BS Yediyurappa: ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಆಗುತ್ತಿಲ್ಲ; ಜನರ ತೀರ್ಪು ಸ್ವೀಕರಿಸಿದ ಬಿಎಸ್ ಯಡಿಯೂರಪ್ಪ
ಕನ್ನಡ ಸುದ್ದಿ  /  ಕರ್ನಾಟಕ  /  Bs Yediyurappa: ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಆಗುತ್ತಿಲ್ಲ; ಜನರ ತೀರ್ಪು ಸ್ವೀಕರಿಸಿದ ಬಿಎಸ್ ಯಡಿಯೂರಪ್ಪ

BS Yediyurappa: ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಆಗುತ್ತಿಲ್ಲ; ಜನರ ತೀರ್ಪು ಸ್ವೀಕರಿಸಿದ ಬಿಎಸ್ ಯಡಿಯೂರಪ್ಪ

ಕಾಂಗ್ರೆಸ್‌ನವರು ಮನೆಮನೆಗೆ ಹೋಗಿ ಗ್ಯಾರಂಟಿ ಕಾರ್ಡ್‌ ಕೊಟ್ಟಿದ್ದೀರಿ. ನೀವು ಕೊಟ್ಟಿರುವ ಭರವಸೆ ಈಡೇರಿಸಬೇಕು ಎಂದು ಬಿಎಸ್‌ವೈ ಒತ್ತಾಯಿಸಿದ್ದಾರೆ.

ಬಿಎಸ್‌ ಯಡಿಯೂರಪ್ಪ
ಬಿಎಸ್‌ ಯಡಿಯೂರಪ್ಪ

ನಮಗೆ ಸೋಲು ಹೊಸದಲ್ಲ. ರಾಜ್ಯದ ಜನರು ಕೊಟ್ಟಿರುವ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮಗೆ ಸೋಲು-ಗೆಲುವು ಹೊಸದಲ್ಲ. ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಅಗುತ್ತಿಲ್ಲ. ಪಕ್ಷದ ಕಾರ್ಯಕರ್ತರು ಹೆದರಬೇಕಿಲ್ಲ. ಮೋದಿ ಅವರು ಜನಪ್ರಿಯ ಆಡಳಿತ ಕೊಟ್ಟಿದ್ದರೂ ನಮಗೆ ಗೆಲುವು ಸಾಧಿಸಲು ಆಗಿಲ್ಲ. ನಾವು ಫಲಿತಾಂಶ ಒಪ್ಪಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನವರು ಮನೆಮನೆಗೆ ಹೋಗಿ ಗ್ಯಾರಂಟಿ ಕಾರ್ಡ್‌ ಕೊಟ್ಟಿದ್ದೀರಿ. ನೀವು ಕೊಟ್ಟಿರುವ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸುತ್ತೇನೆ. ಲೋಕಸಭಾ ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಹಿಂದೆ ಗೆದ್ದಿದ್ದಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಈ ಸಲ ಗೆಲ್ಲುತ್ತೇವೆ. ನಮ್ಮ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಮಾತು ಮುಗಿಸಿದ್ದಾರೆ.

ಸೋಲಿನ ಹೊಣೆ ಹೊತ್ತ ನಳಿನ್‌ ಕುಮಾರ್‌ ಕಟೀಲ್‌

ಚುನಾವಣಾ ಫಲಿತಾಂಶ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಇದು ಅಚ್ಚರಿಯ ಫಲಿತಾಂಶ. ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಸೋಲಿನ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಹೊರುತ್ತೇನೆ ಎಂದಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಕಂಡಿರುವ ಸೋಲು ಅಚ್ಚರಿ ತಂದಿದ್ದು ಫಲಿತಾಂಶವನ್ನ ಪರಾಮರ್ಶಿಸುತ್ತೇವೆ. ರಾಜ್ಯದ ಜನ ಕೊಟ್ಟಿರುವ ಈ ತೀರ್ಪನ್ನು ಗೌರವಿಸಿ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸುವುತ್ತೇವೆ. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರೆಲ್ಲರೂ ಸಂಘಟಿತರಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ. ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ನಳೀನ್ ಕುಮಾರ್ ಕಟೀನ್ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಅಂತಿಮ ಹಂತದಲ್ಲಿದ್ದು, ಕಾಂಗ್ರೆಸ್‌ ಪಕ್ಷ ಭಾರಿ ಮುನ್ನಡೆ ಸಾಧಿಸಿದೆ. ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಭಾರಿ ಹಿನ್ನಡೆ ಕಂಡಿದ್ದು, ಇದು ಬಿಜೆಪಿ ನಾಯಕರ ಬೇಸರಕ್ಕೆ ಕಾರಣವಾಗಿದೆ.

Whats_app_banner