Karnataka Election Result: ಉಡುಪಿಯಲ್ಲಿ ಕಮಲ ಅಚಲ: ಜಿಲ್ಲೆಯಲ್ಲಿ ಬಿಜೆಪಿಗೆ ಔಟ್ ಆಫ್ ಔಟ್
ಕನ್ನಡ ಸುದ್ದಿ  /  ಕರ್ನಾಟಕ  /  Karnataka Election Result: ಉಡುಪಿಯಲ್ಲಿ ಕಮಲ ಅಚಲ: ಜಿಲ್ಲೆಯಲ್ಲಿ ಬಿಜೆಪಿಗೆ ಔಟ್ ಆಫ್ ಔಟ್

Karnataka Election Result: ಉಡುಪಿಯಲ್ಲಿ ಕಮಲ ಅಚಲ: ಜಿಲ್ಲೆಯಲ್ಲಿ ಬಿಜೆಪಿಗೆ ಔಟ್ ಆಫ್ ಔಟ್

Udupi Result Review: ಹಿಂದೆ ಡಾ. ವಿ.ಎಸ್.ಆಚಾರ್ಯರಂಥ ನಾಯಕರು ಬಿಜೆಪಿಗೆ ಭದ್ರ ನೆಲೆಯನ್ನು ಒದಗಿಸಿಕೊಟ್ಟಿದ್ದ ಉಡುಪಿಯಲ್ಲಿ 2004ರಲ್ಲೇ ನಡೆಸಿದ ಪ್ರಯೋಗದಲ್ಲಿ ಹೊಸ ಮುಖಗಳು ಗೆದ್ದಿದ್ದರು. ಆ ಪ್ರಯೋಗ ಈಗಲೂ ಯಶಸ್ವಿಯಾಗಿದೆ. ರಾಜ್ಯದಾದ್ಯಂತ ಕಾಂಗ್ರೆಸ್ ಗೆದ್ದರೂ ಉಡುಪಿಯಲ್ಲಿ ಬಿಜೆಪಿ ಗೆಲ್ಲಲು ಕಾರಣವೇನು?

ಉಡುಪಿಯಲ್ಲಿ ಕಮಲದ ಅಲೆ
ಉಡುಪಿಯಲ್ಲಿ ಕಮಲದ ಅಲೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಮರುಕಳಿಸಿದೆ. ಬಿಜೆಪಿಗೆ ಕರಾವಳಿ ಭದ್ರ ನೆಲೆ ಎಂಬುದು ಎಂದೋ ಸಾಬೀತಾದರೂ ಹಿಜಾಬ್ ವಿಚಾರದ ದೊಡ್ಡ ಪ್ರತಿಭಟನೆಯಿಂದ ಎಲ್ಲರ ಕಣ್ಣು ಉಡುಪಿಯತ್ತ ಇತ್ತು. ಆದರೆ ಇಲ್ಲಿ ಸಂಘಟಿತ ಪ್ರಯತ್ನಗಳು ಯಶಸ್ಸು ಕಂಡಿದೆ. 2018ರ ಫಲಿತಾಂಶ ಮರುಕಳಿಸಿದರೆ, ಬಿಜೆಪಿಯ ಹೊಸ ಮುಖಗಳಿಗೂ ಮತದಾರ ಸೈ ಎಂದಿದ್ದಾನೆ.

ವಿಧಾನಸಭೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 5 ಕ್ಷೇತ್ರಗಳಿವೆ, 2018ರ ಚುನಾವಣೆಯಲ್ಲಿ ಎಲ್ಲ 5 ಕ್ಷೇತ್ರಗಳೂ ಬಿಜೆಪಿ ಪಾಲಾಗಿತ್ತು. ಈ ಬಾರಿ ಬಿಜೆಪಿ 5 ಕ್ಷೇತ್ರಗಳ ಪೈಕಿ, ಉಡುಪಿ, ಕಾಪು, ಕಾರ್ಕಳ ಮತ್ತು ಕುಂದಾಪುರ..ಹೀಗೆ 4 ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಾಯಿಸಿತ್ತು. ಕಾಂಗ್ರೆಸ್ ಗೋಪಾಲ ಪೂಜಾರಿ ಮತ್ತು ವಿನಯ ಕುಮಾರ್ ಸೊರಕೆಯಂಥ ಅನುಭವಿಗಳ ಜೊತೆ ಮೂವರು ಹೊಸಬರನ್ನು ಕಣಕ್ಕಿಳಿಸಿತ್ತು. ಕಾರ್ಕಳ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಸ್ಪರ್ಧೆಗಿಳಿದು ಗಮನ ಸೆಳೆದಿದ್ದರು

ಚುನಾವಣೆ ಟಿಕೆಟ್ ಹಂಚಿಕೆ ವೇಳೆ ಉಡುಪಿ, ಬೈಂದೂರು ಕ್ಷೇತ್ರದಲ್ಲಿ ಸಣ್ಣ ಅಸಮಾಧಾನದ ಅಲೆ ಎದ್ದಿದ್ದರೂ ಹೈಕಮಾಂಡ್ ಬಳಿಕ ಶಮನ ಮಾಡಿತ್ತು. ಬಳಿಕ ರಘುಪತಿ ಭಟ್ ಹಾಗೂ ಲಾಲಾಜಿ ಮೆಂಡನ್ ಪೂರ್ಣವಾಗಿ ಪಕ್ಷನಿಷ್ಠೆಯನ್ನು ಪ್ರದರ್ಶಿಸಿದ್ದರು.

ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರ ಪ್ರಭಾವ ವರ್ಕೌಟ್ ಆದರೆ, ಬೈಂದೂರಿನಲ್ಲಿ ಗುರುರಾಜ್ ಗಂಟಿಹೊಳೆ ಮೊದಲೇ ಸಂಘಟನಾತ್ಮಕವಾಗಿ ಕಾರ್ಯಕರ್ತರೊಂದಿಗಿದ್ದದ್ದು ಪ್ಲಸ್ ಆಯಿತು. ಉಡುಪಿಯ ಯಶಪಾಲ ಸುವರ್ಣ ಡ್ಯಾಶಿಂಗ್ ಇಮೇಜ್ ಹೊಂದಿರುವುದು ಕಟ್ಟರ್ ಹಿಂದುತ್ವವಾದಿ ಕಾರ್ಯಕರ್ತರಿಗೆ ಬೆಂಬಲವಾಯಿತು. ಜತೆಗೆ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬಂದದ್ದು ಲಾಭವಾಯಿತು. ಕಾಪುವಿನಲ್ಲಿ ರಾಹುಲ್ ಗಾಂಧಿ ಬಂದರೂ ಹಳೆ ಹುಲಿ ವಿನಯಕುಮಾರ್ ಸೊರಕೆಗೆ ಲಾಭವಾಗಲಿಲ್ಲ. ಬದಲಿಗೆ ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ ಆರೇಳು ವರ್ಷಗಳ ಮೊದಲೇ ಚುನಾವಣೆಗೆ ಸ್ಪರ್ಧಿಸುವ ತಯಾರಿ ನಡೆಸಿದ್ದು, ಸಾಕಷ್ಟು ಸಮಾಜಸೇವೆಯಲ್ಲಿ ತೊಡಗಿಸಿದ್ದು, ಲಾಭವಾಯಿತು. ಇನ್ನು ಕಾರ್ಕಳ ಚುನಾವಣೆಯಲ್ಲಿ ಒಂದು ಹಂತದಲ್ಲಿ ಸುನಿಲ್ ಕುಮಾರ್ ವಿರುದ್ಧ ಪ್ರಬಲ ವಿರೋಧಿ ಧೋರಣೆ ಇದ್ದು, ಅದು ಮತ ಎಣಿಕೆ ಸಂದರ್ಭ ಹಿನ್ನಡೆ ತೋರಿಸುವ ಮೂಲಕ ಗೊತ್ತಾದರೂ ಅಂತಿಮವಾಗಿ ಪ್ರಯಾಸದ ಗೆಲುವನ್ನು ಸಾಧಿಸಲು ಸುನೀಲ್ ಸಫಲರಾದರು. ಇಲ್ಲಿ ಪ್ರಮೋದ್ ಮುತಾಲಿಕ್ ದೊಡ್ಡ ಸದ್ದೇನನ್ನೂ ಮಾಡಲಿಲ್ಲ.

ಫಲಿತಾಂಶ ವಿವರ ಹೀಗಿದೆ:

ಬೈಂದೂರು ಕ್ಷೇತ್ರ: ಗುರುರಾಜ ಗಂಟಿಹೊಳೆ (ಬಿಜೆಪಿ) 98,628 ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್) 82,475. ಮನ್ಸೂರ್ ಇಬ್ರಾಹಿಂ (ಜೆಡಿಎಸ್) 841. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೋಪಾಲ ಪೂಜಾರಿ 71,636 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಸುಕುಮಾರ ಶೆಟ್ಟಿ 96,029 ಮತಗಳನ್ನು ಗಳಿಸಿ ಜಯ ಸಾಧಿಸಿದ್ದರು. ಜಯದ ಅಂತದ 25 ಸಾವಿರಕ್ಕಿಂತಲೂ ಅಧಿಕವಿತ್ತು. ಈ ಬಾರಿ ಸುಕುಮಾರ ಶೆಟ್ಟಿ ಬದಲಿಗೆ ಬಿಜೆಪಿ ಹಿರಿಯ ಕಾರ್ಯಕರ್ತ ಗುರುರಾಜ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಿತ್ತು.

ಕುಂದಾಪುರ ಕ್ಷೇತ್ರ: ಕಿರಣ್ ಕುಮಾರ್ ಕೊಡ್ಗಿ (ಬಿಜೆಪಿ) 1,02,424 ಎ.ದಿನೇಶ್ ಹೆಗ್ಡೆ (ಕಾಂಗ್ರೆಸ್) 60,868. ಕುಂದಾಪುರದಲ್ಲಿ ಬಿಜೆಪಿಯ ವಾಜಪೇಯಿ ಎಂದೇ ಖ್ಯಾತರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕಾರಣದಲ್ಲಿ ಸ್ವಯಂನಿವೃತ್ತಿ ಪಡೆದುಕೊಂಡು ಕಿರಣ್ ಕೊಡ್ಗಿ ಹೆಸರು ಸೂಚಿಸಿದ್ದರು. ಕಳೆದ ಬಾರಿ 2018ರಲ್ಲಿ ಹಾಲಾಡಿ ಅವರು 1,03,434 ಮತ ಗಳಿಸಿದ್ದರೆ, ಕಾಂಗ್ರೆಸ್ ನ ರಾಕೇಶ್ ಮಲ್ಲಿ 47,029 ಮತ ಗಳಿಸಿದ್ದರು.

ಉಡುಪಿ ಕ್ಷೇತ್ರ: ಯಶಪಾಲ್ ಸುವರ್ಣ (ಬಿಜೆಪಿ) 97,079 ಪ್ರಸಾದ್ ರಾಜ್ ಕಾಂಚನ್ (ಕಾಂಗ್ರೆಸ್) 64,303. ಹಿಜಾಬ್ ವಿವಾದದಿಂದ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ಉಡುಪಿ ಕ್ಷೇತ್ರದಲ್ಲಿ ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿಯ ರಘುಪತಿ ಭಟ್ 84,946 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ 72,902 ಮತ ಗಳಿಸಿದ್ದರು. ಇದೀಗ ರಘುಪತಿ ಭಟ್ ಅವರಿಗೆ ಟಿಕೆಟ್ ನಿರಾಕರಿಸಿ, ಯಶ್ ಪಾಲ್ ಸುವರ್ಣ ಅವರಿಗೆ ನೀಡಿದರೆ, ಪ್ರಮೋದ್ ಬಿಜೆಪಿಗೆ ಬಂದಿದ್ದಾರೆ. ಹಿಜಾಬ್ ವಿವಾದ ಸಂದರ್ಭ ಯಶ್ ಪಾಲ್ ಸುವರ್ಣ ದೊಡ್ಡ ಮಟ್ಟಿನಲ್ಲಿ ಸುದ್ದಿಯಾಗಿದ್ದರು.

ಕಾಪು ಕ್ಷೇತ್ರ: ಗುರ್ಮೆ ಸುರೇಶ್ ಶೆಟ್ಟಿ (ಬಿಜೆಪಿ) 80559, ವಿನಯಕುಮಾರ್ ಸೊರಕೆ (ಕಾಂಗ್ರೆಸ್) 67,555 ಕಳೆದ ಚುನಾವಣೆಯಲ್ಲಿ ಲಾಲಾಜಿ ಮೆಂಡನ್ ಜಯ ಗಳಿಸಿದ್ದ ಬಿಜೆಪಿಯ ಹಿಡಿತದ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿ ಬದಲಾಯಿಸಿ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರನ್ನು ಕಣಕ್ಕಿಳಿಸಿದ್ದು, ಜಿದ್ದಾಜಿದ್ದಿ ಪ್ರಚಾರ ನಡೆದಿತ್ತು. ಕಳೆದ ಬಾರಿ ಸೊರಕೆ 63,976 ಮತ ಗಳಿಸಿದ್ದರು. ಬಿಜೆಪಿಯ ಲಾಲಾಜಿ ಮೆಂಡನ್ 75,893 ಮತ ಗಳಿಸಿ ಗೆದ್ದಿದ್ದರು.

ಕಾರ್ಕಳ ಕ್ಷೇತ್ರ: ವಿ.ಸುನಿಲ್ ಕುಮಾರ್ (ಬಿಜೆಪಿ) 77028, ಉದಯ ಶೆಟ್ಟಿ ಮುನಿಯಾಲು (ಕಾಂಗ್ರೆಸ್) 72426. ಪ್ರಮೋಧ್ ಮುತಾಲಿಕ್ (ಪಕ್ಷೇತರ) 4508 ಮತ ಗಳಿಸಿದ್ದಾರೆ. ಸುನಿಲ್ ಕುಮಾರ್ ಪುನರಾಯ್ಕೆ ಬಯಸಿ ಕಣಕ್ಕಿಳಿದ ಈ ಕ್ಷೇತ್ರದಲ್ಲಿ ಹಿಂದು ಸಂಘಟನೆಯ ಮುಖಂಡ ಪ್ರಮೋದ್ ಮುತಾಲಿಕ್ ಸೆಡ್ಡು ಹೊಡೆದು ನಿಂತ ಕಾರಣ ಕ್ಷೇತ್ರ ಭಾರಿ ಸದ್ದು ಮಾಡಿತ್ತು. ಕಳೆದ ಬಾರಿ ಸುನಿಲ್ ಕುಮಾರ್ ಅವರಿಗೆ 91,245 ಮತ ದೊರಕಿದ್ದರೆ, ಕಾಂಗ್ರೆಸ್ ನ ಗೋಪಾಲ ಭಂಡಾರಿ 48,679 ಓಟು ಗಳಿಸಿದ್ದರು

ಸುದ್ದಿವಿಶ್ಲೇಷಣೆ: ಹರೀಶ ಮಾಂಬಾಡಿ

Whats_app_banner