Karnataka Food: ಅಕ್ಕಿನುಚ್ಚು ಬೆರೆಸಿ ರಾಗಿ ಮುದ್ದೆ ಉಂಡವರ ಖುಷಿ; ರವಿಕೃಷ್ಣಾ ರೆಡ್ಡಿ ಆಹಾರ ಸಂಸ್ಕೃತಿ ಪೋಸ್ಟ್‌ಗೆ ಹೀಗಿತ್ತು ಪ್ರತಿಕ್ರಿಯೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Food: ಅಕ್ಕಿನುಚ್ಚು ಬೆರೆಸಿ ರಾಗಿ ಮುದ್ದೆ ಉಂಡವರ ಖುಷಿ; ರವಿಕೃಷ್ಣಾ ರೆಡ್ಡಿ ಆಹಾರ ಸಂಸ್ಕೃತಿ ಪೋಸ್ಟ್‌ಗೆ ಹೀಗಿತ್ತು ಪ್ರತಿಕ್ರಿಯೆ

Karnataka Food: ಅಕ್ಕಿನುಚ್ಚು ಬೆರೆಸಿ ರಾಗಿ ಮುದ್ದೆ ಉಂಡವರ ಖುಷಿ; ರವಿಕೃಷ್ಣಾ ರೆಡ್ಡಿ ಆಹಾರ ಸಂಸ್ಕೃತಿ ಪೋಸ್ಟ್‌ಗೆ ಹೀಗಿತ್ತು ಪ್ರತಿಕ್ರಿಯೆ

Karnataka Food: ರಾಗಿ ಮುದ್ದೆ ತಯಾರಿಸುವಾಗ ಅಕ್ಕಿ ನುಚ್ಚು ಹಾಕಿದರೆ ಅದರ ಸವಿ ಹೇಗಿರುತ್ತದೆ ಎನ್ನುವ ಕುರಿತು ರವಿಕೃಷ್ಣಾರೆಡ್ಡಿ ಅವರ ಊಟದ ಪೋಸ್ಟ್‌ ಒಂದು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ರಾಗಿ ಮುದ್ದೆ ತಯಾರಿಸುವ ಬಗೆ ಕುರಿತು ಚರ್ಚೆ ಜೋರಿದೆ.
ರಾಗಿ ಮುದ್ದೆ ತಯಾರಿಸುವ ಬಗೆ ಕುರಿತು ಚರ್ಚೆ ಜೋರಿದೆ.

Karnataka Food: ರಾಗಿ ಮುದ್ದೆ ಎಂದರೆ ಅದು ಕರ್ನಾಟಕದ ಆಹಾರದ ಸಂಸ್ಕೃತಿಯ ಭಾಗ. ದಕ್ಷಿಣ ಕರ್ನಾಟಕ ಮಾತ್ರವಲ್ಲದೇ ಕರ್ನಾಟಕದ ಹಲವು ಭಾಗದಲ್ಲೂ ಮುದ್ದೆ ಊಟದ ಸವಿ ಬಲ್ಲವನೇ ಬಲ್ಲ.ಮುದ್ದೆಯನ್ನು ಬಗೆಬಗೆಯಾಗಿ ನಮ್ಮಲ್ಲಿ ತಯಾರಿಸುವುದುಂಟು. ರಾಗಿ ಮುದ್ದೆ ದಕ್ಷಿಣ ಭಾರತ ಭಾಗದಲ್ಲಿ ಜನಪ್ರಿಯವಾದರೆ, ಇತರೆಡೆ ಜೋಳದ ಮುದ್ದೆಯೂ ಹೆಚ್ಚು ಬಳಕೆಯಲ್ಲಿದೆ. ರಾಗಿ ಮುದ್ದೆಯೊಂದಿಗೆ ಸೊಪ್ಪಿನ ಸಾರು, ಮುದ್ದೆಗೆ ಅಕ್ಕಿನುಚ್ಚು ಬಳಸುವುದು ಅಲ್ಲಲ್ಲಿ ಬಳಕೆಯಲ್ಲಿದೆ. ಇಂತಹ ಊಟದ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಹಾಕಿರುವ ಪೋಸ್ಟ್‌ ಒಂದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಯಾವಾಗಲೂ ರಾಜಕೀಯಸಂಸ್ಕೃತಿ ಬಗ್ಗೆಯೇ ಮಾತನಾಡುವುದಕ್ಕಿಂತ ಒಂದಿಷ್ಟು ಆಹಾರಸಂಸ್ಕೃತಿ ಬಗ್ಗೆ ಮಾತನಾಡಿದರೆ ಯಾರಿಗಾದರೂ ನಷ್ಟ ಆಗುತ್ತದೆಯೇ? ಇಲ್ಲವಲ್ಲ. ಹಾಗಾಗಿ, ರಾಗಿಮುದ್ದೆ ತಿನ್ನುವವರಿಗೆ ಹೀಗೊಂದು ಪ್ರಶ್ನೆ ರವಿಕೃಷ್ಣಾ ರೆಡ್ಡಿ ಅವರದ್ದು.

