Bhupesh Baghel: ಕಾಂಗ್ರೆಸ್ ಜಾರಿ ಮಾಡುವ ಯೋಜನೆಗಳನ್ನ ಮಾತ್ರ ಘೋಷಣೆ; ಬಿಜೆಪಿ ಹೇಳಿದ ಯಾವುದೇ ಭರವಸೆ ಈಡೇರಿಸಿಲ್ಲ: ಛತ್ತೀಸ್‌ಗಢ ಸಿಎಂ
ರಾಜ್ಯದಲ್ಲಿ ಬಿಜೆಪಿ ಶಾಸಕರೊಬ್ಬರ ಬಳಿ 8 ಕೋಟಿ ಅಕ್ರಮ ಹಣದ ಜತೆ ಸಿಕ್ಕಿ ಬಿದ್ದರೂ ಯಾವುದೇ ಐಟಿ, ಇಡಿ ಸಂಸ್ಥೆಗಳು ತನಿಖೆ ಮಾಡುವುದಿಲ್ಲ. ಕಾರಣ ಇಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ ಎಂದು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಹೇಳಿದ್ದಾರೆ.
ಬೆಂಗಳೂರು: ಕಾಂಗ್ರೆಸ್ (Congress) ಜಾರಿ ಮಾಡುವ ಯೋಜನೆಗಳನ್ನು ಮಾತ್ರ ಘೋಷಣೆ ಮಾಡಲಿದೆ. ನಮ್ಮ ಪಕ್ಷ ನುಡಿದಂತೆ ನಡೆಯುವ ಪಕ್ಷ. ಆದರೆ ಬಿಜೆಪಿ ಸರ್ಕಾರ (BJP Govt) ಹೇಳಿದ ಯಾವುದೇ ಭರವಸೆ ಈಡೇರಿಸುವುದಿಲ್ಲ ಎಂದು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ (Chhattisgarh CM Bhupesh Baghel) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಚುನಾವಣೆ (Karnataka Elections 2023) ಬಗ್ಗೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಇವೆಲ್ಲವೂ ಕೇವಲ ಭರವಸೆಯಾಗಿ ಉಳಿದಿದೆ ಎಂದು ನಮೋ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಇರುವ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ. ಬಿಜೆಪಿಯ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲ್ಲಿಕ್ ಅವರು ಬಿಜೆಪಿಯಲ್ಲಿ ಭ್ರಷ್ಟಾಚಾರ ನಡೆದರೂ ಯಾವುದೇ ವ್ಯತ್ಯಾಸವಾಗುವುದಿಲ್ಲದಂತೆ ಇರುತ್ತಾರೆ. ಅದಾನಿ ಅವರ ಬೇನಾಮಿ ಕಂಪನಿಗಳ ಖಾತೆಗೆ 20 ಸಾವಿರ ಕೋಟಿ ಹೇಗೆ ತಲುಪಿತು ಎಂದು ಯಾವುದೇ ತನಿಖಾ ಸಂಸ್ಥೆಗಳು ವಿಚಾರಣೆ ಮಾಡುತ್ತಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಶಾಸಕರೊಬ್ಬರ ಬಳಿ 8 ಕೋಟಿ ಅಕ್ರಮ ಹಣದ ಜತೆ ಸಿಕ್ಕಿ ಬಿದ್ದರೂ ಯಾವುದೇ ಐಟಿ, ಇಡಿ ಸಂಸ್ಥೆಗಳು ತನಿಖೆ ಮಾಡುವುದಿಲ್ಲ. ಕಾರಣ ಇಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ಭ್ರಷ್ಟಾಚಾರದ ವಿಚಾರದ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿ ಈಗ ತಾನೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಪರಿಸ್ಥಿತಿಗಳಲ್ಲಿ ಪ್ರಧಾನಮಂತ್ರಿಗಳನಾ ಖಾವುಂಗಾ ನಾ ಖಾನೆದುಂಗಾ, ದೇಶವನ್ನು ಮಾರಲು ಬಿಡುವುದಿಲ್ಲ ಎಂಬೆಲ್ಲಾ ಘೋಷವಾಕ್ಯಗಳು ಅರ್ಥಹೀನವಾಗಿವೆ ಎಂದು ಬಘೇಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭಾರತದ ನವರತ್ನಗಳು ಎಂದೇ ಪರಿಗಣಿತವಾಗಿರುವ ಸಾರ್ವಜನಿಕ ಉದ್ದಿಮೆಗಳ ಕೆಲವನ್ನು ಮಾರಿದೆ, ಉದಿರುವುದನ್ನು ಮಾರಲು ತಯಾರಿ ಮಾಡಿಕೊಂಡಿದೆ. ಇಡೀ ದೇಶದಲ್ಲಿ ಇಂತಹ ದಯನೀಯ ಸ್ಥಿತಿ ಇದೆ. ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜ್ಯದ ಜನರನ್ನು ಬೆದರಿಸುತ್ತಿದ್ದಾರೆ. ನಮ್ಮ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧಮ್ಕಿ ಹಾಕುತ್ತಿದ್ದಾರೆ. ಇದೆಲ್ಲವನ್ನು ರಾಜ್ಯದ ಜನ ನೋಡುತ್ತಿದ್ದಾರೆ ಎಂದಿದ್ದಾರೆ
ಕರ್ನಾಟಕ ಚುನಾವಣೆ ಹೊಸ್ತಿಲಲ್ಲಿದ್ದು, ಪಕ್ಷದ ಎಲ್ಲಾ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಹಾಗೂ ಉಚಿತ ಪ್ರಯಾಣ ಯೋಜನೆ ಘೋಷಣೆ ಮಾಡಿದ್ದು, ಕಾಂಗ್ರೆಸ್ ಸರ್ಕಾರ ಈ ಯೋಜನೆಗಳನ್ನು ಜಾರಿ ಮಾಡಿಯೇ ಮಾಡಲಿದೆ. ಇದೇ ಕಾರಣಕ್ಕೆ ಜನ ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದಾರೆ.
ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯೂನಿಟ್ ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆಗಳನ್ನು ಬೇರೆ ರಾಜ್ಯಗಳಲ್ಲಿ ಜಾರಿ ಮಾಡಲಾಗಿದ್ದು, ಈಗ ಇಲ್ಲಿಯೂ ಘೋಷಣೆ ಮಾಡಿದ್ದೇವೆ.
ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಚತ್ತೀಸಗಡದಲ್ಲೂ ಇದೇ ರೀತಿಯ ಯೋಜನೆ ಜಾರಿ ಮಾಡಿದ್ದೇವೆ. ನಮ್ಮಲ್ಲಿ ಪ್ರತಿ ಕುಟುಂಬಕ್ಕೆ ಆಧಾರದ ಮೇಲೆ ನೀಡಿದ್ದು, ಇಲ್ಲಿ ಪ್ರತಿ ವ್ಯಕ್ತಿ ಆಧಾರದ ಮೇಲೆ ನೀಡಲಾಗುತ್ತಿದೆ.
ಇನ್ನು ಯುವನಿಧಿ ಕಾರ್ಯಕ್ರಮದ ಮೂಲಕ ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು 2 ವರ್ಷದವರೆಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ನಮ್ಮ ರಾಜ್ಯದಲ್ಲಿ 12ನೇ ತರಗತಿ ಉತ್ತೀರ್ಣರಾದವರಿಗೆ ಪ್ರತಿ ತಿಂಗಳು 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇನ್ನು ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುವುದು ಎಂದು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ತಿಳಿಸಿದ್ದಾರೆ.