ಒಂದೇ ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟ, 20 ಲಕ್ಷ ಅರ್ಜಿ ನಿರ್ವಹಣೆ, 6,052 ಮಂದಿ ನೇಮಕಾತಿ ಪ್ರಕ್ರಿಯೆ: ಕೆಇಎ ಸಾಧನೆ
ಕನ್ನಡ ಸುದ್ದಿ  /  ಕರ್ನಾಟಕ  /  ಒಂದೇ ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟ, 20 ಲಕ್ಷ ಅರ್ಜಿ ನಿರ್ವಹಣೆ, 6,052 ಮಂದಿ ನೇಮಕಾತಿ ಪ್ರಕ್ರಿಯೆ: ಕೆಇಎ ಸಾಧನೆ

ಒಂದೇ ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟ, 20 ಲಕ್ಷ ಅರ್ಜಿ ನಿರ್ವಹಣೆ, 6,052 ಮಂದಿ ನೇಮಕಾತಿ ಪ್ರಕ್ರಿಯೆ: ಕೆಇಎ ಸಾಧನೆ

2024ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಜತೆಗೆ ಇತರೆ ಪ್ರವೇಶ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಗಳ ಕುರಿತು ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಗಳ ಕುರಿತು ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024ನೇ ಸಾಲಿನಲ್ಲಿ ಎರಡು ಪಿಎಸ್‌ಐ, ಕೆ-ಸೆಟ್‌ ಸೇರಿದಂತೆ ಒಟ್ಟು 17 ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, 6,052 ಮಂದಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಪ್ರಾಧಿಕಾರವು ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ, ಸೀಟು ಹಂಚಿಕೆ, ಪ್ರವೇಶ ಪ್ರಕ್ರಿಯೆ ಇತ್ಯಾದಿಗಳನ್ನು ಎಂದಿನಂತೆ ನಿರ್ವಹಿಸುತ್ತಿದೆ. ಇವುಗಳ ಜತೆಗೆ ಸರ್ಕಾರದ ನಾನಾ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ಕೂಡ ನಿಭಾಯಿಸಲಾಗುತ್ತಿದೆ. ಈ ಮೂಲಕ ಕಳೆದೊಂದು ವರ್ಷದಲ್ಲಿ 20 ಲಕ್ಷಕ್ಕೂ ಅರ್ಜಿಗಳನ್ನು ನಿರ್ವಹಿಸಲಾಗಿದೆ. ಪ್ರಾಧಿಕಾರದ ಮೂರು ದಶಕಗಳಿಗೂ ಹೆಚ್ಚಿನ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದೆ. ಒಂದೇ ವರ್ಷದಲ್ಲಿ ಇಷ್ಟೊಂದು ಪರೀಕ್ಷೆಗಳನ್ನು ನಡೆಸಿದ್ದು ಮತ್ತು ಅದೇ ವರ್ಷದಲ್ಲೇ ಅವುಗಳ ಫಲಿತಾಂಶ ಕೂಡ ಕೊಟ್ಟಿದ್ದು ಒಂದು ರೀತಿ ದಾಖಲೆ. ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಿದ್ದು ಇದೇ ಮೊದಲು.

ವರ್ಷದಲ್ಲಿ ನಿರಂತರ ಪರೀಕ್ಷೆ

ವರ್ಷದ ಸಾಧನೆ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ, ತೀವ್ರ ಕುತೂಹಲ ಕೆರಳಿಸಿದ್ದ 947 ಹುದ್ದೆಗಳ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯನ್ನು ಎರಡು ಹಂತದಲ್ಲಿ (ಒಮ್ಮೆ 545, ಮತ್ತೊಮ್ಮೆ 402 ಹುದ್ದೆ) ಮಾಡಲಾಯಿತು. ಬ್ಲೂ ಟೂತ್‌ ಸೇರಿದಂತೆ ಇತರ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ, ಪರೀಕ್ಷಾ ಅಕ್ರಮ ಎಸಗಲು ಪ್ರಯತ್ನಿಸುವ ಸುಳಿವು ಅರಿತು, ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆಗಳನ್ನು ನಡೆಸಿದ್ದು ಕೂಡ ಈ ವರ್ಷದ ವಿಶೇಷ ಎಂದು ಅವರು ವಿವರಿಸಿದ್ದಾರೆ.

ಇದರ ಒಂದು ಭಾಗವಾಗಿ ಪ್ರತಿಯೊಂದು ಪರೀಕ್ಷಾ ಕೊಠಡಿಗಳ ಮೇಲೆ ನಿಗಾ ಇಡಲು ವೆಬ್‌ ಕಾಸ್ಟಿಂಗ್‌ ಮಾಡಲಾಯಿತು. ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಕುಳಿತು ಇಡೀ ರಾಜ್ಯದ ಪರೀಕ್ಷಾ ಕೇಂದ್ರಗಳ ಮೇಲೆ ನಿಯಂತ್ರಣ ಸಾಧಿಸಲಾಯಿತು. ಎಲ್ಲೇ ತಪ್ಪಾದರೂ ತಕ್ಷಣ ಎಚ್ಚರಿಸುವ ವ್ಯವಸ್ಥೆ ಇದಾಗಿದ್ದ ಕಾರಣ ಅಕ್ರಮಗಳಿಗೆ ಅವಕಾಶವೇ ಇಲ್ಲದಂತೆ ನೋಡಿಕೊಳ್ಳಲಾಯಿತು.2024ರಲ್ಲಿ ಅಧಿಸೂಚನೆ ಹೊರಡಿಸಿದ್ದಲ್ಲದೆ, 2022 ಮತ್ತು 2023ರಲ್ಲಿ ಅಧಿಸೂಚನೆ ಹೊರಡಿಸಿದ್ದ ಪರೀಕ್ಷೆಗಳನ್ನೂ ಈ ವರ್ಷದಲ್ಲಿ ಪೂರ್ಣಗೊಳಿಸಿದ ತೃಪ್ತಿ ಇದೆ. ಈ ಮೂಲಕ ಕೆಇಎ ಮುಂದೆ ಇದ್ದ ಬಹುತೇಕ ಎಲ್ಲ ನೇಮಕಾತಿ ಪರೀಕ್ಷೆಗಳು ಮುಗಿದಿವೆ ಎನ್ನುವುದು ಅವರ ವಿವರಣೆ.

ಕೆ-ಸೆಟ್‌ನಿಂದ ಕಿಯೋನಿಕ್ಸ್ ತನಕ

ಪದವಿ ಕಾಲೇಜುಗಳ ಪ್ರಾಂಶುಪಾಲರು (300 ಹುದ್ದೆ), ಎಂಎಸ್‌ಐಎಲ್‌ (72), ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (386), ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (186) ಮತ್ತು ಕಿಯೋನಿಕ್ಸ್‌ (26) ಸಂಸ್ಥೆಗಳ ನೇಮಕಾತಿಗೆ 2022ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಪಿಎಸ್‌ಐ (545), ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಮಂಡಳಿ (14), ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (41), ಕರ್ನಾಟಕ ವಿದ್ಯುತ್‌ ನಿಗಮ (394)- ಈ ಸಂಸ್ಥೆಗಳ ಹುದ್ದೆಗಳಿಗೆ 2023ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಗಳಿಗೂ 2024ರಲ್ಲಿ ಪರೀಕ್ಷೆ ನಡೆಸಿ, ಮೆರಿಟ್‌ ಪಟ್ಟಿಯನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ರವಾನಿಸಲಾಗಿದೆ ಎಂಬುದು ಅವರ ವಿವರಣೆ.

2024ರಲ್ಲೇ ಅಧಿಸೂಚನೆ ಹೊರಡಿಸಿ, 2024ರಲ್ಲೇ ನೇಮಕಾತಿ ಪ್ರಕ್ರಿಯೆಯನ್ನು ಆರು ನಿಗಮ/ಇಲಾಖೆಗಳ ವಿವಿಧ ಹುದ್ದೆಗಳಿಗೆ ಮಾಡಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಬಿಎಂಟಿಸಿ 2,500 ನಿರ್ವಾಹಕರು, 402 ಪಿಎಸ್‌ಐ, 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು ಸೇರಿವೆ. ಇವುಗಳಲ್ಲದೆ 2023 ಮತ್ತು 2024ನೇ ಸಾಲಿನ ಕೆ-ಸೆಟ್‌ ಪರೀಕ್ಷೆಗಳನ್ನು ಕೂಡ ಯಶಸ್ವಿಯಾಗಿ ನಡೆಸಲಾಗಿದೆ. ಅಭ್ಯರ್ಥಿಗಳಿಗೆ 41 ವಿವಿಧ ವಿಷಯಗಳಲ್ಲಿ ಪರೀಕ್ಷೆ ನಡೆಸಿ, ಅರ್ಹರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಪ್ರಸಕ್ತ ಸಾಲಿನ ಅರ್ಹರಿಗೆ ಇನ್ನಷ್ಟೇ ಪ್ರಮಾಣ ಪತ್ರಗಳನ್ನು ನೀಡಬೇಕಾಗಿದೆ. 2024ನೇ ಸಾಲಿನ ಸಿಇಟಿ ಪರೀಕ್ಷೆ, ಸೀಟು ಹಂಚಿಕೆ ಇತ್ಯಾದಿ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಸಂಬಂಧ ಪ್ರಕ್ರಿಯೆಗಳಲ್ಲದೆ, ಇಷ್ಟೊಂದು ನೇಮಕಾತಿ ಪರೀಕ್ಷೆಗಳನ್ನು ನಡೆಸಿದ್ದು ಕೆಇಎ ಇತಿಹಾಸದಲ್ಲಿ ಇದೇ ಮೊದಲು. ವಸತಿ ಶಾಲೆಗಳ ಪ್ರವೇಶಕ್ಕೂ ಕೆಇಎ ಪರೀಕ್ಷೆ ನಡೆಸಿದೆ ಎನ್ನುತ್ತಾರೆ ಎಚ್‌. ಪ್ರಸನ್ನ.

ಐಎಎಸ್, ಕೆಎಎಸ್ ತರಬೇತಿಗೂ ಆಯ್ಕೆ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳು ಕ್ರಮವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಐಎಎಸ್/ಕೆಎಎಸ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೊಡುತ್ತಿದೆ. ಇದಕ್ಕೆ ಆಸಕ್ತ ಮತ್ತು ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೂಡ ಕೆಇಎ ಪರೀಕ್ಷೆ ನಡೆಸಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

Whats_app_banner