ನಿಮ್ಮ ಮನೆಯಲ್ಲಿ ರಾಗಿಮುದ್ದೆ ಮಾಡುವಾಗ ಅದಕ್ಕೆ ಅನ್ನ ಅಥವ ಅಕ್ಕಿನುಚ್ಚು ಸಹ ಹಾಕುತ್ತಾರೆಯೇ ಅಥವ ಕೇವಲ ರಾಗಿಹಿಟ್ಟು ಮಾತ್ರ ಬಳಸುತ್ತಾರೆಯೇ? ಯಾಕೆಂದರೆ ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ರಾಗಿಮುದ್ದೆಗೆ ಅನ್ನ ಅಥವ ಅಕ್ಕಿನುಚ್ಚು ಹಾಕದೆ ಮುದ್ದೆ ಮಾಡಿದರೆ ಅದು ಕೀಳು ಅಥವ ಚೆನ್ನಾಗಿರುವುದಿಲ್ಲ ಎನ್ನುವ ಭಾವನೆ ಇದೆ. ಬಹುಶಃ ಇನ್ನೊಂದಷ್ಟು ಕಡೆ ರಾಗಿಹಿಟ್ಟಿಗೆ ಅನ್ನ ಬೆರಸಿ ಮುದ್ದೆ ಮಾಡುವುದನ್ನು ಇಷ್ಟ ಪಡುವುದಿಲ್ಲ ಅಥವ ಅವರಿಗೆ ಗೊತ್ತೇ ಇಲ್ಲ ಎನ್ನಿಸುತ್ತದೆ. ನೀವು ಹೇಗೆ? ನಿಮ್ಮ ಮನೆಯಲ್ಲಿ ರಾಗಿಮುದ್ದೆಗೆ ಅನ್ನ ಅಥವ ಅಕ್ಕಿನುಚ್ಚು ಹಾಕುತ್ತಾರೆಯೇ? ಕಾಮೆಂಟ್ಸ್ ಭಾಗದಲ್ಲಿಯೂ ಉತ್ತರಿಸಬಹುದು ಮತ್ತು ನಿಮ್ಮ ಅಭಿಪ್ರಾಯ ಅಥವ ಅನುಭವಗಳನ್ನೂ ಹಂಚಿಕೊಳ್ಳಬಹುದು ಎನ್ನುವುದು ರೆಡ್ಡಿ ಅವರ ಕೋರಿಕೆ.

ಇದಕ್ಕೆ ಬಗೆಬಗೆಯ ಅಭಿಪ್ರಾಯ, ಫೋಟೋಗಳು ಹಂಚಿಕೆಯಾಗಿವೆ.

ಮೂಲತಃ ಮೈಸೂರಿನವರಾದರೂ ಸದ್ಯ ವಿದೇಶದಲ್ಲಿ ನೆಲೆಸಿರುವ ಧರ್ಮಶ್ರೀ ಅಯ್ಯಂಗಾರ್‌ (Dharmashree Iyengar)ಅವರು, ನಾವು ಹಾಕಲ್ಲ.. ಅಕ್ಕಿ ಬೇಡ ಅಂತಲೇ ರಾಗಿಮುದ್ದೆ ಮಾಡೋದು. ಮತ್ತೆ ರಾಗಿಮುದ್ದೆಗೂ ಅಕ್ಕಿನುಚ್ಚು ಹಾಕಿದ್ರೆ ಅದರ ಉದ್ದೇಶವೇ ಹಾಳಾಗಲ್ವೆ ಎಂದು ಕೇಳಿದ್ದಾರೆ.

