಿಜೆಪಿಯು ಲಿಂಗಾಯತರ ಬೆಂಬಲವನ್ನು ಅನುಭವಿಸುತ್ತಿದೆ, ಆದರೆ ಈ ಸಂಬಂಧವು ಬಹಳ ಸಂಕೀರ್ಣವಾದುದು.
ಮೇಲ್ನೋಟಕ್ಕೆ ಬಿಜೆಪಿಯು ಲಿಂಗಾಯತರ ಬೆಂಬಲವನ್ನು ಅನುಭವಿಸುತ್ತಿದೆ, ಆದರೆ ಈ ಸಂಬಂಧವು ಬಹಳ ಸಂಕೀರ್ಣವಾದುದು. (HT Photo)

ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಗೆ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಎಂಬುದು ಮಾಧ್ಯಮಗಳಲ್ಲಿ ಪ್ರಟಕವಾದ ಲೇಖನಗಳಲ್ಲಿ ಕಂಡುಬರುವಷ್ಟು ಸರಳವಾದ ಲೆಕ್ಕಾಚಾರವಲ್ಲ. ಮೇಲ್ನೋಟಕ್ಕೆ ಬಿಜೆಪಿಯು ಲಿಂಗಾಯತರ ಬೆಂಬಲವನ್ನು ಅನುಭವಿಸುತ್ತಿದೆ, ಆದರೆ ಈ ಸಂಬಂಧವು ಬಹಳ ಸಂಕೀರ್ಣವಾದುದು.

ಲಿಂಗಾಯತರು ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ಅವರ ನಂಬಿಕೆಗೆ ನಿಷ್ಠೆಯನ್ನು ಹೆಚ್ಚಿಸುವ ಅನ್ವೇಷಣೆಯ ನಡುವೆ ಸಿಕ್ಕಿಹಾಕಿಕೊಂಡಂತೆ ಕಂಡುಬರುತ್ತದೆ. ಲಿಂಗಾಯತರು 12 ನೇ ಶತಮಾನದ ಸಂತ-ಸುಧಾರಕ ಬಸವೇಶ್ವರರಿಗೆ ನಿಷ್ಠರಾಗಿ ಋಣಿಯಾಗಿದ್ದಾರೆ. ಅವರ ತತ್ತ್ವಶಾಸ್ತ್ರವು ಬಿಜೆಪಿಯ ರಾಜಕೀಯ ಸಿದ್ಧಾಂತದ ಭಾಗವಾಗಿರುವ ಬ್ರಾಹ್ಮಣ ಹಿಂದು ಧರ್ಮದ ಅಡಿಪಾಯವನ್ನು ಪ್ರಶ್ನಿಸುತ್ತದೆ.

ಲಿಂಗಾಯತ ಕಾಂಗ್ರೆಸ್ ನಾಯಕ ವೀರೇಂದ್ರ ಪಾಟೀಲ್ ಅವರನ್ನು 1990 ರಲ್ಲಿ ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಗಾಂಧಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಸಂದರ್ಭ ಇಲ್ಲಿ ಉಲ್ಲೇಖಿಸುವುದು ಸಮಯೋಚಿತ. ಆಗ ಈ ಸಮುದಾಯವು ಕೇಸರಿ ಪಕ್ಷಕ್ಕೆ ತನ್ನ ಬೆಂಬಲವನ್ನು ಬದಲಾಯಿಸಿತು ಎಂಬುದು ಬಿಜೆಪಿಗೆ ಲಿಂಗಾಯತ ಬೆಂಬಲದ ಕುರಿತಾದ ಮಾಧ್ಯಮ ಲೇಖನಗಳಲ್ಲಿ ಕಂಡುಬರುವ ನಿರೂಪಣೆಯಾಗಿದೆ.

