Siddaramaiah on Modi: ಸರಣಿ ಪ್ರಶ್ನೆಗಳ ಮೂಲಕ ಮೋದಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ; ಆನ್ಸರ್​ ಮಾಡಿ ಪ್ರಧಾನಿ ಅವರೇ ಅಂದ ವಿಪಕ್ಷ ನಾಯಕ
ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah On Modi: ಸರಣಿ ಪ್ರಶ್ನೆಗಳ ಮೂಲಕ ಮೋದಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ; ಆನ್ಸರ್​ ಮಾಡಿ ಪ್ರಧಾನಿ ಅವರೇ ಅಂದ ವಿಪಕ್ಷ ನಾಯಕ

Siddaramaiah on Modi: ಸರಣಿ ಪ್ರಶ್ನೆಗಳ ಮೂಲಕ ಮೋದಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ; ಆನ್ಸರ್​ ಮಾಡಿ ಪ್ರಧಾನಿ ಅವರೇ ಅಂದ ವಿಪಕ್ಷ ನಾಯಕ

Karnataka Election: ಕಾಂಗ್ರೆಸ್​ ಸರ್ಕಾರದ ಕಾಲದಲ್ಲಿ ಬೆಂಗಳೂರು ನಗರ ಉದ್ಯಮಶೀಲರ ಆಸಕ್ತಿಯ ನಂಬರ್​​​ವನ್​ ತಾಣವಾಗಿತ್ತು. ಬಿಜೆಪಿ ಸರ್ಕಾರದ ಕಾಲದಲ್ಲಿ ಬೆಂಗಳೂರು ನಗರ ಉದ್ಯಮ ಶೀಲರ ಆಸಕ್ತಿಯ ನಗರಗಳ ಪಟ್ಟಿಯಲ್ಲಿ 17ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆಲ್ಲಾ ಹೊಣೆ ಯಾರು ಎಂದು ಪ್ರಧಾನಿ ಮೋದಿಗೆ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಸಿದ್ಧರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿದ್ಧರಾಮಯ್ಯ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 8ರಂದು ಬಹಿರಂಗ ಸಭೆ ತೆರೆ ಬೀಳಲಿದೆ. ಪೂರ್ಣ ಪ್ರಮಾಣದ ಬಹುಮತದೊಂದಿಗೆ ಅಧಿಕಾರಕ್ಕೇರಲು, ಮೂರು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಅದರಲ್ಲೂ ಕಾಂಗ್ರೆಸ್​ ಪಕ್ಷದ ನಾಯಕರು, ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ತಿರುಗಿ ಬಿದ್ದಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Former Chief Minister Siddaramaiah) ಅವರು ಮೋದಿ ವಿರುದ್ಧ ಸರಣಿ ಟ್ವೀಟ್​ಗಳ ಮೂಲಕ ಪ್ರಶ್ನೆಗಳ ಸುರಿಮಳೆಗೈದು ಮುಗಿಬಿದ್ದಿದ್ದಾರೆ. #AnswerMadiModi ಎಂದು ಹ್ಯಾಶ್​ ಟ್ಯಾಗ್​ ಹಾಕಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಕೇವಲ ಗುಂಡಿಬಿದ್ದ ರಸ್ತೆಗಳಿಂದಾಗಿ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ಕೇವಲ ರಸ್ತೆ ಗುಂಡಿಮುಚ್ಚಲು 7,121 ಕೋಟಿ ಖರ್ಚು ಮಾಡಿದರೂ, ಇನ್ನೂ ನೂರಾರು ಹಳೆಯ ಗುಂಡಿಗಳು ಉಳಿದಿವೆ. ಹೊಸ ಗುಂಡಿಗಳು ತಯಾರುತ್ತಿವೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಸಿದ್ಧರಾಮಯ್ಯ, ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ಸರ್ಕಾರದ ಕಾಲದಲ್ಲಿ ಬೆಂಗಳೂರು ನಗರ ಉದ್ಯಮಶೀಲರ ಆಸಕ್ತಿಯ ನಂಬರ್​​​ವನ್​ ತಾಣವಾಗಿತ್ತು. ಬಿಜೆಪಿ ಸರ್ಕಾರದ ಕಾಲದಲ್ಲಿ ಬೆಂಗಳೂರು ನಗರ ಉದ್ಯಮ ಶೀಲರ ಆಸಕ್ತಿಯ ನಗರಗಳ ಪಟ್ಟಿಯಲ್ಲಿ 17ನೇ ಸ್ಥಾನಕ್ಕೆ ಕುಸಿದಿದೆ. ಅಪರಾಧ ಸಂಖ್ಯೆಗಳ ಹೆಚ್ಚಳ, ಕುಸಿದು ಬಿದ್ದಿರುವ ಮೂಲಸೌಕರ್ಯ ವ್ಯವಸ್ಥೆ ಮತ್ತು ಗುಂಡಿಬಿದ್ದ ರಸ್ತೆಗಳಿಂದಾಗಿ ಜಾಗತಿಕ ವಾಸಯೋಗ್ಯ ಸೂಚ್ಯಂಕದಲ್ಲಿ ಬೆಂಗಳೂರು ಕನಿಷ್ಠ ಶ್ರೇಣಿಗೆ ತಲುಪಿದೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಕೇಳಿದ್ದಾರೆ.

ಎನ್​​ಸಿಆರ್​ಬಿ ವರದಿ ಪ್ರಕಾರ ಮೆಟ್ರೋಪಾಲಿಟನ್​​ ನಗರಗಳಲ್ಲಿ ನಡೆಯುವ ಅಪರಾಧಗಳ ಪೈಕಿ 72% ಕಳ್ಳತನಗಳು ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಕಾರಣ ಬೆಂಗಳೂರು ನಗರ ಈಗ ಅಪರಾಧಗಳ ತಾಣವಾಗಿದೆ. ಶೇಕಡಾ 48ರಷ್ಟು ವಾಹನದಟ್ಟಣೆಯ ಪ್ರಮಾಣದಿಂದಾಗಿ ಬೆಂಗಳೂರು ದೇಶದಲ್ಲಿ 2ನೇ ಅತ್ಯಂತ ಹೆಚ್ಚು ವಾಹನ ದಟ್ಟಣೆಯ ನಗರ ಎಂಬ ಕುಖ್ಯಾತಿಗೆ ಒಳಪಟ್ಟಿದೆ. ಇದರಿಂದಾಗಿ ನಗರವಾಸಿಗಳು ಮನೆಗಿಂತ ಹೆಚ್ಚಿನ ಸಮಯ ರಸ್ತೆಗಳು ಕಳೆಯುವಂತಾಗಿದೆ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ರೂಪಿಸಲಾಗಿರುವ ಮೇಕೆದಾಟು ಯೋಜನಗೆ ಅನುಮತಿ ನೀಡದೆ ಇರುವ ಕಾರಣದಿಂದಾಗಿ ನಗರದಲ್ಲಿ ಕುಡಿಯುವ ಹೆಚ್ಚಾಗುತ್ತಿದೆ. ನಗರದ ಜನ ಕುಡಿಯುವ ನೀರಿಗಾಗಿ ಖಾಸಗಿ ಬೋರ್​​ವೆಲ್​ ಮತ್ತು ಟ್ಯಾಂಕರ್​ ನೀರನ್ನು ಬಳಸುತ್ತಿದ್ದಾರೆ. ಕಾಂಗ್ರೆಸ್​ ಸರ್ಕಾರದ ಕಾಲದಲ್ಲಿ ಬೆಂಗಳೂರು ಉದ್ಯಾನ ನಗರ, ಸಿಲಿಕಾನ್ ಸಿಟಿ, ಐಟಿ-ಬಿಟಿ ರಾಜಧಾನಿ, ಸ್ಟಾರ್ಟ್​ಅಪ್​ ರಾಜಧಾನಿ ಎಂದೆಲ್ಲಾ ಖ್ಯಾತಿ ಗಳಿಸಿತ್ತು. ಬಿಜೆಪಿ ಸರ್ಕಾರದ ಕಾಲದಲ್ಲಿ ಗುಂಡಿಬಿದ್ದ ರಸ್ತೆಗಳು, ನೆರೆ ನೀರಿನಲ್ಲಿ ಮುಳುಗುವ ಮನೆಗಳು, ಅಪರಾಧಿಗಳ ಜಗತ್ತಿನ ರಾಜಧಾನಿ ಎಂಬ ಕುಖ್ಯಾತಿ ಗಳಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನ ಮಂತ್ರಿ ಅವರು ಕರ್ನಾಟಕದಲ್ಲಿಯೇ ಠಿಕಾಣಿ ಹೂಡಿ ಬಾಯ್ತುಂಬಾ ಮಾತನಾಡುತ್ತಿದ್ದಾರೆ. ಆದರೆ ಇದೇ ಕರ್ನಾಟಕದ ಗುತ್ತಿದಾರರ ಸಂಘದ ಅಧ್ಯಕ್ಷರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು, ಪ್ರಧಾನಿಗಳಿಗೇ ಪತ್ರ ಬರೆಯುವಷ್ಟು ಇಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ. ರಾಜ್ಯದಲ್ಲಿ 25 ಲಕ್ಷ ನಿರುದ್ಯೋಗಿಗಳಿದ್ದಾರೆ. 2.52 ಲಕ್ಷ ಸರ್ಕಾರಿ ಹುದ್ದೆಗಳು ಭರ್ತಿಯಾಗದೆ, ಖಾಲಿ ಬಿದ್ದಿವೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 53700 ಹುದ್ದೆಗಳ ಭರ್ತಿಯಾಗಿಲ್ಲ. ಸಣ್ಣ ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟದಿಂದ 83190 ಕುಟುಂಬಗಳ ಬದುಕು ಬೀದಿಗೆ ಬಿದ್ದಿತ್ತು. ಇವರ ಕಷ್ಟ ಕೇಳಲು ನೀವು ಯಾಕೆ ಬಂದಿರಲಿಲ್ಲ?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ 4600 ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನವನ್ನು ರದ್ದು ಮಾಡಲಾಗಿದೆ. ಒಂದರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಎಸ್​ಎಸ್​ಎಲ್​ಸಿ ಪೂರ್ವ ವಿದ್ಯಾರ್ಥಿ ವೇತನ ರದ್ದು ಮಾಡಲಾಗಿದೆ. ಸೈಕಲ್​ ನೀಡುವ ಯೋಜನಗೆ ಅನುದಾನ ಸ್ಥಗಿತಗೊಂಡಿದೆ. ನಾಡಿನ ಮಕ್ಕಳಿಗಾದ ಅನ್ಯಾಯದ ವಿರುದ್ಧ ನೀವು ಧ್ವನಿಯೆತ್ತಲಿಲ್ಲ ಯಾಕೆ? ಎಂದು ನರೇಂದ್ರ ಮೋದಿಗೆ ಪ್ರಶ್ನಿಸಿದ್ದಾರೆ.

ಪಿಎಸ್​ಐ ನೇಮಕಾತಿ ಹಗರಣದಲ್ಲಿ 1.29 ಲಕ್ಷ ಯುವಜನರ ಭವಿಷ್ಯದ ಬಲಿ, ಎಇ ಮತ್ತು ಜೆಇ ಪರೀಕ್ಷೆಗಳಲ್ಲಿ ತಲಾ 50-80 ಲಕ್ಷ ರೂಪಾಯಿ ಸುಲಿಗೆ, ನಿರುದ್ಯೋಗದಿಂದ ಬೇಸತ್ತು 1129 ವ್ಯಕ್ತಿಗಳ ಆತ್ಮಹತ್ಯ ಮಾಡಿಕೊಂಡಿದ್ದಾರೆ. ಇವರಿಗೆ ನ್ಯಾಯ ಕೊಡಿಸಲು ನೀವು ಯಾಕೆ ಬಂದಿರಲಿಲ್ಲ? ಎಂದು ಮೋದಿಗೆ ಕೇಳಿದ್ದಾರೆ. ಕಳೆದ 4 ಬಜೆಟ್​​​ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಶೇಕಡಾ 1.97ಕ್ಕಿಂತ ಮೇಲೆ ಏರಿಲ್ಲ. 2022ರ ಸಿಎಜಿ ವರದಿ ಪ್ರಕಾರ, 2022ರಲ್ಲಿ 1.62 ಲಕ್ಷ ವಿದ್ಯಾರ್ಥಿಗಳು ಶಾಲೆಗಳನ್ನು ತ್ಯಜಿಸಿದ್ದಾರೆ. 2020-21 ಮತ್ತು 2021-22 ಅವಧಿಯಲ್ಲಿ 1,965 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಶಿಕ್ಷಣ ವಂಚಿತ ಮಕ್ಕಳ ಭವಿಷ್ಯ ಹಾಳಾಗುವಾಗ ನ್ಯಾಯ ಕೊಡಿಸಲು ನೀವು ಯಾಕೆ ಬಂದಿರಲಿಲ್ಲ? ಎಂದು ಮೋದಿಗೆ ಪ್ರಶ್ನಿಸಿದ್ದಾರೆ.

Whats_app_banner