ಕನ್ನಡ ಸುದ್ದಿ  /  Karnataka  /  Karnataka First Yakshagana Sammelana In Udupi On February 11 And 12

Yakshagana Sammelana: ಬಲ್ಲಿರೇನಯ್ಯ, ಇದೇ ತಿಂಗಳು ನಡೆಯಲಿದೆ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ, ಎಲ್ಲಿ, ಯಾವಾಗ? ಇಲ್ಲಿದೆ ವಿವರ

Yakshagana Sammelana: ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನವು ಉಡುಪಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಎರಡು ದಿನದ ಸಮ್ಮೇಳನವನ್ನು ಆಯೋಜಿಸಿದೆ.

Yakshagana Sammelana: ಬಲ್ಲಿರೇನಯ್ಯ, ಇದೇ ತಿಂಗಳು ನಡೆಯಲಿದೆ ರಾಜ್ಯಮಟ್ಟದ ಸಮಗ್ರ ಯಕ್ಷಗಾನ
Yakshagana Sammelana: ಬಲ್ಲಿರೇನಯ್ಯ, ಇದೇ ತಿಂಗಳು ನಡೆಯಲಿದೆ ರಾಜ್ಯಮಟ್ಟದ ಸಮಗ್ರ ಯಕ್ಷಗಾನ (WIKIPEDIA)

ಉಡುಪಿ: ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನವು ಉಡುಪಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಎರಡು ದಿನದ ಸಮ್ಮೇಳನವನ್ನು ಆಯೋಜಿಸಿದೆ.

ಈ ಕುರಿತು ಕನ್ನಡ ಭವನದ ಅಂತರಂಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರು ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ ಜಿ ಎಲ್ ಹೆಗಡೆ ಅವರೊಂದಿಗೆ ಸಮ್ಮೇಳನದ ವಿವರಗಳನ್ನು ನೀಡಿದ್ದು, ಮುಖ್ಯಾಂಶಗಳನ್ನು ಈ ಮುಂದೆ ನೀಡಲಾಗಿದೆ.

ರಾಜ್ಯದ ಹೆಮ್ಮೆಯ ಕಲೆ ಯಕ್ಷಗಾನ. ಈ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ನಡೆಸಬೇಕೆಂಬ ಯಕ್ಷಗಾನಾಸಕ್ತರ ಕೋರಿಕೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು 2022-23ನೇ ಸಾಲಿನ ಆಯವ್ಯಯದಲ್ಲಿ ಉಡುಪಿಯಲ್ಲಿ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ನಡೆಸುವುದಾಗಿ ಘೋಷಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರೂ. 2 ಕೋಟಿ ಅನುದಾನವನ್ನು ಬಿಡುಗಡೆ ಮಾಡಿರುತ್ತದೆ.

ಸಮ್ಮೇಳನ ನಡೆಯುವಂತಹ ಸ್ಥಳ

ಈ ಸಮ್ಮೇಳನ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿರುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ಸಲಹಾ ಸಮಿತಿಯು ಸಮ್ಮೇಳನವನ್ನು ಉಡುಪಿಯ ಎ.ಎಲ್.ಎನ್.ರಾವ್ ಕ್ರೀಡಾಂಗಣ, ಎಂ.ಜಿ.ಎಂ. ಕುಂಜಿಬೆಟ್ಟು, ಇಲ್ಲಿ 2023ರ ಫೆಬ್ರವರಿ 11 ಮತ್ತು 12ರಂದು ೨೦೨೩ರ ಫೆಬ್ರವರಿ 11 ಮತ್ತು 12ರಂದು ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಅಧ್ಯಕ್ಷರು ಯಾರೆಂದು ಬಲ್ಲಿರೇನಯ್ಯ?

ಪ್ರಥಮ ಯಕ್ಷಗಾನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಕ್ಷಗಾನ ಕ್ಷೇತ್ರದ ಹಿರಿಯ ವಿದ್ವಾಂಸರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಂ.ಪ್ರಭಾಕರ ಜೋಷಿ ಇವರನ್ನು ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದ್ದು, ಸಮ್ಮೇಳನದ ಕಾರ್ಯಾಧ್ಯಕ್ಷರು ಹಾಗೂ ಸಲಹಾ ಸಮಿತಿಯ ಸದಸ್ಯರು ಶ್ರೀಯುತರ ಸ್ವಗೃಹಕ್ಕೆ ಭೇಟಿ ನೀಡಿ ಫಲ ತಾಂಬೂಲದೊಂದಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.

ಕಾರ್ಯಕ್ರಮದ ವಿವರ

ಫೆಬ್ರವರಿ 11ರಂದು ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರು ಹಾಗೂ ಗಣ್ಯರನ್ನು ಮೆರವಣಿಗೆಯೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಗುವುದು. ಬೆಳಿಗ್ಗೆ ೧೦.೩೦ಕ್ಕೆ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಮಾಡಲಿದ್ದಾರೆ. ಉಡುಪಿ ಜಿಲ್ಲಾ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಇವರು ಕಾರ್ಯಕ್ರಮದ “ಅಧ್ಯಕ್ಷತೆ”ಯನ್ನು ವಹಿಸಲಿದ್ದು, ಮಾನ್ಯ ವಿಧಾನಸಭಾ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಇವರು “ಪುಸ್ತಕ ಬಿಡುಗಡೆ”ಮಾಡಲಿದ್ದಾರೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಇವರು ಘನ ಉಪಸ್ಥಿತಿ ವಹಿಸಲಿದ್ದಾರೆ. ವಾಣಿಜ್ಯ ಮಳಿಗೆ ಉದ್ಘಾಟನೆಯನ್ನು ಶ್ರೀ ಎಸ್.ಅಂಗಾರ ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ಧ್ವಜಾರೋಹಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಕೆ ಜಯಪ್ರಕಾಶ್ ಹೆಗ್ಡೆ, ಶ್ರೀ ಬಿ ವೈ ರಾಘವೇಂದ್ರ, ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶ್ರೀ ಲಾಲಾಜಿ ಆರ್. ಮೆಂಡನ್, ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ, ಮುಂತಾದವರು ಭಾಗವಹಿಸಲಿದ್ದಾರೆ.

ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಇವರು ಯಕ್ಷಗಾನ ಚೌಕಿ ಉದ್ಘಾಟನೆ ಮಾಡಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಇವರು ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿರಿಯ ಯಕ್ಷಗಾನ ವಿದ್ವಾಂಸರು ಹಾಗೂ ಸಮ್ಮೇಳನಾಧ್ಯಕ್ಷರಾದ ಡಾ. ಎಂ. ಪ್ರಭಾಕರ ಜೋಷಿ ಅವರು ಸಮ್ಮೇಳನಾಧ್ಯಕ್ಷ ಪೀಠದಿಂದ ಮಾತನಾಡುವರು.

ಫೆಬ್ರವರಿ 12ರಂದು ಭಾನುವಾರ ಸಂಜೆ 5 ರಿಂದ ಸಮಾರೋಪ ಸಮಾರಂಭವನ್ನು ಆಯೋಜಿಸಿದ್ದು, ಈ ಸಮಾರಂಭದಲ್ಲಿ ಕಾಸರಗೋಡಿನ ಶ್ರೀ ಎಡನೀರು ಮಠದ ಶ್ರೀಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಲಿರುವರು.

ಮಾನ್ಯ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯಖಾತೆ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಶುಭಾಶಂಸನೆ ಮಾಡಲಿರುವರು. ಉಡುಪಿಯ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಅಧ್ಯಕ್ಷತೆ ವಹಿಸಲಿರುವರು. ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ.ಸುನಿಲ್ ಕುಮಾರ್ ಅವರು ಸಮ್ಮೇಳನಾಧ್ಯಕ್ಷರನ್ನು ಅಭಿನಂದಿಸಲಿರುವರು. ಮಂಗಳೂರಿನ ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಟೀಲು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಸಮ್ಮೇಳನಾಧ್ಯಕ್ಷರಾದ ಡಾ. ಎಂ. ಪ್ರಭಾಕರ ಜೋಷಿ, ಸಮ್ಮೇಳನಾಧ್ಯಕ್ಷರ ಧರ್ಮಪತ್ನಿಯಾದ ಶ್ರೀಮತಿ ಸುಚೇತಾ ಪ್ರಭಾಕರ ಜೋಷಿ, ಕಾರ್ಯಾಧ್ಯಕ್ಷರಾದ ಡಾ. ಜಿ.ಎಲ್.ಹೆಗಡೆ ಅವರು ಘನ ಉಪಸ್ಥಿತಿ ವಹಿಸಲಿರುವರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು, ಕೋಟದ ಗೀತಾನಂದ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪಕುಮಾರ ಕಲ್ಕೂರ, ಶ್ರೀ ಮಹಾಲಕ್ಷ್ಮಿ ಕೋ.ಆ. ಬ್ಯಾಂಕ್ನ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ, ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿಯಾದ ಡಾ. ಬಿ. ಜಗದೀಶ ಶೆಟ್ಟಿ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಶ್ರೀ ಎಂ.ಗಂಗಾಧರರಾವ್ ಅವರುಗಳು ಅಭ್ಯಾಗತರಾಗಿ ಉಪಸ್ಥಿತರಿರುವರು.

