Congress Manifesto: ಖಾಲಿ ಹುದ್ದೆಗಳ ಭರ್ತಿ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಸೇರಿ ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳಿವು
ಕನ್ನಡ ಸುದ್ದಿ  /  ಕರ್ನಾಟಕ  /  Congress Manifesto: ಖಾಲಿ ಹುದ್ದೆಗಳ ಭರ್ತಿ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಸೇರಿ ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳಿವು

Congress Manifesto: ಖಾಲಿ ಹುದ್ದೆಗಳ ಭರ್ತಿ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಸೇರಿ ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳಿವು

ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಠಿಣ ಕ್ರಮ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Assembly Elections) ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ (Congress) ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಇದೀಗ ತನ್ನ ಪ್ರಣಾಳಿಕೆಯಲ್ಲಿ ಹತ್ತು ಹಲವು ಭರವಸೆಗಳನ್ನು ನೀಡಿದೆ.

‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಎಂಬ ಕಾಂಗ್ರೆಸ್ ಪ್ರಣಾಳಿಕೆಯನ್ನು (Congress Manifesto) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ನಗರದಲ್ಲಿಂದು ಬಿಡುಗಡೆ ಮಾಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಡಾ.ಜಿ. ಪರಮೇಶ್ವರ್, ಮಾಜಿ ಸಚಿವೆ ರಾಣಿ ಸತೀಶ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ, ವಕ್ತಾರ ಗೌರವ್ ವಲ್ಲಭ್, ಪ್ರೊ. ರಾಜೀವ್ ಗೌಡ, ಪ್ರೊ ಕೆ ರಾಧಾಕೃಷ್ಣ, ಮತ್ತಿತರರು ಉಪಸ್ಥಿತರಿದ್ದರು.

ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ಪ್ರಮಾಣ ಸಂಕೇತವಾಗಿ ಪ್ರಣಾಳಿಕೆ ಹೊತ್ತಿಗೆಗೆ ಅರಿಶಿನ-ಕುಂಕುಮ ಹಚ್ಚಿ, ವೀಳ್ಯದೆಲೆ ಅಡಿಕೆ ಇಟ್ಟು ಸಾಂಪ್ರದಾಯಿಕವಾಗಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ

  • ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ಕಠಿಣ ನಿಯಮಗಳು ಜಾರಿ, ನಿಯಂತ್ರಣ ಕ್ರಮಗಳ ಪಾರದರ್ಶಕತೆ ಹಾಗೂ ಲೋಕಾಯುಕ್ತದ ಬಲವರ್ಧನೆ
  • ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಅನುಮೋದಿತ ಹುದ್ದೆಗಳನ್ನು 1 ವರ್ಷದಲ್ಲಿ ಭರ್ತಿ ಮಾಡುವುದು
  • 2006ರಿಂದ ನೇಮಕವಾದ, ಪಿಂಚಣಿಗೆ ಅರ್ಹತೆಯುಳ್ಳ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ನಿರ್ಧಾರ
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಕಳೆದ 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಕಾಯಂಗೊಳಿಸುವ ಪ್ರಕ್ರಿಯೆ ಜಾರಿ
  • ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರೂಪಾಯಿಯಿಂದ 15,000 ರೂಪಾಯಿಗೆ ಹೆಚ್ಚಳ
  • ಮಿನಿ ಅಂಗನವಾಡಿ ಕಾರ್ಯಕತೆಯರ ವೇತನ 7,500 ರೂಪಾಯಿಯಿಂದ 10,000 ರೂ.ಗೆ ಹೆಚ್ಚಳ
  • ಆಶಾ ಕಾರ್ಯಕರ್ತೆಯರಿಗೆ ಮಾಸಿಕ ನಿಶ್ಛಿತ ಗೌರವಧನ 5,000 ರೂ.ನಿಂದ 8,000 ರೂ.ಹೆಚ್ಚಳ
  • ಬಿಸಿಯೂಟದ ಅಡಿಗೆಯವರಿಗೆ ಮಾಸಿಕ ಗೌರವಧನ 3,600 ರೂಪಾಯಿಯಿಂದ 6,000 ರೂಪಾಯಿಗೆ ಹೆಚ್ಚಳ

ನಮ್ಮ ಹಳ್ಳಿ-ನಮ್ಮ ಸೌಲಭ್ಯ

  • ಹಳ್ಳಿಗಳಲ್ಲಿ ಸಾರ್ವಜನಿಕ ಸೌಲಭ್ಯ ಸುಧಾರಣೆ, ಎಲ್ಲಾ ಮನಗಳಿಗೂ ಶುದ್ಧ ಕುಡಿಯುವ ನೀರು, ಶೌಚಾಲಯ, ಮೂಲ ಶಿಕ್ಷಣ, ಆರೋಗ್ಯ, ಸರ್ವ ಋತು ರಸ್ತೆಗಳಿಗಾಗಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಯೋಜನೆಗೆ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ಹೂಡಿಕೆ
  • ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಹೈಸ್ಪೀಡ್ ವೈಫೈ ಹಾಟ್‌ಸ್ಪಾಟ್ ಸ್ಥಾಪನೆ

ನಗರಾಭಿವೃದ್ಧಿ

  • ಬೆಂಗಳೂರಿನ ಟೆಂಡರ್‌ಶ್ಯೂರ್ ರಸ್ತೆ ಮಾದರಿ 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರವ ನಗರಗಳಿಗೆ ವಿಸ್ತರಣೆ
  • ಬಹುಮಹಡಿ ಸಂಕೀರ್ಣಗಳ ಮಾಲೀಕರಿಗೆ ಆಸ್ತಿ ವರ್ಗಾವಣೆ ಒದಗಿಸುವ ಸಲುವಾಗಿ 1972ರ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲಿಕತ್ವ ಕಾಯ್ದೆಗೆ ತಿದ್ದುಪಡಿ
  • ಸ್ಲಂ ಪ್ರದೇಶಗಳಿಗೆ ಶ್ರಮಿಕ ನಿವಾಸ ಪ್ರದೇಶ ಎನ್ನುವ ನಾಮಕರಣ ಮತ್ತು ವಸತಿ ಯೋಜನೆ, ವಸತಿ ಮತ್ತು ನಿವೇಶನಗಳ ಹಕ್ಕುಪತ್ರ ವಿತರಣೆ
  • ವಸತಿ ಸಮುಚ್ಚಯಗಳ ಸಂಕೀರ್ಣಗಳ ಮನೆ ಮಾಲೀಕರ ಸಂಘಗಳಿಗೆ ರಕ್ಷಣೆ ಮತ್ತು ನಿಯಾಮಾವಳಿ ರಚಿಸಲು ಕಾನೂನಿನ ಮಾರ್ಪಾಟು ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ

ಇದನ್ನೂ ಓದಿ: ಕರ್ನಾಟಕ ಚುನಾವಣೆ ರಾಲಿಯಲ್ಲಿ ಮಂಗಳೂರಲ್ಲಿ 5ನೇ ಗ್ಯಾರೆಂಟಿ ಘೋಷಿಸಿದ ರಾಹುಲ್‌; ಲೇವಡಿ ಮಾಡಿದ ನಳಿನ್‌ ಕುಮಾರ್‌ ಕಟೀಲ್‌

Whats_app_banner