ಕನ್ನಡ ಸುದ್ದಿ  /  Karnataka  /  Karnataka Election Karnataka Would Turn Into Pfi Valley If Congress Is Elected Says Assam Cm Himanta Biswa Sarma Prs

Himanta Biswa Sarma: ತನ್ನ ಮೇಲೆ ಗ್ಯಾರಂಟಿ ಇಲ್ಲದವರು ಏನು ಗ್ಯಾರಂಟಿ ಕೊಡ್ತಾರೆ; ಕರಾವಳಿಯಲ್ಲಿ ರಾಹುಲ್ ವಿರುದ್ಧ ಹರಿಹಾಯ್ದ ಅಸ್ಸಾಂ ಸಿಎಂ

Karnataka Assembly Elections: ಕರಾವಳಿ ಕರ್ನಾಟಕಕ್ಕೆ ಶನಿವಾರ ಆಗಮಿಸಿದ ಅಸ್ಸಾಂ ಸಿಎಂ ಹೇಮಂತ್ ಬಿಸ್ವಾಸ್, ಭಾನುವಾರ ಬೆಳಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಮಾಡಿದರು. ಈ ಸಂದರ್ಭ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ನೇರ ತರಾಟೆಗೆ ತೆಗೆದುಕೊಂಡ ಅವರು, ತನ್ನ ಮೇಲೆಯೇ ಗ್ಯಾರಂಟಿ ಇಲ್ಲದವರು, ಏನು ಗ್ಯಾರಂಟಿ ಕೊಡ್ತಾರೆ ಎಂದು ಲೇವಡಿ ಮಾಡಿದರು.

ಹರೀಶ್​ ಪೂಂಜಾ ಪರ ಮತಯಾಚಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
ಹರೀಶ್​ ಪೂಂಜಾ ಪರ ಮತಯಾಚಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ

ಮಂಗಳೂರು: ರಾಹುಲ್ ಗಾಂಧಿ (Rahul Gandhi) ಅಮೇಠಿ ಕ್ಷೇತ್ರದಿಂದ ಕೇರಳಕ್ಕೆ ಹೋದರು. ಒಂದು ಕಾಲದಲ್ಲಿ ತಮ್ಮ ಕುಟುಂಬದವರೇ ಸಂಸದರಾಗಿದ್ದ ಆ ಕ್ಷೇತ್ರವನ್ನೀಗ ತಿರುಗಿಯೂ ನೋಡುತ್ತಿಲ್ಲ. ಅವರನ್ನು ಸುಧಾರಿಸುವುದು ಹೇಗೆ ಎಂಬುದೇ ಸೋನಿಯಾ ಗಾಂಧಿಗೆ ಚಿಂತೆ. ಹೀಗೆ ರಾಹುಲ್​ಗೆ ತನ್ನ ಮೇಲೆಯೇ ಗ್ಯಾರಂಟಿ ಇಲ್ಲ. ಇನ್ನು ಕರ್ನಾಟಕದ ಜನತೆಗೆ ಏನು ಗ್ಯಾರಂಟಿ ಕೊಡ್ತಾರೆ? ಹೀಗೆಂದು ಪ್ರಶ್ನಿಸಿದವರು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma).

ಮಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಸ್ವಾ ಶರ್ಮಾ, ಕರ್ನಾಟಕ ಜನರು ಸ್ವಾಭಿಮಾನಿಗಳು ಕಾಂಗ್ರೆಸ್​ನ ಗ್ಯಾರಂಟಿ ರಾಜಕಾರಣವನ್ನು ನಂಬುವುದಿಲ್ಲ. ತಮ್ಮ ಆತ್ಮಾಭಿಮಾನಕ್ಕೆ ಧಕ್ಕೆ ಎಂದೇ ಭಾವಿಸುತ್ತಾರೆ. ರಾಹುಲ್ ಗಾಂಧಿ ಬಂದು ಗ್ಯಾರಂಟಿ ಕೊಡುತ್ತಾರೆ. ಆದರೆ, ಅವರಿಗೆ ಗ್ಯಾರಂಟಿ ಕೊಡುವವರು ಯಾರು ಎಂದು ಪ್ರಶ್ನಿಸಿದರು.

ಉತ್ತರ ಪ್ರದೇಶದಲ್ಲಿ ಎಂಪಿ ಯಾಗಿದ್ದವರು, ಕೇರಳಕ್ಕೆ ವಲಸೆ ಹೋದರು. ಅವರಿಗೇ ಗ್ಯಾರಂಟಿ ಇಲ್ಲ. ತನ್ನ ಮೇಲೇ ಗ್ಯಾರಂಟಿ ಇಲ್ಲದ ವ್ಯಕ್ತಿ, ಒಂದು ದಿನ ಒಂದೊಂದು ಮಾತನಾಡುತ್ತಿರುವ ವ್ಯಕ್ತಿ ಅವರು. ಕಾಂಗ್ರೆಸ್ ಪಕ್ಷ ಬಜರಂಗದಳ ಬ್ಯಾನ್ (Bajrang dal) ಕುರಿತು ತಳೆದ ನಿಲುವನ್ನು ಟೀಕಿಸಿದರು. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಹೊರತಂದ ಚುನಾವಣಾ ಪ್ರಣಾಳಿಕೆ ಬಹುಸಂಖ್ಯಾತರ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.

ನಮ್ಮ ಧರ್ಮ, ಸಂಸ್ಕೃತಿಯ ವಿರೋಧಿಯಾದ ಪ್ರಣಾಳಿಕೆಯನ್ನು ಹೊರ ತರುವ ಮೂಲಕ ನೈಜ ಬಣ್ಣವನ್ನು ಅನಾವರಣಗೊಳಿಸಿದೆ. ಪಿಎಫ್​ಐ (PFI) ಸಂಘಟನೆಗೂ ಬಜರಂಗದಳ ಸಂಘಟನೆಗೂ ಒಂದೇ ರೀತಿಯ ಹೋಲಿಕೆ ಮಾಡುವ ಮೂಲಕ ತುಷ್ಠೀಕರಣವನ್ನು ಮಾಡಹೊರಟಿದೆ. ಪಿಎಫ್​​ಐ ಅನ್ನು ಬ್ಯಾನ್ ಮಾಡಿದಾಗ, ಕಾಂಗ್ರೆಸ್ ಪಕ್ಷದ ಮುಖಂಡರು ಅದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಆದರೆ ಬಹಿರಂಗವಾಗಿ ಹೇಳಿರಲಿಲ್ಲ ಎಂದು ಹೇಳಿದ್ದಾರೆ.

ನನ್ನ ರಾಜ್ಯದ ಅನೇಕ ಕಾಂಗ್ರೆಸ್ ಮುಖಂಡರು ಪಿಎಫ್ಐ ಬ್ಯಾನ್​ಗೆ ಸಹಮತ ವ್ಯಕ್ತಪಡಿಸಿದ್ದರು. ಮೂಲಭೂತವಾದಿ ಸಂಘಟನೆಯಾದ ಪಿಎಫ್​ಐ ಹಲವು ಭಯೋತ್ಪಾದಕ ಚಟುವಟಿಕೆಗಳಿಗೆ ಒತ್ತಾಸೆ ನೀಡಿದ್ದನ್ನು ತನಿಖೆಯಲ್ಲೇ ಗುರುತಿಸಲಾಗಿದೆ. ನೇರವಾಗಿ ಪಿಎಫ್​ಐ ಬ್ಯಾನ್ ಅನ್ನು ಬೆಂಬಲಿಸದ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವ ಕುರಿತು ನಮೂದಿಸುವ ಮೂಲಕ ಅವೆರಡೂ ಒಂದೆ ಎಂಬಂತೆ ಬಿಂಬಿಸಿದೆ. ಇದು ಅಕ್ಷಮ್ಯ ಎಂದರು.

ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭ ಪಿಎಫ್​ಐ ಕಾರ್ಯಕರ್ತರ ಕೇಸನ್ನು ಹಿಂಪಡೆದಿದ್ದನ್ನು ಸ್ಮರಿಸಿದ ಬಿಸ್ವಾಸ್, ಕಾಂಗ್ರೆಸ್ ತನ್ನ ತುಷ್ಟೀಕರಣದ ನೀತಿಯನ್ನು ಇಲ್ಲೇ ಪ್ರದರ್ಶಿಸಿದೆ. ಹೀಗಿರುವಾಗ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ಟಾರ್ಗೆಟ್ ಮಾಡುವ ಮೂಲಕ ಮತ್ತೆ ಅದನ್ನೇ ಮುಂದುವರಿಸಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

ಜಾರಿ ಮಾಡಿದ್ದು ಮೋದಿ

1972ರಲ್ಲಿ ಬಡತನವನ್ನು ತೊಲಗಿಸುವ ಗರೀಬಿ ಹಠಾವೊ ಘೋಷಣೆಯನ್ನು ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಮಾಡಿದ್ದರು. ಆ ಸಂದರ್ಭವೇ ಹೇಳಿದ್ದ ಗರೀಬಿ ಹಠಾವೊ ಘೋಷಣೆ ಅಕ್ಷರಶಃ ಜಾರಿ ಆಗಲೇ ಇಲ್ಲ. ಅದನ್ನು ಸರಿಯಾಗಿ ತನ್ನ ಯೋಜನೆಗಳ ಮೂಲಕ ಜಾರಿ ಮಾಡಿದ್ದು, ನರೇಂದ್ರ ಮೋದಿ. ಇಂದಿರಾ ಹೇಳಿದ್ದನ್ನು ಮಾಡಿ ತೋರಿಸಿದ್ದು ಮೋದಿ ಎಂದು ಬಿಸ್ವಾಸ್ ಹೇಳಿದರು.

ಬೆಳ್ತಂಗಡಿಯಲ್ಲಿ ಪ್ರಚಾರ

ಶನಿವಾರ ಸಂಜೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಪರ ಪ್ರಚಾರ ನಡೆಸಿದ ಬಿಸ್ವಾಸ್, ಉಜಿರೆಯ ಕಾಲೇಜು ಬಳಿಯಿಂದ ಜನಾರ್ದನಸ್ವಾಮಿ ದೇವಸ್ಥಾನದ ಬಳಿ ತನಕ ನಡೆಸಿದ ಬಿಜೆಪಿ ಪಕ್ಷದ ರೋಡ್ ಶೋ ಕಾರ್ಯಕ್ರಮ ನಡೆಸಿದರು. ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥಸ್ವಾಮಿ ದರ್ಶನ ಮತ್ತು ಹೆಗ್ಗಡೆಯವರ ಭೇಟಿ ಮಾಡಿದರು.

ಈ ಸಂದರ್ಭ ಮಾತನಾಡಿದ ಬಿಸ್ವಾಸ್, ಮದ್ರಸಗಳಿಂದ ಶಿಕ್ಷಣ ಪಡೆದವರು ನಮ್ಮ ದೇಶಕ್ಕೆ ಎಂದಿಗೂ ಬೇಡ. ಅಲ್ಲಿ ವೈದ್ಯರು, ಎಂಜಿನಿಯರ್​ಗಳು ತಯಾರಾಗುವುದಿಲ್ಲ. ನಾನು ಅಸ್ಸಾಂ ಮುಖ್ಯಮಂತ್ರಿಯಾಗಿ ಬಂದ 2 ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಇದ್ದ ಮದ್ರಸಗಳನ್ನು ಬಂದ್ ಮಾಡಿಸಿದ್ದೇನೆ. ಅದೇ ರೀತಿ ಈಗ ಮಧ್ಯಪ್ರದೇಶದಲ್ಲೂ ಬಂದ್ ಮಾಡಿಸುವ ಕೆಲಸ ನಡೆಯುತ್ತಿದೆ ಎಂದು

ಕಾಂಗ್ರೆಸ್ಸಿಗರು ಮೀಸಲಾತಿ ನೀಡುವುದಾದರೆ ಹಿಂದೂಗಳಿಗೆ, ಜೈನರಿಗೆ, ಬೌದ್ಧರಿಗೂ , ಕ್ರೈಸ್ತರಿಗೂ ನೀಡಲಿ. ನೀವು ಮುಸಲ್ಮಾನರಿಗೆ ಮಾತ್ರ ಮೀಸಲಾತಿ ನೀಡಿ ತುಷ್ಟೀಕರಣ ರಾಜನೀತಿ ಯಾಕೆ ಮಾಡುತ್ತಿದ್ದೀರಿ. ನಾನು ಕಾಂಗ್ರೆಸ್ಸಿನ ಪ್ರಣಾಳಿಕೆ ನೋಡಿದೆ. ಅದರಲ್ಲಿ ಪ್ರತಿ ವರ್ಷ 10 ಕೋಟಿ ರೂ. ಮುಸಲ್ಮಾನರ ಅಭಿವೃದ್ಧಿ ನೀಡುವುದಾಗಿ ಹೇಳಿದ್ದೀರಿ. ಹಿಂದುಗಳು ಏನಾದರೂ ಪಾಪ ಮಾಡಿದ್ದಾರಾ ಅಥವಾ ಕರ್ನಾಟಕದಲ್ಲಿ ಹಿಂದುಗಳು ಇಲ್ಲವಾ ಎಂದು ಪ್ರಶ್ನಿಸಿದರು.

ಅಮಿತ್ ಶಾ ಅವರು ಬೆಳಗ್ಗೆ ದೆಹಲಿಯಲ್ಲಿ ಪಿಎಫ್​ಐ ಅನ್ನು ನಿಷೇಧ ಮಾಡಿದರು. ಅದೇ ದಿನ ಸಂಜೆ ನಾನು ಅಸ್ಸಾಂನಲ್ಲಿ 400 ಕೇಂದ್ರಗಳನ್ನು ಮಟ್ಟಹಾಕಿದ್ದೇನೆ. ಇವತ್ತು ಕರ್ನಾಟಕದಲ್ಲಿ, ಕೇರಳದಲ್ಲಿ ಎಸ್​ಡಿಪಿಐ ಮತ್ತು ಪಿಎಫ್​ಐಗಳ ಸ್ಲೀಪರ್ ಸೆಲ್​​ಗಳಿವೆ. ಹೀಗಾಗಿ ಕರ್ನಾಟಕವು ಅಪಾಯದಲ್ಲಿದೆ ಎಂದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point