Karnataka Holiday : ಎಸ್.ಎಂ. ಕೃಷ್ಣ ನಿಧನ, ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ, ಬುಧವಾರ ಕರ್ನಾಟಕದಾದ್ಯಂತ ಸರ್ಕಾರಿ ರಜೆ ಘೋಷಣೆ
ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿಸೆಂಬರ್ 11ರ ಬುಧವಾರ ಕರ್ನಾಟಕದಲ್ಲಿ ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ.
ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಧಿವಶ ಹಿನ್ನೆಲೆಯಲ್ಲಿ 2024 ರ ಡಿಸೆಂಬರ್ 11ರ ಬುಧವಾರ ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಬುಧವಾರ ಬೆಳಿಗ್ಗೆ 8ಗಂಟೆಯವರೆಗೆ ಎಸ್.ಎಂ.ಕೃಷ್ಣ ಅವರ ಸದಾಶಿವ ನಗರ ನಿವಾಸದಲ್ಲಿಯೇ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಿಗ್ಗೆ 10 ಗಂಟೆ ಬಳಿಕ ಅವರ ಹುಟ್ಟೂರು ಮದ್ದೂರು ತಾಲೂಕಿನ ಸೋಮನಹಳ್ಳಿಗೆ ಪಾರ್ಥಿವ ಶರೀರ ಕರೆದೊಯ್ಯಲಾಗುವುದು. ಅಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಆನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.
ಡಿಕೆಶಿ ದೌಡು
ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಳಗಾವಿಯಿಂದ ಬೆಂಗಳೂರಿಗೆ ದೌಡಾಯಿಸಿ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ತಯಾರಿಗಳನ್ನು ಪರಿಶೀಲಿಸಿ ಸೂಚನೆಗಳನ್ನು ನೀಡಿದರು.
ಸೋಮವಾರ ರಾತ್ರಿ ಮೃತಪಟ್ಟ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರವನ್ನು ಸದಾಶಿವ ನಗರದಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ. ವಿದೇಶದಲ್ಲಿರುವ ಸಂಬಂಧಿಕರು ಬರುವುದು ತಡವಾಗುವ ಹಿನ್ನಲೆಯಲ್ಲಿ ಬುಧವಾರಕ್ಕೆ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ(92) ಮಂಗಳವಾರ ನಸುಕಿನಜಾವ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಸದಾಶಿವನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದು, ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದ್ದು ಭಾರೀ ಭದ್ರತೆ ಒದಗಿಸಲಾಗಿದೆ. ಇಡೀ ದಿನ ರಾಜಕೀಯ ಸೇರಿ ಇತರೆ ಕ್ಷೇತ್ರದ ಗಣ್ಯರು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಇದನ್ನೂ ಓದಿರಿ: ಎಸ್.ಎಂ.ಕೃಷ್ಣ; ಬೆಂಗಳೂರು ಪ್ರಗತಿಯಿಂದ ಡಾ.ರಾಜ್ ಬಿಡುಗಡೆವರೆಗೆ
ಬೆಂಗಳೂರು ಪೊಲೀಸ್ ಆಯುಕ್ತ ಭೇಟಿ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಅವರು ಮನೆಗೆ ಭೇಟಿ ನೀಡಿ ಭದ್ರತೆ ಕೈಗೊಂಡರು.
ಬೆಳಿಗ್ಗೆಯಿಂದಲೇ ಕೃಷ್ಣ ಅವರ ಒಡನಾಡಿಗಳು, ಆತ್ಮೀಯರು, ಸಂಬಂಧಿಕರು, ವಿವಿಧ ಕ್ಷೇತ್ರಗಳ ಗಣ್ಯರು ಅವರ ನಿವಾಸಕ್ಕೆ ತೆರಳಿ ಅಂತಿಮ ನಮನಗಳನ್ನು ಸಲ್ಲಿಸಿದರು.
ಮಧ್ಯಾಹ್ನದ ನಂತರ ಬೆಳಗಾವಿಯಿಂದ ಸಿಎಂ, ಸಚಿವರು ಸಹಿತ ಹಲವರು ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ.
ಮೃತರ ಗೌರವಾರ್ಥವಾಗಿ ಬುಧವಾರ ರಜೆ ಘೋಷಿಸಿರುವುದರಿಂದ ಶಾಲಾ ಕಾಲೇಜುಗಳ ಸಹಿತ ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಿರಲಿವೆ ಎಂದು ತಿಳಿಸಲಾಗಿದೆ.
ಶೋಕಾಚರಣೆ ಮೂರು ದಿನ
ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯದಲ್ಲಿ 3 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಾಟ ನಡೆಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಮೂರು ದಿನಗಳ ಕಾಲ ರಾಜ್ಯದಲ್ಲಿ ಯಾವುದೇ ಸರ್ಕಾರಿ ಹಾಗೂ ಮನರಂಜನಾ ಕಾರ್ಯಕ್ರಮ ನಡೆಯುವುದಿಲ್ಲ. ಇಂದಿನಿಂದ ಡಿಸೆಂಬರ್ 12ರವರೆಗೆ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿದೆ.
ಹುಟ್ಟೂರಲ್ಲೂ ಮಂಡ್ಯ ಪೊಲೀಸರ ಭದ್ರತೆ
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಎಸ್‌ಎಂ ಕೃಷ್ಣ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಗಳು ನೆರವೇರುವುದರಿಂದ ಅಲ್ಲಿಯೂ ಭದ್ರತೆಗೆ ಮಂಡ್ಯ ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರು ಮೈಸೂರು ಮಾರ್ಗದ ನಡುವೆ ಇರುವ ಸೋಮನಹಳ್ಳಿಗೂ ಸಿಎಂ ಸಹಿತ ಪ್ರಮುಖ ಗಣ್ಯರು ಬರುವುದರಿಂದ ಸಿದ್ದತೆ ಶುರು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.