ಕನ್ನಡ ಸುದ್ದಿ  /  Karnataka  /  Karnataka Former Cm Bs Yediyurappa Celebrating His 80th Birthday Today

BS Yediyurappa Birthday: 80ನೇ ವಸಂತಕ್ಕೆ ಕಾಲಿಟ್ಟ ರಾಜಾಹುಲಿ; ಸಿಎಂ ಸೇರಿ ಗಣ್ಯರಿಂದ ಬಿಎಸ್ವೈಗೆ ಶುಭಾಶಯಗಳ ಮಹಾಪೂರ

ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ತಮ್ಮ 80ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ

ಶಿವಮೊಗ್ಗ: ರೈತ ಪರ ಹೋರಾಟಗಾರ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ತಮ್ಮ 80ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು, ಬಿಜೆಪಿ ಕಾರ್ಯಕರ್ತರು, ಅವರ ಅಪಾರ ಸಂಖ್ಯೆಯ ಬೆಂಬಲಿಗರು ಬರ್ತಡೇ ಶುಭಾಶಯಗಳನ್ನು ಕೋರಿದ್ದಾರೆ.

ಶಿವಮೊಗ್ಗದ ವಿನೋಬನಗರದಲ್ಲಿರುವ ತಮ್ಮ ನಿವಾಸದಲ್ಲಿ ಭದ್ರಾವತಿ ತಾಲೂಕಿನ ಕಾರ್ಯಕರ್ತರು ತಂದಿದ್ದ 80 ಕೆಜಿ ತೂಕದ ಕೇಕ್ ಕತ್ತರಿಸಿದ ಬಿಎಸ್ ವೈ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಎಸ್ ವೈ ಪುತ್ರರಾದ ಬಿವೈ ರಾಘವೇಂದ್ರ, ಬಿ ವೈ ವಿಜಯೇಂದ್ರ ಸೇರಿದಂತೆ ಹಲವರು ಉಪ ಸ್ಥಿತರಿದ್ದರು.

ಬಿಎಸ್ ವೈ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಈಗಾಗಲೇ ಶಿವಮೊಗ್ಗದಲ್ಲಿ ಇರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಬಿಎಸ್ ವೈ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ರೈತ ನಾಯಕ, ಹುಟ್ಟು ಹೋರಾಟಗಾರ, ನನ್ನ ನಾಯಕರಾದ ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಿ, ಮತ್ತಷ್ಟು ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ್ದ ಬಿಎಸ್ವೈ, ಇದು ನನ್ನ ಕೊನೆಯ ಭಾಷಣ. ಮುಂದಿನ ಅಧಿವೇಶನದಲ್ಲಿ ನಾನು ಸದನಕ್ಕೆ ಬರಲ್ಲ. ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಅಂತಾ ಈಗಾಗಲೇ ಹೇಳಿದ್ದೇನೆ ಎಂದು ಕಲಾಪದಲ್ಲಿ ಗದ್ಗದಿತರಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಎಲ್ಲಾ ಅವಕಾಶ ನೀಡಿದ್ದಾರೆ. ನಾನು ಅವರಿಗೆ ಚಿರಋಣಿ. ನನ್ನದು ಕೊನೆಯ ಸಭೆ ಎಂದು ತಿಳಿಸಿದರು. ಈ ವೇಳೆ ಪಕ್ಷಾತೀತವಾಗಿ, ಇಲ್ಲ ನೀವು ಮತ್ತೆ ಆರಿಸಿ ಬರಬೇಕು ಎಂದು ಸದನದಲ್ಲಿ ಶಾಸಕರು ಕೂಗಿದರು. ನಿಮ್ಮ ಸಲಹೆ ನಮ್ಮ ಸದನಕ್ಕೆ ಅವಶ್ಯಕತೆ ಇದೆ. ಮತ್ತೆ ನೀವು ಸದನಕ್ಕೆ ಬನ್ನಿ ಅಂತಾ ಪಕ್ಷಾತೀತವಾಗಿ ಶಾಸಕರು ಮನವಿ ಮಾಡಿದ್ದರು.

ದೇವರು ನನಗೆ ಶಕ್ತಿ ನೀಡಿದರೆ ಮುಂಬರುವ ಚುನಾವಣೆಯಲ್ಲಿಯೂ ಬಿಜೆಪಿಗಾಗಿ ಕೆಲಸ ಮಾಡುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಪಕ್ಷಕ್ಕೆ ನನ್ನ ಸಹಾಯ ಸದಾ ಇರುತ್ತದೆ ಎಂದು ಹೇಳಿದ್ದರು.

ಬಿ.ಎಸ್.ಯಡಿಯೂರಪ್ಪನವರು 1943ರ ಫೆ. 27 ರಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಿಸಿದರು. ಇವರು ಕರ್ನಾಟಕ ವಿಧಾನಸಭೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಈವರೆಗೆ ಪ್ರತಿನಿಧಿಸುತ್ತಿದ್ದರು. ಮುಂದೆ ಚುನಾವಣೆಗೆ ಸ್ಪರ್ಧಿಸದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ.

IPL_Entry_Point