Shettar Meets Rahul: ನಾನೇಕೆ ಕಾಂಗ್ರೆಸ್‌ಗೆ ಬಂದೆ..? ಜಗದೀಶ್‌ ಶೆಟ್ಟರ್‌ ಎಲ್ಲವನ್ನೂ ಹೇಳಿದರು ರಾಹುಲ್‌ ಗಾಂಧಿ ಮುಂದೆ
ಕನ್ನಡ ಸುದ್ದಿ  /  ಕರ್ನಾಟಕ  /  Shettar Meets Rahul: ನಾನೇಕೆ ಕಾಂಗ್ರೆಸ್‌ಗೆ ಬಂದೆ..? ಜಗದೀಶ್‌ ಶೆಟ್ಟರ್‌ ಎಲ್ಲವನ್ನೂ ಹೇಳಿದರು ರಾಹುಲ್‌ ಗಾಂಧಿ ಮುಂದೆ

Shettar Meets Rahul: ನಾನೇಕೆ ಕಾಂಗ್ರೆಸ್‌ಗೆ ಬಂದೆ..? ಜಗದೀಶ್‌ ಶೆಟ್ಟರ್‌ ಎಲ್ಲವನ್ನೂ ಹೇಳಿದರು ರಾಹುಲ್‌ ಗಾಂಧಿ ಮುಂದೆ

ಹುಬ್ಬಳ್ಳಿಯಲ್ಲಿ ಇಂದು(ಏ.23) ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ ಜಗದೀಶ್‌ ಶೆಟ್ಟರ್‌, ತಾವು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಕಾರಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಬಿಜೆಪಿ ತಮ್ಮೊಂದಿಗೆ ವ್ಯವಹರಿಸಿದ ರೀತಿಯಿಂದ ಬೇಸತ್ತು, ಕಾಂಗ್ರೆಸ್‌ ಸೇರಿದ್ದಾಗಿ ಜಗದೀಶ್‌ ಶೆಟ್ಟರ್‌ ಅವರು ರಾಹುಲ್‌ ಗಾಂಧಿ ಅವರಿಗೆ ಹೇಳಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..

ರಾಹುಲ್‌ ಭೇಟಿ ಮಾಡಿದ ಶೆಟ್ಟರ್
ರಾಹುಲ್‌ ಭೇಟಿ ಮಾಡಿದ ಶೆಟ್ಟರ್ (ANI)

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಮಾಜಿ ನಾಯಕ ಜಗದೀಶ್ ಶೆಟ್ಟರ್ ಅವರು, ಕಾಂಗ್ರೆಸ್ ಸೇರಿದ ನಂತರ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು(ಏ.23) ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ ಜಗದೀಶ್‌ ಶೆಟ್ಟರ್‌, ತಾವು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಕಾರಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಬಿಜೆಪಿಯ ಕೆಟ್ಟ ವರ್ತನೆಯಿಂದ ಬೇಸತ್ತು ತಾವು ಕಾಂಗ್ರೆಸ್‌ ಸೇರಿದ್ದಾಗಿ ರಾಹುಲ್‌ ಗಾಂಧಿ ಅವರಿಗೆ ಹೇಳಿರುವ ಜಗದೀಶ್‌ ಶೆಟ್ಟರ್‌, ಪಕ್ಷ ನನ್ನೊಂದಿಗೆ ವ್ಯವಹರಿಸಿದ ರೀತಿ ಅವಮಾನಕರವಾಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ನಾಯಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪಕ್ಷಕ್ಕಾಗಿ ದಶಕಗಳ ಕಾಲ ದುಡಿದ ನನ್ನಂತಹ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿ ನನ್ನನ್ನು ಅವಮಾನ ಮಾಡಲಾಯಿತು. ಇದೆಲ್ಲದರಿಂದ ಬೇಸತ್ತು ನಾನು ಕಾಂಗ್ರೆಸ್‌ ಸೇರಿದ್ದಾಗಿ ಜಗದೀಶ್‌ ಶೆಟ್ಟರ್‌ ಅವರು ರಾಹುಲ್‌ ಗಾಂಧಿ ಅವರಿಗೆ ವಿವರಿಸಿದರು.

‘ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ನಿಯಂತ್ರಿಸುತ್ತಿವೆ. ಲಿಂಗಾಯತ ಸಮುದಾಯದ ನಾಯಕರನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದ್ದು, ನನ್ನನ್ನೂ ಒಳಗೊಂಡಂತೆ ಹಲವು ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್‌ ಆರೋಪಿಸಿದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ 5 ವರ್ಷದ ಅವಧಿಯನ್ನು ಪೂರೈಸಿದೆ. ಆದರೆ ಹಿರಿಯನ್ನು ಮೂಲೆಗೊತ್ತಿ ಕೆಲವರನ್ನು ಅಧಿಕಾರದ ಮುಂಚೂಣಿಗೆ ತರಬೇಕು ಎಂಬ ಉದ್ದೇಶದಿಂದ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಬಿಜೆಪಿಗೆ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಎಳ್ಳಷ್ಟೂ ಆಸಕ್ತಿ ಇಲ್ಲವಾಗಿದೆ. ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿ ಕಟ್ಟುವ ಮೂಲಕ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ ಎಂದು ಜಗದೀಶ್‌ ಶೆಟ್ಟರ್‌ ಕಿಡಿಕಾರಿದ್ದಾರೆ.

ಈ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ಜಗದೀಶ್‌ ಶೆಟ್ಟರ್‌ ಅವರ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಆನೆಬಲ ಬಂದಂತಾಗಿದೆ ಎಂದು ಹೇಳಿದರು. ಶೆಟ್ಟರ್‌ ಹಿರಿಯ ನಾಯಕರಾಗಿದ್ದು, ಪಕ್ಷವು ಅವರ ಸುದೀರ್ಘ ರಾಜಕೀಯ ಅನುಭವವನ್ನು ಬಳಸಿಕೊಳ್ಳಲಿದೆ ಎಂದು ರಾಹುಲ್‌ ಗಾಂಧಿ ಇದೇ ವೇಳೆ ಭರವಸೆ ನೀಡಿದ್ದಾರೆ.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹುಬ್ಬಳ್ಳಿ-ಧಾರವಾಡ-ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಅವರು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಳೆದ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಶೆಟ್ಟರ್ ಅವರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ತಮ್ಮ ಮಾಜಿ ಆಪ್ತ ಮಹೇಶ್ ಟೆಂಗಿನಕಾಯಿ ಅವರನ್ನು ಎದುರಿಸಲಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ತೊರೆದು, ಕಾಂಗ್ರೆಸ್ ಸೇರಿದ ಲಿಂಗಾಯತ ಸಮುದಾಯದ ಎರಡನೇ ಹಿರಿಯ ನಾಯಕರು. ಇದಕ್ಕೂ ಮೊದಲು ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಅಥಣಿ ಕ್ಷೇತ್ರದಿಂದ ಟಿಕೆಟ್‌ ದೊರೆಯದ ಕಾರಣಕ್ಕೆ, ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು.

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶೆಟ್ಟರ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಶೆಟ್ಟರ್ ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕ ಅಮರ್ ಸಿಂಗ್ ಪಾಟೀಲ್ ಕೂಡ ಕಾಂಗ್ರೆಸ್ ಸೇರಿದ್ದರು..

ಮೇ 10ರಂದು ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

Whats_app_banner