Breaking News: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಬೆಂಗಳೂರಿನಲ್ಲಿ ನಿಧನ
SM Krishna Passes Away: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನಲ್ಲಿ ಸೋಮವಾರ ಮಧ್ಯರಾತ್ರಿ ವಿಧಿವಶರಾಗಿದ್ದಾರೆ.
SM Krishna Passes Away: ಕರ್ನಾಟಕದ ಮಾಜಿ ಮುಖ್ಯಮಂತ್ರಿ., ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನಲ್ಲಿ ಸೋಮವಾರ ಮಧ್ಯರಾತ್ರಿ ನಿಧನರಾದರು.ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಆಸ್ಪತ್ರೆಗೂ ದಾಖಲಾಗಿದ್ದರು.ಚೇತರಿಸಿಕೊಂಡಿದ್ದ ಅವರನ್ನು ಮನೆಗೆ ಕರೆ ತರಲಾಗಿತ್ತು. ಆದರೆ ಅನಾರೋಗ್ಯ ಕಾಡಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಒಂದು ತಿಂಗಳಿನಿಂದ ಅವರ ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾಗಿತ್ತು.ಇದರಿಂದ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಅವರ ನಿವಾಸದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 2.30 ರ ಹೊತ್ತಿಗೆ ವಿಧಿವಶರಾದರು ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.ಬೆಂಗಳೂರಿನಲ್ಲಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ, ಮಂಡ್ಯದ ಬಳಿಕ ಮದ್ದೂರಿನ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ಬುಧವಾರ ನಡೆಯಬಹುದು ಎನ್ನಲಾಗುತ್ತಿದೆ.
92 ವರ್ಷ ವಯಸ್ಸಿನ ಎಸ್‌ಎಂ ಕೃಷ್ಣ ಅವರಿಗೆ ಪತ್ನಿ ಪ್ರೇಮಾ ಕೃಷ್ಣ, ಪುತ್ರಿಯರಾದ ಶಾಂಭವಿ, ಮಾಳವಿಕ ಅವರು ಇದ್ದಾರೆ. ಕೃಷ್ಣ ಅವರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು.
ಆರೂವರೆ ದಶಕಕ್ಕೂ ಹೆಚ್ಚು ಕಾಲ ರಾಜಕಾರಣದಲ್ಲಿದ್ದ ಎಸ್.ಎಂ.ಕೃಷ್ಣ ಅವರು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಲೇಖಿಸಿ 7 ಜನವರಿ 2023 ರಂದು ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಕೆಲವು ದಿನಗಳ ಹಿಂದೆ ತೀವ್ರವಾಗಿ ಅಸ್ವಸ್ಥರಾಗಿದ್ದ ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ಸುಮಾರು ಎರಡು ತಿಂಗಳ ನಂತರ ಎಸ್‌ಎಂ ಕೃಷ್ಣ ಅವರನ್ನು 2024ರ ಅಕ್ಟೋಬರ್ 19ರಂದು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಮನೆಗೆ ಕರೆ ತರಲಾಗಿತ್ತು. ಸೋಮವಾರ ರಾತ್ರಿಯಿಂದಲೇ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿ ಕೊನೆಯುಸಿರೆಳೆದರು ಕುಟುಂಬದವರು ಖಚಿತಪಡಿಸಿದ್ದಾರೆ.
ಎಸ್‌ಎಂ ಕೃಷ್ಣ ಅವರಿಗೆ ಈಗ 92 ವರ್ಷ ವಯಸ್ಸಾಗಿತ್ತು. ಕಳೆದ ತಿಂಗಳೂ ಮೈಸೂರು ಸೇರಿದಂತೆ ಹಲವು ಕಡೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಏಪ್ರಿಲ್ ಕೊನೆ ವಾರದಲ್ಲಿ ಅಸ್ವಸ್ಥರಾದ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಂದಿನಿಂದಲೂ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳು ಎಸ್.ಎಂ.ಕೃಷ್ಣ ಅವರ ಆರೈಕೆಯಲ್ಲಿ ತೊಡಗಿದ್ದರು. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಅವರ ಆರೋಗ್ಯ ವಿಚಾರಿಸಿ ಬಂದಿದ್ದರು.