ಇದಲ್ಲದೆ, ಈ ನಿರೂಪಣೆಗಳ ಪ್ರಕಾರ, ಸಮುದಾಯದ ಬೆಂಬಲವನ್ನು ಬಿಎಸ್‌ ಯಡಿಯೂರಪ್ಪ ಅವರ ನಾಯಕತ್ವದಲ್ಲಿ 1990ರ ದಶಕದಲ್ಲಿ ಕ್ರೋಢೀಕರಣವಾಯಿತು ಎಂಬ ವಾದ ಹೆಚ್ಚಿನದ್ದು. ಆದರೆ ಸೂಕ್ಷ್ಮವಾಗಿ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ವಾಸ್ತವಾಂಶ ಹೇಳುವುದೇ ಬೇರೆ. ವೀರೇಂದ್ರ ಪಾಟೀಲರ ಪದಚ್ಯುತಿ ಆದ ನಂತರ ಈ ಸಮುದಾಯವು ಕ್ರಮೇಣ ಕಾಂಗ್ರೆಸ್‌ ಪಕ್ಷದಿಂದ ದೂರವಾಯಿತು. ಅದು ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದೆ ಎಂದು ಪ್ರತಿಪಾದಿಸುವುದು ಕರ್ನಾ ಟಕದ ಸಂಕೀರ್ಣ ರಾಜಕೀಯ ಸಮಾಜ ಶಾಸ್ತ್ರದ ಚೌಕಟ್ಟಿನಲ್ಲಿ ಹೇಳುವುದಾದರೆ ಆತುರದ ಪ್ರತಿಪಾದನೆ ಎಂದೇ ಹೇಳಬೇಕಷ್ಟೆ.

ವೀರೇಂದ್ರ ಪಾಟೀಲ್‌ಗೆ ಅವಮಾನವಾಗುವ ಮುನ್ನವೇ ಸಮುದಾಯದ ಬೆಂಬಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರರ ನಡುವೆ ಬದಲಾಗುತ್ತಲೇ ಇತ್ತು. 1983-88ರ ನಡುವೆ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಲಿಂಗಾಯತರು ಪ್ರಮುಖ ಪಾತ್ರವಹಿಸಿದ್ದರು.

ಯಡಿಯೂರಪ್ಪ ಅವರು ರಂಗಕ್ಕೆ ಬರುವುದಕ್ಕೆ ಬಹಳ ಹಿಂದೆಯೇ ಲಿಂಗಾಯತರು ʻಬ್ರಾಹ್ಮಣʼ ಹೆಗಡೆಯವರ ಸುತ್ತ ಜಮಾಯಿಸಿದ್ದರು. ಆ ಸಮಯದಲ್ಲಿ, ಕಾಂಗ್ರೆಸ್ ಮುಖ್ಯಮಂತ್ರಿ ದೇವರಾಜ್ ಅರಸ್ (1972-1980) ಕರ್ನಾಟಕ ರಾಜಕೀಯದ ಮುತ್ಸದ್ದಿ ಲಿಂಗಾಯತ ನಾಯಕ ಎಸ್ ನಿಜಲಿಂಗಪ್ಪ ಅವರನ್ನು ರಾಜಕೀಯ ವಿಸ್ಮೃತಿಗೆ ಒಳಪಡಿಸಿದ ನಂತರ ಲಿಂಗಾಯತರು ರಾಜಕೀಯ ನಾಯಕನ ಹುಡುಕಾಟದಲ್ಲಿದ್ದರು ಎಂಬುದು ಹೆಗಡೆಯವರ ರಾಜಕೀಯ ಗೆಲುವಿನಲ್ಲಿ ಕಂಡುಬರುತ್ತದೆ.

