ಜನನ, ಮರಣ ಪ್ರಮಾಣಪತ್ರ ಶುಲ್ಕ 10 ಪಟ್ಟು ಏರಿಸಿದ ಕರ್ನಾಟಕ ಸರಕಾರ; ಗ್ಯಾರಂಟಿಗೆ ಹಣ ಹೊಂದಿಸಲು ಈ ಕ್ರಮವೇ ಎಂದು ಪ್ರಶ್ನಿಸಿದ ಜನತೆ
ಕನ್ನಡ ಸುದ್ದಿ  /  ಕರ್ನಾಟಕ  /  ಜನನ, ಮರಣ ಪ್ರಮಾಣಪತ್ರ ಶುಲ್ಕ 10 ಪಟ್ಟು ಏರಿಸಿದ ಕರ್ನಾಟಕ ಸರಕಾರ; ಗ್ಯಾರಂಟಿಗೆ ಹಣ ಹೊಂದಿಸಲು ಈ ಕ್ರಮವೇ ಎಂದು ಪ್ರಶ್ನಿಸಿದ ಜನತೆ

ಜನನ, ಮರಣ ಪ್ರಮಾಣಪತ್ರ ಶುಲ್ಕ 10 ಪಟ್ಟು ಏರಿಸಿದ ಕರ್ನಾಟಕ ಸರಕಾರ; ಗ್ಯಾರಂಟಿಗೆ ಹಣ ಹೊಂದಿಸಲು ಈ ಕ್ರಮವೇ ಎಂದು ಪ್ರಶ್ನಿಸಿದ ಜನತೆ

ಕರ್ನಾಟಕದಲ್ಲಿ ಜನನ ಪ್ರಮಾಣ ಪತ್ರ ಪಡೆಯುವ ದರವನ್ನು ರಾಜ್ಯ ಸರ್ಕಾರ ಸದ್ದಿಲ್ಲದೇ ಏರಿಕೆ ಮಾಡಿದೆ. ಈ ಪ್ರಮಾಣ ಪತ್ರ ಪಡೆಯಲು ಜನ ಹೆಚ್ಚು ಶುಲ್ಕ ತೆರಬೇಕೇ ಎಂಬ ಪ್ರಶ್ನೆ ಎದುರಾಗಿದೆ.ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

ಕರ್ನಾಟಕದಲ್ಲಿ ಜನನ ಮರಣ ಪ್ರಮಾಣ ಪತ್ರ ಪಡೆಯುವ ದರ ದುಬಾರಿಯಾಗಿದೆ.
ಕರ್ನಾಟಕದಲ್ಲಿ ಜನನ ಮರಣ ಪ್ರಮಾಣ ಪತ್ರ ಪಡೆಯುವ ದರ ದುಬಾರಿಯಾಗಿದೆ.

ಮಂಗಳೂರು: ಸರಕಾರ ತನ್ನ ಖಜಾನೆ ತುಂಬಿಸಲು ಏನೇನು ಮಾಡಬೇಕು ಅಂಥದ್ದನ್ನೆಲ್ಲಾ ಮಾಡುವ ಹೊತ್ತಿಗೆ, ಮರಣ ಪ್ರಮಾಣಪತ್ರವನ್ನೂ ಬಿಟ್ಟಿಲ್ಲ. ಒಬ್ಬರು ಸತ್ತಿದ್ದಾರೆ ಎಂದು ಪ್ರಮಾಣಪತ್ರ ಪಡೆಯಬೇಕಾದರೆ, ದುಡ್ಡು ಮೊದಲಿಗಿಂತ ಹತ್ತುಪಟ್ಟು ಹೆಚ್ಚು ಕೊಡಬೇಕು, ಇಡೀ ರಾಜ್ಯದಲ್ಲೇ ಈ ಪರಿಸ್ಥಿತಿ ಕೆಲ ದಿನಗಳಿಂದ ಸದ್ದಿಲ್ಲದೆ ಉದ್ಭವವಾಗಿದೆ. ಕೆಲ ತಿಂಗಳ ಹಿಂದೆ ಇದ್ದ ಶುಲ್ಕ ಮತ್ತು ಈಗಿನ ಶುಲ್ಕ ಹಾಗೂ ತಿಂಗಳಿಗೆ ಮತ್ತು ವರ್ಷಕ್ಕೆ ವಿಧಿಸಲಾಗುವ ದರಪಟ್ಟಿಯನ್ನೇ ನೋಡಿ. ಜನನ ಮರಣ ಪತ್ರಕ್ಕೆ ಹಿಂದಿನ ಶುಲ್ಕ 5 ರೂ ಇತ್ತು, ಈಗ 50 ರೂ ಆಗಿದೆ. 5 ಪ್ರತಿಗೆ 25 ರೂ ಇತ್ತು. ಈಗ 250 ರೂ ಆಗಿದೆ. ತಿಂಗಳಿಗೆ ದಂಡ 2 ರೂ ಇತ್ತು, ಈಗ 20 ರೂ ಆಗಿದೆ. ವರ್ಷದ ದಂಡ 5 ರೂ ಇತ್ತು, ಈಗ 50 ರೂ ಆಗಿದೆ. ಸಾರ್ವಜನಿಕರೂ ಕೂಡ ದರ ಏರಿಕೆ ಮಾಡಿದ್ದನ್ನು ಇದೇ ರೀತಿ ಪ್ರಶ್ನಿಸುತ್ತಿದ್ದಾರೆ.

ಫೆಬ್ರವರಿ 4ರಿಂದ ಜಾರಿಯಾದ ಆದೇಶ

ಫೆಬ್ರವರಿ 4ರಿಂದ ಈ ಆದೇಶ ಜಾರಿಯಾಗಿದೆ. ರಾಜ್ಯ ಸರಕಾರ ಪಂಚಗ್ಯಾರಂಟಿಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ ಎಂದು ಒಂದೆಡೆ ಹೇಳಿಕೊಂಡರೆ, ಇನ್ನೊಂದೆಡೆ ತೆರಿಗೆ, ಸುಂಕದ ಏರಿಕೆ ಮೂಲಕ ಬರೆ ನೀಡುತ್ತಿರುವುದು ಇದರಿಂದ ಖಾತ್ರಿಯಾಗುತ್ತಿದೆ ಎಂದು ಜನಸಾಮಾನ್ಯರು ಹೇಳುವಂತಾಗಿದೆ. ಜನನ ಮರಣ ಪತ್ರ ಜನಸಾಮಾನ್ಯರಿಗೆ ಪ್ರಮುಖವಾದದ್ದು. ಹಿಂದೆ ಒಂದು ಜನನ ಮರಣ ಪತ್ರದ ಪ್ರತಿ 5 ರೂಗೆ ಸಿಕ್ಕುತ್ತಿತ್ತು. 10 ಪ್ರತಿ ಬೇಕಾದರೆ 50 ರೂ ಕೊಟ್ಟರೆ ಮುಗೀತು. ಈಗ ಹಾಗಲ್ಲ, 1ಕ್ಕೆ 50, 10ಕ್ಕೆ 500 ರೂ ಕೊಡಬೇಕು.

ಮಗು ಹುಟ್ಟಿದಲ್ಲಿಂದ ತೊಡಗಿ, ವಯಸ್ಸಾಗಿ ಸಾವನ್ನಪ್ಪುವವರೆಗೂ ಪ್ರಮಾಣ ಈಗ ಬೇಕು. ಆಧಾರ್ ಕಾರ್ಡ್, ನರ್ಸರಿ, ಎಲ್. ಎಲ್ ಕೆಜಿ ಸೇರಿ ಮಗುವಿನ ಹೆಸರಲ್ಲಿ ಪ್ರತಿಯೊಂದು ದಾಖಲೆಪತ್ರದ ಜೊತೆಗೆ ಜನನ ಪ್ರಮಾಣಪತ್ರ ಬೇಕು. ಈಗ ಇದಕ್ಕೆ 5 ಪಟ್ಟು ಹಣ ಹೆಚ್ಚು ಕಟ್ಟಬೇಕು. ಈ ಆದೇಶ ಫೆಬ್ರವರಿ 4ರಂದು ಜಾರಿಯಾಗಿದ್ದರೂ ಈ ಕುರಿತು ಸಂಬಂಧಪಟ್ಟವರಿಗೆ ಬದಲಾವಣೆಯ ಕುರಿತು ಗೊತ್ತಿಲ್ಲದ ಕಾರಣ ಚಾಚೂ ತಪ್ಪದೆ ಹೇಳಿದ ದುಡ್ಡು ಕೊಟ್ಟು ಸರ್ಟಿಫಿಕೇಟ್ ಪಡೆದುಕೊಂಡು ಬರುತ್ತಿದ್ದಾರೆ.

ಸಂಬಂಧಿಕರು ಏನು ಹೇಳುತ್ತಾರೆ?

