ಕನ್ನಡ ಸುದ್ದಿ  /  Karnataka  /  Karnataka Elections: Former Mla Mallikarjun Khuba Left Bjp And Returned To Jds

Karnataka Elections: ಬಿಜೆಪಿ ಬಿಟ್ಟು ಜೆಡಿಎಸ್‌ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ

ಇದೀಗ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತೆ ಜೆಡಿಎಸ್‌ಗೆ ಮರಳಿದ್ದಾರೆ. ಮಲ್ಲಿಕಾರ್ಜುನ ಖೂಬಾ ಅವರು ಇಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಮರಳಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Karnataka Elections: ಬಿಜೆಪಿ ಬಿಟ್ಟು ಜೆಡಿಎಸ್‌ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ
Karnataka Elections: ಬಿಜೆಪಿ ಬಿಟ್ಟು ಜೆಡಿಎಸ್‌ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ

ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ವಿವಿಧ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ನೆಗೆಯುತ್ತಿದ್ದು, ಹೊಸ ಅವಕಾಶಗಳ ಹುಡುಕಾಟದಲ್ಲಿದ್ದಾರೆ. ಕರ್ನಾಟಕ ಜಾತ್ಯಾತೀತ ಜನತಾ ದಳಕ್ಕೂ ಈಗಾಗಲೇ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಹಲವು ಮುಖಂಡರು ವಲಸೆ ಬಂದಿದ್ದು, ಇದೀಗ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತೆ ಜೆಡಿಎಸ್‌ಗೆ ಮರಳಿದ್ದಾರೆ.

ಮಲ್ಲಿಕಾರ್ಜುನ ಖೂಬಾ ಅವರು ಇಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಮರಳಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಜೆಡಿಎಸ್ ಪಕ್ಷದ ಶಾಲು ಹಾಕುವ ಮೂಲಕ ಮಾಜಿ ಮುಖ್ಯಮಂತ್ರಿಗಳು ಖೂಬಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಶುಭ ಸಮಯ ಇದ್ದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾಗಿ ಖೂಬಾ ಅವರು ತಿಳಿಸಿದ್ದಾರೆ.

ಜೆಡಿಎಸ್ ಪಕ್ಷದಿಂದ ಬಸವ ಕಲ್ಯಾಣ ಕ್ಷೇತ್ರವನ್ನು ಮಲ್ಲಿಕಾರ್ಜುನ ಖೂಬಾ ಅವರು ಎರಡು ಅವಧಿಗೆ ಪ್ರತಿನಿಧಿಸಿದ್ದರು. ಬಳಿಕ ಬಿಜೆಪಿ ಪಕ್ಷಕ್ಕೆ ಸೇರಿದ್ದರು. ಬಿಜೆಪಿ ಬಿಟ್ಟು ಜೆಡಿಎಸ್‌ ಸೇರುವುದಾಗಿ ಈ ಹಿಂದೆಯೇ ಅವರು ಘೋಷಿಸಿದ್ದರು.

"ಖೂಬಾ ಅವರು ಜೆಡಿಎಸ್ ಪಕ್ಷದಲ್ಲಿಯೇ ಇದ್ದವರು. ಕಾರಣಾಂತರಗಳಿಂದ ಅವರು ಪಕ್ಷ ಬಿಟ್ಟಿದ್ದರು. ಈಗ ಮರಳಿ ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಒಳ್ಳೆಯ ಸಮಯ ಇದೆ ಎನ್ನುವ ಕಾರಣಕ್ಕೆ ಬಂದು ಪಕ್ಷಕ್ಕೆ ಸೇರಿದರು. ಶೀಘ್ರದಲ್ಲಿಯೇ ಅವರು ಪಕ್ಷದ ರಾಜ್ಯದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಷೆಂಪೂರ್ ಮತ್ತಿತರೆ ಹಿರಿಯ ನಾಯಕರ ಸಮಕ್ಷಮದಲ್ಲಿ ತಮ್ಮ ಬೆಂಬಲಿಗರ ಜತೆ ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಳ್ಳಲಿದ್ದಾರೆ" ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖೂಬಾ ಅವರು 2018 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಲ್ಯಾಣದಿಂದ‌ ಸ್ಪರ್ಧೆ ಮಾಡಿ ಕಾಂಗ್ರೆಸ್​ ಬಿ.ನಾರಾಯಣ್ ರಾವ್ ವಿರುದ್ಧ ಸೋತಿದ್ದರು. ನಾರಾಯಣ್ ರಾವ್ ಅವರ ಅಕಾಲಿಕ ನಿಧನದಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಆದರೆ ಬಿಜೆಪಿ ಕಲಬುರಗಿ ಶರಣು ಸಲಗರ ಅವರಿಗೆ ಟಿಕೆಟ್ ನೀಡಿತ್ತು. ಶರಣು ಸಲಗರ ಗೆದ್ದು ಬಸವಕಲ್ಯಾಣದಲ್ಲಿ ಕಮಲ ವಿಜಯ ಪತಾಕೆ ಹಾರಿಸಿದ್ದರು.

"2018ರ ವಿಧಾನಸಭೆ ಚುನಾವಣೆಗೂ ಮುನ್ನು ನಾನು ಜೆಡಿಎಸ್ ಪಕ್ಷದ ಶಾಸಕನಾಗಿದ್ದೆ. ಬಿಜೆಪಿಯಿಂದ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದ ಕಾರಣ ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾದೆ. 2018ರ ನನಗೆ ಟಿಕೆಟ್ ನೀಡಿದರೂ ಸಹ ಪಕ್ಷದ ವರಿಷ್ಠರು ಹಾಗೂ ಸ್ಥಳೀಯ ಮುಖಂಡರು ಬೆಂಬಲ ನೀಡಲಿಲ್ಲ" ಎಂದು ಕೆಲವು ತಿಂಗಳ ಹಿಂದೆ ಖೂಬಾ ಹೇಳಿದ್ದರು. ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. 2021ರಲ್ಲಿ ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದರೂ ನಾನು ಬಿಜೆಪಿಯಲ್ಲಿಯೇ ಇದ್ದೇನೆ ಎಂದು ಇವರು ಹೇಳುತ್ತಿದ್ದರು.

ಚುನಾವಣಾ ಕಾಲದ ಮಹಾವಲಸೆ

- ಮೊನ್ನೆಯಷ್ಟೆ ಗುಬ್ಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜೆಡಿಎಸ್ ಮುಖಂಡ ಎಸ್.ಆರ್. ಶ್ರೀನಿವಾಸ್ (ಗುಬ್ಬಿ ಶ್ರೀನಿವಾಸ್) ತಮ್ಮ ಮಾತಿನಂತೆ ನಿನ್ನೆ ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಮೂಡಿಗೆರೆ ಪುರಸಭೆಯ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡರಾದ ಹಾಲಪ್ಪ ಮತ್ತು ಮಂಡ್ಯದ ಬಿಜೆಪಿ ನಾಯಕ ಸತ್ಯಾನಂದ ಅವರೂ ಕೂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

- ಕೆಲವು ದಿನಗಳ ಹಿಂದೆ ಶಿಗ್ಗಾಂವಿ ಕ್ಷೇತ್ರದ ಮಾಜಿ ಸಂಸದ ಮಂಜುನಾಥ್‌ ಕುನ್ನೂರು, ಅವರ ಪುತ್ರ ರಾಜು ಕುನ್ನೂರು, ಚಿಂತಾಮಣಿಯ ನಾಯಕರಾದ ಎಂ.ಸಿ. ಸುಧಾಕರ್ ಹಾಗೂ ಕೆ.ಆರ್ ಪೇಟೆ ಕ್ಷೇತ್ರದ ಜೆಡಿಎಸ್​ ನಾಯಕ ಶ್ರೀ ಬಿ.ಎಲ್ ದೇವರಾಜು ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ.

- ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ್ ಹಾಗೂ ಕೋಲಾರದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮತ್ತು ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್‍ಗೌಡ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ವೀರಭದ್ರಪ್ಪ ಹಾಲರವಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರೆ. ಎಸ್.ಎಲ್. ಘೋಟ್ನೇಕರ್ ಮತ್ತು ವಡಗೂರು ಹರೀಶ್‍ಗೌಡ ಅವರು ಕಾಂಗ್ರೆಸ್ ಪಕ್ಷ ಗುಡ್ ಬೈ ಹೇಳಿ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

- 2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದ 'ಆಪರೇಷನ್ ಕಮಲ'ದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರು ಎಂದು ಆರೋಪಿಸಲಾದ ಉದ್ಯಮಿ ಕಡಲೂರು ಉದಯ್ ಗೌಡ ಮಾರ್ಚ್ 13ರಂದು ಕಾಂಗ್ರೆಸ್ ಸೇರಿದ್ದರು.

ಇವು ಇತ್ತೀಚೆಗೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಸೇರಿದ ಕೆಲವರ ಹೆಸರಾಗಿದ್ದು, ಇದೇ ರೀತಿ ಅನೇಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ವಲಸೆ ಹೋಗಿದ್ದಾರೆ.

IPL_Entry_Point