ಕರ್ನಾಟಕದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ, ವಿವಿಧ ಕಾರ್ಯಕ್ರಮ ರೂಪಿಸಲು ಸೂಚನೆ; ಸದ್ಯವೇ ಹೊಸ ಮಸೂದೆ ಮಂಡನೆ
ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‌ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‌ಕಾರ್ಟ್, ಬಿಗ್‌ಬಾಸ್ಕೆಟ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಗಿಗ್ ಕಾರ್ಮಿಕರಿಗೆ ಕರ್ನಾಟಕದಲ್ಲಿ ಪ್ರತ್ಯೇಕ ಮಂಡಳಿ ರಚನೆಯಾಗಲಿದೆ.

ದೆಹಲಿ: ಗಿಗ್ ಕಾರ್ಮಿಕರ ಹಿತ ರಕ್ಷಣೆ ಕಾಯುವ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆಯ ಮೂಲಕ ಒದಗಿಸಲು ಕರ್ನಾಟಕದಲ್ಲಿ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹತ್ತಾರು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳಿಗಾಗಿ ಮುಂದಾಗಿತ್ತು. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೂ ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಪರವಾಗಿ ಧ್ವನಿ ಎತ್ತಿದ್ದರು.
ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಸಂತೋಷ್ ಲಾಡ್,ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಅವರು ಪಾಲ್ಗೊಂಡು ಈ ಬಗ್ಗೆ ಸಮಗ್ರವಾಗಿ ಚರ್ಚಿಸಿದರು. ಸಭೆ ಫಲಪ್ರದವಾಗಿದ್ದು "ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ" ಸ್ಥಾಪಿಸುವ ತೀರ್ಮಾನಕ್ಕೆ ಬರಲಾಗಿದೆ. ಸಂಬಂಧಿತ ಸಂಸ್ಥೆಗಳಿಂದ ಶೇ5 ರಷ್ಟು ಸೆಸ್ ಸಂಗ್ರಹಿಸುವುದು ಮತ್ತು ಉಳಿದ ಅಗತ್ಯ ಹಣವನ್ನು ಸರ್ಕಾರವೇ ಭರಿಸಿ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸುವುದು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೂವರು ಸಚಿವರ ನೇತೃತ್ವದಲ್ಲಿ ನಡೆದ ಸಭೆಗೆ ಆಗಮಿಸಲು ಗಿಗ್ ಕಾರ್ಮಿಕರ ವಲಯದ ಪರವಾಗಿ ಮೂವರು ಕಾರ್ಯಕರ್ತರಿಗೂ ಅವಕಾಶ ಒದಗಿಸಲಾಗಿತ್ತು.
ಕರ್ನಾಟಕ ರಾಜ್ಯದವರಾದ ರಕ್ಷಿತಾ ದೇವ್, ಹೈದ್ರಾಬಾದಿನ ಶೇಖ್ ಸಲಾಹುದ್ದೀನ್, ನಿಖಿಲ್ ದೇವ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಮಿಕ ಇಲಾಖೆ ಸಿದ್ದಪಡಿಸಿದ್ದ ಎಲ್ಲಾ ಎಂಟು ಅಂಶಗಳನ್ನೂ ರಾಹುಲ್ ಗಾಂಧಿ ಅವರು ಮೆಚ್ಚಿಕೊಂಡಿದ್ದಾರೆ.
ಮುಂದಿನ ಹಂತವಾಗಿ ಸಮಗ್ರ ಅಂಶಗಳನ್ನು ಒಳಗೊಂಡ ಮಸೂದೆಯನ್ನು ಸಂಪುಟದ ಮುಂದೆ ಮಂಡಿಸಲು ತೀರ್ಮಾನಿಸಲಾಗಿದೆ. ಕಾರ್ಮಿಕ ಇಲಾಖೆ ಈಗಾಗಲೇ ಕಾರ್ಮಿಕರ ಗ್ರಾಚುಟಿ, ಸಿನಿಮಾ ಕಾರ್ಮಿಕರ ಬಿಲ್ ಸೇರಿ ಮೂರು ಪ್ರಮುಖ ಮಸೂದೆಗಳನ್ನಜ ತಂದಿದ್ದು ಈಗ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಕಾಯ್ದೆ ತರಲು ಮುಂದಾಗಿರುವುದಕ್ಕೆ ರಾಜ್ಯದ ಅಸಂಘಟಿತ ಕಾರ್ಮಿಕ ವಲಯ ಮೆಚ್ಚುಗೆ ವ್ಯಕ್ತಪಡಿಸಿದ್ದು ಸರ್ಕಾರದ ಈ ಕಾಳಜಿಗೆ ಅಭಿನಂದಿಸಿದ್ದಾರೆ.
ಹೊಸ ತಲೆಮಾರಿನ ಉದ್ಯೋಗಗಳಾದ ಡಿಲೆವರಿ ಬಾಯ್ಸ್, ಸೇಲ್ಸ್, ಅಮೆಜಾನ್ ಸಹಿತ ನಾನಾ ಕಂಪೆನಿಗಳ ಸರಬರಾಜು ನೌಕರರನ್ನು ಗಿಗ್ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‌ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‌ಕಾರ್ಟ್, ಬಿಗ್‌ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯ ಅಡಿ ತಂದು ಇಲಾಖೆಯಿಂದ ಸಿಗುವ ವಿಮಾ, ಆರೋಗ್ಯ ಸಹಿತ ವಿವಿಧ ಸೌಲಭ್ಯಗಳನ್ನು ನೀಡುವ ಪ್ರಯತ್ನಗಳು ನಡೆದಿವೆ. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ಕೈಗಾರಿಕೆ ಹಾಗೂ ಐಟಿಬಿಟಿ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದ್ದು. ಈಗ ಪ್ರತ್ಯೇಕ ಮಂಡಳಿ ರೂಪಿಸಿರುವುದರಿಂದ ಸೌಲಭ್ಯ ವಿಸ್ತರಣೆ ಸುಲಭವಾಗಲಿದೆ ಎನ್ನುವುದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವರಣೆ.
ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ2.00 ಲಕ್ಷ ಹಾಗೂ ಜೀವ ವಿಮೆ ರೂ 2.00 ಲಕ್ಷ ಸೇರಿ ಒಟ್ಟು ರೂ.4.00 ಲಕ್ಷಗಳು. ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ.2.00 ಲಕ್ಷಗಳವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ರೂ.1.00 ಲಕ್ಷಗಳವರೆಗೆ (ಅಪಘಾತ ಪ್ರಕರಣಗಳಿಗೆ ಮಾತ್ರ) ಜೀವ ವಿಮಾ ರೂ.2.00 ಲಕ್ಷ ಸೌಲಭ್ಯಗಳು ಗಿಗ್ ಕಾರ್ಮಿಕರಿಗೆ ಸಿಗಲಿವೆ.


