Kannada News  /  Karnataka  /  Karnataka Election Selling Liquor In Villages Is Bjp Achievement Liquor Ban If People Want It Says Hd Kumaraswamy Rmy

HD Kumaraswamy: ಕರ್ನಾಟಕ ಚುನಾವಣೆ; ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡಿದ್ದೇ ಬಿಜೆಪಿ ಸಾಧನೆ; ಜನರು ಬಯಸಿದರೆ ಮದ್ಯ ಮಾರಾಟ ಬಂದ್: ಹೆಚ್‌ಡಿಕೆ

ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಚಾರ ಮಾಡಿದರು.
ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಚಾರ ಮಾಡಿದರು.

ಈ ಚುನಾವಣೆಯಲ್ಲಿ ಜನತಾದಳ ಸರ್ಕಾರ ಸ್ಥಾಪನೆಯಾಗುವುದನ್ನು ತಡೆಯಲು ಕಾಂಗ್ರೆಸ್, ಬಿಜೆಪಿ‌ ಮುಖಂಡರಿಂದ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ): ರಾಜ್ಯದ ಹಳ್ಳಿಗಳಿಗೂ ಮದ್ಯ ಮಾರಾಟ ವಿಸ್ತರಿಸಿದ್ದೇ ಬಿಜೆಪಿ ಸರ್ಕಾರದ (BJP Govt) ಸಾಧನೆ. ಜನತೆ ಬಯಸಿದರೆ ಮದ್ಯ ಮಾರಾಟವನ್ನು ಸಂಪೂರ್ಣ ಬಂದ್ (Liquor sale ban) ಮಾಡಲಾಗುವುದು ಎಂದು ಮಾಜಿ‌ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಘೋಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೊಡ್ಡಬಳ್ಳಾಪುರ (Doddaballapura) ಜೆಡಿಎಸ್ (JDS) ಅಭ್ಯರ್ಥಿ ಬಿ ಮುನೇಗೌಡರ ಪರವಾಗಿ ನಡೆದ ರೋಡ್ ಶೋನಲ್ಲಿ (Road Show) ಮಾತನಾಡಿರುವ ಹೆಚ್ಡಿಕೆ, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಘೋಷಣೆಯಾದ ನಂತರ ಎರಡು ರಾಷ್ಟ್ರೀಯ ಪಕ್ಷಗಳ ಉತ್ತರ ಭಾರತದ ಮುಖಂಡರು ಮತಯಾಚನೆಗೆ ರಾಜ್ಯಕ್ಕೆ ಬರುತ್ತಿದ್ದಾರೆ. ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು, ಮಂತ್ರಿಗಳು, ಗುಜರಾತ್ ಶಾಸಕರು ಬರುತ್ತಿದ್ದಾರೆ. ಇವರಿಗೆ ಈಗ ಕರ್ನಾಟಕದ ಮೇಲೆ ಬಹಳ ಮಮಕಾರ ಬಂದಿದೆ. ಇವರು ರಾಜ್ಯಕ್ಕೆ ಪ್ರೀತಿಯಿಂದ ಬಂದಿದ್ದಾರೋ ಅಥವಾ ಚುನಾವಣೆ ನಂತರ ಟಾಟಾ ಮಾಡಿ ಹೋಗುತ್ತಾರೆ ಗೊತ್ತಿಲ್ಲ ಎಂದು ಟಾಂಗ್ ನೀಡಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಕರ್ನಾಟಕದ ಮೇಲೆ ನೆಲ, ಜಲ, ಭಾಷೆ ವಿಚಾರದಲ್ಲಿ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ಸಹಿಸುವ ಪ್ರಶ್ನೆ ಇಲ್ಲ. ಈ ವಿಷಯಗಳಲ್ಲಿ ನಿರಂತರ ಅತಿಕ್ರಮಣ ನಡೆಯುತ್ತಿದ್ದಾಗ ರಾಷ್ಟ್ರೀಯ ಪಕ್ಷಗಳ ಉತ್ತರ ಭಾರತೀಯ ರಾಜಕಾರಣಿಗಳು ಕನ್ನಡಿಗರ ಪರವಾಗಿ ದನಿ ಎತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಈಗ ಚುನಾವಣೆ ಸಮಯದಲ್ಲಿ ಆಯಾ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಬಂದಿದ್ದಾರೆ. ಇಷ್ಟು ವರ್ಷ ಆಯಿತು. ಈಗ ಮುಂದಿನ ದಿನಗಳಲ್ಲಿ ಆದರೂ ಕನ್ನಡನಾಡಿಲ್ಲಿನ ಜನತೆಯ ಸಮಸ್ಯೆಗಳಿಗೆ ಪರಿಹಾರ ದೊರಕಬೇಕಿದೆ. ಹಲವಾರು ಸಮಸ್ಯೆಗಳಿಗೆ ಪರಿಹಾರದ ಭರವಸೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ, ಅಕಾಲಿಕ ಮಳೆಯ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದ ಜನರ ಕಷ್ಟಕ್ಕೆ ಕನಿಷ್ಠ ದನಿ ಎತ್ತದೆ ಇರುವುದು ಅವರ ನಡುವಳಿಕೆಯನ್ನು ಜನತೆ ಗಮನಿಸಬೇಕಿದೆ. ಚುನಾವಣೆ ಸಂದರ್ಭದಲ್ಲಿ ಆದರೂ ನಾಡಿಗೆ ಮುಂದೆ ಏನು ಕೊಡುತ್ತೇವೆ. ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವ ಕುರಿತು ಇವರು ಪ್ರಾಧಾನ್ಯತೆ ನೀಡುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಯವರು ಬಂದು ಕರ್ನಾಟಕದಲ್ಲಿದ್ದ ಕಾಂಗ್ರೆಸ್ ಸರ್ಕಾರ 85 ಪರ್ಸೆಂಟ್ ಕಮಿಷನ್ ಸರ್ಕಾರ ಎಂದಿದ್ದಾರೆ. ಇದಕ್ಕೆ ಕಾರಣ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಈ ಹಿಂದೆ ದೇಶದಲ್ಲಿ ಸರ್ಕಾರಗಳು ಹಂಚಿಕೆ ಮಾಡುವ ಅನುದಾನದಲ್ಲಿ 100 ರೂಪಾಯಿಗೆ 15 ರೂಪಾಯಿ ಮಾತ್ರ ವೆಚ್ಚ ಮಾಡುತ್ತಾರೆ. ಉಳಿದ 85 ರೂ.ಗಳನ್ನು ಮಧ್ಯವರ್ತಿಗಳು ತಿಂದು ಹಾಕುತ್ತಾರೆ ಎಂಬುದನ್ನು ಉದಾಹರಣೆ ಕೊಟ್ಟು ಆರೋಪ ಮಾಡುತ್ತಾ ಹೊರಟಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ ಪಕ್ಷದವರು ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಎಂದು ಹೇಳಿಕೊಂಡು ಹೊರಟಿದ್ದಾರೆ. ಅವರ ಮೇಲೆ ಇವರು, ಇವರ ಮೇಲೆ ಇವರು ಆರೋಪಿಸುತ್ತಾರೆಯೇ ಹೊರತು ಪರ್ಸೆಂಟ್ ಅವ್ಯವಹಾರ ನಿಲ್ಲಿಸುತ್ತೇವೆ ಎನ್ನುತ್ತಿಲ್ಲ ಎಂದು ದೂರಿದ್ದಾರೆ.

ನಾಡಿನ ಜನರ ತೆರಿಗೆ ಹಣವನ್ನು ಗುಣಾತ್ಮಕವಾಗಿ ಕೆಲಸಕ್ಕೆ ಬಳಸುತ್ತೇವೆ ಎಂದು ಚರ್ಚಿಸದೆ. ಕಾಂಗ್ರೆಸ್ ನವರು ಬಿಜೆಪಿ ನಾಯಕರ ವಿಷ ಸರ್ಪ ಎನ್ನುತ್ತಾರೆ. ಬಿಜೆಪಿಯವರು ಕಾಂಗ್ರೆಸ್ ಮುಖಂಡರ ಕುರಿತು ವಿಷಕನ್ಯೆ ಎನ್ನುತ್ತಾರೆ. ನಮಗೆ ವಿಷ ಸರ್ಪ ಕಟ್ಕೊಂಡ್ ಏನು, ವಿಷ ಕನ್ಯೆ ಕಟ್ಕೊಂಡ್ ಏನಾಗಬೇಕು. ಇಲ್ಲಿನ ನೇಕಾರರು, ರೈತರ ಬದುಕು, ನಿರುದ್ಯೋಗ ಸಮಸ್ಯೆ, ಲಕ್ಷಾಂತರ ಕುಟುಂಬಗಳ ಮನೆ ಇಲ್ಲದ ಸ್ಥಿತಿ. ಜೀವನ ನಿರ್ವಹಣೆ ಮಾಡಲಾಗದೆ ಹಲವಾರು ಕುಟುಂಬಗಳು ನೊಂದಿರುವ ಕುರಿತು ಇವರಿಗೆ ಚಿಂತನೆ ಇಲ್ಲವಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಚುನಾವಣೆಯಲ್ಲಿ ಜನತಾದಳ ಸರ್ಕಾರ ಸ್ಥಾಪನೆಯಾಗುವುದನ್ನು ತಡೆಯಲು ಕಾಂಗ್ರೆಸ್, ಬಿಜೆಪಿ‌ ಮುಖಂಡರಿಂದ ಸಾಧ್ಯವಿಲ್ಲ. ಕಳೆದ 5 ತಿಂಗಳ ಅವಧಿಯಲ್ಲಿ ಅನಾರೋಗ್ಯದ ನಡುವೆಯೂ ಇಡೀ ನಾಡನ್ನು ಸುತ್ತಿದ್ದೇನೆ ಜನರ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದ್ದಾರೆ.