ಈ ಕುರಿತು ಮೃತರ ಸಂಬಂಧಿಕರು ಹೇಳುವುದು ಹೀಗೆ. ಶ್ರೀಮಂತನಾಗಲೀ, ಬಡವನಾಗಲೀ, ಅಥವಾ ಮಧ್ಯಮ ವರ್ಗದವರಾಗಲೀ, ಕುಟುಂಬದಲ್ಲಿ ಸದಸ್ಯರೊಬ್ಬರು ಮರಣ ಹೊಂದಿದರೆ, ಮರಣ ದೃಢೀಕರಣ ಪತ್ರವನ್ನು ನಿಧನ ಹೊಂದಿದ ಸ್ಥಳದ ಸ್ಥಳೀಯ ಸಂಬಂಧಪಟ್ಟ ಇಲಾಖೆಯಿಂದ ಪಡೆಯಬೇಕು ಎಂಬ ಸರಕಾರದ ನಿಯಮ ಇದೆ. ಹಿಂದೆ ಇದನ್ನು ಪಡೆಯಲು ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದಾಗ 10 ಪ್ರತಿಯನ್ನು ಪಡೆಯಲು 60 ರೂಪಾಯಿ ಪಾವತಿಸಬೇಕಾಗಿತ್ತು.

ಫೆಬ್ರವರಿ ತಿಂಗಳಿನಿಂದ ಮರಣ ದೃಢೀಕರಣದ 10 ಪ್ರತಿಯನ್ನು ಪಡೆಯಬೇಕಾದರೆ ಕುಟುಂಬದ ಸದಸ್ಯ 500 ರೂಪಾಯಿ ಪಾವತಿಸಲು ಸರಕಾರದ ಆದೇಶ ಬಂದಿದ್ದು, ಇದು ರಾಜ್ಯದ ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿದೆ ಸಿಬ್ಬಂದಿಗಳು ಪರಿಷ್ಕೃತ ದರವನ್ನು ಪಡೆದು ಮರಣ ದೃಢೀಕರಣ ಪತ್ರವನ್ನು ನೀಡುತ್ತಿದ್ದಾರೆ.

ಮೃತಪಟ್ಟವರ ಕುಟುಂಬದವರಿಗೆ ಉಚಿತವಾಗಿ ಮರಣ ಪತ್ರವನ್ನು ನೀಡಿ ದುಃಖತೃಪ್ತ ಕುಟುಂಬದ ಕಣ್ಣೀರು ಒರೆಸುವ ಕೆಲಸ ಮಾಡಬೇಕಾದ ಸರಕಾರ ಸತ್ತವರ ಹೆಸರಿನಲ್ಲೂ ಖಜಾನೆ ತುಂಬಬೇಕೇ? ಹೀಗೆಂದು ಸಂಬಂಧಿಕ ಕಿಶೋರ್ ಸೊರ್ನಾಡು ಪ್ರಶ್ನಿಸುತ್ತಾರೆ.

ಅಂತ್ಯಸಂಸ್ಕಾರ ನಿಧಿಯೂ ಇಲ್ಲ

ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 2010-11ನೇ ಸಾಲಿನ ಆಯವ್ಯಯದಲ್ಲಿ 2,500 ಲಕ್ಷ ರೂ ಅನುದಾನ ಘೋಷಣೆಯನ್ನು ರಾಜ್ಯ ಸರಕಾರ ಮಾಡಿತ್ತು. ಈ ಅನುದಾನದಲ್ಲಿ 833 ಲಕ್ಷ ರೂ ಅಂತ್ಯಸಂಸ್ಕಾರ ನೆರವು ಯೋಜನೆಯಡಿ ಬಡತನ ರೇಖೆಗಿಂತ ಕೆಳ ಮಟ್ಟದಲ್ಲಿರುವ ಸದಸ್ಯರು ಮೃತಪಟ್ಟಲ್ಲಿ ಅವರ ಅಂತ್ಯಸಂಸ್ಕಾರಕ್ಕಾಗಿ ಕುಟುಂಬ ಸದಸ್ಯರಿಗೆ ತಲಾ 1 ಸಾವಿರ ರೂ ನೀಡಲು ಮೀಸಲಿಡಲಾಗಿತ್ತು. ಈಗ ಇಂಥದ್ದನ್ನು ಕೇಳಿದರೆ ಹೌದಾ ಎನ್ನುವಷ್ಟರ ಮಟ್ಟಿಗೆ ಸರಕಾರ ಮರೆತುಬಿಟ್ಟಿದೆ.

ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner