Basavaraja Bommai: ಜನ ಸೇವೆ ಮಾಡೋರು ಬೇಕೋ; ಮನೆಯಲ್ಲಿ ಕೂತು ಆದೇಶ ಹೊರಡಿಸೋರು ಬೇಕೋ; ವರುಣಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅಬ್ಬರ
ಕನ್ನಡ ಸುದ್ದಿ  /  ಕರ್ನಾಟಕ  /  Basavaraja Bommai: ಜನ ಸೇವೆ ಮಾಡೋರು ಬೇಕೋ; ಮನೆಯಲ್ಲಿ ಕೂತು ಆದೇಶ ಹೊರಡಿಸೋರು ಬೇಕೋ; ವರುಣಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅಬ್ಬರ

Basavaraja Bommai: ಜನ ಸೇವೆ ಮಾಡೋರು ಬೇಕೋ; ಮನೆಯಲ್ಲಿ ಕೂತು ಆದೇಶ ಹೊರಡಿಸೋರು ಬೇಕೋ; ವರುಣಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅಬ್ಬರ

Karnataka Election: ವರುಣಾ ಕ್ಷೇತ್ರದಲ್ಲಿ (Varuna Constituency) ಸಾರ್ವಜನಿಕ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಈ ಕ್ಷೇತ್ರಕ್ಕೆ ಬದಲಾವಣೆ ಬೇಕು. ಈ ಕ್ಷೇತ್ರಕ್ಕೆ ತಾಲೂಕು ಕೇಂದ್ರ ಇರಲಿಲ್ಲ. ಹಲವು ವರ್ಷಗಳಿಂದ ಈ ಕುಂಠಿತ ಆಡಳಿತದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿ ಸೋಮಣ್ಣ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿ ಸೋಮಣ್ಣ

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದೆ. ಹೈವೋಲ್ಟೇಜ್​ ಕದನ ಎನಿಸಿರುವ ಮೈಸೂರಿನ ವರುಣಾ ಕ್ಷೇತ್ರದಲ್ಲಿ (Varuna Constituency) ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Former Chief Minister Siddaramaiah) ಅವರನ್ನು ಸೋಲಿಸಲು ಬಿಜೆಪಿ (BJP) ದಿಟ್ಟ ಹೆಜ್ಜೆ ಇಟ್ಟಿದೆ. ಸ್ಟಾರ್​ ಪ್ರಚಾರಕರನ್ನೇ ಅಖಾಡಕ್ಕಿಳಿಸುತ್ತಿರುವ ಬಿಜೆಪಿ, ತಮ್ಮ ಅಭ್ಯರ್ಥಿ ವಿ ಸೋಮಣ್ಣ ಅವರ ಪರ ಮತ ಶಿಕಾರಿ ನಡೆಸುತ್ತಿದ್ದಾರೆ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಭರ್ಜರಿ ರೋಡ್​ ಶೋ ನಡೆಸಿದ್ದಾರೆ.

ಶುಕ್ರವಾರ ವರುಣಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ (Varuna Constituency Candidate V Somanna) ಮತ್ತು ಟಿ.ನರಸೀಪುರ ಅಭ್ಯರ್ಥಿ ಡಾ. ರೇವಣ್ಣ (T. Narasipur Assembly constituency Candidate Dr Revanna) ಪರ ರೋಡ್‌ ಶೋ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ವರುಣಾದಲ್ಲಿ ರೈತರು, ಯುವಕರು, ಮಹಿಳೆಯರು ಸೇರಿ ಸೋಮಣ್ಣ ಅವರನ್ನು ಪ್ರತಿನಿಧಿಸಲು ನಿರ್ಧರಿಸಿರುವುದರಿಂದ ಈ ಕ್ಷೇತ್ರದಲ್ಲಿ ರಂಗು ರಂಗಿನ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಕಾಂಗ್ರೆಸ್ ಶಾಸಕರು. ಟಿ ನರಸೀಪುರ ವಿಧಾನಸಭಾ ಕ್ಷೇತ್ರವನ್ನು ಜನತಾದಳ-ಜಾತ್ಯತೀತ (ಜೆಡಿಎಸ್) ಪಕ್ಷದ ಎಂ ಅಶ್ವಿನ್ ಕುಮಾರ್ (M Ashwin Kumar) ಶಾಸಕರಾಗಿದ್ದಾರೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಈ ಕ್ಷೇತ್ರಕ್ಕೆ ಬದಲಾವಣೆ ಬೇಕು. ಈ ಕ್ಷೇತ್ರಕ್ಕೆ ತಾಲೂಕು ಕೇಂದ್ರ ಇರಲಿಲ್ಲ. ಹಲವು ವರ್ಷಗಳಿಂದ ಈ ಕುಂಠಿತ ಆಡಳಿತದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟು ವರ್ಷ ಯಾವ ನಾಯಕ ನಿಮ್ಮ ಸೇವೆ ಮಾಡಿದ್ದಾರೆ? ಯಾವ ನಾಯಕರಿಗೂ ಸಾಮರ್ಥ್ಯ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಸೋಮಣ್ಣ ಅವರನ್ನು ಇಲ್ಲಿ ಕಣಕ್ಕಿಳಿಸಿದೆ ಎಂದು ಕಾಂಗ್ರೆಸ್ (Congress)​ ಅನ್ನು ತರಾಟೆ ತೆಗೆದುಕೊಂಡಿದ್ದಾರೆ.

ಸೋಮಣ್ಣ ಅವರನ್ನು ‘ವಿಕ್ಟರಿ ಸೋಮಣ್ಣ’ ಎಂದು ಕರೆದ ಬೊಮ್ಮಾಯಿ, ಆಡಳಿತ ನಡೆಸಲು ಬಾರದವರಿಗೆ ಈ ಕ್ಷೇತ್ರದಲ್ಲಿ ಅಧಿಕಾರ ನೀಡಲಾಗಿದೆ. ಸ್ಥಬ್ದ ಆಡಳಿತ ನೀಡುತ್ತಿದ್ದಾರೆ. ಸೋಮಣ್ಣ ಅವರನ್ನು ಆಯ್ಕೆ ಮಾಡಿದರೆ ಉತ್ತಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹೆಚ್ಚಿನ ಅನುದಾನ ತಂದುಕೊಡುತ್ತೇವೆ ಎಂದು ಹೇಳಿದ್ದಾರೆ.

ಟಿ. ನರಸೀಪುರ ಬಿಜೆಪಿ ಅಭ್ಯರ್ಥಿ ಡಾ. ರೇವಣ್ಣ ಅವರು ವೃತ್ತಿಯಲ್ಲಿ ವೈದ್ಯರು. ಜನಸೇವೆ ಮಾಡುವ ವೈದ್ಯರು ಜನಕ್ಕೆ ಬೇಕೋ ಅಥವಾ ಮನೆಯಲ್ಲಿ ಕುಳಿತು ಆದೇಶ ಹೊರಡಿಸುವ ನಾಯಕರು ಬೇಕೋ? ಬಿಜೆಪಿ ಅಭ್ಯರ್ಥಿ ಯಾವಾಗ ಬೇಕಾದರೂ ನಿಮ್ಮ ಸೇವೆಗೆ ಸಿದ್ಧ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ತಲಾ 10 ಮತಗಳನ್ನು ಪಡೆದರೆ ರೇವಣ್ಣ ಅವರು 10,000 ಮತಗಳು ಅಂತರದಿಂದ ಆಯ್ಕೆಯಾಗುತ್ತಾರೆ ಎಂದು ಹೇಳಿದ್ದಾರೆ.

Whats_app_banner