ಇನ್ನಷ್ಟು ವಿವರ

  • ಯಕ್ಷಗಾನದ ದಿಗ್ಗಜ ಕಲಾವಿದರಾದ ಮಲ್ಪೆ ಶಂಕರನಾರಾಯಣ ಸಾಮಗ, ಕೆರೆಮನೆ ಶಿವರಾಮ ಹೆಗಡೆ ಮತ್ತು ಅಳಿಕೆ ರಾಮಯ್ಯ ರೈ ಇವರ ಹೆಸರುಗಳಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ.
  • ಈ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅವಿರತವಾಗಿ ದುಡಿದ 75 ಹಿರಿಯ ಕಲಾವಿದರಿಗೆ ಸನ್ಮಾನವನ್ನು ಆಯೋಜಿಸಲಾಗಿದೆ.
  • 9 ಗೋಷ್ಠಿಗಳಲ್ಲಿ 150 ಜನ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ. 18 ಜನ ವಿವಿಧ ವಿಷಯಗಳ ಲೇಖನ ಮಂಡಿಸುತ್ತಾರೆ.
  • 200 ಕೀರ್ತಿಶೇಷ ಕಲಾವಿದರ ಭಾವಚಿತ್ರದ ಜೊತೆಗೆ ಕಿರುಪರಿಚಯದೊಂದಿಗೆ ಪ್ರದರ್ಶನ ಮಾಡಲಾಗುತ್ತದೆ.
  • ಸಮ್ಮೇಳನದಲ್ಲಿ ಹೊರದೇಶ / ಹೊರರಾಜ್ಯದ ತಂಡಗಳು ಸೇರಿದಂತೆ ಒಟ್ಟು 27 ಯಕ್ಷಗಾನ ಕಲಾತಂಡಗಳು ಪ್ರದರ್ಶನ ನೀಡಲಿವೆ. ಇದರಲ್ಲಿ 2 ಗೊಂಬೆಯಾಟ ಮತ್ತು 2 ತಾಳಮದ್ದಲೆಗಳು ಅಲ್ಲದೆ ತುಳು ಯಕ್ಷಗಾನ ಪ್ರದರ್ಶನವೂ ಸೇರಿವೆ.
  • ಸಮ್ಮೇಳನಕ್ಕೆ ಸರ್ಕಾರ ಒದಗಿಸಿರುವ ರೂ. 2 ಕೋಟಿ ಅನುದಾನವು ಜಿಲ್ಲಾಧಿಕಾರಿಗಳು, ಉಡುಪಿ ಇವರಿಗೆ ಬಿಡುಗಡೆಯಾಗಿರುತ್ತದೆ.
  • ಸಮ್ಮೇಳನದ ಪ್ರಚಾರದ ಸಂಬಂಧ ಎಲ್ಲಾ ಮೇಳದವರು ಈಗಾಗಲೇ ಪ್ರಚಾರ ನೀಡುತ್ತಿದ್ದಾರೆ. ಕಟೌಟ್ಗಳನ್ನು ಅಳವಡಿಸಲಾಗಿದೆ.
  • ಇದೇ ಸಂದರ್ಭದಲ್ಲಿ ಯಕ್ಷಗಾನ ಕುರಿತ 18 ಪುಸ್ತಕಗಳನ್ನು ಪ್ರಕಟಿಸುತ್ತಿದ್ದು, ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಈ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.