ಕರ್ನಾಟಕದಲ್ಲಿ ಶ್ರೀಗಂಧ ಬೆಳೆ ಕಟಾವು ಮಾರಾಟಕ್ಕೆ ಶೀಘ್ರವೇ ನೀತಿ ಸರಳೀಕರಣ; ಅರಣ್ಯ ಇಲಾಖೆಯಿಂದ ಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಶ್ರೀಗಂಧ ಬೆಳೆ ಕಟಾವು ಮಾರಾಟಕ್ಕೆ ಶೀಘ್ರವೇ ನೀತಿ ಸರಳೀಕರಣ; ಅರಣ್ಯ ಇಲಾಖೆಯಿಂದ ಕ್ರಮ

ಕರ್ನಾಟಕದಲ್ಲಿ ಶ್ರೀಗಂಧ ಬೆಳೆ ಕಟಾವು ಮಾರಾಟಕ್ಕೆ ಶೀಘ್ರವೇ ನೀತಿ ಸರಳೀಕರಣ; ಅರಣ್ಯ ಇಲಾಖೆಯಿಂದ ಕ್ರಮ

ಕರ್ನಾಟಕದಲ್ಲಿ ಶ್ರೀಗಂಧ ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ನೀತಿಯನ್ನು ಸರಳೀಕರಣಗೊಳಿಸಲು ಮುಂದಾಗಿದೆ. ಸದ್ಯದಲ್ಲೇ ಕಾರ್ಯಕ್ರಮ ಪ್ರಕಟಿಸಲಿದೆ.

ಕರ್ನಾಟಕದಲ್ಲಿ ಶ್ರೀಗಂಧ ಬೆಳೆ ನೀತಿ ಸರಳೀಕರಣಗೊಳ್ಳಲಿದೆ.
ಕರ್ನಾಟಕದಲ್ಲಿ ಶ್ರೀಗಂಧ ಬೆಳೆ ನೀತಿ ಸರಳೀಕರಣಗೊಳ್ಳಲಿದೆ.

ಮೈಸೂರು: ಭಾರತದಲ್ಲೇ ಅತಿ ಹೆಚ್ಚು ಶ್ರೀಗಂಧ ಬೆಳೆಯುವ, ಶ್ರೀಗಂಧದ ನಾಡು ಎಂದೇ ಹೆಸರಾಗಿರುವ ಕರ್ನಾಟಕದಲ್ಲಿ ಶ್ರೀಗಂಧ ಬೆಳೆಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಅರಣ್ಯ ಇಲಾಖೆಯು ನೀತಿ ಸರಳೀಕರಣಗೊಳಿಸಲು ಮುಂದಾಗಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್.ಡಿ.ಎಲ್) ಶ್ರೀಗಂಧದ ಎಣ್ಣೆಯ ಅಗತ್ಯ ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ ರೈತರು ಕೂಡ ಶ್ರೀಗಂಧ ಬೆಳೆಯುತ್ತಿದ್ದಾರೆ. ಇವರಿಗೆ ಶ್ರೀಗಂಧ ಕಟಾವು ಮಾಡಲು, ಸಾಗಾಟ ಮಾಡಲು ಅನುವಾಗುವಂತೆ ಶೀಘ್ರವೇ ಶ್ರೀಗಂಧದ ನೀತಿ ಸರಳೀಕರಣ ಮಾಡಿ ಅಧಿಸೂಚನೆ ಹೊರಡಿಸಲಾಗುವುದು. ಅರಣ್ಯ ಇಲಾಖೆಯ ವತಿಯಿಂದ ನೆಡುತೋಪಿನಲ್ಲಿ ಶ್ರೀಗಂಧದ ಮರ ಬೆಳೆಸಲು ಕ್ರಮ ವಹಿಸಲು ಕೂಡ ಕ್ರಮ ವಹಿಸಲಾಗುತ್ತಿದೆ.

