Micro Finance Bill: ಕರ್ನಾಟಕ ಮೈಕ್ರೊ ಫೈನಾನ್ಸ್‌ ಸುಗ್ರೀವಾಜ್ಞೆ2025 ಸಿದ್ದ, ಸಿಎಂಗೆ ಸಲ್ಲಿಕೆ ನಿರೀಕ್ಷೆ; ಕರಡು ಅಧಿಸೂಚನೆಯಲ್ಲಿ ಏನಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Micro Finance Bill: ಕರ್ನಾಟಕ ಮೈಕ್ರೊ ಫೈನಾನ್ಸ್‌ ಸುಗ್ರೀವಾಜ್ಞೆ2025 ಸಿದ್ದ, ಸಿಎಂಗೆ ಸಲ್ಲಿಕೆ ನಿರೀಕ್ಷೆ; ಕರಡು ಅಧಿಸೂಚನೆಯಲ್ಲಿ ಏನಿದೆ

Micro Finance Bill: ಕರ್ನಾಟಕ ಮೈಕ್ರೊ ಫೈನಾನ್ಸ್‌ ಸುಗ್ರೀವಾಜ್ಞೆ2025 ಸಿದ್ದ, ಸಿಎಂಗೆ ಸಲ್ಲಿಕೆ ನಿರೀಕ್ಷೆ; ಕರಡು ಅಧಿಸೂಚನೆಯಲ್ಲಿ ಏನಿದೆ

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್‌ಗಳ ಸಾಲ ವಸೂಲಿ ಕಿರುಕುಳ ಅಧಿಕವಾದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಇಂತಹ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಸುಗ್ರೀವಾಜ್ಞೆಗೆ ಬೇಕಾದ ಕರಡನ್ನು ಅಂತಿಮಗೊಳಿಸಿದೆ. ಇದರಲ್ಲಿ ಹಲವಾರು ಕಠಿಣ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್‌ ವಹಿವಾಟು ನಿಗ್ರಹಿಸುವ ಸುಗ್ರೀವಾಜ್ಞೆ ಕರಡು ಸಿದ್ದವಾಗಿದೆ.
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್‌ ವಹಿವಾಟು ನಿಗ್ರಹಿಸುವ ಸುಗ್ರೀವಾಜ್ಞೆ ಕರಡು ಸಿದ್ದವಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮೂರು ವಾರದಿಂದ ಭಾರೀ ಸದ್ದು ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ನ ಸಾಲ ವಸೂಲಾತಿ ಕಿರುಕುಳ, ಇದರಿಂದ ಹೆಚ್ಚಿರುವ ಆತ್ಮಹತ್ಯೆ ಪ್ರಕರಣಗಳು, ಮನೆ ಬಿಟ್ಟು ಹೋಗುವ ಕುಟುಂಬಗಳ ರೋಧನದ ನಡುವೆಯೇ ಕರ್ನಾಟಕ ಸರ್ಕಾರವೂ ಅನಧಿಕೃತವಾಗಿ ಹಾಗೂ ಯಾವುದೇ ನೋಂದಣಿ ಇಲ್ಲದೇ ಹಣಕಾಸು ವಹಿವಾಟು ನಡೆಸುವವರ ಮೇಲೆ ನಿಯಂತ್ರಣ ಹೇರಲು ಸುಗ್ರಿವಾಜ್ಞೆ ಜಾರಿಗೊಳಿಸಲಿದೆ. ಇದಕ್ಕಾಗಿ ಕರ್ನಾಟಕ ಮೈಕ್ರೊ ಫೈನಾನ್ಸ್‌ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ–2025 ಕರಡನ್ನು ಕರ್ನಾಟಕ ಸರ್ಕಾರದ ಹಿರಿಯ ಸಚಿವರು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿಯು ಸಿದ್ದಪಡಿಸಿದೆ. ನೋಂದಣಿ ಮಾಡಿಸಿಕೊಳ್ಳಲದೇ ಸಾಲ ನೀಡಿ ಕಿರುಕುಳ ಕೊಡುವವರನ್ನು ಜೈಲಿಗೆ ಅಟ್ಟಿ ದಂಡ ಹಾಕುವ ಹಾಗೂ ಸಾಲ ಪಡೆದವರು ಯಾವುದೇ ಹಣ ನೀಡದಂತೆ ನಿರ್ದೇಶಿಸುವ ಹಲವಾರು ಅಂಶಗಳನ್ನೊಳಗೊಂಡ ಕರಡನ್ನು ವಾರದೊಳಗೆ ಸಿದ್ದಪಡಿಸಲಾಗಿದೆ.