ರಮೇಶಗೌಡ ಎಂಬುವವರು, ರಾಗಿಮುದ್ದೆ ಕೂಡ ಪ್ರಾಂತ್ಯವಾರು ಗಳಿಗೆ ತಕ್ಕಂತೆ ಬದಲಾಗುತ್ತದೆ ಮಾಡುವ ವಿಧಾನದಲ್ಲಿ. ಸಾಮಾನ್ಯವಾಗಿ ಸಂಪೂರ್ಣ ರಾಗಿಯಿಂದಲೇ ತಯಾರಾದ ರಾಗಿ ಮುದ್ದೆ ಯನ್ನು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೆಡೆ (ತೆಲುಗು ಬೆಲ್ಟ್)ಅಕ್ಕಿನುಚ್ಚು ಬೆರೆಸಿ ಮುದ್ದೆ ಮಾಡುತ್ತಾರೆ. ಇದು ಅವರಿಗೆ ಅಚ್ಚುಮೆಚ್ಚು. ನಾನೂ ಕೂಡ ನಮ್ಮ ರಾಗಿಮುದ್ದೆ ಸಿಗದೇ ಇದ್ದಾಗ ಈ ರೀತಿಯದ್ದನ್ನು ಉಂಡಿದ್ದೇನೆ. ಆದರೆ ಇಷ್ಟವಿಲ್ಲ.ರಾಗಿಯಲ್ಲೇ ಕೆಲವರು ಕಡುಗಪ್ಪು ರಾಗಿಮುದ್ದೆ ಬಯಸಿದರೆ ಇನ್ನೂ ಕೆಲವರು ಕೆಂಪುರಾಗಿಮುದ್ದೆಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ ಎನ್ನುತ್ತಾರೆ.

ಕಾಯಿಲೆಗಳಿಗೆ ಮುದ್ದೆ ಮದ್ದು

ಮಂಡ್ಯದ ಎಂ ನಾಗರಾಜ್ ಬೇವೂರು, ತುಂಬಾ ಚೆನ್ನಾಗಿರುತ್ತೆ ಮುದ್ದೆ ಉಪ್ಪುಸಾರು ಆರೋಗ್ಯಕ್ಕೆ ಒಳ್ಳೆಯದು. ಕಾಳು ಮೆಣಸು, ಬೆಳ್ಳುಳ್ಳಿ, ಉಪ್ಪು, ಮೆಣಸಿನಕಾಯಿ (ಒಣಗಿದ್ದು ಇದ್ದರೆ ಚೆನ್ನ), ಜೀರಿಗೆ ಹಾಕಿ ಚೆನ್ನಾಗಿ ರುಬ್ಬಿ ಗಟ್ಟಿ ಕಾರ ಸೈಡಿಗೆ ಇಟ್ಟು ತೊಳೆದ ನೀರು ಉಪ್ಪುಸಾರಿಗೆ ( ಅದು ಯಾವುದೇ ಕಾಳಾದರು) ಬೇಯಿಸಿ ಸ್ವಲ್ಪ ಒಗ್ಗರಣೆ ಕೊಟ್ಟು ತಿನ್ನುತ್ತಿದ್ದರೆ ಜೀರ್ಣಶಕ್ತಿ ವೃದ್ಧಿಸುತ್ತದೆ ಮತ್ತು ಬಿಪಿ ಶುಗರ್ ಕಾಯಿಲೆಗಳಿಗೆ ಜಾಗ ಇರುವುದಿಲ್ಲ ಮಸಾಲೆ ಪದಾರ್ಥಕಿಂತ ಅತ್ಯದ್ಬುತ ಊಟ ಎಂದು ಬಾಯಲ್ಲಿ ನೀರೂರಿಸುತ್ತಾರೆ.

ಬಾಲರಾಜ್ ಎಸ್ ಯಾದವ್ ಅವರು, ನಮ್ಮ ಮನೆಯಲ್ಲಿ ರಾಗಿ ಮುದ್ದೆಗೆ ಅಕ್ಕಿ ನುಚ್ಚು ಅಥವಾ ಅನ್ನ ಉಳಿದಿದ್ದರೆ ಅನ್ನವನ್ನು ಸಹ ಹಾಕಿ ಮುದ್ದೆ ಮಾಡುತ್ತೇವೆ ಹಾಗೆ ನಾನು ಕೂಡ ಮುದ್ದೆ ಮಾಡುತ್ತೇನೆ ಎಂದು ಹೇಳುತ್ತಾರೆ.

ವಿಜಯಪುರದ ಶಿವಾನಂದ ಯಡಹಳ್ಳಿ ಕೊಂಡಗೂಳಿ ಅವರು, ನಮ್ಮ ಬಿಜಾಪುರದಾಗ ಮನೆಯಲ್ಲಿ ಮಾಡೋದು ಶೇ. 95 ಕಡಿಮೆ ಕೇಳಿದರೆ ಹೋಟೆಲ್ ಗಳಲ್ಲಿ ಸಿಗುತ್ತೇ. ಆದರೆ ನಮಗ ಬಿಳಿ ಜೋಳದ ರೊಟ್ಟಿ ಕಾರಬೇಳೆ ಕಲಿಸಿ ಜೆಡಿದರ ಹೊಟ್ಟಿ ತುಂಬತಾದ ಎಂದು ಪ್ರತಿಕ್ರಿಯಿಸಿದ್ದಾರೆ.

ಚಪಾತಿ ವಿಷವಾಗಿದೆ

ನಾವು ಅನ್ನ ತಿನ್ನುವುದೇ ಮೊದಲನೆಯ ವಿಷವಾಗಿದೆ ಚಪಾತಿ . ರವಿಕೃಷ್ಣಾ ರೆಡ್ಡಿ ರವರಿಗೆ ನನ್ನದೊಂದು ಸಲಹೆ ದಯಮಾಡಿ ಬೇಸರ ಮಾಡ್ಕೋಳಬೇಡಿ. ಯಾಕೆಂದರೆ ನಾವು ನಮ್ಮ ಹೋರಾಟದಲ್ಲಿ ಆಹಾರದ ಬಗ್ಗೆ ಆಹಾರ ಕಲಬೆರಕೆ ಆಹಾರ ವಿಷಯ ಆಹಾರ ವಿಷಮಯವಾಗಿರುವಂತಹ ಹೋರಾಟವನ್ನು ಮಾಡೋಣ ಎನ್ನುತ್ತಾರೆ ಮಂಜುನಾಥ್‌.

ಕೆ.ಎಸ್.ಮಧು ಅವರ ಪ್ರಕಾರ, ಸ್ವತಃ ನಾನೇ ಮಾಡಿರುವ ರಾಗಿಮುದ್ದೆ ನಮ್ಮ ಮನೆಯಲ್ಲಿ ಅಕ್ಕಿನುಚ್ಚನ್ನಾಗಿಲಿ ಅಥವಾ ಅನ್ನವನ್ನಾಗಲಿ ಹಾಕಿ ಮುದ್ದೆ ಮಾಡುವುದಿಲ್ಲ. ಮುದ್ದೆ ಮಾಡುವಾಗ ಬೇರೆ ಪಾತ್ರೆ ಮಾಡಿ ಅದನ್ನು ತೊಳೆಯುವುದು ಯಾರು ಎನ್ನುವ ಸೋಮಾರಿತನದಲ್ಲಿ ಅನ್ನ ಮಾಡಿದ ಪಾತ್ರೆಯಲ್ಲಿ ಮುದ್ದೆ ಮಾಡುವುದನ್ನು ರೂಡಿ ಮಾಡಿಕೊಂಡ ನಂತರದ ಕಾಲಘಟ್ಟದಲ್ಲಿ ಜನ ಸಾಮಾನ್ಯರಲ್ಲಿ ಇದು ರೂಢಿಯಾಗಿ ಮುಂದುವರೆದಿದೆ ಮತ್ತು ಪ್ರತಿಷ್ಠೆ ,ಕೆಲ ಮೂಢನಂಬಿಕೆಯಾಗಿಯೂ ಸಹ ಮುಂದುವರೆದಿದೆ ಎನ್ನುತ್ತಾರೆ.

