ಕನ್ನಡ ಸುದ್ದಿ  /  Karnataka  /  Karnataka Election Result Gt Devegowda Son Gd Harish Gowda Won Against Congress In Hunsuru Constituency Kannada News Rst

Karnataka Election Result: ಕಾಂಗ್ರೆಸ್‌ ಅಲೆಯ ನಡುವೆ ಹುಣಸೂರಿನಲ್ಲಿ ಗೆಲುವಿನ ಹಾದಿ ಕಂಡುಕೊಂಡ ಜೆಡಿಎಸ್‌ನ ಜಿಡಿ ಹರೀಶ್ ಗೌಡ

GD Harish Gowda: ಸಹಕಾರ ಕ್ಷೇತ್ರದ ಧುರೀಣರೆಂದೇ ಗುರುತಿಸಿಕೊಂಡಿರುವ ಜಿ.ಟಿ.ದೇವೇಗೌಡರ ಗರಡಿಯಲ್ಲಿ ರಾಜಕಾರಣ ಹಾಗೂ ಸಹಕಾರ ಕ್ಷೇತ್ರವನ್ನು ಅರಿತುಕೊಂಡ ಜಿ.ಡಿ.ಹರೀಶ್‌ ಗೌಡ ಅವರು ತಮ್ಮದೇ ಆದ ದಿಟ್ಟ ನಡೆಯ ಮೂಲಕ ಚಿಕ್ಕವಯಸ್ಸಿನಲ್ಲೇ ಸಾಧನೆ ಮಾಡಿ ತೋರಿಸಿದ್ದಾರೆ.

ಗೆಲುವಿನ ಸಂಭ್ರಮದಲ್ಲಿ ಜಿಡಿ ಹರೀಶ್‌ಗೌಡ
ಗೆಲುವಿನ ಸಂಭ್ರಮದಲ್ಲಿ ಜಿಡಿ ಹರೀಶ್‌ಗೌಡ

ಮೈಸೂರು: ಕಾಂಗ್ರೆಸ್‌ ಪಕ್ಷದ ಭೀಕರ ಅಲೆಯ ನಡುವೆಯೂ ಮೈಸೂರು ಜಿಲ್ಲೆಯಲ್ಲಿ ತಂದೆ- ಮಗ ಎರಡು ಸ್ಥಾನವನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸಹಕಾರ ಕ್ಷೇತ್ರದ ಧುರೀಣರೆಂದೇ ಗುರುತಿಸಿಕೊಂಡಿರುವ ಜಿ.ಟಿ.ದೇವೇಗೌಡರ ಗರಡಿಯಲ್ಲಿ ರಾಜಕಾರಣ ಹಾಗೂ ಸಹಕಾರ ಕ್ಷೇತ್ರವನ್ನು ಅರಿತುಕೊಂಡ ಜಿ.ಡಿ.ಹರೀಶ್‌ ಗೌಡ ಅವರು ತಮ್ಮದೇ ಆದ ದಿಟ್ಟ ನಡೆಯ ಮೂಲಕ ಚಿಕ್ಕವಯಸ್ಸಿನಲ್ಲೇ ಸಾಧನೆ ಮಾಡಿ ತೋರಿಸಿದ್ದಾರೆ. ವಿದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗ್ರಾಮೀಣ ಮಟ್ಟದಲ್ಲಿ ಅದೂ ಸಹಕಾರ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಾಯಕತ್ವವನ್ನು ರೂಪಿಸಿಕೊಂಡದ್ದು ಮಾತ್ರ ವಿಶೇಷ.

2010ರಲ್ಲಿ ಅವರ ತಾಯಿ ಹನಗೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿಗೆ ಸ್ಪರ್ಧೆ ಮಾಡಿದ್ದರು. ಆ ಸಂದರ್ಭದಲ್ಲಿ ತಾಯಿಯ ಗೆಲುವಿಗೆ ಶ್ರಮಿಸಿದ ಅವರು ಮತ್ತೆ ರಾಜಕೀಯವಾಗಿ ತಿರುಗಿ ನೋಡಲೇ ಇಲ್ಲ. ಹುಣಸೂರು ಕಸಬಾ ಸೊಸೈಟಿಯಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ನಿರ್ದೇಶಕರಾಗಿ ನೇಮಕವಾಗುವ ಮೂಲಕ 2013ರಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ಮುಂದಿನ ಐದು ವರ್ಷಗಳಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಸಹಕಾರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಆ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡರು. ಮುಂದೆ 2018ರ ವೇಳೆಗೆ ಜಿಲ್ಲಾ ಬ್ಯಾಂಕ್‌ಗೆ ತಮ್ಮವರನ್ನು ಬಹುಮತದಿಂದ ಗೆಲ್ಲಿಸಿಕೊಳ್ಳುವ ಮೂಲಕ ಬ್ಯಾಂಕಿನ ಅಧ್ಯಕ್ಷರಾದರು. ಅಲ್ಲಿಂದ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರಾದರು. ಅಷ್ಟು ಚಿಕ್ಕವಯಸ್ಸಿನಲ್ಲಿ ಅಪೆಕ್ಸ್‌ ಬ್ಯಾಂಕಿಗೆ ಯಾರೂ ನಿರ್ದೇಶಕರಾದ ಉದಾರಹಣೆಯೂ ಇಲ್ಲ. ಅಷ್ಟು ವಯಸ್ಸಿನಲ್ಲಿ ಇವರು ಅಪೆಕ್ಸ್‌ ಬ್ಯಾಂಕಿನ ಉಪಾಧ್ಯಕ್ಷರಾಗಿ ನೇಮಕಗೊಂಡರು.