ಬೆಂಗಳೂರಿನಲ್ಲಿ ಭಾನುವಾರ ಸಚಿವರಾದ ಎಚ್‌.ಕೆ.ಪಾಟೀಲ್‌, ಕೃಷ್ಣಬೈರೇಗೌಡ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌, ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್‌ ಅವರನ್ನೊಳಗೊಂಡ ಸಮಿತಿಯು . ‘ಕರ್ನಾಟಕ ಮೈಕ್ರೊ ಫೈನಾನ್ಸ್‌ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ–2025 ಕರಡನ್ನು ಅಂತಿಮಗೊಳಿಸಿದೆ. ಸಚಿವರಾದ ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ಹಿರಿಯ ಅಧಿಕಾರಿಗಳು,.ಹಣಕಾಸು ತಜ್ಞರು, ಕಾನೂನು ಪರಿಣಿತರ ಸಲಹೆಯನ್ನು ಪಡೆದುಕೊಂಡು ಇದನ್ನು ರೂಪಿಸಲಾಗಿದೆ.

ನೋಂದಣಿ ರಹಿತ ಹಾಗೂ ಪರವಾನಗಿ ರಹಿತ ಮೈಕ್ರೋ ಫೈನಾನ್ಸ್‌ ಕಂಪೆನಿಗಳು, ಲೇವಾದೇವಿದಾರರು ನೀಡಿರುವ ಸಾಲದ ಅಸಲು ಹಾಗೂ ಬಡ್ಡಿಯನ್ನು ಸಾಲಗಾರರು ಮರುಪಾವತಿ ಮಾಡಬೇಕಿಲ್ಲ ಎನ್ನುವುದು ಸೇರಿದಂತೆ ಹಲವಾರು ಪ್ರಮುಖ ಅಂಶಗಳನ್ನು ಕರಡಿನಲ್ಲಿ ಸೇರಿಸಲಾಗಿದೆ.

‘ಕರ್ನಾಟಕ ಮೈಕ್ರೊ ಫೈನಾನ್ಸ್‌ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ–2025 ಹೆಸರಿನ ಕರಡನ್ನು ಪೂರ್ಣಗೊಳಿಸಿ ಸಿಎಂ ಅವರಿಗೆ ಸಲ್ಲಿಸಲಾಗುತ್ತದೆ. ಆನಂತರ ಸಂಪುಟದಲ್ಲಿ ಅನುಮತಿ ಪಡೆದು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗುತ್ತದೆ. ರಾಜ್ಯಪಾಲರ ಅಂಗೀಕಾರದ ನಂತರ ಸುಗ್ರೀವಾಜ್ಞೆಯು ಕಾನೂನು ಆಗಿ ಜಾರಿಗೊಳ್ಳಲಿದೆ. ಈ ಪ್ರಕ್ರಿಯೆ ಮುಂದಿನ ಒಂದು ವಾರದಲ್ಲಿ ಮುಗಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

