BY Vijayendra: ವರುಣ ಕ್ಷೇತ್ರದಿಂದ ಅಲ್ಲ, ಶಿಕಾರಿಪುರದಿಂದಲ್ಲೇ ವಿಜಯೇಂದ್ರ ಸ್ಪರ್ಧೆ: ಬಿಎಸ್‌ ಯಡಿಯೂರಪ್ಪ
ಕನ್ನಡ ಸುದ್ದಿ  /  ಕರ್ನಾಟಕ  /  By Vijayendra: ವರುಣ ಕ್ಷೇತ್ರದಿಂದ ಅಲ್ಲ, ಶಿಕಾರಿಪುರದಿಂದಲ್ಲೇ ವಿಜಯೇಂದ್ರ ಸ್ಪರ್ಧೆ: ಬಿಎಸ್‌ ಯಡಿಯೂರಪ್ಪ

BY Vijayendra: ವರುಣ ಕ್ಷೇತ್ರದಿಂದ ಅಲ್ಲ, ಶಿಕಾರಿಪುರದಿಂದಲ್ಲೇ ವಿಜಯೇಂದ್ರ ಸ್ಪರ್ಧೆ: ಬಿಎಸ್‌ ಯಡಿಯೂರಪ್ಪ

ಬಿವೈ ವಿಜಯೇಂದ್ರ ಅವರು ನನ್ನ ಕ್ಷೇತ್ರವಾದ ಶಿಕಾರಿಪುರದಿಂದಲೇ ಸ್ಪರ್ಧೆ ನಡೆಸಲಿದ್ದಾರೆ. ಹೀಗಾಗಿ, ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇಳುವ ಪ್ರಶ್ನೆ ಉದ್ಭವಿಸದು ಎಂದು ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.

BY Vijayendra: ವರುಣ ಕ್ಷೇತ್ರದಿಂದ ಅಲ್ಲ, ಶಿಕಾರಿಪುರದಿಂದಲ್ಲೇ ವಿಜಯೇಂದ್ರ ಸ್ಪರ್ಧೆ: ಬಿಎಸ್‌ ಯಡಿಯೂರಪ್ಪ ANI Photo)
BY Vijayendra: ವರುಣ ಕ್ಷೇತ್ರದಿಂದ ಅಲ್ಲ, ಶಿಕಾರಿಪುರದಿಂದಲ್ಲೇ ವಿಜಯೇಂದ್ರ ಸ್ಪರ್ಧೆ: ಬಿಎಸ್‌ ಯಡಿಯೂರಪ್ಪ ANI Photo) (ANI Picture Service/ Om Prakash )

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸಲು ವರುಣಾ ಕ್ಷೇತ್ರದಲ್ಲಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎನ್ನುವ ವದಂತಿಯನ್ನು ಬಿಎಸ್‌ವೈ ತಳ್ಳಿಹಾಕಿದ್ದಾರೆ. ವಿಜಯೇಂದ್ರ ಅವರು ಶಿಕಾರಿಪುರದಿಂದಲೇ ಚುನಾವಣೆ ಎದುರಿಸಲಿದ್ದು, ವರುಣದಿಂದ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸದು ಎಂದಿದ್ದಾರೆ.

ಬಿವೈ ವಿಜಯೇಂದ್ರ ಅವರು ನನ್ನ ಕ್ಷೇತ್ರವಾದ ಶಿಕಾರಿಪುರದಿಂದಲೇ ಸ್ಪರ್ಧೆ ನಡೆಸಲಿದ್ದಾರೆ. ಹೀಗಾಗಿ, ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇಳುವ ಪ್ರಶ್ನೆ ಉದ್ಭವಿಸದು ಎಂದು ಅವರು ಹೇಳಿದ್ದಾರೆ.

ಈ ಹಿಂದಿನ ವಿಧಾನಸಭೆ ಚುನಾವಣಾ ವೇಳೆಯಲ್ಲಿ ವರುಣಾದಲ್ಲಿ ವಿಜಯೇಂದ್ರ ಅವರು ಬಿರುಸಿನ ಪ್ರಚಾರ ನಡೆಸಿದ್ದರು. ಅಲ್ಲಿ ಅವರಿಗೆ ಟಿಕೆಟ್‌ ಗ್ಯಾರಂಟಿ ಎನ್ನುವಂತಹ ಸ್ಥಿತಿ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ಕ್ಷೇತ್ರವನ್ನು ಬಿಡಬೇಕಾಗಿ ಬಂದಿತ್ತು. ಇವರು ಆ ಕ್ಷೇತ್ರದಲ್ಲಿ ನಿಲ್ಲುವುದಕ್ಕೆ ಬಿಜೆಪಿಯಿಂದಲೇ ಅಪಸ್ವರಗಳು ಉಂಟಾಗಿದ್ದವು.

ಆದರೆ, ಈ ಬಾರಿ ಸಿದ್ದರಾಮಯ್ಯನವರಿಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಲು ವರುಣಾ ಕ್ಷೇತ್ರದಲ್ಲಿ ಬಿವೈ ವಿಜಯೇಂದ್ರ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಬಿಎಸ್‌ ಯಡಿಯೂರಪ್ಪ ಇಂತಹ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

"ಬಿಜೆಪಿಗೆ ಸ್ವಂತ ಬಲವಿದೆ. ಭಾರತೀಯ ಜನತಾ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುವೆ" ಎಂದು ವಿಜಯೇಂದ್ರ ಹೇಳಿದ್ದರು. ಈ ಹೇಳಿಕೆಗೆ ಬಿಎಸ್‌ವೈ ಪ್ರತಿಕ್ರಿಯೆ ನೀಡಿದ್ದಾರೆ. "ವಿಜಯೇಂದ್ರ ಹೇಳಿಕೆ ಸರಿಯಾಗಿದೆ. ಅವರು ಶಿಕಾರಿಪುರದಿಂದ ಸ್ಪರ್ಧಿಸಬೇಕು ಎಂದು ಹೇಳುತ್ತಿದ್ದೇನೆ. ಈ ಕುರಿತು ಪಕ್ಷದ ವರಿಷ್ಠರಿಗೆ ತಿಳಿಸುವೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.

ಶಿಕಾರಿಪುರವು ಬಿಎಸ್‌ ಯಡಿಯೂರಪ್ಪ ಅವರ ಕ್ಷೇತ್ರವಾಗಿದ್ದು, ಅವರು ರಾಜಕೀಯ ನಿವೃತ್ತಿ ಘೋಷಿಸಿರುವುದರಿಂದ ಅದೇ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸುವುದನ್ನು ಅವರು ಬಯಸುತ್ತಿದ್ದಾರೆ. ಇದೇ ವೇಳೆ ಎರಡು ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ಆದರೆ, ನಿನ್ನೆ ಯಡಿಯೂರಪ್ಪನವರು ಬೇರೆಯೇ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ವರುಣಾದಲ್ಲಿ ಸಿದ್ದರಾಮಯ್ಯನವರ ವಿರುದ್ಧದ ಸ್ಪರ್ಧೆಯು ಹೈವೋಲ್ಟೇಜ್‌ ಹೋರಾಟದ ಕಣವಾಗಲಿದೆ ಎಂದಿದ್ದರು. ಈ ಮೂಲಕ ವಿಜಯೇಂದ್ರ ಅಲ್ಲಿ ಸ್ಪರ್ಧಿಸುವ ಸೂಚನೆ ನೀಡಿದ್ದರು.

"ವರುಣಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದ ಬಳಿಕ ಬಿಎಸ್ ವೈ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ವರುಣಾದಲ್ಲಿ ನಾವು ಖಂಡಿತವಾಗಿ ಪ್ರಬಲವಾದ ಪೈಪೋಟಿ ನೀಡುತ್ತೇವೆ. ವಿಜಯೇಂದ್ರ ಅವರು ಸ್ಪರ್ಧೆ ಮಾಡಬೇಕು ಎಂದು ಜನರ ಅಭಿಪ್ರಾಯವಿದೆ. ಅಂತಿಮವಾಗಿ ಎಲ್ಲಿ‌ ನಿಲ್ಲಬೇಕು ಎಂಬುದನ್ನ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳಲಿದ್ದಾರೆ" ಎಂದು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಹೇಳಿದ್ದರು.

"ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. 2013 ರಲ್ಲಿ ಕೊನೆ ಚುನಾವಣೆ ಎಂದರು. 2018 ರಲ್ಲಿ ಮತ್ತೆ ಸ್ಪರ್ಧಿಸಿದರು. ಈಗ ಪುನಃ ಕನಸು ಕಾಣುತ್ತಿದ್ದಾರೆ. ವ್ಯಕ್ತಿಯೊಬ್ಬರು ಮುಖ್ಯ ಮಂತ್ರಿಯಾಗುವುದು ಮುಖ್ಯ ವಲ್ಲ. ಮುಖ್ಯ ಮಂತ್ರಿಯಾಗಿ ರಾಜ್ಯದ ಜನಕ್ಕೇನು ಮಾಡಬಲ್ಲರು ಎನ್ನುವುದು ಮುಖ್ಯ ಎಂದರು. 2018 ರಲ್ಲಿ ಜನ ತಿರಸ್ಕರಿಸಿದ್ದಾರೆ ಈ ಬಾರಿಯೂ ತಿರಸ್ಕರಿಸಲಿದ್ದಾರೆ" ಎಂದು ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ದೇವಾಲಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

Whats_app_banner