ವೀರೇಂದ್ರ ಪಾಟೀಲ್ ಅನುಭವಿಸಿದ ಅವಮಾನದ ವಿರುದ್ಧ ಲಿಂಗಾಯತ ಕೋಪವು 1994 ರ ಚುನಾವಣೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಲು ಒಂದು ಕಾರಣವಾಗಿರಬಹುದು. ಆದರೆ ಲಿಂಗಾಯತರು ತಮ್ಮ ಬೆಂಬಲವನ್ನು ಬಿಜೆಪಿಗೆ ಬದಲಾಯಿಸಲಿಲ್ಲ. ವೀರೇಂದ್ರ ಪಾಟೀಲ್ ಅವರು ಸಾಯುವವರೆಗೂ ಕಾಂಗ್ರೆಸ್‌ನಲ್ಲಿಯೇ ಇದ್ದರು. ವೀರೇಂದ್ರ ಪಾಟೀಲ್ ನಿರ್ಗಮಿಸಿದ ಒಂದು ದಶಕದ ನಂತರವೂ ಲಿಂಗಾಯತ ಮತದಾರರು ಹೆಚ್ಚಾಗಿ ಜನತಾ ದಳ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ಬೆಂಬಲ ನೀಡುತ್ತ ಬಂದಿರುವುದು ಚುನಾವಣಾ ಫಲಿತಾಂಶ ಗಮನಿಸಿದರೆ ಮನವರಿಕೆಯಾದೀತು.

ಬಿಜೆಪಿ ಅವರ ಆಯ್ಕೆಯಾಗಿರಲಿಲ್ಲ. ಈ ಅವಧಿಯಲ್ಲಿ ಬಿಜೆಪಿ ಪಡೆದ ಗರಿಷ್ಠ ಸಂಖ್ಯೆಯ ಸ್ಥಾನಗಳು 1994 ರಲ್ಲಿ 40 ಮತ್ತು 1999 ರಲ್ಲಿ 44 ಆಗಿತ್ತು. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ರಾಜ್ಯದ ಲಿಂಗಾಯತೇತರ ಪ್ರಾಬಲ್ಯ ಪ್ರದೇಶಗಳಿಂದ ಬಂದವು ಎಂಬುದನ್ನು ಇಲ್ಲಿ ಗಮನಿಸಬೇಕು.

ನಿಜ, ಬಿಜೆಪಿಯ 2008ರ ವಿಜಯವು ಹೆಚ್ಚಾಗಿ ಲಿಂಗಾಯತ ಬೆಂಬಲದ ಕಾರಣದಿಂದಾಗಿತ್ತು, ಆದರೆ ಇದು ಸ್ಥಿರವಾಗಿರಲಿಲ್ಲ ಅಥವಾ ಸಹಜವಾಗಿಯೇ ಆದ ರಾಜಕೀಯ ಕ್ರೋಢೀಕರಣದ ಫಲಿತಾಂಶವೂ ಆಗಿರಲಿಲ್ಲ. ಜನತಾದಳದ ವಿಘಟನೆಯ ನಂತರ 2004 ರ ವಿಧಾನಸಭಾ ಚುನಾವಣೆಯ ಮುನ್ನಾದಿನದಂದು ಹಿಂದಿನ ಜನತಾ ದಳದ ಅನೇಕ ಪ್ರಮುಖ ಲಿಂಗಾಯತ ನಾಯಕರು ಬಿಜೆಪಿಗೆ ಸೇರಿದಾಗ ಲಿಂಗಾಯತ ಬೆಂಬಲದ ಮೊದಲ ಬದಲಾವಣೆಯು ಸಂಭವಿಸಿತು. 2007 ರಲ್ಲಿ ಜನತಾ ದಳ (ಎಸ್) ಜತೆಗಿನ ಒಪ್ಪಂದದ ಅಡಿಯಲ್ಲಿ ಯಡಿಯೂರಪ್ಪ ಅವರಿಗೆ ಅನ್ಯಾಯವಾಗಿ ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ ನಂತರ ಅವರ ಬಗ್ಗೆ ಸಹಾನುಭೂತಿಯ ಸ್ಫೋಟ ಸಂಭವಿಸಿದ ಪರಿಣಾಮವೇ ನಂತರ ಸಂಭವಿಸಿದ್ದು.

ಯಡಿಯೂರಪ್ಪ ಅವರು 2013ರಲ್ಲಿ ಪ್ರತ್ಯೇಕ ಪ್ರಾದೇಶಿಕ ಪಕ್ಷ ಸ್ಥಾಪಿಸಿದಾಗ ಬಿಜೆಪಿಯು ಆ ಸಮುದಾಯದ ಬೆಂಬಲ ಕಳೆದುಕೊಂಡಿತ್ತು. ಮುಂದಿನ ವರ್ಷ ಯಡಿಯೂರಪ್ಪ ಪಕ್ಷಕ್ಕೆ ಮರಳಿದ ನಂತರ, ಬಿಜೆಪಿಗೆ ಲಿಂಗಾಯತ ಬೆಂಬಲವನ್ನು ಭಾಗಶಃ ಪುನಃಸ್ಥಾಪಿಸಲ್ಪಟ್ಟಿತು. 2018 ರ ವಿಧಾನಸಭಾ ಚುನಾವಣೆಯ ಫಲಿತಾಂಶವು ಅದನ್ನು ಸ್ಪಷ್ಟಪಡಿಸಿತು.

ಏಕೆಂದರೆ ಲಿಂಗಾಯತ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಕಾಂಗ್ರೆಸ್ ಉತ್ತಮ ಪಾಲನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ವಾಸ್ತವವಾಗಿ, ಇತರೆ ಹಿಂದುಳಿದ ವರ್ಗಗಳ (OBC) ಮತಗಳು ನಿರ್ಣಾಯಕವಾಗಿರುವ ಕರಾವಳಿ ಕರ್ನಾಟಕದಂತಹ ಲಿಂಗಾಯತೇತರ ಪ್ರದೇಶಗಳಲ್ಲಿ ಹಾಗೂ ಪರಿಶಿಷ್ಟ ಪಂಗಡಗಳ ಪ್ರಾಬಲ್ಯವಿರುವ ಮಧ್ಯ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ.

ಲಿಂಗಾಯತ ಸಮುದಾಯದ ಒಂದು ವರ್ಗವು ಬಿಜೆಪಿಯ ಹಿಂದುತ್ವ ಸಿದ್ಧಾಂತವು ಬಸವೇಶ್ವರರ ತತ್ತ್ವವನ್ನು ದುರ್ಬಲಗೊಳಿಸುವ ಸಾಮರ್ಥ್ಯದ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ. ಇದಕ್ಕಾಗಿ ಅವರು ಲಿಂಗಾಯತರನ್ನು ಪ್ರತ್ಯೇಕ ಧರ್ಮವಾಗಿ ಗುರುತಿಸುವ ಚಳವಳಿಯನ್ನು ಜೀವಂತವಾಗಿಟ್ಟಿದ್ದಾರೆ. ಸಮುದಾಯವನ್ನು ಹಿಂದು ಪಂಗಡವಾಗಿ ಉಳಿಸಿಕೊಳ್ಳಲು ಬಯಸುವ ಬಿಜೆಪಿಗೆ ಈ ಚಳವಳಿ ಸವಾಲಾಗಿದೆ. ಕೆಲವು ಪ್ರಬಲ ಲಿಂಗಾಯತ ಮಠಗಳ ಮುಖ್ಯಸ್ಥರು, ದಲಿತರು ಮತ್ತು ಒಬಿಸಿಗಳ ದಾರ್ಶನಿಕರಿಗಿಂತ ಭಿನ್ನವಾಗಿ, ಹಿಂದುತ್ವ ಸಿದ್ಧಾಂತದ ತೀವ್ರ ಟೀಕಾಕಾರರಾಗಿ ಬದಲಾಗಿದ್ದಾರೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಈ ರೀತಿಯ ಹಲವಾರು ದಾರ್ಶನಿಕರನ್ನು ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹಿಂದುತ್ವದ ವಿಮರ್ಶಕರಲ್ಲಿ ಅತ್ಯಂತ ಪ್ರಮುಖರಾದ ನಿಜಗುಣಾನಂದ ಸ್ವಾಮೀಜಿ ಅಪಾರ ಜನ ಸಮೂಹವನ್ನು ತಮ್ಮ ಚಿಂತನೆಗಳ ಮೂಲಕ ಸೆಳೆಯುತ್ತಿದ್ದಾರೆ. ಅವರ ಪ್ರವಚನಗಳ ಯೂಟ್ಯೂಬ್ ವೀಡಿಯೊಗಳು ಲಕ್ಷಾಂತರ ವೀಕ್ಷಣೆಗಳನ್ನು ಆಕರ್ಷಿಸುತ್ತಿವೆ. ಇದು ಹಿಂದುತ್ವದ (ಮತ್ತು ಮೋದಿ ಪರ) ಸಾರ್ವಜನಿಕ ಭಾಷಣಕಾರರಿಂದ ಪಡೆದ ಹಿಟ್‌ಗಳನ್ನು ಮೀರಿಸುತ್ತದೆ. ಲಿಂಗಾಯತರಾದ ಪ್ರೊ. ಎಂ ಎಮ್ ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯು ಲಿಂಗಾಯತರು, ಕಟ್ಟರ್ ಹಿಂದುತ್ವ ಬೆಂಬಲಿಗರಿಂದ ಆಪಾದಿತವಾಗಿ ಈ ಹಳಸಿದ ಸಂಬಂಧಕ್ಕೆ ಇನ್ನಷ್ಟು ಕಹಿಬೆರೆಸಿತು. ಆದರೂ ಸಾರ್ವಜನಿಕವಾಗಿ ಇದು ಚರ್ಚೆಯಾಗಿಲ್ಲ.

