ಕನ್ನಡ ಸುದ್ದಿ  /  Karnataka  /  Karnataka Election News In Kannada Bjp Leaders Expressed Different Opinion On Muslim Votes In State Assembly Poll Nkn

Muslim Votes: ಬಿಜೆಪಿಗೆ ಒಂದೇ ಒಂದು ಮುಸ್ಲಿಂ ಮತ ಬೇಡ ಎಂದ ಈಶ್ವರಪ್ಪ, ದೇಶಭಕ್ತರದ್ದು ಬೇಕು ಎಂದ ಸಿ.ಟಿ. ರವಿ

ರಾಜ್ಯ ಬಿಜೆಪಿ ನಾಯಕರು ಮುಸ್ಲಿಂ ಮತಗಳ ಅವಶ್ಯಕತೆ ಬಗ್ಗೆ ಮಾತನಾಡಿದ್ದು, ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಅವರು ಪಕ್ಷಕ್ಕೆ ಮುಸ್ಲಿಂ ಮತಗಳ ಅವಶ್ಯಕತೆ ಇಲ್ಲ ಎಂದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ದೇಶಭಕ್ತ ಮುಸಲ್ಮಾನರ ಮತಗಳು ಬಿಜೆಪಿಗೆ ಲಭಿಸಲಿವೆ ಎಂದು ಹೇಳಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಅಖಾಡದಲ್ಲಿ ಇದೀಗ ಮುಸ್ಲಿಂ ಮತಗಳ ಬಗೆಗಿನ ಚರ್ಚೆ ಆರಂಭವಾಗಿದೆ. ಹಿಂದುತ್ವದ ಅಜೆಂಡಾ ಹೊಂದಿರುವ ಆಡಳಿತಾರೂಢ ಬಿಜೆಪಿಗೆ, ಮುಸ್ಲಿಂ ಮತಗಳ ಅವಶ್ಯಕತೆ ಇದೆಯೇ? ಮುಸ್ಲಿಂ ಸಮುದಾಯ ಬಿಜೆಪಿ ಪರವೂ ಒಲವು ತೊರಲಿದೆಯೇ? ಎಂಬೆಲ್ಲಾ ಪ್ರಶ್ನೆಗಳು ಇದೀಗ ಚಾಲ್ತಿಗೆ ಬಂದಿವೆ.

ಇದಕ್ಕೆ ಪೂರಕವಾಗಿ ರಾಜ್ಯ ಬಿಜೆಪಿ ನಾಯಕರು ಮುಸ್ಲಿಂ ಮತಗಳ ಅವಶ್ಯಕತೆ ಬಗ್ಗೆ ಮಾತನಾಡಿದ್ದು, ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಅವರು ಪಕ್ಷಕ್ಕೆ ಮುಸ್ಲಿಂ ಮತಗಳ ಅವಶ್ಯಕತೆ ಇಲ್ಲ ಎಂದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ದೇಶಭಕ್ತ ಮುಸಲ್ಮಾನರ ಮತಗಳು ಬಿಜೆಪಿಗೆ ಲಭಿಸಲಿವೆ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಿನ್ನ(ಏ.25) ನಡೆದ ವೀರಶೈವ-ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಕೆಎಸ್‌ ಈಶ್ವರಪ್ಪ, ಪಕ್ಷಕ್ಕೆ ಒಂದೇ ಒಂದು ಮುಸ್ಲಿಂ ಮತವೂ ಬೇಡ ಎಂದು ಹೇಳಿದ್ದಾರೆ. ಮತಾಂತರ ಒಂದು ಬಹುದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಹಿಂದೂ ಧರ್ಮವನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ ಎಂದು ಈಶ್ವರಪ್ಪ ಗುಡುಗಿದರು.

ಮುಸ್ಲಿಮರು ಬಿಜೆಪಿಯನ್ನು ವಿರೋಧಿಸುತ್ತಾರೆ ಎಂದಾದರೆ, ಅವರ ಮತಗಳು ನಮಗೆ ಬೇಕಿಲ್ಲ. ಆದರೆ ಬಿಜೆಪಿ ಎಂದಿಗೂ ಧರ್ಮದ ಆಧಾರದ ಮೇಲೆ ಜನರ ನಡುವೆ ವ್ಯತ್ಯಾಸ ಮಾಡುವುದಿಲ್ಲ ಎಂದು ಕೆಎಸ್‌ ಈಶ್ವರಪ್ಪ ಹೇಳಿದರು.

ಆದರೆ ಮುಸ್ಲಿಂ ಮತಗಳ ವಿಚಾರವಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಡಿ. ರವಿ, ದೇಶಭಕ್ತ ಮುಸ್ಲಿಮರ ಮತಗಳು ಬಿಜೆಪಿಗೆ ಲಭಿಸಲಿವೆ ಎಂದು ಹೇಳಿದ್ದಾರೆ. ದೇಶಭಕ್ತ ಮುಸಲ್ಮಾನರು ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ಪಾಕಿಸ್ತಾನವನ್ನು ಬೆಂಬಲಿಸುವ ಮತ್ತು ವಿಭಜಕ ಸಿದ್ಧಾಂತ ಹೊಂದಿರುವ ಕೆಲವು ಮುಸ್ಲಿಮರು, ಕಾಂಗ್ರೆಸ್ ಮತ್ತು ಜನತಾದಳಕ್ಕೆ ಮತ ಹಾಕುತ್ತಾರೆ ಎಂದು ಸಿ.ಟಿ. ರವಿ ಹೇಳಿದ್ದಾರೆ.

ಪಾಕಿಸ್ತಾನದ ಮನಸ್ಥಿತಿ ಇರುವವರ ಮತಗಳು ನಮಗೆ ಖಂಡಿತ ಬೇಡ. ಆದರೆ ಅಬ್ದುಲ್ ಕಲಾಂ, ಶಿಶುನಾಳ ಷರೀಫರಂತಹ ದೇಶಭಕ್ತ ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ. ‘ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್’(ಎಲ್ಲರ ಬೆಂಬಲ, ಎಲ್ಲರ ಅಭಿವೃದ್ಧಿ) ಎಂಬ ಮಂತ್ರವನ್ನು ಜಪಿಸುವ ಎಲ್ಲಾ ಧರ್ಮದ ಮತಗಳು ಬಿಜೆಪಿಗೆ ದೊರೆಯಲಿದೆ ಎಂದು ಸಿ.ಟಿ. ರವಿ ನುಡಿದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಸಮಸ್ತ ದೇಶದ ಜನರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಬಿಜೆಪಿ ಎಂದಿಗೂ ಜಾತಿ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ಸಿ.ಟಿ. ರವಿ ಇದೇ ವೇಳೆ ಸ್ಪಷ್ಟಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಿಂದುತ್ವದ ಸಿದ್ಧಾಂತದ ಮೇಲೆ ಮತ ಕೇಳುತ್ತದೆ ಎಂಬುದು ಸಾಮಾನ್ಯ ನಂಬಿಕೆಯಾಗಿದ್ದು, ಇದಕ್ಕೆ ಪುಷ್ಠಿ ಎಂಬಂತೆ ಪಕ್ಷದ ಕೆಲವು ನಾಯಕರು ಹಿಂದುತ್ವದ ವಿಷಯಗಳನ್ನು ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸುತ್ತಾರೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮುಂತಾದ ಉನ್ನತ ಮಟ್ಟದ ನಾಯಕರು, ಎಲ್ಲ ಜನಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದಾಗಿ ವಿಶ್ವಾಸ ನೀಡಿದ್ದಾರೆ.

ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು, ಹಲಾಲ್‌, ಹಿಜಾಬ್‌ ವಿವಾದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಸಂಗತಿಗಳಲ್ಲ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯೇ ನಮ್ಮ ಚುನಾವಣಾ ಪ್ರಚಾರದ ಮುಖ್ಯ ಅಂಶವಾಗಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

IPL_Entry_Point