ಮುದ್ದೆಗೆ ಅಕ್ಕಿನುಚ್ಚು ಒಳ್ಳೆಯದು

ಎನ್‌. ಅಜಯವರ್ಮ ಅವರು ಹೇಳುವಂತೆ, ರಾಗಿ ಮುದ್ದೆಯನ್ನು ಕೇವಲ ರಾಗಿ ಹಿಟ್ಟಿನಿಂದ ಮಾಡಿದರೆ, ಅದು ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ, ವಿಶೇಷವಾಗಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ನಾರಿನಂಶ ಹೆಚ್ಚು ಲಭಿಸುತ್ತದೆ. ಆದರೆ, ಕೆಲವರಿಗೆ ಸಂಪೂರ್ಣ ರಾಗಿ ಹಿಟ್ಟಿನಿಂದ ಮಾಡಿದ ಮುದ್ದೆ ಜೀರ್ಣವಾಗಲು ಕಷ್ಟವಾಗಬಹುದು. ಅಕ್ಕಿ ನುಚ್ಚು (ಅಥವಾ ಅನ್ನ) ಸೇರಿಸಿ ಮಾಡಿದರೆ, ಅದು ತಿನ್ನಲು ಸುಲಭ ಮತ್ತು ಸಾಫ್ಟ್‌ ಆಗಿರುತ್ತದೆ. ಆದರೆ, ಇದರಿಂದ ರಾಗಿ ಮುದ್ದೆಯ ಪೌಷ್ಟಿಕತೆ ಸ್ವಲ್ಪ ಕಡಿಮೆ ಆಗಬಹುದು, ಏಕೆಂದರೆ ಅಕ್ಕಿ/ಅನ್ನದಲ್ಲಿ ಹೆಚ್ಚಿನ ಪೋಷಕಾಂಶ ಇಲ್ಲ. ಒಟ್ಟಾರೆ: ಪೌಷ್ಟಿಕತೆ ದೃಷ್ಟಿಯಿಂದ ಕೇವಲ ರಾಗಿ ಹಿಟ್ಟಿನಿಂದ ಮಾಡಿದುದು ಉತ್ತಮ. ತಿನ್ನಲು ಸುಲಭ ಮತ್ತು ಹಗುರಾಗಿ ಜೀರ್ಣವಾಗುವ ದೃಷ್ಟಿಯಿಂದ ಅಕ್ಕಿ ನುಚ್ಚು ಸೇರಿಸಿದುದು ಉಪಯುಕ್ತ.

ಮಹೇಶ್‌ ಕುದೇರು ಅವರು, ಚಾಮರಾಜನಗರ, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಮುದ್ದೆಗೆ ಅನ್ನ, ಅಕ್ಕಿ ನುಚ್ಚು ಹಾಕೋಲ್ಲ. ಮುದ್ದೆಗೆ ಅನ್ನ ಹಾಕೋದನ್ನ ನಾನು ಬೆಂಗಳೂರಿನ ಫುಟ್ ಪಾತ್ ಹೋಟೆಲ್ ನಲ್ಲಿ ಮುದ್ದೆ ಊಟ ಮಾಡಿದಾಗಲೇ ನೋಡಿದ್ದು, ತಿಂದದ್ದು, ಹಾಗೂ ಮುದ್ದೆ ಹೀಗೂ ಮಾಡಬಹುದು ಅಂತ ಗೊತ್ತಾಗಿದ್ದು. ಹಾಗೆ ನಮ್ಮ ಮನೆಯಲ್ಲಿ, ನಮ್ಮ ಹಳ್ಳಿಯಲ್ಲಿ ಮುದ್ದೆಗೆ ಉಪ್ಪು ಹಾಕದೆ ಮಾಡೊಧು. ಬೆಂಗಳೂರಿನ ನಮ್ಮ ದೊಡ್ಡಮನೆ ಮನೆಯಲ್ಲಿ ನಮ್ಮ ದೊಡ್ಡಮ್ಮ ಮುದ್ದೆ ಮಾಡುವಾಗ ಉಪ್ಪು ಹಾಕ್ತಾ ಇಧ್ರು. ನಾನು ಯಾಕೆ ಉಪ್ಪು ಹಾಕ್ತ ಇದ್ದೀರಾ ಅಂತ ಕೇಳಿದ್ದೆ ಅದಕ್ಕೆ ಅವರು ರುಚಿ ಬರುತ್ತೆ ಅಂತ ಹೇಳ್ತಾ ಇದ್ರೂ. ಇನ್ನು ಕುಶಾಲನಗರದ ನಮ್ಮ ಹೆಂಡತಿ ಮನೆ ಕಡೆ ರಾಗಿ ಹಿಟ್ಟು ಬೀಸುವಾಗ ಕೆಲವರು ಮೆಂತ್ಯ ಸೇರಿಸ್ತಾರಂತೆ. ಹಾಗೆ ಕೆಲವರು ಜೋಳ ಮತ್ತು ಗೋದಿ ಕೂಡ ಸೇರಿಸ್ತಾರಂತೆ. ಹಾಗೆ ಇದರಲ್ಲಿ ಮೇಲು ಕೀಳು ಎಂಬ ಭಾವನೆ ಯಾವುದು ಇಲ್ಲ ನನಗೆ ತಿಳಿದಂತೆ. ಹಬ್ಬದ ಸಂಧರ್ಭದಲ್ಲಿ ಮುದ್ದೆ ಮಾಡೋಲ್ಲ ನಮ್ಮ ಕಡೆ ಎಂದು ಮುದ್ದೆ ಬಗೆಬಗೆಯ ತಯಾರಿ ಮಾಡುವ ಮಾರ್ಗ ಹೇಳುತ್ತಾರೆ.

 

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner