Result Analysis: ಉತ್ತರ ಕನ್ನಡದಲ್ಲಿ ಬಿಜೆಪಿಗೆ ಬಿಗ್ ಶಾಕ್ ನೀಡಿದ ಕೈ; ಕಾಗೇರಿ ಸೋಲು, ದೇಶಪಾಂಡೆ ಒಂಬತ್ತನೇ ಬಾರಿ ವಿಧಾನಸಭೆಗೆ
ಕರ್ನಾಟಕ ಕರಾವಳಿಯ ತ್ರಿವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯನ್ನು ಕೇಸರಿಯ ಭದ್ರಕೋಟೆ ಎಂದು ಹೇಳಲಾಗಿತ್ತು. ಆದರೆ ಈ ಬಾರಿ ಉತ್ತರ ಕನ್ನಡದಲ್ಲಿ ಬಿಜೆಪಿಯ ಕೋಟೆಯನ್ನು ಕಾಂಗ್ರೆಸ್ ಛಿದ್ರ ಮಾಡಿದೆ. 6ರಲ್ಲಿ 4 ಸ್ಥಾನ ಕೈವಶವಾದರೆ, ಎರಡು ಸ್ಥಾನಗಳನ್ನು ಮಾತ್ರ ಬಹಳ ಪ್ರಯಾಸದಿಂದ ಬಿಜೆಪಿ ಗೆದ್ದಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ಬಿಜೆಪಿ ಪ್ರಾಬಲ್ಯ ಮೆರೆದಿತ್ತು. ಕುಮಟಾದಲ್ಲಿ ದಿನಕರ ಶೆಟ್ಟಿ (ಬಿಜೆಪಿ), ಭಟ್ಕಳದಲ್ಲಿ ಸುನಿಲ್ ನಾಯ್ಕ್ (ಬಿಜೆಪಿ), ಶಿರಸಿಯಲ್ಲಿ ಕಾಗೇರಿ (ಬಿಜೆಪಿ), ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ (ಬಿಜೆಪಿ), ಕಾರವಾರದಲ್ಲಿ ರೂಪಾಲಿ ನಾಯ್ಕ (ಬಿಜೆಪಿ), ಹಳಿಯಾಳದಲ್ಲಿ ಆರ್‌ವಿ ದೇಶಪಾಂಡೆ (ಕಾಂಗ್ರೆಸ್) ಹೀಗೆ 5 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 1 ಕ್ಷೇತ್ರವನ್ನು ಮಾತ್ರ ಕಾಂಗ್ರೆಸ್ ಕಳೆದ ಬಾರಿ ಗೆದ್ದಿತ್ತು. ಇವರಲ್ಲಿ ಶಿವರಾಮ ಹೆಬ್ಬಾರ ಮೊದಲು ಕಾಂಗ್ರೆಸ್‌ನಿಂದ ಗೆದ್ದು ಮತ್ತೆ ಬಿಜೆಪಿ ಸೇರಿ ಮರುಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದರು. ಇದೀಗ ಕಾರವಾರ, ಭಟ್ಕಳ, ಶಿರಸಿ, ಹಳಿಯಾಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು, ತನ್ನ ಪ್ರಾಬಲ್ಯವನ್ನು ಮೆರೆದಿದೆ. ಇದೇ ವೇಳೆ ಕುಮಟಾದಲ್ಲಿ ಬಿಜೆಪಿಯು ಪ್ರಯಾಸದ ಗೆಲುವು ಸಾಧಿಸಿದರೆ, ಯಲ್ಲಾಪುರದಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ 5-1 ಆಗಿದ್ದರೆ, ಈ ಬಾರಿ 2-5 ಆಗಿದೆ.
ಕಾರವಾರ ಕ್ಷೇತ್ರ
ಇಲ್ಲಿ ಬಿಜೆಪಿಯ ರೂಪಾಲಿ ನಾಯ್ಕ 75307 ಮತ ಪಡೆದರೆ, ಕಾಂಗ್ರೆಸ್‌ನ ಸತೀಶ್ ಸೈಲ್ 77445 ಮತ ಗಳಿಸಿ ಜಯಭೇರಿ ಬಾರಿಸಿದ್ದಾರೆ. ಮತ್ತೊಂದೆಡೆ ಜೆಡಿಎಸ್‌ನ ಚೈತ್ರಾ ಕೊಠಾರ್‌ಕರ್ 2918 ಮತ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯು 2138 ಮತಗಳ ಅಂತರದಿಂದ ಕ್ಷೇತ್ರದಲ್ಲಿ ರೋಚಕ ಜಯ ಸಾಧಿಸಿದ್ದಾರೆ. ಬಹಳ ಹಿಂದೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸತೀಶ್ ಸೈಲ್ ಕಾಂಗ್ರೆಸ್ ಸೇರಿದ್ದರು. 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ರೂಪಾಲಿ ನಾಯ್ಕ್, ಕಾಂಗ್ರೆಸ್‌ನ ಸತೀಶ್ ಸೈಲ್ ಹಾಗೂ ಜೆಡಿಎಸ್‌ನ ಆನಂದ್ ಆಸ್ನೋಟಿಕರ್ ಅವರನ್ನು ಸೋಲಿಸಿ ಶಾಸಕರಾದರು. ಬಿಜೆಪಿ ಹಾಗೂ ಕಾಂಗ್ರೆಸ್ ಕದ ತಟ್ಟಿದ್ದ ಆನಂದ್ ಆಸ್ನೋಟಿಕರ್ ಕಣದಿಂದಲೇ ದೂರ ಸರಿದಿದ್ದರು. ಸತೀಶ್ ಸೈಲ್ ಗೆದ್ದು ಸ್ಮೈಲ್ ಮಾಡಿದರೆ, ಬಿಜೆಪಿ ತನ್ನ ಸ್ಥಾನ ಕಳೆದುಕೊಂಡಿದೆ.
ಕುಮಟಾ
ದಿನಕರ ಶೆಟ್ಟಿ (ಬಿಜೆಪಿ) 59966 ಮತ ಗಳಿಸಿದರೆ, ಸೂರಜ್ ನಾಯ್ಕ್ ಸೋನಿ (ಜೆಡಿಎಸ್) 59293 ಮತ ಗಳಿಸಿದ್ದಾರೆ. ಇದೇ ವೇಳೆ ನಿವೇದಿತ್ ಆಳ್ವ (ಕಾಂಗ್ರೆಸ್) 19272 ಮತ ಪಡೆದಿದ್ದಾರೆ. ಬಿಜೆಪಿಯ ದಿನಕರ ಶೆಟ್ಟಿ ಕೇವಲ 673 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಈ ಬಾರಿ ಮಾಜಿ ಶಾಸಕಿ ಶಾರದಾ ಶೆಟ್ಟಿಯವರಿಗೆ ಕಾಂಗ್ರೆಸ್ ಟಿಕೇಟ್ ಕೈತಪ್ಪಿದ್ದು, ಮಾರ್ಗರೇಟ್ ಆಳ್ವಾ ಅವರ ಪುತ್ರ ನಿವೇದಿತ್ ಆಳ್ವಾ ಅವರಿಗೆ ಪಕ್ಷ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು. ಆಳ್ವಾರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕುಮಟಾ ಕಾಂಗ್ರೆಸ್‌ನಲ್ಲಿ ಸಾಕಷ್ಟು ವಿರೋಧ ಕೇಳಿಬಂದಿದ್ದು, ಸ್ಥಳೀಯರಿಗೆ ಟಿಕೆಟ್ ನೀಡಲು ಆಗ್ರಹ ಕೇಳಿ ಬಂದಿತ್ತು. ಕೊನೆಗೂ ಟಿಕೆಟ್ ವಂಚಿತ ಶಾರದಾ ಶೆಟ್ಟಿಯವರು ಪಕ್ಷೇತರರಾಗಿ ಕಣಕ್ಕೆ ಇಳಿದರು. ಆದರೆ ಅವರ ಮುನಿಸನ್ನು ಹೈಕಮಾಂಡ್ ಶಮನ ಮಾಡಿತು. ನಾಮಪತ್ರ ವಾಪಸ್ ಪಡೆದಿದ್ದರು. ನಿವೇದಿತ್ ಆಳ್ವ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಎಡವಿದ್ದಕ್ಕೆ ಸಾಕ್ಷಿಯಾಯಿತು. ಜೆಡಿಎಸ್ ಮತ್ತು ದಿನಕರ ಶೆಟ್ಟಿ ನಡುವೆ ಮತ ಎಣಿಕೆ ಸಂದರ್ಭ ಹಾವುಏಣಿ ಆಟ ನಡೆಯಿತು. ಅಂತಿಮವಾಗಿ ಪ್ರಯಾಸಪಟ್ಟು ದಿನಕರ ಶೆಟ್ಟಿ ತನ್ನ ಸೀಟು ಉಳಿಸಿಕೊಂಡರು.
