ವಿರೋಧದ ನಡುವೆಯೂ ಆಂಧ್ರಪ್ರದೇಶಕ್ಕೆ ಕರ್ನಾಟಕದ ಸಾಕಾನೆಗಳ ಕೊಡಲು ಒಪ್ಪಿಗೆ; ಮೇ 21 ರಂದು ಹಸ್ತಾಂತರ ಆಗುವ ಆನೆಗಳು ಯಾವುವು?
ಕರ್ನಾಟಕ ಅರಣ್ಯ ಇಲಾಖೆ ಕೊನೆಗೂ ಆಂಧ್ರಪ್ರದೇಶಕ್ಕೆ ಐದು ಆನೆಗಳನ್ನು ನೀಡಲು ಮುಂದಾಗಿದೆ. ಬೆಂಗಳೂರಿನಲ್ಲಿ ಮೇ 21ರಂದು ಆನೆ ಹಸ್ತಾಂತರ ಮಾಡಲಾಗುತ್ತಿದೆ. ಇದಕ್ಕೆ ವಿರೋಧವೂ ವ್ಯಕ್ತವಾಗಿದೆ.

ಬೆಂಗಳೂರು:ಕರ್ನಾಟಕದ ಸಾಕಾನೆಗಳಿಗೆ ಭಾರತದ ಹಲವು ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.ಹಿಂದೆ ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ, ಉತ್ತರಾಖಂಡ್ ಸಹಿತ ಹಲವು ರಾಜ್ಯಗಳಿಗೆ ಕರ್ನಾಟಕದಲ್ಲಿ ಸೆರೆ ಸಿಕ್ಕ ಸಾಕಾನೆಗಳನ್ನು ನೀಡಲಾಗಿದೆ. ಈಗ ಆಂಧ್ರಪ್ರದೇಶದಿಂದಲೂ ಆನೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ನಿರಂತರ ಒಂದು ವರ್ಷದಿಂದ ನಡೆದಿದ್ದ ಚರ್ಚೆಗಳ ಬಳಿಕ ಈಗ ಆನೆಗಳನ್ನು ನೀಡಲು ಒಪ್ಪಿಗೆ ಕೊಡಲಾಗಿದೆ. ನೆರೆಯ ಆಂಧ್ರಪ್ರದೇಶಕ್ಕೆ ಮೇ 21 ರಂದು ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಗುತ್ತಿದೆ.ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯಲಿರುವ ವಿದ್ಯುಕ್ತ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರಿಗೆ ಪಳಗಿಸಿದ ಆರು ಆನೆಗಳನ್ನು ಹಸ್ತಾಂತರ ಮಾಡುವರು.
ಆಂಧ್ರಪ್ರದೇಶದ ಅರಣ್ಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಪವನ್‌ಕಲ್ಯಾಣ್ ಅವರು ಕರ್ನಾಟಕದಿಂದ 22 ಆನೆಗಳನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನವನ್ನು ಆರಂಭಿಸಿದ್ದಾರೆ. ಇದಕ್ಕೆ ಬಲವಾದ ವಿರೋಧ ವ್ಯಕ್ತವಾದ ನಂತರ ಎಂಟು ಆನೆಗಳನ್ನು ನೀಡುವಂತೆ ಬೇಡಿಕೆ ಸಲ್ಲಿಸಿದ್ದರು. ಇದಕ್ಕೆ ಸಮ್ಮತಿ ಸೂಚಿಸಿರುವ ಅರಣ್ಯ ಇಲಾಖೆಯು ಆರು ಆನೆಗಳನ್ನು ನೀಡಲು ಮುಂದಾಗಿದೆ. ಆಂಧ್ರಪ್ರದೇಶದಲ್ಲಿ ಐಎಫ್‌ಎಸ್ ಅಧಿಕಾರಿಯಾಗಿರುವ ಕರ್ನಾಟಕ ಮೂಲದ ಬಿಎನ್‌ಎನ್ ಮೂರ್ತಿ ಅವರು ಅಲ್ಲಿನ ಸರ್ಕಾರದ ಸೂಚನೆ ಮೇರೆಗೆ ಈ ಯೋಜನೆಯನ್ನು ರೂಪಿಸಿದ್ದರು.
ಯಾವ ಆನೆಗಳು ಪಟ್ಟಿಯಲ್ಲಿವೆ
ಕೊಡಗಿನ ದುಬಾರೆ ಆನೆ ಶಿಬಿರದಿಂದ ಮಾಸ್ತಿ, ದೇವ, ರಂಜನ್ ಹಾಗೂ ಕರುಣಾ ಆನೆ, ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆ ಶಿಬಿರದ ಕೃಷ್ಣ ಹಾಗೂ ಅಭಿಮನ್ಯು ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತದೆ. ಅಂದು ಆನೆಗಳನ್ನು ವಿಧಾನಸೌಧ ಎದುರಿಗೆ ಈ ಆನೆಗಳನ್ನು ಹಸ್ತಾಂತರಿಸಿ ಆಂಧ್ರಕ್ಕೆ ಕಳುಹಿಸಲಾಗುತ್ತದೆ. ಆನೆ ಮಾವುತರು,ಕವಾಡಿಗರು ಅಲ್ಲಿಗೆ ತೆರಳಿ ಬಿಟ್ಟು ಕೆಲ ದಿನಗಳ ನಂತರ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಹೆಮ್ಮೆಯ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅಥವಾ ದಸರಾ ಮಹೋತ್ಸವಕ್ಕಾಗಿ ಈಗಾಗಲೇ ಗುರುತಿಸಲಾಗಿರುವ ಯಾವುದೇ ಕುಮ್ಕಿ ಆನೆಯನ್ನು ಆಂಧ್ರಪ್ರದೇಶಕ್ಕೆ ನೀಡಲಾಗುತ್ತಿಲ್ಲ ಎನ್ನುವ ಸ್ಪಷ್ಟನೆ ನೀಡಲಾಗಿದೆ.
ಈ ಕುರಿತು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರಕಟಣೆ ನೀಡಿದ್ದು, ಇದು ನೆರೆ ರಾಜ್ಯದೊಂದಿಗಿನ ಸೌಹಾರ್ದ ಸಂಬಂಧ ಹೆಚ್ಚಿಸುವುದರ ಜೊತೆಗೆ, ಕರ್ನಾಟಕ ಗಡಿ ಮತ್ತು ಆಂಧ್ರದ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಒದಗಿಸಲಿದೆ ಎಂದು ತಿಳಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಆನೆ-ಮಾನವ ಸಂಘರ್ಷ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಕರ್ನಾಟಕ- ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಆಗಿರುವ ಉತ್ತಮ ರೂಢಿಗಳ ವಿನಿಮಯ ಒಪ್ಪಂದದ ಭಾಗವಾಗಿ ಈ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದೂ ಖಂಡ್ರೆ ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 8ರಂದು ಪವನ್ ಕಲ್ಯಾಣ್ ಅವರು ಬೆಂಗಳೂರಿಗೆ ಆಗಮಿಸಿ ತಮ್ಮನ್ನು ಭೇಟಿ ಮಾಡಿ ಆಂಧ್ರದಲ್ಲಿ ಹೆಚ್ಚುತ್ತಿರುವ ಪುಂಡಾನೆಗಳ ಸೆರೆಗೆ ಕುಮ್ಕಿ ಆನೆ ನೀಡುವಂತೆ ಮತ್ತು ತಮ್ಮ ರಾಜ್ಯದ ಮಾವುತರು ಮತ್ತು ಅರಣ್ಯ ಸಿಬ್ಬಂದಿಗೆ ಆನೆ ಸೆರೆ ಕಾರ್ಯಾಚರಣೆಯ ತರಬೇತಿ ನೀಡುವಂತೆ ಮನವಿ ಮಾಡಿದ್ದರು. ಸೆಪ್ಟೆಂಬರ್ 27ರಂದು ತಮ್ಮ ನೇತೃತ್ವದ ನಿಯೋಗ ವಿಜಯವಾಡಕ್ಕೆ ಭೇಟಿ ನೀಡಿದ್ದ ವೇಳೆ ಈ ಸಂಬಂಧ ಎರಡೂ ರಾಜ್ಯಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಮೇ 21ರಂದು ಈ ಆನೆಗಳನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಗಡಿ ಜಿಲ್ಲೆ ಆನೆ ಸಮಸ್ಯೆಗೂ ಪರಿಹಾರ: ಸಚಿವ
ಆಂಧ್ರಪ್ರದೇಶದ ಚಿತ್ತೂರು ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲೂ ಆನೆ- ಮಾನವ ಸಂಘರ್ಷ ಹೆಚ್ಚುತ್ತಿದ್ದು, ನೆರೆಯ ಆಂಧ್ರಪ್ರದೇಶದಿಂದ ನಮ್ಮ ರಾಜ್ಯಕ್ಕೆ ಪುಂಡಾನೆಗಳು ಬಾರದಂತೆ ತಡೆಯಲೂ ಆಂಧ್ರ ನಡೆಸಲಿರುವ ಆನೆ ಸೆರೆ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ನೆರವಾಗಲಿದೆ. ಈ ನಿಟ್ಟಿನಲ್ಲಿ ಕುಮ್ಕಿ ಆನೆಗಳ ಹಸ್ತಾಂತರದಿಂದ ರಾಜ್ಯಕ್ಕೂ ಪರೋಕ್ಷವಾಗಿ ಲಾಭವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬಲವಾದ ವಿರೋಧ
ಆದರೆ ಆನೆ ಹಸ್ತಾಂತರಿಸಲು ಮೊದಲಿನಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದು ಕರ್ನಾಟಕ ಅರಣ್ಯ ಇಲಾಖೆಗೆ ಪತ್ರವನ್ನು ಬರೆದಿರುವ ಪರಿಸರವಾದಿ, ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜೋಸೆಫ್ ಹೂವರ್, ನಮ್ಮ ಅರಣ್ಯ ಇಲಾಖೆಯವರು ಕಷ್ಟಪಟ್ಟು ಸೆರೆ ಹಿಡಿದು ಪಳಗಿಸಿದ ಆನೆಗಳನ್ನು ಬೇರೆ ರಾಜ್ಯಕ್ಕೆ ಕೊಡುವುದು ಸರಿಯಲ್ಲ. ಅಲ್ಲಿಯವರು ಬೇಕಾದರೆ ಆನೆಗಳನ್ನು ಹಿಡಿದು ಪಳಗಿಸಿಕೊಳ್ಳಬಹುದು. ಅದನ್ನು ಬಿಟ್ಟು ಕರ್ನಾಟಕದ ಸಾಕಾನೆಗಳನ್ನು ಪಡೆಯುವುದು,ನಮ್ಮವರು ನೀಡುವುದು ಸೂಕ್ತವಲ್ಲ. ಈ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆ ಮರು ಯೋಚನೆ ಮಾಡಬೇಕು ಎಂದು ಹೇಳುತ್ತಾರೆ.
ನಮ್ಮಲ್ಲಿ ಮೊದಲೇ ಮಾನವ ವನ್ಯಜೀವಿ ಸಂಘರ್ಷ ಜೋರಾಗಿದೆ. ಈ ವೇಳೆ ಸೆರೆ ಹಿಡಿದ ಆನೆಗಳನ್ನು ಪಳಗಿಸಿ ಹೀಗೆ ನೀಡುವುದರಿಂದ ಮತ್ತೆ ಆನೆ ಸೆರೆ ಹಿಡಿಯುವುದು, ಖರ್ಚು ಮಾಡುವುದು ಸೇರಿದಂತೆ ಇದೊಂದು ರೀತಿ ವಹಿವಾಟಿನ ಸ್ವರೂಪ ಪಡೆಯುತ್ತದೆಯೇ ವಿನಃ ವನ್ಯಜೀವಿಗಳ ಸಂರಕ್ಷಣೆ,ನಿರ್ವಹಣೆ ಆಗುವುದಿಲ್ಲ ಎನ್ನುವುದು ಜೋಸೆಫ್ ಹೂವರ್ ಅಭಿಪ್ರಾಯ.