ಬಿ ಎಸ್ ಯಡಿಯೂರಪ್ಪ ಸೇರಿ ಲಿಂಗಾಯತ ಸಮುದಾಯದ ಯಾವುದೇ ಹಿರಿಯ ಬಿಜೆಪಿ ನಾಯಕರು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಟೀಕಾಪ್ರಹಾರ ಮಾಡುವ, ವಾಗ್ದಾಳಿ ನಡೆಸುವ ತಮ್ಮ ಪಕ್ಷದ ಸಹೋದ್ಯೋಗಿಗಳೊಂದಿಗೆ ಸೇರಿಕೊಳ್ಳುವುದಿಲ್ಲ. ಇದಕ್ಕೆ ಅಪವಾದವಾಗಿ 2007ರಲ್ಲಿ ಜನತಾ ದಳದಿಂದ ಬಿಜೆಪಿಗೆ ಸೇರಿದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಡುಬರುತ್ತಾರೆ. ಮೂಲ ಬಿಜೆಪಿಯವರಿಗಿಂತ ಹೆಚ್ಚು ನಿಷ್ಠಾವಂತ ಹಿಂದು ಎಂದು ತೋರಿಸಿಕೊಳ್ಳುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಂಡಿರುವುದನ್ನು ಇತ್ತೀಚೆಗೆ ಟಿವಿ ಸುದ್ದಿ ನಿರೂಪಕರೊಬ್ಬರು ಬೆಟ್ಟು ಮಾಡಿ ತೋರಿ ʻಬೊಮ್ಮಾಯಿ ಹಿಂದುತ್ವದ ಪರವಾಗಿ ಮಾತನಾಡಿದಾಗಲೆಲ್ಲ ಹವ್ಯಾಸಿ ನಟನೊಬ್ಬ ತನ್ನ ಅಳತೆ ಮೀರಿದ ಪಾತ್ರ ನಿರ್ವಹಿಸುತ್ತಿರುವಂತೆ ಕಾಣುತ್ತದೆʼ ಎಂದು ಹೇಳಿದ್ದರು.