ಕೈಗಾರಿಕೆ ಇಲಾಖೆ ವ್ಯಾಪ್ತಿಯ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್.ಡಿ.ಎಲ್) ಸಾಂಸ್ಥಿಕ ಜವಾಬ್ದಾರಿ ನೆರವಿನಿಂದ ಮೈಸೂರು ವಿಭಾಗದ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಸುರಕ್ಷತಾ ಕಿಟ್ ವಿತರಿಸಿ ಮಾತನಾಡಿದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಇಂದು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಿಂದ ಒಂದು ತಿಂಗಳಲ್ಲಿ ಬೀಳಬೇಕಾದ ಮಳೆ ಒಂದೇ ವಾರದಲ್ಲಿ ಬೀಳುತ್ತಿದೆ, ಒಂದು ವಾರದ ಮಳೆ ಒಂದು ದಿನ ಬೀಳುತ್ತಿದ್ದು, ಅನಾಹುತ ಸೃಷ್ಟಿಸುತ್ತಿದೆ. ಹೀಗಾಗಿ ನಾವು ಹಸಿರು ಪ್ರದೇಶ ಹೆಚ್ಚಳಕ್ಕೆ ಒತ್ತುನೀಡಬೇಕು. ಮರಬೆಳೆಸಬೇಕು ಎಂದರು.

ಅರಣ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಹಸಿರು ಸಂವರ್ಧನೆಯಲ್ಲಿ ಇಲಾಖೆಯ ಮುಂಚೂಣಿ ಸಿಬ್ಬಂದಿಯ ಪಾತ್ರ ಹಿರಿದು. ಅವರೆಲ್ಲರ ಶ್ರಮದಿಂದಲೇ ಇಂದು ರಾಜ್ಯದಲ್ಲಿ ಶೇ.21ರಷ್ಟು ಅರಣ್ಯ ಉಳಿದಿದೆ ಎಂದರೂ ತಪ್ಪಾಗಲಾರದು ಎಂದು ಸಚಿವರು ಹೇಳಿದರು.

ಅರಣ್ಯ ಒತ್ತುವರಿ ತಡೆಯುವಲ್ಲಿ, ಕಾಡ್ಗಿಚ್ಚು ನಂದಿಸುವಲ್ಲಿ ಹಾಗೂ ವನ್ಯಜೀವಿಗಳ ಕಳ್ಳಬೇಟೆ ತಡೆಯುವಲ್ಲಿ ಮುಂಚೂಣಿ ಸಿಬ್ಬಂದಿ ಮಾಡುತ್ತಿರುವ ಕಾರ್ಯ ಶ್ಲಾಘನಾರ್ಹವಾದದ್ದು ಎಂದರು.

ಹೀಗಾಗಿಯೇ ಹಗಲಿರುಳೆನ್ನದೆ, ಚಳಿ, ಮಳೆ ಗಾಳಿಯನ್ನು ಲೆಕ್ಕಿಸದೆ ಅರಣ್ಯ ಮತ್ತು ಅರಣ್ಯ ಸಂಪತ್ತು ಕಾಯುವ ಸಿಬ್ಬಂದಿಗೆ ವೇತನದ ಜೊತೆಗೆ ಆಹಾರಭತ್ಯೆ ನೀಡಲು ಮತ್ತು ಹೆಚ್ಚುವರಿಯಾಗಿ ಮಾಸಿಕ 2 ಸಾವಿರ ರೂ. ಅಪಾಯ ಭತ್ಯೆ (ರಿಸ್ಕ್ ಅಲೋಯನ್ಸ್) ನೀಡಲು ತಾವು ಸಚಿವರಾದ ಬಳಿಕ ಆದೇಶ ನೀಡಿದ್ದು, ಅದನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಅರಣ್ಯ ಸಿಬ್ಬಂದಿಗೂ ಸಹ ಮಿಟಿಟರಿ ಮತ್ತು ಪೊಲೀಸ್ ಸಿಬ್ಬಂದಿಗೆ ಇರುವ ರೀತಿಯಲ್ಲೇ ಕ್ಯಾಂಟೀನ್ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ತಾವು ಈಗಾಗಲೇ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಹಾಲಿ ಇರುವ ಪೊಲೀಸ್ ಕ್ಯಾಂಟೀನ್ ಸೌಲಭ್ಯವನ್ನು ಅರಣ್ಯ ಸಿಬ್ಬಂದಿಗೂ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದರು.

ಕರ್ನಾಟಕದಲ್ಲಿ ಶ್ರೀಮಂತವಾದ ವನಪ್ರದೇಶ ಇದೆ. ಪಶ್ಚಿಮ ಘಟ್ಟಗಳು ಜೀವವೈವಿಧ್ಯತೆಯ ನೆಚ್ಚಿನ ತಾಣವಾಗಿದೆ. ಇದರ ಸಂರಕ್ಷಣೆ ಮತ್ತು ಸಂವರ್ಧನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದನ್ನು ಕಾಪಾಡುವ ಕಾರ್ಯವನ್ನು ಮುಂಚೂಣಿ ಸಿಬ್ಬಂದಿ ಮಾಡುತ್ತಿದ್ದಾರೆ ಎಂದರು.

ಇಂದು ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು, ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ. ಅರಣ್ಯ ವೃದ್ಧಿಸಲು ಸರ್ಕಾರ ಶ್ರಮಿಸುತ್ತಿದ್ದು, ಕಳೆದ 2 ವರ್ಷದಲ್ಲಿ 15 ಸಾವಿರ ಎಕರೆ ಜಮೀನನ್ನು ಹೊಸದಾಗಿ ಅರಣ್ಯ ಪ್ರದೇಶ ಎಂದು ಅಧಿಸೂಚನೆ ಮಾಡಲಾಗಿದೆ. ಬೆಂಗಳೂರಿನಲ್ಲಿ 4 ಸಾವಿರ ಕೋಟಿ ರೂ. ಬೆಲೆ ಬಾಳುವ 128 ಎಕರೆ ಸೇರಿದಂತೆ ರಾಜ್ಯದಾದ್ಯಂತ ಸಾವಿರಾರು ಕೋಟಿ ರೂ. ಬೆಲೆ ಬಾಳುವ 6 ಸಾವಿರ ಎಕರೆಗೂ ಹೆಚ್ಚು ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

2023-24 ಮತ್ತು 2024-25ರ ಸಾಲಿನಲ್ಲಿ ಒಟ್ಟು 120975 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು, 25 ಹೊಸ ವೃಕ್ಷೋದ್ಯಾನ ಮತ್ತು 35 ದೇವರ ಕಾಡು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ (ಕೆ.ಎಸ್.ಡಿ.ಎಲ್) ರಾಜ್ಯದಾದ್ಯಂತ 10 ಸಾವಿರ ಮುಂಚೂಣಿ ಅರಣ್ಯ ಸಿಬ್ಬಂದಿಗೆ ಬ್ಯಾಗ್, ಜರ್ಕೀನ್, ಶೂ, ನೀರಿನ ಬಾಟಲಿ ಇರುವ ಸುರಕ್ಷತಾ ಕಿಟ್ ನೀಡುತ್ತಿರುವುದನ್ನು ಪ್ರಶಂಶಿಸಿದ ಸಚಿವರು, ಇದಕ್ಕೆ ಕಾರಣೀಭೂತರಾದ ಮೂಲಸೌಕರ್ಯಾಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಹಾಗೂ ಕೆ.ಎಸ್. ಡಿ.ಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರಿಗೆ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಕೆ.ಎಸ್.ಡಿ.ಎಲ್. ಅಧ್ಯಕ್ಷರಾದ ಸಿ.ಎಸ್.ನಾಡಗೌಡ, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಡಾ.ತಿಮ್ಮಯ್ಯ, ಮುಖ್ಯ ವನ್ಯಜೀವಿ ಪರಿಪಾಲಕರು ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಎಪಿಸಿಸಿಎಫ್ ಕುಮಾರ್ ಪುಷ್ಕರ್, ಮೈಸೂರು ವೃತ್ತ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ, ಕೆಎಸ್‌ಡಿಎಲ್‌ ಎಂಡಿ ಎಂಪಿಎಂ ಪ್ರಶಾಂತ್‌, ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.