ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜೇನುಕುರುಬರಿಂದ ಮತ್ತೆ ಆರು ಗುಡಿಸಲು ನಿರ್ಮಾಣ; ತೆರವುಗೊಳಿಸಿದ ಅರಣ್ಯ ಇಲಾಖೆ
ಕನ್ನಡ ಸುದ್ದಿ  /  ಕರ್ನಾಟಕ  /  ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜೇನುಕುರುಬರಿಂದ ಮತ್ತೆ ಆರು ಗುಡಿಸಲು ನಿರ್ಮಾಣ; ತೆರವುಗೊಳಿಸಿದ ಅರಣ್ಯ ಇಲಾಖೆ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜೇನುಕುರುಬರಿಂದ ಮತ್ತೆ ಆರು ಗುಡಿಸಲು ನಿರ್ಮಾಣ; ತೆರವುಗೊಳಿಸಿದ ಅರಣ್ಯ ಇಲಾಖೆ

ನಾಗರಹೊಳೆಯಲ್ಲಿ ಈಗಾಗಲೇ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಜೇನುಕುರುಬ ಕುಟುಂಬಗಳು ಮತ್ತೆ ಆರು ಗುಡಿಸಲು ನಿರ್ಮಿಸಲು ಮುಂದಾಗಿದ್ದು. ಇದಕ್ಕೆ ಕರ್ನಾಟಕ ಅರಣ್ಯ ಇಲಾಖೆ ತಡೆಯೊಡ್ಡಿದೆ.

ಕೊಡಗಿನ ನಾಗರಹೊಳೆ ಅತ್ತೂರು ಕೊಲ್ಲಿಯಲ್ಲಿ ಮತ್ತೆ ಆರು ಗುಡಿಸಲು ನಿರ್ಮಿಸಲು ಮುಂದಾಗಿದ್ದನ್ನು ತಡೆದ ಅರಣ್ಯ ಇಲಾಖೆ ಸಿಬ್ಬಂದಿ ಗುಡಿಸಲು ತೆರವು ಮಾಡಿದ್ದಾರೆ.
ಕೊಡಗಿನ ನಾಗರಹೊಳೆ ಅತ್ತೂರು ಕೊಲ್ಲಿಯಲ್ಲಿ ಮತ್ತೆ ಆರು ಗುಡಿಸಲು ನಿರ್ಮಿಸಲು ಮುಂದಾಗಿದ್ದನ್ನು ತಡೆದ ಅರಣ್ಯ ಇಲಾಖೆ ಸಿಬ್ಬಂದಿ ಗುಡಿಸಲು ತೆರವು ಮಾಡಿದ್ದಾರೆ.

ಅತ್ತೂರು ಕೊಲ್ಲಿ( ಕೊಡಗು): ಒಂದೂವರೆ ತಿಂಗಳ ಹಿಂದೆಯೇ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅತ್ತೂರು ಹಾಡಿಯಲ್ಲಿ ಪ್ರವೇಶಿಸಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಜೇನುಕುರುಬ ಕುಟುಂಬಗಳು ಮತ್ತೆ ಆರು ಗುಡಿಸಲು ನಿರ್ಮಿಸಲು ಮುಂದಾಗಿದ್ದು, ಇದನ್ನು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಡೆದಿದ್ದಾರೆ. ಅಲ್ಲಿ ನಿರ್ಮಿಸಿದ್ದು ಗುಡಿಸಲುಗಳನ್ನು ತೆರವುಗೊಳಿಸಿದರು. ಟೆಂಟ್‌ಗಳು, ಮರಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳಿಂದ ಅಲ್ಲಿ ಗುಡಿಸಲು ನಿರ್ಮಿಸಲು ಮುಂದಾದ ವಿಷಯ ಅರಿತ ಅರಣ್ಯ ಇಲಾಖೆಯವರು ನೊಟೀಸ್‌ ಅನ್ನು ಜಾರಿ ಮಾಡಿದ್ದರು. ಆದರೂ ನಿರ್ಮಾಣ ಮುಂದುವರಿಸಿದ್ದರಿಂದ ಪೊಲೀಸ್‌ ಇಲಾಖೆಯ ಸಹಕಾರದೊಂದಿಗೆ ನಾಗರಹೊಳೆ ಅಭಯಾರಣ್ಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವುಗೊಳಿಸಿದರು.

ದಶಕಗಳ ಇಲ್ಲಿಯೇ ಇದ್ದು, ನಮಗೆ ಪುನರ್ವಸತಿ ಕಲ್ಪಿಸಬೇಕೆಂದು ಕೊಡಗು ಭಾಗದಲ್ಲಿ ನೆಲೆಸಿರುವ ಜೇನುಕುರುಬ ಕುಟುಂಬಗಳವರು ಹಲವು ವರ್ಷದಿಂದ ಹೋರಾಟ ನಡೆಸಿದ್ದಾರೆ. ಅರಣ್ಯ ಇಲಾಖೆಯು ನೀವು ಇಲ್ಲಿ ಇದ್ದುದಕ್ಕೆ ಯಾವುದೇ ದಾಖಲೆಗಳಿಲ್ಲ. ಅರಣ್ಯ ಹಕ್ಕು ಕಾಯಿದೆಯಡಿ ನಿಮಗೆ ಪುನವರ್ಸವತಿ ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನ್ಯಾಯಾಲಯವು ಕೂಡ ಇದನ್ನು ಎತ್ತಿ ಹಿಡಿದಿದೆ. ಇದರ ನಡುವೆ ಕಳೆದ ತಿಂಗಳು ಕೆಲವರು ಅರಣ್ಯದಲ್ಲಿ ಗುಡಿಸಲು ನಿರ್ಮಿಸಿಕೊಂಡು ಇಲ್ಲಿಯೇ ನೆಲೆಸಿದ್ದಾರೆ. ಇದಕ್ಕೆ ಕೆಲವು ಸ್ವಯಂ ಸೇವಾ ಸಂಘಟನೆಗಳು ಬೆಂಬಲ ನೀಡುತ್ತಿದ್ದು, ಅವರ ವಿರುದ್ದವೂ ಪ್ರಕರಣವನ್ನು ಅರಣ್ಯ ಇಲಾಖೆಯವರು ದಾಖಲಿಸಿದ್ಧಾರೆ.

ಅಲ್ಲಿ ನೆಲೆಸಿರುವವರನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆದಿರುವ ನಡುವೆಯೇ ಇನ್ನಷ್ಟು ಗುಡಿಸಲು ಅತ್ತೂರು ಕೊಲ್ಲಿ ಪ್ರದೇಶದಲ್ಲಿ ಹಾಕಲು ಮುಂದಾದಾಗ ಅರಣ್ಯ ಇಲಾಖೆಯವರು ಅನುಮತಿ ನೀಡದೇ ನೊಟೀಸ್‌ ಜಾರಿ ಮಾಡಿ ತೆರವು ಮಾಡಿದ್ದಾರೆ.

ನಾಗರಹೊಳೆ ನಿರ್ದೇಶಕಿ ಪಿ.ಎ.ಸೀಮಾ ಅವರ ಸೂಚನೆ ಮೇರೆಗೆ ನಾಗರಹೊಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಅನನ್ಯಕುಮಾರ್‌, ಹುಣಸೂರು ಎಸಿಎಫ್‌ ಲಕ್ಷ್ಮಿಕಾಂತ್‌, ನಾಗರಹೊಳೆ ಆರ್‌ಎಫ್‌ಒ ಮಂಜುನಾಥ್‌, ಮೇಟಿಕುಪ್ಪೆ ಆರ್‌ಎಫ್‌ಒ ರಶ್ಮಿ ಹಾಗೂ ಸಿಬ್ಬಂದಿಗಳು ಅರಣ್ಯ ಇಲಾಖೆ ಪಡೆಯೊಂದಿಗೆ ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿದರು. ಅಲ್ಲಿ ಹಾಕಲಾಗಿದ್ದ ಟೆಂಟ್‌ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಈ ವೇಳೆ ಅರಣ್ಯ ಇಲಾಖೆ ಕ್ರಮವನ್ನು ಜೇನುಕುರುಬ ಸಮುದಾಯದ ಪ್ರಮುಖರು, ಮಹಿಳೆಯರು ಬಲವಾಗಿ ವಿರೋಧಿಸಿದರು.

ಇಲ್ಲಿಯೇ ನಾವು ವಾಸವಿದ್ದೆವು. ಹಿಂದೆ ನಿಮ್ಮ ಅಧಿಕಾರಿಗಳೇ ತೆರವು ಮಾಡಿದ್ದರು. ಈಗ ಪುನರ್ವಸತಿ ಕಲ್ಪಿಸುವಂತೆ ಕೋರಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ದಾಖಲೆ ಇಲ್ಲ ಎಂದು ಹೇಳಿ ಇಲ್ಲಿಂದ ನಮ್ಮನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಬದುಕಲು ಅವಕಾಶ ನೀಡುತ್ತಿಲ್ಲ. ಮಹಿಳೆಯರು, ಮಕ್ಕಳು ಈ ವಯಸ್ಸಿನಲ್ಲಿ ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.

ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸಮಜಾಯಿಷಿ ನೀಡಿದರೂ ಅನ್ನು ಅವರು ಒಪ್ಪಲಿಲ್ಲ.ಕೊನೆಗೆ ಹೆಚ್ಚುವರಿಯಾಗಿ ನಿರ್ಮಿಸಿದ್ದ ಟೆಂಟ್‌ಗಳನ್ನು ತೆರವು ಮಾಡಲಾಯಿತು ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವೀರಾಜಪೇಟೆ ಡಿವೈಎಸ್ಪಿ ಸೂರಜ್‌. ಸರ್ಕಲ್‌ ಇನ್ಸ್‌ಪೆಕ್ಟರ್‌ಗಳಾದ ಅನೂಪ್‌ ಮಾದಪ್ಪ. ಶಿವರುದ್ರಪ್ಪ, ಕುಟ್ಟ ಪಿಎಸ್‌ಐ ಮಹದೇವಪ್ಪ ಹಾಗೂ ಸಿಬ್ಬಂದಿ ಭದ್ರತೆಯನ್ನು ಒದಗಿಸಿದ್ದರು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.