ಅಲ್ಲಿಂದ ಮುಂದೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಹಲವಾರು ಕ್ಷೇತ್ರಗಳಿಂದ ಹರೀಶ್‌ ಗೌಡ ಅವರನ್ನು ವಿಧಾನಸಭೆಗೆ ಸ್ಪರ್ಧೆ ಮಾಡುವಂತೆ ಜನ ಕೇಳಿಕೊಂಡರೂ ಅವರು ಒಪ್ಪಿಕೊಂಡಿರಲಿಲ್ಲ. 2004ರ ನಂತರ ಇವರ ತಂದೆ ಹುಣಸೂರು ಕ್ಷೇತ್ರದಲ್ಲಿ ಸೋತು ಹೊರ ಬಂದ ನಂತರ ಜಾ.ದಳ ಕಾರ್ಯಕರ್ತರು ದಿಕ್ಕಾಪಾಲಾಗಿದ್ದರು. ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದ್ದವು. ಜಾತಿ ಸಂಘರ್ಷ ಹೆಚ್ಚಾಗಿತ್ತು. ಇದನ್ನು ಮನಗಂಡಿದ್ದ ಹರೀಶ್‌ ಗೌಡ ಅವರು ಅಲ್ಲಿಗೆ ಹೋಗುವ ತಮ್ಮ ನಿರ್ಧಾರವನ್ನು ಗಟ್ಟಿಮಾಡಿಕೊಂಡರು.

ಜಿಟಿಡಿ ಫೌಂಡೇಷನ್‌ ಮೂಲಕ ಸಮಾಜದ ಎಲ್ಲ ವರ್ಗದವರಿಗೂ ಸಾಕಷ್ಟು ಸೇವೆ ಸಲ್ಲಿಸಿದರು. ಸಣ್ಣಪುಟ್ಟ ಸಮಾಜದ ಜನರನ್ನು ಒಗ್ಗೂಡಿಸಿ ಅವರು ಶಕ್ತಿ ತುಂಬುವ ಕೆಲಸ ಮಾಡಿದರು. ಆ ಮೂಲಕ ತನ್ನ ನಾಯಕತ್ವದ ಸಾಮರ್ಥ್ಯವನ್ನು ಜನ ಗುರುತಿಸುವಂತೆ ಮಾಡಿದರು.

2013ರಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಬಂದ ಮನವಿಗಳನ್ನು ನಯವಾಗಿ ತಿರಸ್ಕರಿಸಿದ್ದರು. 2018ರಲ್ಲಿ ವರುಣದಲ್ಲಿ ಸ್ಪರ್ಧೆ ಮಾಡುವಂತೆ ಜನ ಇವರ ಮನೆಗೆ ಬಂದು ಒತ್ತಾಯ ಮಾಡಿದರೂ ಆಗಲೂ ಕೇಳಲಿಲ್ಲ. ನಂತರ ಹುಣಸೂರಿನಲ್ಲಿ ಏಕಾಂಗಿಯಾಗಿ ನುಗ್ಗಿ ಚದುರಿಹೋಗಿದ್ದ ಕಾರ್ಯಕರ್ತರನ್ನು ಸಂಘಟಿಸಿ ಅವರಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾದರು. ಯಾರ ಸಹಾಯವೂ ಇಲ್ಲದೆ ಇಡೀ ಕ್ಷೇತ್ರದಲ್ಲಿ ಹಗಲು- ಇರುಳೆನ್ನದೆ ಸುತ್ತಾಡಿ, ಸ್ಥಳೀಯ ನಾಯಕರು, ಕಾರ್ಯಕರ್ತರು ಹಾಗೂ ಜನಸಾಮಾನ್ಯರನ್ನು ಹುರಿದುಂಬಿಸಿದರು. 15 ವರ್ಷಗಳ ನಂತರ ಹುಣಸೂರಿನಲ್ಲಿ ಜಾ.ದಳ ಗೆಲ್ಲುವಂತೆ ಮಾಡುವಲ್ಲಿ ಯಶಸ್ವಿಯಾದ ಹರೀಶ್‌ ಗೌಡ ಅವರು ಅಲ್ಲಿನ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಹುಣಸೂರು ಮತ್ತು ಜಿಟಿಡಿ ಕುಟುಂಬ

ಜಿ.ಟಿ.ದೇವೇಗೌಡ ಹಾಗೂ ಹುಣಸೂರಿಗೆ ಅವಿನಾಭಾವ ಸಂಬಂಧ. 1998ರಲ್ಲಿ ಹುಣಸೂರು ಕ್ಷೇತ್ರದಿಂದ ಜಿಟಿಡಿ ಮೊದಲ ಬಾರಿಗೆ ಶಾಸಕರಾಗಿ ಗೆಲುವು ಸಾಧಿಸಿದರು. ನಂತರ ಮತ್ತೊಂದು ಬಾರಿ ಗೆದ್ದು ಸಚಿವರೂ ಆದರು. 2008ರಲ್ಲಿ ಜಿಟಿಡಿ ಹುಣಸೂರಿನಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತರು. ನಂತರ ಚಾಮುಂಡೇಶ್ವರಿಯತ್ತ ಹೊರಟು ಅಲ್ಲಿ ಮೂರು ಬಾರಿ ಶಾಸಕರಾದರು. 2010ರಲ್ಲಿ ಜಿಟಿಡಿ ಅವರ ಪತ್ನಿ ಲಲಿತಾ ದೇವೇಗೌಡ ಅವರು ಹನಗೂಡಿನಿಂದ ಮೈಸೂರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ಹುಣಸೂರಿನ ಲಕ್ಷ್ಮಿ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ ಈಗ ಅದೇ ಪ್ರಾತಿನಿಧ್ಯದಲ್ಲಿ ರಾಜ್ಯ ಪತ್ತಿನ ಸಹಕಾರ ಮಹಾಮಂಡಲದ ಅಧ್ಯಕ್ಷರಾಗಿದ್ದಾರೆ.

ತಾಯಿ- ತಂದೆಗೆ ಸಹಕಾರ ನೀಡಿದ ಹುಣಸೂರಿನಿಂದಲೇ ಜಿ.ಡಿ. ಹರೀಶ್‌ ಗೌಡ ಕೂಡ ತನ್ನ ಭವಿಷ್ಯವನ್ನು ಅರಸಿಕೊಂಡು ಹೋದರು. ಅಲ್ಲಿಂದಲೇ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಅಪೆಕ್ಸ್‌ ಬ್ಯಾಂಕಿನ ಉಪಾಧ್ಯಕ್ಷರಾಗುವ ಹಂತಕ್ಕೆ ಬೆಳೆದರು. ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶವಿದ್ದರೂ ಹುಣಸೂರನ್ನೇ ಆಯ್ಕೆ ಮಾಡಿಕೊಂಡು ಈಗ ಶಾಸಕರಾಗಿದ್ದಾರೆ.

ತಂದೆಯ ಸೋಲಿನ ಸೇಡು

2008ರಲ್ಲಿ ಜಿ.ಟಿ.ದೇವೇಗೌಡ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಆಗ ಕಾಂಗ್ರೆಸ್‌ ಅಭ್ಯರ್ಥಿ ಎಚ್.ಬಿ. ಮಂಜುನಾಥ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ. ಆ ಚುನಾವಣೆಯಲ್ಲಿ ಸೋಲು ಕಂಡ ದೇವೇಗೌಡರು ಬೇಸರಗೊಂಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಈಗ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಚ್.ಪಿ. ಮಂಜುನಾಥ್‌ ಅವರನ್ನು ಸೋಲುಸಿ, ಗೆಲುವು ದಾಖಲಿಸುವ ಮೂಲಕ ತನ್ನ ತಂದೆಯ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ. 15 ವರ್ಷದ ನಂತರ ಜಾ.ದಳದ ತೆಕ್ಕೆಗೆ ಹುಣಸೂರು ಕ್ಷೇತ್ರವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಏಕಾಂಗಿ ಹೋರಾಟ

ಹುಣಸೂರು ನೂತನ ಶಾಸಕ ಜಿ.ಡಿ.ಹರೀಶ್‌ ಗೌಡ ಅವರದು ಏಕಾಂಗಿ ಹೋರಾಟ. ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟಾಗ ಅಷ್ಟೇನೂ ಆ ಕ್ಷೇತ್ರದ ಬಗ್ಗೆ ಅನುಭವ ಇರಲಿಲ್ಲ. ಹುಣಸೂರು ಕಸಬಾ ಸೊಸೈಟಿಯಿಂದ ಜಿಲ್ಲಾ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾದ ಐದು ವರ್ಷಗಳಲ್ಲಿ ಸಹಕಾರ ಕ್ಷೇತ್ರದ ಎಲ್ಲ ಮಗ್ಗಲುಗಳನ್ನು ಅಧ್ಯಯನ ಮಾಡುವುದ ಜೊತೆಗೆ ತಾವೇ ಭಾಗಿಯಾಗಿ ಅನುಭವವನ್ನು ಗಿಟ್ಟಿಸಿಕೊಂಡರು. ಬ್ಯಾಂಕಿನ ಮುಂದಿನ ಚುನಾವಣೆ ವೇಳೆಗೆ ಸ್ವತಂತ್ರವಾಗಿ ಏಕಾಂಗಿಯಾಗಿ ಮುನ್ನುಗ್ಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಸಹಕಾರಿಗಳನ್ನು ಸಂಘಟಿಸಿ, ತಮ್ಮ ಬೆಂಬಲಿಗರೇ ಗೆಲ್ಲುವಂತೆ ನೋಡಿಕೊಂಡರು. ಮೈಸೂರು ಹಾಲು ಒಕ್ಕೂಟ, ಟಿಎಪಿಸಿಎಂಎಸ್.‌ ಎಪಿಎಂಸಿ ಮೊದಲಾದ ಸಹಕಾರಿ ಸಂಸ್ಥೆಗಳಲ್ಲಿ ತನ್ನ ಬೆಂಬಲಿಗರೇ ಹೆಚ್ಚು ಗೆಲ್ಲುವಂತೆ ಮಾಡುವಲ್ಲಿ ಹರೀಶ್‌ ಗೌಡ ಪ್ರಮುಖ ಪಾತ್ರ ವಹಿಸಿದರು. ಅಷ್ಟರ ಮಟ್ಟಿಗೆ ಸಹಕಾರ ಕ್ಷೇತ್ರದಲ್ಲಿ ಅತಿ ಕಡಿಮೆ ಅವದಿಯನ್ನು ಅಪಾರ ಅನುಭವ ಹಾಗೂ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. 15 ವರ್ಷಗಳಿಂದ ನಾಯಕತ್ವದ ಕೊರಗಿನಿಂದ ಬಳಲುತ್ತಿದ್ದ ಹುಣಸೂರು ಜಾ.ದಳಕ್ಕೆ ನಾಯಕತ್ವ ನೀಡುವಲ್ಲಿ ಯಶಸ್ವಿಯಾದರು. ಎಲ್ಲರ ಕಷ್ಟಕ್ಕೆ ಸ್ಪಂಧಿಸುವ ಗುಣ, ಯಾವುದೇ ಸಂದರ್ಭದಲ್ಲೂ ಎದೆಗುಂದದ ಹೋರಾಟದ ಮನೋಭಾವವೇ ಹರೀಶ್‌ ಗೌಡ ಅವರನ್ನು ಮೊದಲ ಪ್ರಯತ್ನದಲ್ಲೇ ಶಾಸಕರಾಗುವಂತೆ ಮಾಡಿದೆ.

ʼರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಇದೆ. ಅಂತಹ ಸಂದರ್ಭದಲ್ಲಿ ನನ್ನ ಮೇಲೆ ವಿಶ್ವಾಸ ಇಟ್ಟು ಜನ ಗೆಲ್ಲಿಸಿದ್ದಾರೆ. ನಮ್ಮ ತಂದೆಯ ಸೇವೆ, ಸಹಕಾರ ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸವನ್ನು ಜನ ಗುರುತಿಸಿದ್ದಾರೆ. ಕ್ಷೇತ್ರದ ಜನತೆಯ ಜೊತೆ ನಾನು ಯಾವಾಗಲೂ ಇರುತ್ತೆನೆ. ನಮ್ಮ ಪಕ್ಷದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ಕೊಟ್ಟಿದ್ದರು. ಅದನ್ನು ಮುಂದೆಯೂ ಉಳಿಸಿಕೊಳ್ಳುತ್ತೇನೆ. ಹುಣಸೂರನ್ನು ಅಭಿವೃದ್ಧಿ ಪಡಿಸುವುದು ನನ್ನ ಆದ್ಯ ಕರ್ತವ್ಯ. ನಮ್ಮ ತಂದೆಯ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆʼ ಎಂದು ವಿಶ್ವಾಸದಿಂದ ಹೇಳುತ್ತಾರೆ ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ.