Result Analysis: ದಕ್ಷಿಣ ಕನ್ನಡದಲ್ಲಿ ಬಾಡದ ಕಮಲ, ಬಲಶಾಲಿಯಾದ ಕೈ
ಕನ್ನಡ ಸುದ್ದಿ  /  ಕರ್ನಾಟಕ  /  Result Analysis: ದಕ್ಷಿಣ ಕನ್ನಡದಲ್ಲಿ ಬಾಡದ ಕಮಲ, ಬಲಶಾಲಿಯಾದ ಕೈ

Result Analysis: ದಕ್ಷಿಣ ಕನ್ನಡದಲ್ಲಿ ಬಾಡದ ಕಮಲ, ಬಲಶಾಲಿಯಾದ ಕೈ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2013ರಲ್ಲಿ ಕಾಂಗ್ರೆಸ್ 7 ಹಾಗೂ ಬಿಜೆಪಿ 1 ಸ್ಥಾನ ಗೆದ್ದಿದ್ದರೆ, 2018ರಲ್ಲಿ ರಿವರ್ಸ್ ಆಯಿತು. ಆದರೆ, 2023ರಲ್ಲಿ ಬಿಜೆಪಿ 6 ಹಾಗೂ ಕಾಂಗ್ರೆಸ್ 2 ಸ್ಥಾನ ಗೆದ್ದಿದೆ. ಒಂದು ಹಂತದಲ್ಲಿ ಬಿಜೆಪಿ ಕಾರ್ಯಕರ್ತರ ಬಂಡಾಯದ ಧ್ವನಿಯಾಗಿದ್ದ ಅರುಣ್ ಪುತ್ತಿಲ, ಗೆಲ್ಲುವ ಹೊಸ್ತಿಲಲ್ಲಿ ಸೋತರು. ಜಿಲ್ಲೆಯ ಫಲಿತಾಂಶದ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ದಕ್ಷಿಣ ಕನ್ನಡದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು
ದಕ್ಷಿಣ ಕನ್ನಡದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು

ಮಂಗಳೂರು: ಕೇಸರಿ ಭದ್ರಕೋಟೆ ಎಂದೇ ಹೇಳಲಾದ ದಕ್ಷಿಣ ಕನ್ನಡ ಜಿಲ್ಲೆಯ ನಗರ ಭಾಗದಲ್ಲಿ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿಯೂ ಭದ್ರವಾಗಿದೆ. ಮತಗಳಿಕೆಯಲ್ಲೂ ವೃದ್ಧಿ ಕಂಡುಕೊಂಡಿದೆ. ಪುತ್ತೂರಿನಲ್ಲಿ ಮೂರನೇ ಸ್ಥಾನಕ್ಕೆ ಬಿಜೆಪಿ ತಳ್ಳಲ್ಪಟ್ಟರೆ, ಸುಳ್ಯ, ಬೆಳ್ತಂಗಡಿಯಲ್ಲಿ ಹಾಗೂ ಬಂಟ್ವಾಳದಲ್ಲಿ ಗೆಲುವು ಸಾಧಿಸಿದೆ. ಇನ್ನು ಕಾಂಗ್ರೆಸ್ ಕೇವಲ ಮಂಗಳೂರು (ಉಳ್ಳಾಲ)ಕ್ಷೇತ್ರದಲ್ಲಿತ್ತು. ಇದೀಗ ಪುತ್ತೂರಿನಲ್ಲಿ ಮತ್ತೆ ಗೆದ್ದಿದೆ. ಆದರೆ, ಅದು ಪ್ರಯಾಸದ ಗೆಲುವು.

ಹೊಸ ಮುಖಗಳ ಸೋಲು-ಗೆಲುವು

ರಕ್ಷಿತ್ ಶಿವರಾಮ್, ಕೃಷ್ಣಪ್ಪ, ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಇನಾಯತ್ ಆಲಿ, ಮಿಥುನ್ ರೈ (ಎಲ್ಲರೂ ಕಾಂಗ್ರೆಸ್ ಪಕ್ಷದವರು) ಆಶಾ ತಿಮ್ಮಪ್ಪ ಗೌಡ, ಭಾಗೀರಥಿ ಮುರುಳ್ಯ. ಸತೀಶ್ ಕುಂಪಲ(ಬಿಜೆಪಿ) ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ಪೈಕಿ ಬಿಜೆಪಿಯ ಭಾಗೀರಥಿ ಮುರುಳ್ಯ, ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದಾರೆ.

ರಮಾನಾಥ ರೈಗೆ ಸೋಲು

ಆರು ಬಾರಿ ಶಾಸಕ ಹಾಗೂ ಮೂರು ಬಾರಿ ಸಚಿವರಾಗಿ, ಇದು ನನ್ನ ಕಡೆಯ ಚುನಾವಣೆ ಎಂದೇ ಅನುಕಂಪದ ಮತ ಗಿಟ್ಟಿಸಲು ಹೊರಟಿದ್ದ ರಮಾನಾಥ ರೈ ಅವರನ್ನು ಬಂಟ್ವಾಳದ ಜನ ಗೆಲ್ಲಿಸಲಿಲ್ಲ. ಒಂಬತ್ತನೇ ಬಾರಿ ರಮಾನಾಥ ರೈ ಚುನಾವಣೆಗೆ ಸ್ಪರ್ಧಿಸಿದ್ದು, ಗೆದ್ದಿದ್ದರೆ ಅವರ ಏಳನೇ ಗೆಲುವಾಗುತ್ತಿತ್ತು. ಅಲ್ಲದೆ ಉಭಯ ಜಿಲ್ಲೆಗಳಲ್ಲಿ ದಾಖಲೆ ಬರೆಯುತ್ತಿದ್ದರು. ಆದರೆ, ಅವರನ್ನು ರಾಜೇಶ್ ನಾಯ್ಕ್ ಮತ್ತೆ ಸೋಲಿಸಿದ್ದಾರೆ.

ಪುನರಾಯ್ಕೆಗೊಂಡವರು

ಇನ್ನು ಯುಟಿ ಖಾದರ್ ಸತತ ಐದನೇ ಬಾರಿ ವಿಜಯಿಯಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಬಾರಿ ಅವರು ಸಚಿವರಾಗುವುದು ಗ್ಯಾರಂಟಿ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಂಗಳೂರು ದಕ್ಷಿಣದ ವೇದವ್ಯಾಸ ಕಾಮತ್, ಮೂಡುಬಿದಿರೆಯ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರದ ಡಾ. ಭರತ್ ಶೆಟ್ಟಿ ಹಾಗೂ ಬೆಳ್ತಂಗಡಿಯ ಹರೀಶ್ ಪೂಂಜಾ ಎರಡನೇ ಬಾರಿ ವಿಧಾನಸಭೆ ಪ್ರವೇಶಿಸಲಿದ್ದಾರೆ. ಆದರೆ, ಇವರೆಲ್ಲರೂ ಪ್ರತಿಪಕ್ಷದ ಶಾಸಕರಾಗಿ ಕುಳಿತುಕೊಳ್ಳುವವರು.

ಸದ್ದು ಮಾಡಿದ ಪುತ್ತಿಲ

ರಾಜ್ಯ ಚುನಾವಣೆ ಮತ ಎಣಿಕೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೋಚಕ ಪೈಪೋಟಿ ನೀಡಿದವರು ಅರುಣ್ ಕುಮಾರ್ ಪುತ್ತಿಲ. ಮತ ಎಣಿಕೆಯ ಸಂದರ್ಭ ಹಲವು ಸುತ್ತುಗಳಲ್ಲಿ ಅರುಣ್ ಕುಮಾರ್ ಗೆಲುವಿನ ಹೊಸ್ತಿಲಲ್ಲಿದ್ದರು. ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ಕಾರ್ಯಕರ್ತರ ಬಂಡಾಯದ ಪ್ರತೀಕವಾಗಿ ಪುತ್ತಿಲ ಕಣಕ್ಕಿಳಿದಿದ್ದರು. ಅವರ ವಿರುದ್ಧ ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ, ಬಿಜೆಪಿಯ ಆಶಾ ತಿಮ್ಮಪ್ಪ ಗೌಡ, ಎಸ್‌ಡಿಪಿಐನ ಶಾಫಿ ಬೆಳ್ಳಾರೆ, ಜೆಡಿಎಸ್‌ನ ದಿವ್ಯಪ್ರಭಾ ಕಣಕ್ಕಿಳಿದಿದದ್ದರು. ಆದರೆ ಪುತ್ತಿಲ ಅವರಿಗೆ 62,458 ಮತಗಳು ಲಭಿಸಿದರೆ, ಅವರ ಕ್ಲಾಸ್ ಮೇಟ್ ಕೂಡ ಆಗಿರುವ ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ 66,607 ಮತ ಗಳಿಸಿ ವಿಜಯಿಯಾದರು. ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ಅವರಿಗೆ 36,733 ಮತ ಲಭಿಸಿದವು. ಕೇವಲ 4,149 ಮತಗಳ ಅಂತರದಿಂದ ಅರುಣ್ ಕುಮಾರ್ ಸೋತರು. ಸೋಲಿನ ಬೆನ್ನಲ್ಲೇ ಇದು ಇಲ್ಲಿಗೆ ಮುಗಿದಿಲ್ಲ ಎಂದು ಅವರ ಅಭಿಮಾನಿಗಳು ಹೇಳಿದ್ದು, ಲೋಕಸಭೆಗೆ ಸ್ಪರ್ಧಿಸಲು ಅವರನ್ನು ಸಿದ್ಧಗೊಳಿಸುತ್ತಿದ್ದಾರೆ.

ವಿಶೇಷವೆಂದರೆ, ಮೂರನೇ ಸ್ಥಾನ ಗಳಿಸಿದ ಬಿಜೆಪಿ ಪರ ಪ್ರಚಾರ ಮಾಡಲು ಘಟಾನುಘಟಿಗಳೇ ಬಂದಿದ್ದರು. ಅಮಿತ್ ಶಾ, ಜೆಪಿ ನಡ್ಡಾ, ಶ್ರುತಿ, ಪಾರ್ವತಿ ಪವಾರ್, ಅಣ್ಣಾಮಲೈ, ತೇಜಸ್ವಿ ಸೂರ್ಯ, ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಯೋಗಿ ಆದಿತ್ಯನಾಥ್ ಪ್ರಚಾರ ಮಾಡಿದರು. ಆದರೆ, ಅರುಣ್ ಪುತ್ತಿಲರಿಗೆ ಕಾರ್ಯಕರ್ತರೇ ಸ್ಟಾರ್ ಕ್ಯಾಂಪೇನರ್‌ಗಳಾಗಿದ್ದರು. ಈ ನಡುವೆ ಅವರು ಪ್ರತಿಸ್ಪರ್ಧಿಗಳಿಗೆ ನೆಕ್‌ ಟು ನೆಕ್‌ ಪೈಪೋಟಿ ಕೊಟ್ಟಿರುವುದು ವಿಶೇಷ.

ಗೆಲುವು-ಸೋಲು

ಮಂಗಳೂರು ಕ್ಷೇತ್ರದಲ್ಲಿ ಯುಟಿ ಖಾದರ್ 83,219 ಮತ ಗಳಿಸಿದರೆ, ಬಿಜೆಪಿಯ ಸತೀಶ್ ಕುಂಪಲ 60,429 ಗಳಿಸಿದ್ದಾರೆ. ಎಸ್‌ಡಿಪಿಐನ ರಿಯಾಝ್ ಫರಂಗಿಪೇಟೆ 15,054 ಮತ ಗಳಿಸಿದ್ದಾರೆ. ಖಾದರ್ 22790 ಮತಗಳ ಅಂತರದ ಬೃಹತ್ ಗೆಲುವು ಸಾಧಿಸಿದ್ದಾರೆ.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಶಾಸಕ ಡಾ.ವೈ ಭರತ್ ಶೆಟ್ಟಿ 1,03,531 ಮತಗಳನ್ನು ಗಳಿಸಿ ಪುನರಾಯ್ಕೆಗೊಂಡರೆ, ಕಾಂಗ್ರೆಸ್‌ನ ಇನಾಯತ್ ಆಲಿ 70,609 ಮತ ಗಳಿಸಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧೆಗಿಳಿದಿದ್ದ ಮೊಯ್ದೀನ್ ಬಾವಾ ಅವರಿಗೆ ಕೇವಲ 5256 ಮತ ಲಭಿಸಿದೆ. ಗಮನಾರ್ಹ ಅಂಶವೆಂದರೆ ಬಾವಾ ಪರವಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರೂ ಪ್ರಚಾರಕ್ಕೆ ಬಂದಿದ್ದರು. ಇಲ್ಲಿ ಭರತ್ ಶೆಟ್ಟಿ ಅವರಿಗೆ 32,922 ಮತಗಳ ಅಂತರದ ದಾಖಲೆಯ ಗೆಲುವಾಗಿದೆ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಡಿ ವೇದವ್ಯಾಸ ಕಾಮತ್ 23,962 ಮತಗಳ ಅಂತರದಿಂದ ಗೆಲುವು ಸಾಧಿಸಿ ಪುನರಾಯ್ಕೆಗೊಂಡಿದ್ದಾರೆ. ಮಾಜಿ ಶಾಸಕ ಜೆಆರ್ ಲೋಬೊ ಅವರಿಗೆ ಕಾಂಗ್ರೆಸ್ ಅಳೆದು ತೂಗಿ ಟಿಕೆಟ್ ಕೊಟ್ಟಿತ್ತು. ಅವರು 67,475 ಮತ ಗಳಿಕೆಯನ್ನಷ್ಟೇ ಮಾಡಿದ್ದಾರೆ.

ಮೂಡುಬಿದಿರೆ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಿದ ಬಿಜೆಪಿಯ ಉಮಾನಾಥ ಕೋಟ್ಯಾನ್ (86,925) ಕಾಂಗ್ರೆಸ್ ನ ಮಿಥುನ್ ರೈ (64,457) ಅವರನ್ನು ಸೋಲಿಸಿದ್ದಾರೆ. ಗೆಲುವಿನ ಅಂತರ 22 ಸಾವಿರ ದಾಟಿದೆ. ಇಲ್ಲಿ ಮಾಜಿ ಶಾಸಕ ಅಮರನಾಥ ಶೆಟ್ಟರ ಮಗಳು ಅಮರಶ್ರೀ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದು, ಕೇವಲ 1533 ಮತ ಗಳಿಕೆ ಮಾಡಿದ್ದಾರೆ. ಇವರಿಗಿಂತ ಜಾಸ್ತಿ ಎಸ್‌ಡಿಪಿಐನ ಆಲ್ಫೋನ್ಸೊ ಫ್ರಾಂಕೊ 3617 ಮತ ಗಳಿಸಿದ್ದಾರೆ.

ಸುಳ್ಯದಲ್ಲಿ ಕಾಂಗ್ರೆಸ್ ಹೊಸ ಮುಖ ಕೃಷ್ಣಪ್ಪ ಅವರಿಗೆ ಅವಕಾಶ ನೀಡಿತ್ತು. ಆದರೆ ಅವರು 63,037 ಮತ ಪಡೆದಿದ್ದರೆ, ಅಂಗಾರ ಅವರನ್ನು ಬದಲಾಯಿಸಿ ಭಾಗೀರತಿ ಮುರುಳ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಅವರು 93,911 ಮತ ಗಳಿಸಿ ವಿಜಯಿಯಾಗಿದ್ದಾರೆ.

ಬೆಳ್ತಂಗಡಿಯಲ್ಲಿ ಕಣಕ್ಕಿಳಿದ ರಕ್ಷಿತ್ ಶಿವರಾಮ್ 82,788 ಮತ ಗಳಿಸಿದರೆ, ಬಿಜೆಪಿಯ ಹಾಲಿ ಶಾಸಕ ಹರೀಶ್‌ ಪೂಂಜ 1,01,004 ಮತ ಗಳಿಸಿ ಮತ್ತೆ ಗೆದ್ದಿದ್ದಾರೆ.

ಬಂಟ್ವಾಳದಲ್ಲಿ ಮಾಜಿ ಸಚಿವ ರಮಾನಾಥ ರೈ ಕಾಂಗ್ರೆಸ್‌ನಿಂದ ಒಂಭತ್ತನೇ ಬಾರಿ ಕಣಕ್ಕಿಳಿದು 85,042 ಮತ ಗಳಿಸಿದರೆ, ರಾಜೇಶ್ ನಾಯ್ಕ್‌ಗೆ ಬಿಜೆಪಿ ಮತ್ತೆ ಅವಕಾಶ ನೀಡಿತ್ತು. ಅವರು 93,324 ಮತ ಗಳಿಸಿ ಪುನರಾಯ್ಕೆಗೊಂಡರು. ಎಸ್‌ಡಿಪಿಐನ ಇಲ್ಯಾಸ್ ತುಂಬೆ 5436 ಮತ ಗಳಿಸಿದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner