Balija Nigam: ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದ ರಾಜ್ಯ ಸರಕಾರ
ಬಲಿಜ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 3ಎಯಲ್ಲಿ ಔದ್ಯೋಗಿಕ ಮೀಸಲಾತಿಯನ್ನು ನೀಡಲಾಗಿದೆ. ಪ್ರವರ್ಗ 2ಎನಲ್ಲಿ ಶೈಕ್ಷಣಿಕ ಮೀಸಲಾತಿ ಕಲ್ಪಿಸಲಾಗಿದೆ.
ಬೆಂಗಳೂರು: ಇತ್ತೀಚೆಗೆ ಈಡಿಗ ಮತ್ತು ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದ ಕರ್ನಾಟಕ ಸರಕಾರವು ಇದೀಗ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದೆ. ಬಲಿಜ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಇತ್ತೀಚೆಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದ್ದರು.
ಬಲಿಜ, ಬಲಜಿಗ, ಬಣಜಿಗ, ಗೌಡ ಬಣಜಿಗ, ನಾಯ್ಡು, ತೆಲಗ ಬಲಿಜಿಗ, ತೆಲಗ ಬಣಜಿಗ, ಶೆಟ್ಟಿ ಬಲಿಜ, ಶೆಟ್ಟಿ ಬಣಜಿಗ,ಬಣಜಿಗ ಶೆಟ್ಟಿ, ದಾಸರ ಬಲಿಜ, ದಾಸರ ಬಲಿಜಿಗ, ದಾಸರ ಬಣಜಿಗ,ದಾಸಬಣಜಿಗ,ಕಸ್ಟನ್, ಮುನ್ನೂರ, ಮುನ್ನಾರ, ಮುನ್ನೂರ್ ಕಾಪು, ಬಳೆಗಾರ,ಬಳೆ ಬಣಜಿಗ, ಬಳೆ ಬಲಜಿಗ, ಬಳೆ ಛೆಟ್ಟಿ, ಬಣಗಾರ ರೆಡ್ಡಿ(ಬಲಿಜ), ಜನಪ್ಪನ್, ಉಪ್ಪಾರ(ಬಲಿಜ), ತುಲೇರು ಜಾತಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿ ದೊರಕಲಿದೆ.
ಆದೇಶದ ಪ್ರಕಾರ, ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 3ಎಯಲ್ಲಿ ಔದ್ಯೋಗಿಕ ಮೀಸಲಾತಿಯನ್ನು ನೀಡಲಾಗಿದೆ. ಪ್ರವರ್ಗ 2ಎನಲ್ಲಿ ಶೈಕ್ಷಣಿಕ ಮೀಸಲಾತಿ ಕಲ್ಪಿಸಲಾಗಿದೆ.
ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ನೀಡುತ್ತೇವೆ ಎಂದೂ ಸುಧಾಕರ್ ಇತ್ತೀಚೆಗೆ ಭರವಸೆ ನೀಡಿದ್ದರು. "ಮುಂದೆ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದ್ದು, ಬಲಿಜ ಕಮ್ಯುನಿಟಿಗೆ ಉದ್ಯೋಗದಲ್ಲಿ 2ಎ ಮೀಸಲಾತಿ ನೀಡಲಾಗುವುದು. ಬಲಿಜ ಸಂಘಕ್ಕಕೆ ಎಂಟು ಕೋಟಿ ರೂ. ಮೌಲ್ಯದ ಒಂದು ಎಕರೆ ಜಮೀನು ನೀಡಲಾಗುವುದುʼʼ ಎಂದು ಅವರು ಭರವಸೆ ನೀಡಿದ್ದರು.
ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಈ ವರ್ಷದ ಆರಂಭದಲ್ಲಿ ಕರ್ನಾಟಕ ರಾಜ್ಯ ಬಲಿಜ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲ ವರ್ಗದ ಮತಗಳನ್ನು ಪಡೆಯಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುತ್ತಿದೆ ಎನ್ನಲಾಗುತ್ತಿದೆ.
ಗಾಣಿಗ ಮತ್ತು ಈಡಿಗ ನಿಗಮ
ಇತ್ತೀಚೆಗೆ ರಾಜ್ಯ ಸೆರಕಾರವು ಗಾಣಿಗ ಮತ್ತು ಈಡಿಗ ಸಮುದಾಯಕ್ಕೂ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿತ್ತು.
ಪ್ರವರ್ಗ 2ಎಯ ಕ್ರಮಸಂಖ್ಯೆ 4(a)ಯಿಂದ z ವರೆಗೆ ಈಡಿಗ ಬಿಲ್ಲವ ಸೇರಿದಂತೆ ನಮೂದಾಗಿರುವ ಒಟ್ಟು 26 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿತ್ತು. ""ರಾಜ್ಯದ ಬಿಲ್ಲವ/ಈಡಿಗ ಸಮುದಾಯಗಳ ಬಹುದಿನದ ಬೇಡಿಕೆಯಾಗಿದ್ದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ. ಈ ನಿಗಮವು ಈಡಿಗ/ಬಿಲ್ಲವ ಸೇರಿದಂತೆ ಇತರ ಪ್ರಮುಖ 26 ಉಪಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸಲಿದೆ." ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.
ಸರ್ಕಾರದ ಆದೇಶದಲ್ಲಿ ಹೊಸ ಕೆನೆಪದರ ಮತ್ತು ಭಾರತದ ಸಂವಿಧಾನದ ಅನುಚ್ಛೇದ-15(4)ರಂತೆ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಮತ್ತು 16(4)ರ ಮೇರೆಗೆ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಕಲ್ಪಿಸಲು ಹಿಂದುಳಿದ ವರ್ಗಗಳನ್ನು ಗುರುತಿಸಿ ಜಾತಿ ವಟ್ಟಿಯನ್ನು ಹೊರಡಿಸಲಾಗಿರುತ್ತದೆ. ಅದರನ್ವಯ ಸದರಿ ಜಾತಿ ಪಟ್ಟಿಯಲ್ಲಿ ಪವರ್ಗ 2ಎ'ಯ ಕ್ರಮಸಂಖ್ಯೆ 4(a)ಯಿಂದ (z)ವರೆಗೆ ನಮೂದಾಗಿರುವ ಈಡಿಗ ಸೇರಿದಂತೆ ಒಟ್ಟು 26 ಜಾತಿಗಳಿಗೆ ಶೈಕ್ಷಣಿಕ ಹಾಗೂ ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದೇ ಸಮಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮಸಂಖ್ಯೆ 78(ಎ)ಯಿಂದ (ಇ)ವರೆಗೆ ಬರುವ ಗಾಣಿಗ, ತೇಲಿ, ಗಾಂಡ್ಲ, ವನಿಯನ್ ಹಾಗೂ ಜ್ಯೋತಿನಗರ, ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಲಾಗಿತ್ತು.
ರಾಜ್ಯದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಗಾಣಿಗ ಸಮುದಾಯದ ಅಭಿವೃದ್ಧಿಗೆ ಹಲವು ವರ್ಷಗಳಿಂದ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಆದರೆ, ಹಲವು ವರ್ಷಗಳಿಂದ ಬೇಡಿಕೆ ಈಡೇರಿರಲಿಲ್ಲ.