ಸದಾ ನಗುಮುಖದ ಮೂಲಕ ತಮ್ಮದೇ ಆದ ಶೈಲಿಯ ರಾಜಕಾರಣದ ಮೂಲಕ ಗಮನ ಸೆಳೆದಿದ್ದ ಎಸ್.ಎಂ.ಕೃಷ್ಣ ಅವರು ಶಾಸಕ,ಸಂಸದ. ಕರ್ನಾಟಕದಲ್ಲಿ ಸಚಿವ, ಸ್ಪೀಕರ್, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಕೇಂದ್ರದಲ್ಲಿ ಸಚಿವ, ಮಹಾರಾಷ್ಟ್ರ ರಾಜ್ಯಪಾಲರೂ ಆಗಿದ್ದವರು. ವರ್ಣಮಯ ವ್ಯಕ್ತಿತ್ವದ ರಾಜಕಾರಣಿ. ಎಸ್.ಎಂ. ಕೃಷ್ಣ ಅವರ ಜೀವನಗಾಥೆ "ನೆಲದ ಸಿರಿ" ಪುಸ್ತಕ ಬಿಡುಗಡೆಯಾಗಿತ್ತು.ಎಸ್.ಎಂ.ಕೃಷ್ಣ ಅವರ ಜೀವನಚರಿತ್ರೆ 'ಚಿತ್ರ ದೀಪ ಸಾಲು', ನೆನಪುಗಳ ಸಂಕಲನ 'ಸ್ಮೃತಿವಾಹಿನಿ', ಜೀವನಚರಿತ್ರೆ 'ಕೃಷ್ಣಪಥ', ಚಿಂತನೆಗಳ ಸಂಕಲನ 'ಭವಿಷ್ಯದರ್ಶನ', ಇಂಗ್ಲಿಷ್ ಕೃತಿಗಳಾದ 'ಡೌನ್ ಮೆಮೊರಿ ಲೇನ್' ಹಾಗೂ 'ಸ್ಟೇಟ್ಸ್‌ಮನ್ ಎಸ್‌ಎಂ ಕೃಷ್ಣ' ಕೃತಿಗಳು ನಾಲ್ಕು ವರ್ಷದ ಹಿಂದೆ ಬಿಡುಗಡೆ ಕಂಡಿದ್ದವು.
ವಿಶ್ವವಿಖ್ಯಾತ 'ಮೈಸೂರು ದಸರಾ ಮಹೋತ್ಸವ-2021'ರ ಉದ್ಘಾಟನೆಯನ್ನು ಕೃಷ್ಣ ಅವರು ಮಾಡಿದ್ದರು.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದ ಕೃಷ್ಣ ಅವರ ತಂದೆ ಮಲ್ಲಯ್ಯ ಕೂಡ ರಾಜಕೀಯದಲ್ಲಿ ಹೆಸರು ಮಾಡಿದವರು. ಮದ್ದೂರು ಕ್ಷೇತ್ರದಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ಎಸ್.ಎಂ.ಕೃಷ್ಣ ಕಾಂಗ್ರೆಸ್‌ನಲ್ಲಿ ಉನ್ನತ ಹುದ್ದೆಗಳನ್ನು ಅನುಭವಿಸಿದವರು. ಕರ್ನಾಟಕದ ಮುಖ್ಯಮಂತ್ರಿಯಾಗಿ ಬೆಂಗಳೂರಿನ ಅಭಿವೃದ್ದಿಗೂ ಕೊಡುಗೆ ನೀಡಿದ್ದವರು. ಕೇಂದ್ರದಲ್ಲೂ ಕೈಗಾರಿಕಾ ಸಚಿವ, ವಿದೇಶಾಂಗ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದವರು. ಬಹುತೇಕ ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್‌ನಲ್ಲಿಯೇ ಕಳೆದ ಕೃಷ್ಣ ಅವರು ಏಳು ವರ್ಷದ ಹಿಂದೆ ಬಿಜೆಪಿಗೆ ಸೇರಿದ್ದರು. ಅಲ್ಲಿಯೇ ಇದ್ದರು.
ತಮ್ಮ ಶಿಸ್ತು ಬದ್ದ ಜೀವನದ ಮೂಲಕವೇ ಗಮನ ಸೆಳೆದಿದ್ದ ಕೃಷ್ಣ ಅವರು ಕೆಲವು ವರ್ಷಗಳ ಹಿಂದೆ ಅಳಿಯ ಸಿದ್ದಾರ್ಥ ಹೆಗ್ಡೆ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಕೊಂಚ ಬಳಲಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪುತ್ರಿಯೊಂದಿಗೆ ಎಸ್.ಎಂ.ಕೃಷ್ಣ ಅವರ ಮೊಮ್ಮಗನ ಮದುವೆ ಕಳೆದ ವರ್ಷ ನೆರವೇರಿತ್ತು.