Ganesh Karnik: ಪ್ರತಾಪ್‌ ಸಿಂಹ ಯಾರೆಂದು ಗೊತ್ತಿಲ್ಲದ ಸಿದ್ದರಾಮಯ್ಯಗೆ ಇಮ್ರಾನ್‌ ಪ್ರತಾಪ್‌ ಘಡಿ ಹೇಗೆ ಗೊತ್ತು?; ಗಣೇಶ್‌ ಕಾರ್ಣಿಕ್‌ ಕಿಡಿ
ಕನ್ನಡ ಸುದ್ದಿ  /  ಕರ್ನಾಟಕ  /  Ganesh Karnik: ಪ್ರತಾಪ್‌ ಸಿಂಹ ಯಾರೆಂದು ಗೊತ್ತಿಲ್ಲದ ಸಿದ್ದರಾಮಯ್ಯಗೆ ಇಮ್ರಾನ್‌ ಪ್ರತಾಪ್‌ ಘಡಿ ಹೇಗೆ ಗೊತ್ತು?; ಗಣೇಶ್‌ ಕಾರ್ಣಿಕ್‌ ಕಿಡಿ

Ganesh Karnik: ಪ್ರತಾಪ್‌ ಸಿಂಹ ಯಾರೆಂದು ಗೊತ್ತಿಲ್ಲದ ಸಿದ್ದರಾಮಯ್ಯಗೆ ಇಮ್ರಾನ್‌ ಪ್ರತಾಪ್‌ ಘಡಿ ಹೇಗೆ ಗೊತ್ತು?; ಗಣೇಶ್‌ ಕಾರ್ಣಿಕ್‌ ಕಿಡಿ

ಯಾರೀ ಪ್ರತಾಪ್ ಸಿಂಹ ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ವಕ್ತಾರ ಗಣೇಶ್‌ ಕಾರ್ಣಿಕ್‌, ಕಾಂಗ್ರೆಸ್‌ ನಾಯಕರಿಗೆ ಇಮ್ರಾನ್‌ ಪ್ರತಾಪ್‌ ಘಢಿ ಅವರಂತಹ ನಾಯಕರ ಪರಿಚಯ ಮಾತ್ರ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಪ್ರತಾಪ್‌ ಘಢಿ ಓರ್ವ ದೇಶದ್ರೋಹಿ ಮನಸ್ಥಿತಿಯ ನಾಯಕ ಎಂದು ಕಾರ್ಣಿಕ್‌ ಆರೋಪಿಸಿದ್ದಾರೆ.

ಗಣೇಶ್‌ ಕಾರ್ಣಿಕ್
ಗಣೇಶ್‌ ಕಾರ್ಣಿಕ್ (HT)

ಮಂಗಳೂರು: ಯಾರೀ ಪ್ರತಾಪ್ ಸಿಂಹ ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ವಕ್ತಾರ ಗಣೇಶ್‌ ಕಾರ್ಣಿಕ್‌, ಕಾಂಗ್ರೆಸ್‌ ನಾಯಕರಿಗೆ ಇಮ್ರಾನ್‌ ಪ್ರತಾಪ್‌ ಘಢಿ ಅವರಂತಹ ನಾಯಕರ ಪರಿಚಯ ಮಾತ್ರ ಇರುವುದೇ ಎಂದು ಪ್ರಶ್ನಿಸಿದ್ದಾರೆ.

ಮಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಣೇಶ್‌ ಕಾರ್ಣಿಕ್‌, ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಪ್ರಚಾರಕ್ಕೆ ದೇಶದ್ರೋಹಿ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚಿಗೆ ಹತ್ಯೆಗೀಡಾದ ಮಾಫಿಯಾ ಡಾನ್ ಅತೀಕ್ ಅಹ್ಮದ್‌ನನ್ನು ತನ್ನ ಗುರು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್ ಘಡಿ, ಈ ಬಾರಿಯ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದು ಕಾಂಗ್ರೆಸ್‌ನ ದೇಶವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಗಣೇಶ್‌ ಕಾರ್ಣಿಕ್‌ ಕಿಡಿಕಾರಿದರು.

ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಪರ ಪ್ರಚಾರ ಮಾಡಿದರೆ, ಸಿದ್ದರಾಮಯ್ಯ ಅವರಿಗೆ ಕೋಪ ಬರುತ್ತದೆ. ಆದರೆ ದೇಶವಿರೋಧಿ ಮನಸ್ಥಿತಿಯ ಇಮ್ರಾನ್‌ ಪ್ರತಾಪ್‌ ಘಡಿ ಅವರನ್ನು ಸ್ಟಾರ್‌ ಪ್ರಚಾರಕರನ್ನಾಗಿ ಮಾಡಿದರೆ, ಅವರು ಸುಮ್ಮನಿರುತ್ತಾರೆ ಎಂದು ಗಣೇಶ್‌ ಕಾರ್ಣಿಕ್‌ ಹರಿಹಾಯ್ದರು.

ಇಮ್ರಾನ್ ಪ್ರತಾಪ್ ಘಡಿ ಯಾರು?

ಕಾಂಗ್ರೆಸ್‌ನ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿರುವ ಇಮ್ರಾನ್ ಪ್ರತಾಪ್ ಘಡಿ, ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮೂಲತಃ ಉತ್ತರ ಪ್ರದೇಶದವಾಗಿರುವ ಇವರು, ತಮ್ಮ ಶಾಯಿರಿಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸಿಎಎ ಪ್ರತಿಭಟನೆ ವೇಳೆ, ಇಲ್ಲಿ ದೆಹಲಿಯ ಶಾಹೀನ್‌ಭಾಗ್‌ನಂತಹ ಪ್ರತಿಭಟನೆ ಏಕೆ ಕಂಡುಬರುತ್ತಿಲ್ಲ ಎಂದು ಪ್ರಶ್ನಿಸಿ, ಇಮ್ರಾನ್‌ ಪ್ರತಾಪ್‌ ಘಡಿ ವಿವಾದ ಸೃಷ್ಟಿಸಿದ್ದರು.

ಟಿಪ್ಪು ಜಯಂತಿಯ ಆಚರಣೆಗೆ ಕರ್ನಾಟಕದಲ್ಲಿ ಪ್ರತಿರೋಧ ಇದ್ದ ಸಂದರ್ಭದಲ್ಲಿ, ಇಮ್ರಾನ್‌ ಪ್ರತಾಪ್‌ ಘಡಿ ಅವರು ಅಲ್ಪಸಂಖ್ಯಾತರನ್ನು ಉದ್ದೇಶಿಸಿ ಮಾತನಾಡಿದ್ದನ್ನು ನೆನಪಿಸಿದ ಗಣೇಶ್ ಕಾರ್ಣಿಕ್, ಆತನೋರ್ವ ಮತೀಯ ಹಿಂಸಾವಾದಿ ಎಂದು ಗಂಭೀರ ಆರೋಪ ಮಾಡಿದರು.

ಇಮ್ರಾನ್ ಪ್ರತಾಪ್ ಘಡಿ ಕರ್ನಾಟಕದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವ ಕಾರಣಗಳಿಗಾಗಿ ಸ್ಟಾರ್ ಪ್ರಚಾರಕನಾಗಬಲ್ಲ ಎನ್ನುವುದಕ್ಕೆ, ಜಾತ್ಯತೀತತೆಯನ್ನು ಹಾಡಿ ಹೊಗಳುವ ಕಾಂಗ್ರೆಸ್ ಪಕ್ಷ ಉತ್ತರ ನೀಡಬೇಕು ಎಂದು ಕ್ಯಾಪ್ಟನ್ ಕಾರ್ಣಿಕ್ ಇದೇ ವೇಳೆ ಆಗ್ರಹಿಸಿದರು.

ನಮ್ಮ ನಾಡಿನ ಸಂಸದ ವರುಣಾ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಹೋಗುವುದನ್ನು ಸಹಿಸಿಕೊಳ್ಳದ ನೀವು, ಇಮ್ರಾನ್ ಪ್ರತಾಪ್ ಘಡಿಯನ್ನು ಅತ್ಯಂತ ಆತ್ಮೀಯತೆಯಿಂದ ಸ್ವಾಗತಿಸುತ್ತಿರುವುದೇಕೆ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಗಣೇಶ್‌ ಕಾರ್ಣಿಕ್‌ ತೀವ್ರ ಟೀಕಾಪ್ರಹಾರ ನಡೆಸಿದರು.

ಈ ಹಿಂದೆ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯ ಸಂದರ್ಭದಲ್ಲಿ ಅಲ್ಲಿನ ದಲಿತ ಶಾಸಕನ ಮನೆಯ ಮೇಲೆ ದಾಳಿ ನಡೆಸಿ ಪೊಲೀಸ್ ವಾಹನಗಳನ್ನು ನಾಶಗೊಳಿಸಿದ ದುಷ್ಕರ್ಮಿಗಳ ಕುರಿತು ಸಾಫ್ಟ್ ಕಾರ್ನರ್ ಹೊಂದಿರುವುದು ಮತ್ತು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್‌ನನ್ನು ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಯವರು ಐಸಿಸ್ ಸಂಪರ್ಕ ಹೊಂದಿರುವ ಶಂಕಿತ ಭಯೋತ್ಪಾದಕ ಎಂದು ಹೇಳಿದಾಗಲೂ ಅಮಾಯಕನೆಂದು ಕಾಂಗ್ರೆಸ್‌ ಅಧ್ಯಕ್ಷರು ಬಣ್ಣಿಸಿರುವಾಗ, ಇಮ್ರಾನ್ ಪ್ರತಾಪ್ ಘಡಿ ಅಂಥವರನ್ನು ಕಾಂಗ್ರೆಸ್ ಸ್ಟಾರ್‌ ಪ್ರಚಾರಕರಾಗಿ ನೇಮಿಸಿರುವುದರಲ್ಲಿ ಅಚ್ಚರಿಯೇನಿಲ್ಲ ಎಂದು ಗಣೇಶ್‌ ಕಾರ್ಣಿಕ್‌ ಗುಡುಗಿದರು.

ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ಮುಖ್ಯಸ್ಥರಾದ ಅಜಿತ್ ಕುಮಾರ್ ಉಳ್ಳಾಲ, ರಾಜ್ಯ ಮಾಧ್ಯಮ ಸಂಚಾಲಕ ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು.

Whats_app_banner