ಕರಡಿನಲ್ಲಿರುವ ಪ್ರಮುಖ ಅಂಶಗಳು

  • ಕರ್ನಾಟಕದಲ್ಲಿ ನೋಂದಣಿ ಮಾಡಿಸಿಕೊಳ್ಳದೇ ಮೈಕ್ರೋ ಫೈನಾನ್ಸ್‌ ನಡೆಸುತ್ತಿರುವವರು. ಲೇವಾದೇವಿ ಮಾಡುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ಇವರಿಂದಲೂ ಹೆಚ್ಚಿನ ಕಿರುಕುಳ ಆಗುತ್ತಿದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ‘ಕರ್ನಾಟಕ ಮೈಕ್ರೊ ಫೈನಾನ್ಸ್‌ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ–2025 ಕರಡಿನಲ್ಲಿ ಇದಕ್ಕೆ ಒತ್ತು ನೀಡಲಾಗಿದೆ.
  • ನೋಂದಣಿ ರಹಿತರು ಸಾಲ ಹಾಗೂ ಬಡ್ಡಿ ವಸೂಲಿಗೆ ಸಂಬಂಧಿಸಿದಂತೆ ಯಾವುದೇ ಸಿವಿಲ್‌ ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸಲು ಅವಕಾಶ ನೀಡುವುದಿಲ್ಲ. ಈಗಾಗಲೇ ಯಾವುದಾದರೂ ಪ್ರಕರಣಗಳು ದಾಖಲಾಗಿದ್ದರೂ ಸುಗ್ರೀವಾಜ್ಞೆ ಜಾರಿಯಾದ ನಂತರ ಇಂತಹ ಎಲ್ಲಾ ಪ್ರಕರಣಗಳು ತಾನಾಗಿಯೇ ರದ್ದಾಗಲಿವೆ ಎನ್ನುವುದನ್ನೂ ಕರಡಿನಲ್ಲಿ ಉಲ್ಲೇಖಿಸಲಾಗಿದೆ,
  • ಸಾಲ ಪಡೆದವರಿಗೆ ಕಿರುಕುಳ ನೀಡುವ, ಆಸ್ತಿ ಜಪ್ತಿ ಮಾಡುವ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವಂತಹ ಪ್ರಕರಣವಿದ್ದು. ಆರೋಪ ಸಾಬೀತಾದರೆ ಆರು ತಿಂಗಳಿನಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ. ದಂಡವನ್ನೂ ಐದು ಲಕ್ಷ ರೂ.ವರೆಗೆ ಅಂತಹವರ ವಿರುದ್ದ ವಿಧಿಸಲಾಗುತ್ತದೆ.
  • ನೋಂದಣಿ ಪ್ರಾಧಿಕಾರವು ಈ ರೀತಿ ಜನರಿಗೆ ತೊಂದರೆ ಕೊಟ್ಟ ಮೈಕ್ರೋ ಫೈನಾನ್ಸ್‌ ಅಥವಾ ಇತರೆ ಯಾವುದೇ ಹಣಕಾಸು ಸಂಸ್ಥೆಯಾದರೂ ಅಂತಹ ಸಂಸ್ಥೆ ನೋಂದಣಿಯನ್ನು ರದ್ದುಪಡಿಸುವ ಕಠಿಣ ಕ್ರಮವೂ ಆಗಲಿದೆ.
  • ಯಾವುದೇ ಸಂಸ್ಥೆ ಮೈಕ್ರೋ ಫೈನಾನ್ಸ್‌ ಇಲ್ಲವೇ ಇತರೆ ಹಣಕಾಸು ವಹಿವಾಟು ನಡೆಸುತ್ತಿದ್ದರೆ ಅಂತಹ ಸಂಸ್ಥೆಯು ನೋಂದಾಯಿತ ಕಚೇರಿಯನ್ನು ಸ್ಥಾಪಿಸಿರಬೇಕು. ಬಡ್ಡಿ ದರ ಹಾಗೂ ಹಣಕಾಸು ವಹಿವಾಟು ವಿಚಾರದಲ್ಲಿ ಪಾರದರ್ಶಕತೆ ಇರಲೇಬೇಕು. ಸಾಲ ನೀಡಿದ ಕಾರ್ಡ್‌ ಇಲ್ಲವೇ ಪತ್ರದಲ್ಲಿ ವಿಧಿಸಿದ ಬಡ್ಡಿ, ಷರತ್ತುಗಳ ಅಂಶಗಳು, ನಿಬಂಧನೆಗಳ ವಿವರ, ಮರುಪಾವತಿ ಮಾರ್ಗಗಳನ್ನು ಕಡ್ಡಾಯವಾಗಿ ಒದಗಿಸಬೇಕು.
  • ಸಾಲ ಪಡೆದವರಿಗೆ ಅರ್ಥವಾಗುವ ರೀತಿಯಲ್ಲಿ ಉಲ್ಲೇಖಿಸಬೇಕು. ಸ್ಥಳೀಯ ಭಾಷೆಯಲ್ಲಿಯೇ ಸಂವಹನ ನಡೆಸುವಂತಿರಬೇಕು ಎನ್ನುವ ಅಂಶ ಕರಡಿನಲ್ಲಿ ಸೇರಿದೆ.
  • ವಹಿವಾಟು ನಡೆಸುವವರು ಸಾಲದ ಮೊತ್ತ ಪಡೆದಾಗ ಸೂಕ್ತ ರಸೀದಿಯನ್ನು ಸಾಲ ತುಂಬಿದವರಿಗೆ ನೀಡಬೇಕು.