ಭಟ್ಕಳ
ಸುನೀಲ್ ನಾಯ್ಕ್ (ಬಿಜೆಪಿ) 67771 ಮತ ಪಡೆದರೆ, ಮಂಕಾಳು ವೈದ್ಯ (ಕಾಂಗ್ರೆಸ್) 100442 ಮತಗಳನ್ನು ಪಡೆದಿದ್ದಾರೆ. ಕೈ ನಾಯಕ ಮಂಕಾಳು ವೈದ್ಯ 32671 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿಯು ಕಳೆದ ಬಾರಿ ಗೆದ್ದಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಮಂಕಾಳು ವೈದ್ಯ ಗೆದ್ದಿದ್ದಾರೆ. ಮುಸ್ಲಿಮ್ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರವಾದರೂ ಈ ಬಾರಿ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿ ಚುನಾವಣಾ ಕಣದಲ್ಲಿ ಇರಲಿಲ್ಲ. ಕಳೆದ ಬಾರಿ ಪರೇಶ್ ಮೇಸ್ತಾ ಸಾವು ಪ್ರಕರಣ ಬಿಜೆಪಿ ಪಾಲಿಗೆ ಪ್ಲಸ್ ಆಗಿ, ಬಿಜೆಪಿ ಶಾಸಕ ಆಯ್ಕೆಯಾಗಿ ಬರಲು ದೊಡ್ಡ ಮಟ್ಟದಲ್ಲಿ ಕಾರಣವಾಗಿತ್ತು. ಈ ಬಾರಿ ಅಂತಹ ಸನ್ನಿವೇಶ ಇರಲಿಲ್ಲ. ಹೀಗಾಗಿ ಬಿಜೆಪಿಯಿಂದ ಕಾಂಗ್ರೆಸ್ ಕ್ಷೇತ್ರವನ್ನು ಕಸಿದುಕೊಂಡಿದೆ.
ಶಿರಸಿ
ಭೀಮಣ್ಣ ನಾಯ್ಕ (ಕಾಂಗ್ರೆಸ್) 76887 ಮತ ಗಳಿಸಿದರೆ, ಅನುಭವಿ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) 68175 ಮತ ಪಡೆದಿದ್ದಾರೆ. ಜೆಡಿಎಸ್‌ನ ಉಪೇಂದ್ರ ಪೈ 9138 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್ ನಾಯಕ ಭೀಮಣ್ಣ ನಾಯ್ಕ 8712 ಮತಗಳ ಅಂತರದಿದ ಎದ್ದು ಬೀಗಿದ್ದಾರೆ. ಇದು ಕಾಗೇರಿಗೆ ದೊಡ್ಡ ಶಾಕ್.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು 1957ರಿಂದ 1967ರವರೆಗೆ ಪ್ರತಿನಿಧಿಸಿದ ಕ್ಷೇತ್ರ ಶಿರಸಿ. ವಿಧಾನಸಭೆಯ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಇಲ್ಲಿ ಸೋಲಾಗುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ಬಿಕ್ ಶಾಕ್ ನೀಡಿದೆ. ಕಾಗೇರಿಯವರು ಶಿರಸಿ ವಿಧಾನಸಭಾ ಕ್ಷೇತ್ರದಿಂದ 3 ಬಾರಿ, ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಅವರು ವಿಧಾನಸಭೆ ಹಾಗೂ ವಿಧಾನಪರಿಷತ್ ಸೇರಿ ಒಟ್ಟು 5 ಚುನಾವಣೆಯಲ್ಲಿ ಸೋತಿದ್ದರು. ಅವರ ಸೋಲಿನ ಇತಿಹಾಸ ದೊಡ್ಡ ಬೇಟೆಯೊಂದಿಗೆ ಕೊನೆಗೊಂಡಿದೆ. ಇಲ್ಲೂ ಬಿಜೆಪಿಯ ಸ್ಥಾನವನ್ನು ಕಾಂಗ್ರೆಸ್ ಕಸಿದುಕೊಂಡಿದೆ.