ಬಿಜೆಪಿಯು ವರ್ಷಗಳಿಂದ ಬೆಳೆಸಿದ ಮತ್ತು ಇತರ ಪಕ್ಷಗಳಿಂದ ಸೇರಿಕೊಂಡಿರುವ ಎಲ್ಲ ಕರ್ನಾಟಕದ ನಾಯಕರಲ್ಲಿ, ಲಿಂಗಾಯತ ನಾಯಕರು ಅದರ ಮೂಲ ಸಿದ್ಧಾಂತದೊಂದಿಗೆ ಬಹಳ ಕ್ಷಣಿಕ ಸಂಬಂಧವನ್ನು ಹೊಂದಿದ್ದಾರೆಂದು ತೋರುತ್ತದೆ. ಇದು ಒಂದು ರೀತಿಯಲ್ಲಿ, ಬಿಜೆಪಿಯ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಬೆಳೆಸಿದ್ದರೂ ಸಹ ಈ ಬಾರಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ನಿರಾಳವಾಗಿ ನಡೆದು ಕಾಂಗ್ರೆಸ್‌ಗೆ ಸೇರಿದರು ಎಂಬುದನ್ನು ವಿವರಿಸುತ್ತದೆ.

ಹಿಂದುತ್ವದ ತೀವ್ರ ಸ್ವರೂಪಗಳನ್ನು ಆಶ್ರಯಿಸಿ ಕರ್ನಾಟಕವನ್ನು ವಶಪಡಿಸಿಕೊಳ್ಳುವ ಬಿಜೆಪಿಯ ಪ್ರಯತ್ನಗಳನ್ನು ಅದರ ಲಿಂಗಾಯತ ಬೆಂಬಲ-ಮೂಲದಿಂದ ಹೆಚ್ಚು ಪ್ರತಿರೋಧಿಸುವ ಸಾಧ್ಯತೆಯಿದೆ. ಲಿಂಗಾಯತರು ಬಿಜೆಪಿಯ ದೇಹಕ್ಕೆ ಮುಳ್ಳಾಗಿರುವಂತೆಯೇ ಪಕ್ಷದ ಮಿತ್ರರೂ ಆಗಿದ್ದಾರೆ. ಆದ್ದರಿಂದ, ಬಿಜೆಪಿಯ ಪ್ರಸ್ತುತ ತಂತ್ರವು ಲಿಂಗಾಯತೇತರ ಜಾತಿಗಳನ್ನು ಲಿಂಗಾಯತರನ್ನು ಹೆಚ್ಚು ಅವಲಂಬಿಸುವ ಬದಲು ತನ್ನ ಸಾಮಾಜಿಕ ತಳಹದಿಯನ್ನು ವಿಸ್ತರಿಸುವಂತಿದೆ. ಆದರೆ ಸದ್ಯಕ್ಕೆ ಸಮುದಾಯವನ್ನು ಶಾಂತವಾಗಿರಿಸಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಅಧಿಕಾರದಲ್ಲಿ ಹೆಚ್ಚಿನ ಪಾಲನ್ನು ಹೊಂದುವ ಮೂಲಕ ಮಾತ್ರ ಸಮುದಾಯವನ್ನು ಗೆಲ್ಲಲು ಸಾಧ್ಯವೇ ಹೊರತು ಅದರ ಸಿದ್ಧಾಂತದೊಂದಿಗೆ ಅದನ್ನು ಮಂತ್ರಮುಗ್ಧಗೊಳಿಸುವುದರಿಂದ ಅಲ್ಲ ಎಂಬುದು ಪಕ್ಷಕ್ಕೆ ಚೆನ್ನಾಗಿ ಅರ್ಥವಾದಂತೆ ಇದೆ.

ಎ.ನಾರಾಯಣ, ರಾಜಕೀಯ ವಿಶ್ಲೇಷಕ
ಎ.ನಾರಾಯಣ, ರಾಜಕೀಯ ವಿಶ್ಲೇಷಕ

(ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ನಿಲುವನ್ನು ಬಿಂಬಿಸುತ್ತದೆ)

ಅನುವಾದ: ಉಮೇಶ್ ಕುಮಾರ್ ಶಿಮ್ಲಡ್ಕ

ಮೂಲ ಲೇಖನವನ್ನು ಇಂಗ್ಲಿಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್‌ ಮಾಡಿ: Pollscape | Lingayat support to BJP in Karnataka is a double-edged sword