  • ಹಣಕಾಸು ವಹಿವಾಟು ನಡೆಸುವ ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ಹಾಗೂ ವಾರ್ಷಿಕ ಸಮಗ್ರ ವರದಿಯನ್ನು ನೋಂದಣಿ ಪ್ರಾಧಿಕಾರಗಳಿಗೆ ಸಲ್ಲಿಸಬೇಕು. ವರದಿ ಸಲ್ಲಿಸದೇ ಇರುವುದು ಕಂಡು ಬಂದರೆ ಅಂತಹ ಸಂಸ್ಥೆಗಳ ಪ್ರಮುಖರಿಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲು ಅವಕಾಶ ಮಾಡಿಕೊಡಲಾಗಿದೆ.
  • ಸುಗ್ರೀವಾಜ್ಞೆ ಜಾರಿಯಾದ ಒಂದು ತಿಂಗಳ ಒಳಗೆ ಕಡ್ಡಾಯವಾಗಿ ಎಲ್ಲಾ ಮೈಕ್ರೋ ಫೈನಾನ್ಸ್‌, ಲೇವಾದೇವಿ ಸಹಿತ ವಹಿವಾಟು ನಡೆಸುವವರು ನೋಂದಣಿ ಪ್ರಾಧಿಕಾರಿಯಾಗಿರುವ ಆಯಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕ.
  • ಸಾಲಗಾರರ ವಿವರ, ಸಾಲದ ಪ್ರಮಾಣ, ಬಡ್ಡಿ ಮೊತ್ತ, ಈಗಾಗಲೇ ಸಾಲ ಪಡೆದವರಿಂದ ಪಡೆದುಕೊಂಡ ಮುಚ್ಚಳಿಕೆಯನ್ನು ಲಿಖಿತವಾಗಿ ಡಿಸಿ ಅವರ ಎದುರು ಸಲ್ಲಿಸಬೇಕು.
  • ಸುಗ್ರೀವಾಜ್ಞೆ ಜಾರಿಯಾದ ನಂತರವೂ ನೋಂದಣಿ ಮಾಡಿಸಿಕೊಳ್ಳದೇ ವಹಿವಾಟಿಗೆ ಅವಕಾಶವನ್ನು ನೀಡುವುದಿಲ್ಲ. ಕೂಡಲೇ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಒಂದು ವರ್ಷಕ್ಕೊಮ್ಮೆ ನೋಂದಣಿಯನ್ನು ಮರುನವೀಕರಣ ಮಾಡಿಕೊಳ್ಳಬೇಕು. ಎರಡು ತಿಂಗಳ ಮೊದಲೇ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು.
  • ಇದರ ನಡುವೆಯೂ ಯಾವುದಾದರೂ ದೂರುಗಳು ಬಂದು ನೋಂದಣಿ ಪ್ರಾಧಿಕಾರಕ್ಕೆ ಖಚಿತವಾದರೆ ಕೂಡಲೇ ನೋಂದಣಿ ರದ್ದಾಗಲಿದೆ.
  • ನಿಯಮ ಉಲ್ಲಂಘಿಸಿದರೆ ಯಾವುದೇ ಪೂರ್ವ ನೋಟಿಸ್‌ ಇಲ್ಲದೇ ಸಂಸ್ಥೆ ಮಾನ್ಯತೆಯನ್ನು ರದ್ದು ಮಾಡಲಾಗುತ್ತದೆ.
  • ಸಾಲಕ್ಕೆ ಸಂಬಂಧಿಸಿ ಅಡಮಾನ ರೂಪವಾಗಿ ಆಸ್ತಿ ಇಲ್ಲವೇ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಹಾಗೊಂದು ವೇಳೆ ಈಗಾಗಲೇ ಅಡಮಾನ ರೂಪದಲ್ಲಿ ಏನನ್ನಾದರೂ ಪಡೆದಿದ್ದರೆ ವಾಪಸ್‌ ಕೊಡಬೇಕು.
  • ಸಾಲ ಕೊಡುವ ಹಾಗೂ ವಸೂಲಿಗೆ ಸಂಬಂಧಿಸಿದ ನಿಯಮಗಳನ್ನು ಸರ್ಕಾರವೇ ರೂಪಿಸಿ ಅಧಿಸೂಚನೆ ಹೊರಡಿಸಲಿದೆ.
  • ಸಾಲ ನೀಡಿ ಕಿರುಕುಳ ಕೊಟ್ಟರೆ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಲು ಅವಕಾಶವಿದೆ. ಡಿವೈಎಸ್ಪಿ ಹಂತದ ಅಧಿಕಾರಿ ಪ್ರಕರಣದ ತನಿಖೆ ನಡೆಸುವರು. ಅಲ್ಲದೇ ವಿವಾದ ಇತ್ಯರ್ಥಕ್ಕೆ ಜಿಲ್ಲಾ ಮಟ್ಟದಲ್ಲಿ ಕೆಎಎಸ್‌ ಅಧಿಕಾರಿ ನೇತೃತ್ವದ ಒಂಬುಡ್ಸ್‌ಮನ್‌ ನೇಮಕವಾಗಲಿದ್ದಾರೆ.

Whats_app_banner