ಯಲ್ಲಾಪುರ
ಶಿವರಾಮ ಹೆಬ್ಬಾರ್ (ಬಿಜೆಪಿ) 74699 ಮತ ಪಡೆದಿದ್ದರೆ, ವಿಎಸ್ ಪಾಟೀಲ್ (ಕಾಂಗ್ರೆಸ್) 70695 ಮತಗಳನ್ನು ಪಡೆದಿದೆ. ಅಂತಿಮವಾಗಿ ಬಿಜೆಪಿಯ ಶಿವರಾಮ್ ಹೆಬ್ಬಾರ್ 4004 ಮತಗಳ ಅಂತರದಿಂದ ಗೆದ್ದಿದ್ದಾರೆ.
ಅಂದು ವಿಎಸ್ ಪಾಟೀಲ್ ವಿರುದ್ಧ ಸೋತಿದ್ದ ಶಿವರಾಮ್ ಹೆಬ್ಬಾರ್ ಇಂದು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ವಿಎಸ್ ಪಾಟೀಲರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಈ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ಪೈಪೋಟಿಯಲ್ಲಿ ಮತ್ತೆ ಹೆಬ್ಬಾರರಿಗೆ ಗೆಲುವಾಗಿದೆ. 2018ರಲ್ಲಿ ಕಾಂಗ್ರೆಸ್‌ನಲ್ಲಿದ್ದು ವಿಎಸ್ ಪಾಟೀಲ್ ವಿರುದ್ಧ ಗೆದ್ದಿದ್ದ ಶಿವರಾಮ ಹೆಬ್ಬಾರ್, ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದಿದ್ದರು. 2019ರಲ್ಲಿ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ ಹೆಬ್ಬಾರ್ ಗೆದ್ದಿದ್ದು, ಬಳಿಕ ಕಾರ್ಮಿಕ ಸಚಿವರಾಗಿ ಮುಂದುವರಿದಿದ್ದರು. ಮೂಲ ಬಿಜೆಪಿಗರು ಹಾಗೂ ಶಿವರಾಮ ಹೆಬ್ಬಾರ್ ನಡುವಿನ ಅಸಮಾಧಾನ ವಿಎಸ್ ಪಾಟೀಲ್ ಪಕ್ಷಬಿಟ್ಟು ಕಾಂಗ್ರೆಸ್ ಸೇರುವಂತೆ ಮಾಡಿತ್ತು. ಆದರೆ ಇಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಹಳಿಯಾಳ
ಆರ್‌ವಿ ದೇಶಪಾಂಡೆ (ಕಾಂಗ್ರೆಸ್) 57240 ಮತ ಪಡೆದರೆ, ಸುನೀಲ್ ಹೆಗಡೆ (ಬಿಜೆಪಿ) 53617 ಮತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಎಲ್ ಘೋಟ್ನೇಕರ್ (ಜೆಡಿಎಸ್) 28814 ಮತ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್ ನಾಯಕ ಆರ್‌ವಿ ದೇಶಪಾಂಡೆ 3623 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ದೇಶಪಾಂಡೆ 1983ರಿಂದ ಸತತ ಎಂಟು ಬಾರಿ ಗೆಲುವು ಸಾಧಿಸಿದವರು. 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸುನೀಲ್ ಹೆಗಡೆ ವಿರುದ್ಧ ಒಂದು ಬಾರಿ ಸೋಲನ್ನು ಅನುಭವಿಸಿದ್ದರು. ಸುನೀಲ್ ಹೆಗಡೆ ಬಿಜೆಪಿಯ ಹುರಿಯಾಳಾಗಿದ್ದು, ದೇಶ್‌ಪಾಂಡೆಯ ವಿರುದ್ಧ ಕಣಕ್ಕಿಳಿದಿದ್ದರು. ಸುಮಾರು ಮೂರು ದಶಕದಿಂದ ದೇಶಪಾಂಡೆಯವರ ಬಲಗೈ ಬಂಟನಂತಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ಎಲ್ ಘೋಟ್ನೇಕರ್ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಸದ್ಯ ಫಲಿತಾಂಶ ಹೊರಬಿದ್ದಿದ್ದು, ದೇಶಪಾಂಡೆ ಅವರು ದಾಖಲೆಯ ಒಂಬತ್ತನೇ ಬಾರಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.