KS Eshwarappa: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ
ಕನ್ನಡ ಸುದ್ದಿ  /  ಕರ್ನಾಟಕ  /  Ks Eshwarappa: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ

KS Eshwarappa: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ

ರಾಜ್ಯ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತು ನಳಿನ್ ಕುಮಾರ್ ಕಟೀಲ್ ಇದ್ದಾರೆ. (HT PHOTO.)
ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತು ನಳಿನ್ ಕುಮಾರ್ ಕಟೀಲ್ ಇದ್ದಾರೆ. (HT PHOTO.)

ಬೆಂಗಳೂರು: ಭಾರತೀಯ ಜನತಾ ಪಕ್ಷದ (Bharatiya Janata Party) ಹಿರಿಯ ನಾಯಕ ಕೆಎಸ್ ಈಶ್ವರಪ್ಪ(KS Eshwarappa) ಸಕ್ರಿಯ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ (Assembly Election 2023) ಬಿಜೆಪಿ (BJP) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸುವ ಮೂರು ದಿನಗಳಿಂದ ದೆಹಲಿಯಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿರುವಾಗಲೇ ಕೆಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಶಿವಮೊಗ್ಗದ ಬಿಜೆಪಿ ಶಾಸಕ ಈಶ್ವರಪ್ಪ ತಮ್ಮ ನಿರ್ಧಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

'ಚುನಾವಣಾ ರಾಜಕೀಯದಿಂದ ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರನ್ನು ಪರಿಗಣಿಸದಂತೆ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಪಕ್ಷಕ್ಕೆ ತಮ್ಮ 40 ವರ್ಷಗಳ ಸೇವೆಯಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳನ್ನು ನೀಡಿದ ಪಕ್ಷಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕೆಎಸ್ ಈಶ್ವರಪ್ಪ ಬರೆದಿರುವ ಪತ್ರ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕೆಎಸ್ ಈಶ್ವರಪ್ಪ ಬರೆದಿರುವ ಪತ್ರ.

ಈಶ್ವರಪ್ಪ ಬಾಲ್ಯ ಹಾಗೂ ರಾಜಕೀಯ ಜೀವನ

ಕೆ ಎಸ್ ಈಶ್ವರಪ್ಪ ಅವರು 1948ರ ಜೂನ್ 10 ರಂದು ಬಳ್ಳಾರಿಯಲ್ಲಿ ಜನಿಸಿದ್ದಾರೆ. ತಂದೆ ಶರಣಪ್ಪ ಮತ್ತು ತಾಯಿ ಬಸ್ಸಮ್ಮ. 1950 ರ ದಶಕದ ಆರಂಭದಲ್ಲಿ ಶಿವಮೊಗ್ಗಕ್ಕೆ ವಲಸೆ ಬಂದಿದ್ದಾರೆ. ಇವರ ತಂದೆ ಭೂಪಾಲಂ ಅರೆಕಾ ಮಂಡಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ತಂದೆಗೆ ಸಹಾಯ ಮಾಡಲು ಬಾಲ್ಯದಲ್ಲಿ ಈಶ್ವರಪ್ಪ ಕೂಡ ದಿನಗೂಲಿ ಕಾರ್ಮಿಕರಾಗಿ ಕೆಲಸ ಹೋಗಲು ಮುಂದಾದಾಗ ಇವರ ತಾಯಿ ಬಸ್ಸಮ್ಮ ವಿರೋಧಿಸಿ ಶಿಕ್ಷಣದತ್ತ ಗಮನಹರಿಸಿ ಸಮಾಜದಲ್ಲಿ ಉತ್ತಮ ಹೆಸರು ಗಳಿಸುವಂತೆ ಒತ್ತಾಯಿಸಿದ್ದರಂತೆ. ಬಾಲ್ಯದಲ್ಲಿ ಪಡೆದ ಈ ಸ್ಫೂರ್ತಿ ಅಂತಿಮವಾಗಿ ಸಮಾಜ ಸೇವಕನಾಗಲು ಕಾರಣವಾಯಿತು ಎಂದು ಈ ಹಿಂದೆ ಈಶ್ವರಪ್ಪ ಅವರೇ ಹೇಳಿಕೊಂಡಿದ್ದಾರೆ.

ಬಾಲ್ಯದಲ್ಲಿ ಈಶ್ವರಪ್ಪ ಅವರಿಗೆ ಕ್ರೀಡೆ ಮತ್ತು ಸಂಗೀತದಲ್ಲಿ ಹೆಚ್ಚು ಆಸಕ್ತಿ ಇತ್ತು. ಇವರ ಸಹಪಾಠಿಗಳಲ್ಲಿ ಒಬ್ಬರು ಡಿಎಂ ರವೀಂದ್ರ ಅವರು ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಾಂತ ಪ್ರಚಾರಕರಾಗಿದ್ದರು. ಶಿವಮೊಗ್ಗದ ಪ್ರಸಿದ್ಧ ವಿಎಚ್‌ಪಿ ನಾಯಕ ನರಸಿಂಹ ಮೂರ್ತಿ ಅಯ್ಯಂಗಾರ್ ಅವರು ತಮ್ಮ ಬಾಲ್ಯದಲ್ಲಿ ಆರ್‌ಎಸ್‌ಎಸ್‌ಗೆ ಇವರನ್ನು ಪರಿಚಯಿಸಿದವರಂತೆ. ಹೀಗಾಗಿ, ಅವರ ಸಾರ್ವಜನಿಕ ಜೀವನವು ಆರ್ ಎಸ್ಎಸ್ ಕಾರ್ಯಕರ್ತನಾಗಿ ಪ್ರಾರಂಭವಾಗಿದೆ.

ಶಿವಮೊಗ್ಗದ ನ್ಯಾಷನಲ್ ಕಾಮರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಈಶ್ವರಪ್ಪ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಯೊಂದಿಗೆ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಪದವಿ ಮುಗಿದ ನಂತರ ಶಿವಮೊಗ್ಗದಲ್ಲಿ ಸ್ವಂತ ಉದ್ಯಮ ಆರಂಭಿಸಿ ಆ ಬಳಿಕ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ.

1989 ರಲ್ಲಿ ಮೊದಲ ಬಾರಿಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಂದಿನ ಆರೋಗ್ಯ ಸಚಿವರಾಗಿದ್ದ ಕೆ.ಹೆಚ್.ಶ್ರೀನಿವಾಸ್ ಅವರನ್ನ 1,304 ಮತಗಳಿಂದ ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. 1999 ರಲ್ಲಿ ಒಮ್ಮೆ ಪರಾಭವಗೊಂಡಿದ್ದಾರೆ. 1992 ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಬಿಜೆಪಿಯಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಇವರು 2019ರ ಆಗಸ್ಟ್ 20 ರಿಂದ 2022ರ ಏಪ್ರಿಲ್ 14 ರವರೆಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಆದರೆ ಕಮಿಷನ್ ಆರೋಪದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬುವರು ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಕಮಿಷನ್‌ಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಈಶ್ವರಪ್ಪ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಪಾಟೀಲ್ ಯಾರು ಅಂತಲೇ ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದ್ದರು.

ಜಗದೀಶ್ ಶೆಟ್ಟರ ಅವರ ನೇತೃತ್ವದ ಸರ್ಕಾರದಲ್ಲಿ ಈಶ್ವರಪ್ಪ 2012ರಲ್ಲಿ ಉಪ ಮುಖ್ಯಮಂತ್ರಿ ಆಗಿದ್ದರು. ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2008ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವು ಸಾಧಿಸಿತ್ತು. ಆಗ BS ಯಡಿಯೂರಪ್ಪ ಸರ್ಕಾರದಲ್ಲಿ ಇಂಧನ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವಿವಾದಗಳೇ ಹೆಚ್ಚು

ಕೆಎಸ್ ಈಶ್ವರಪ್ಪ ಅವರು ಭಾರಿ ವಿವಾದಗಳಿಂದ ಸುದ್ದಿಯಾಗುತ್ತಾರೆ. ಹಿಜಾಬ್, ಅಜಾನ್ ಹೀಗೆ ಧಾರ್ಮಿಕ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಗುಂಡ್ಲುಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಥುರಾ ಮತ್ತು ಕಾಶಿಯಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿದ್ದರು. ಇದೀಗ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವುದು ಕೇಸರಿ ಪಾಳಯದಲ್ಲಿ ಅಚ್ಚರಿ ತಂದಿದೆ.

Whats_app_banner