ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ, ಕರ್ನಾಟಕದಾದ್ಯಂತ ಬಡ ರೋಗಿಗಳ ಪರದಾಟ; ಟೆಂಡರ್‌ ಪ್ರಕ್ರಿಯೆ ವಿಳಂಬಕ್ಕೆ ಕಾರಣವೇನು
ಕನ್ನಡ ಸುದ್ದಿ  /  ಕರ್ನಾಟಕ  /  ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ, ಕರ್ನಾಟಕದಾದ್ಯಂತ ಬಡ ರೋಗಿಗಳ ಪರದಾಟ; ಟೆಂಡರ್‌ ಪ್ರಕ್ರಿಯೆ ವಿಳಂಬಕ್ಕೆ ಕಾರಣವೇನು

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ, ಕರ್ನಾಟಕದಾದ್ಯಂತ ಬಡ ರೋಗಿಗಳ ಪರದಾಟ; ಟೆಂಡರ್‌ ಪ್ರಕ್ರಿಯೆ ವಿಳಂಬಕ್ಕೆ ಕಾರಣವೇನು

ಕರ್ನಾಟಕದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸರ್ಕಾರದ ಔಷಧ ಸರಬರಾಜು ಕೊರತೆಯಾಗಿ ರೋಗಿಗಳು ಹೊರಗಡೆ ಔಷಧ ಖರೀದಿಸುವ ಸನ್ನಿವೇಶ ಸೃಷ್ಟಿಯಾಗುತ್ತಿದೆ.ವರದಿ: ಎಚ್‌.ಮಾರುತಿ.ಬೆಂಗಳೂರು

ಕರ್ನಾಟಕದ ಹಲವು ಭಾಗಗಳ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಗಳ ಸರಬರಾಜಿನಲ್ಲಿ ವ್ಯತ್ಯಯವಾಗಿದೆ
ಕರ್ನಾಟಕದ ಹಲವು ಭಾಗಗಳ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಗಳ ಸರಬರಾಜಿನಲ್ಲಿ ವ್ಯತ್ಯಯವಾಗಿದೆ

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಎದುರಾಗಿದೆ. ಒಂದು ಕಡೆ ಸರ್ಕಾರ ಔಷಧಿಗಳಿಗೆ ಕೊರತೆ ಇಲ್ಲ ಎಂದು ವಾದಿಸುತ್ತಿದ್ದರೂ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಕೊರತೆ ಇರುವುದನ್ನು ರೋಗಿಗಳೇ ಸ್ಪಷ್ಟಪಡಿಸಿದ್ದಾರೆ. ಸರ್ಕಾರ 400ಕ್ಕೂ ಹೆಚ್ಚು ಔಷಧಗಳನ್ನು ಪೂರೈಕೆ ಮಾಡುತ್ತಿದ್ದು, 250ಕ್ಕೂ ಹೆಚ್ಚು ಔಷಧಗಳು ಅಲಭ್ಯ ಎಂಬ ಮಾಹಿತಿ ಇದೆ. ಸರ್ಕಾರದ ಪಟ್ಟಿಯಲ್ಲಿ 410 ಅಗತ್ಯ ಮತ್ತು 322 ಅವಶ್ಯಕ ಔಷಧಿಗಳು ಎಂದು ಪಟ್ಟಿ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಕೊರತೆ ಇಲ್ಲ. ನಮ್ಮ ಸರ್ಕಾರ ಬಂದ ಆರಂಭದಲ್ಲಿ ಕೇವಲ ಶೇ.40 ರಷ್ಟು ಔಷಧಗಳು ಮಾತ್ರ ಲಭ್ಯವಾಗುತ್ತಿದ್ದವು. ಉಳಿದ ಔಷಧಗಳನ್ನು ಆಸ್ಪತ್ರೆಗಳಲ್ಲೇ ಖರೀದಿ ಮಾಡಲಾಗುತ್ತಿತ್ತು. ಈಗ ಶೇ. 75 ರಷ್ಟು ಔಷಧಗಳನ್ನು ವೈದ್ಯಕೀಯ ಸರಬರಾಜು ನಿಗಮ ಪೂರೈಕೆ ಮಾಡುತ್ತಿದೆ ಎಂದಿದ್ದಾರೆ.

ಸದ್ಯ, ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದ ಔಷಧ ಇದೆ. ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಯಾವ ಔಷಧ ಇಲ್ಲವೋ ಅಂತಹವುಗಳನ್ನು ಸ್ಥಳೀಯವಾಗಿ ಖರೀದಿಸಲು ಸೂಚನೆ ನೀಡಲಾಗಿದೆ. ಈ ಮೂಲಕ, ಔಷಧ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಸಚಿವರ ಸೂಚನೆ ನಂತರವೂ

ಆದರೂ ರೋಗಿಗಳಿಗೆ ಹೊರಗಡೆ ಖರೀದಿ ಮಾಡುವಂತೆ ವೈದ್ಯರೇ ಚೀಟಿ ಬರೆದುಕೊಡುತ್ತಿದ್ದಾರೆ. ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವುದೇ ಔಷಧ ಕೊರತೆಗೆ ಪ್ರಮುಖ ಕಾರಣ ಎಂದು ಇಲಾಖೆಯ ಮೂಲಗಳು ಹೇಳುತ್ತವೆ. ಹೀಗಾಗಿ ಬಡ ರೋಗಿಗಳು ದುಪ್ಪಟ್ಟು ಬೆಲೆ ಕೊಟ್ಟು ಖಾಸಗಿ ಮೆಡಿಕಲ್ ಸ್ಟೋರ್‌ ಗಳಿಂದ ಔಷಧಗಳನ್ನು ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಮೆಡಿಕಲ್‌ ಸ್ಟೋರ್‌ ಗಳು ಸರ್ಕಾರಿ ಆಸ್ಪತ್ರೆಗಳ ಸುತ್ತಮುತ್ತ ಅಣಬೆಗಳಂತೆ ತಲೆ ಎತ್ತುತ್ತಿವೆ.

ಎಲ್ಲೆಡೆ ಕೊರತೆ

ಶ್ವಾಸಕೋಶ, ಕರುಳು, ರಕ್ತಹೀನತೆ, ನ್ಯೂಮೋನಿಯಾ, ಅಸ್ತಮಾ, ಮಧುಮೇಹ, ಬಿಪಿ, ಹೃದಯಾಘಾತ, ಕಣ್ಣಿನ ಸೋಂಕು ಸೇರಿದಂತೆ ಹಲವು ಗಂಭೀರ ಖಾಯಿಲೆಗಳಿಗೆ ನೀಡುವ ಔಷಧಗಳ ಕೊರತೆ ಉಂಟಾಗಿದೆ. ಪ್ಯಾರಸಿಟಾಮಲ್, ಅಲ್ಬುಮಿನಿ, ಆ್ಯಂಪ್ಸಿಲಿನ್, ಲೆವೊಥೈರಾಕ್ಸಿನ್, ವಿಲ್ಡಗ್ಲೀಪ್ಟನ್, ಪ್ಯಾರಸಿಟಾ, ನ್ಯುಸ್ಟೊಜಿಮೈನ್, ಸಬ್ಲೋಟೊಮಲ್, ಅಸ್ಟೊಪೈನ್ಸೇರಿದಂತೆ ವಿವಿಧ ಮಾತ್ರೆಗಳು ಲಭ್ಯವಾಗುತ್ತಿಲ್ಲ.

ಕೆಲವೆಡೆ ಲೂಟಿ ಆರೋಪ

ಔಷಧಗಳ ಖರೀದಿಗೆ ಅಗತ್ಯ ಅನುದಾನವಿದ್ದು, ಸ್ಥಳೀಯವಾಗಿ ಔಷಧಗಳನ್ನು ಖರೀದಿ ಮಾಡಲು ಸರ್ಕಾರ ಸೂಚನೆ ನೀಡಿದೆ. ಔಷಧಗಳ ಖರೀದಿಯಲ್ಲಿ ಪಾರದರ್ಶಕತೆ ಇಲ್ಲ. ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಲಾಗುತ್ತಿದೆ.

2023-24ನೇ ಸಾಲಿನ ಆರ್ಥಿಕ ವರ್ಷ ಅಂತ್ಯವಾಗುತ್ತಾ ಬಂದಿದ್ದರೂ ಇನ್ನೂ ಟೆಂಡರ್‌ ಕರೆದಿಲ್ಲ. ಇನ್ನೂ ತಯಾರಿಯ ಹಂತದಲ್ಲಿದೆ ಎಂದು ಹೇಳಲಾಗಿದೆ. ಆದರೆ ಸಚಿವರು ಈ ಆರೋಪವನ್ನು ನಿರಾಕರಿಸುತ್ತಾರೆ. ಟೆಂಡರ್‌ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ವಿಸ್ತರಿಸಲಾಗಿದೆ. ಪ್ರಸಕ್ತ ವರ್ಷ ಅಂತ್ಯವಾಗುವುದರೊಳಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

ವಿಳಂಬವಾದರೂ ಏಕೆ

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆ ಎಸ್‌ ಎಂ ಎಸ್‌ ಸಿ) ಬಲಪಡಿಸಬೇಕಾದ ಅವಶ್ಯಕತೆಯೂ ಇದೆ. ನಿಗಮವನ್ನು ಸುಧಾರಣೆ ಮಾಡುವ ಅವಶ್ಯಕತೆ ಇದೆ. ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರು ಮೂರು ನಾಲ್ಕು ತಿಂಗಳಿಗೊಮ್ಮೆ ಬದಲಾಗುತ್ತಿರುತ್ತಾರೆ.

ಎಲ್ಲವನ್ನೂ ಒಂದು ಹಂತಕ್ಕೆ ತಂದರೆ ಸರಿಹೋಗಲಿದೆ ಎಂಬ ವಿಶ್ವಾಸ ಅವರದ್ದು. ಆಸ್ಪತೆಗಳಲ್ಲಿ ಔಷಧಿಗಳ ಕೊರತೆ ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಎಲ್ಲ ಸರ್ಕಾರಗಳಲ್ಲೂ ಇದೇ ಸಮಸ್ಯೆ ಇದ್ದೇ ಇರುತ್ತದೆ. ಖಾಸಗಿ ಆಸ್ಪತ್ರೆಗಳ ಜತೆ ಇರುವ ಅಕ್ರಮ ನಂಟು, ಖರೀದಿಯಲ್ಲಿನ ಅವ್ಯವಹಾರ ಟೆಂಡರ್‌ ಪ್ರಕ್ರಿಯೆಗಳಲ್ಲಿನ ಲೋಪದೋಷಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ.

ಕಳೆದ ಫೆಬ್ರವರಿಯಲ್ಲೂ ಇದೇ ಸಮಸ್ಯೆ ಉಂಟಾಗಿತ್ತು. ಆಗಲೂ 200 ಔಷಧಿಗಳ ಕೊರತೆ ಉಂಟಾಗಿತ್ತು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬಡ ರೋಗಿಗಳ ನೆರವಿಗೆ ಧಾವಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ

(ವರದಿ: ಎಚ್‌.ಮಾರುತಿ.ಬೆಂಗಳೂರು)

Whats_app_banner