ಕರ್ನಾಟಕದಲ್ಲಿ ಯಶಸ್ವಿನಿ ಯೋಜನೆಯಡಿ ಶಸ್ತ್ರ ಚಿಕಿತ್ಸೆಗಳ ದರ ಪರಿಷ್ಕರಣೆ ಸಾಧ್ಯತೆ, ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಯಶಸ್ವಿನಿ ಯೋಜನೆಯಡಿ ಶಸ್ತ್ರ ಚಿಕಿತ್ಸೆಗಳ ದರ ಪರಿಷ್ಕರಣೆ ಸಾಧ್ಯತೆ, ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಯಶಸ್ವಿನಿ ಯೋಜನೆಯಡಿ ಶಸ್ತ್ರ ಚಿಕಿತ್ಸೆಗಳ ದರ ಪರಿಷ್ಕರಣೆ ಸಾಧ್ಯತೆ, ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಯಶಸ್ವಿನಿ ಯೋಜನೆಯಡಿ ಶಸ್ತ್ರಚಿಕಿತ್ಸೆಗಳ ದರವನ್ನು ಪರಿಷ್ಕರಣೆ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ಈ ಸಂಬಂಧ ರಚಿಸಲಾಗಿದ್ದ ಸಮಿತಿ ವರದಿ ನೀಡಿದೆ.

ಕರ್ನಾಟಕದಲ್ಲಿ ಯಶಸ್ವಿನಿ ಯೋಜನೆ ಶಸ್ತ್ರಚಿಕಿತ್ಸೆಗಳ ದರ ಪರಿಷ್ಕರಣೆ ಸಂಬಂಧ ಡಾ.ಶ್ರೀನಿವಾಸ್‌ ಮಿತಿ ಸಿಎಂ ಅವರಿಗೆ ವರದಿ ಸಲ್ಲಿಸಿದೆ.
ಕರ್ನಾಟಕದಲ್ಲಿ ಯಶಸ್ವಿನಿ ಯೋಜನೆ ಶಸ್ತ್ರಚಿಕಿತ್ಸೆಗಳ ದರ ಪರಿಷ್ಕರಣೆ ಸಂಬಂಧ ಡಾ.ಶ್ರೀನಿವಾಸ್‌ ಮಿತಿ ಸಿಎಂ ಅವರಿಗೆ ವರದಿ ಸಲ್ಲಿಸಿದೆ.

ಕರ್ನಾಟಕದಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಸದಸ್ಯರಿಗೆ ನೀಡುತ್ತಿರುವ ಶಸ್ತ್ರ ಚಿಕಿತ್ಸೆಗಳ ದರ ಪರಿಷ್ಕರಣೆ ಆಗುವ ಸಾಧ್ಯತೆಗಳಿವೆ. ಈ ಕುರಿತು ಕೂಡ್ಲಿಗಿ ಶಾಸಕರಾದ ಡಾ ಶ್ರೀನಿವಾಸ ಎನ್ ಟಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ದರ ಪರಿಷ್ಕರಣೆ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ‌ ಶಿಫಾರಸ್ಸುಗಳನ್ನು ಸಲ್ಲಿಸಿತು. ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರ್ಕಾರವು 2022-23 ರಿಂದ ಮರುಜಾರಿಗೊಳಿಸಿದೆ. ಪ್ರಸ್ತುತ ಯಶಸ್ಸಿನಿ ಯೋಜನೆಯಲ್ಲಿನ ಚಿಕಿತ್ಸಾ ದರಗಳು 2017-18 ಅವಧಿಯಲ್ಲಿ ನಿಗದಿ ಮಾಡಿದ ದರಗಳಾಗಿದ್ದು, ಪ್ರಸ್ತುತ ಮಾರುಕಟ್ಟೆ ದರಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಇರುವುದಾಗಿ ತಿಳಿಸಿ ಪ್ರಮುಖ ಆಸ್ಪತ್ರೆಗಳು ಯೋಜನೆಯಡಿ ನೆಟ್ ವರ್ಕ್ ಆಸ್ಪತ್ರೆಗಳಾಗಿ ಸೇರಿಕೊಳ್ಳಲು ಮುಂದೆ ಬರುತ್ತಿಲ್ಲ. ಈ ಕಾರಣಕ್ಕಾಗಿ ಚಿಕಿತ್ಸೆಗಳ ದರಗಳನ್ನು ಪರಿಷ್ಕರಿಸಲು ಸರ್ಕಾರವು ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ ಇವರ ಅಧ್ಯಕ್ಷತೆಯಲ್ಲಿ ತಜ್ಞ ವೈದ್ಯರನ್ನೊಳಗೊಂಡ ದರ ಪರಿಷ್ಕರಣಾ ಸಮಿತಿಯನ್ನು ರಚಿಸಿತ್ತು. ಸಮಿತಿಯು ದರಗಳ ಪರಿಷ್ಕರಣೆ ಕುರಿತು ಪರಿಶೀಲನೆ ನಡೆಸಿ ವರದಿಯನ್ನು ನೀಡುವಂತೆ ಈ ಹಿಂದೆಯೇ ತಿಳಿಸಿತ್ತು. ಅದರಂತೆ ಈಗ ವರದಿ ಸಲ್ಲಿಕೆಯಾಗಿದೆ.

ಸಮಿತಿಯು ಪ್ರಸ್ತುತ ಚಿಕಿತ್ಸಾ ದರಗಳನ್ನು ಪರಿಶೀಲಿಸಿ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಸಹಕಾರ ಸಂಸ್ಥೆಗಳ ಸದಸ್ಯರಿಗೆ ಅನುಕೂಲವಾಗುವಂತೆ ಅಗತ್ಯವಿದ್ದಲ್ಲಿ ಹೊಸ ಚಿಕಿತ್ಸೆಗಳನ್ನು ಸೇರಿಸುವುದಲ್ಲದೇ ಈಗಿನ ಸ್ಥಿತಿ-ಗತಿಗಳಿಗೆ ಅನುಗುಣವಾಗಿ ಚಿಕಿತ್ಸಾ ದರಗಳನ್ನು ಪರಿಷ್ಕರಿಸಲು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಸಮಿತಿಯಲ್ಲಿ ಹೆಸರಾಂತ ಪ್ರತಿಷ್ಠಿತ ಆಸ್ಪತ್ರೆಗಳ 8 ತಜ್ಞ ವೈದ್ಯರಲ್ಲದೇ ವಿವಿಧ ವೈದ್ಯಕೀಯ ವಿಭಾಗಗಳ 11 ವಿಶೇಷ ಆಹ್ವಾನಿತ ತಜ್ಞ ವೈದ್ಯರನ್ನು ಆಹ್ವಾನಿಸಿ 13 ಸಭೆಗಳನ್ನು ನಡೆಸಿ ಅವರುಗಳ ಸಲಹೆ ಸೂಚನೆಗಳನ್ನು ಪಡೆದು ದರ ಪರಿಷ್ಕರಣೆ ಮಾಡಲಾಗಿದೆ.

ಈಗಿನ ಯಶಸ್ವಿನಿ ಯೋಜನೆಯಲ್ಲಿ 2128 ಚಿಕಿತ್ಸೆಗಳನ್ನು ಅಳವಡಿಸಿಕೊಂಡಿದ್ದು ಪ್ರಸ್ತುತ ಇರುವ ಚಿಕಿತ್ಸೆಗಳ ಪೈಕಿ 6 ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಕೈಬಿಡಲಾಗಿದೆ.

ಅದೇ ರೀತಿ ಇತ್ತೀಚಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸದಾಗಿ ಪ್ರವರ್ಧಮಾನಕ್ಕೆ ಬಂದಿರುವ ಚಿಕಿತ್ಸೆಗಳ ಪೈಕಿ ಸಹಕಾರಿಗಳಿಗೆ / ರೈತಾಪಿ ವರ್ಗಕ್ಕೆ ಇಂಟರ್‌ವೆನ್ಷನ್‌ ರೇಡಿಯಾಲಜಿ, ಸಿಟಿವಿಎಸ್, ಕ್ಯಾನ್ಸರ್ ಕಾಯಿಲೆಗಳು ಮುಂತಾದ ವಿಭಾಗಗಳ ಒಟ್ಟು 69 ಹೊಸ ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಸೇರಿಸಲಾಗಿದೆ. ಇದರಿಂದಾಗಿ ಒಟ್ಟು 2191 ಚಿಕಿತ್ಸೆಗಳನ್ನು ಅಂತಿಮಗೊಳಿಸಿದಂತಾಗಿದೆ.

ಯಶಸ್ವಿನಿ ಯೋಜನೆಯಡಿ 2024-25ರಲ್ಲಿ 68,159 ಫಲಾನುಭವಿಗಳು ರೂ.117.79 ಕೋಟಿ ಮೊತ್ತದ ಚಿಕಿತ್ಸೆಯನ್ನು ಪಡೆದಿದ್ದು ಸರಾಸರಿ ಒಂದು ಚಿಕಿತ್ಸಾ ವೆಚ್ಚ ರೂ.17,000 ಆಗಿದೆ. ಮುಂದಿನ ಸಾಲಿನಲ್ಲಿ ಸುಮಾರು 75,000 ಫಲಾನುಭವಿಗಳು ಚಿಕಿತ್ಸೆ ಪಡೆಯುವ ಅಂದಾಜಿದ್ದು ಅದರಂತೆ ಸುಮಾರು ರೂ.127.50 ಕೋಟಿ ವೆಚ್ಚ ಆಗಲಿದೆ.

ಆರೋಗ್ಯ ಸೇವೆಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉನ್ನತ ಮಟ್ಟದ ಚಿಕಿತ್ಸೆಗಳನ್ನು ಹೊಸದಾಗಿ ಸೇರಿಸುವುದರಿಂದ ಸರಾಸರಿ ಚಿಕಿತ್ಸಾ ದರದಲ್ಲಿ 50% ರಿಂದ 55% ರ ವರವಿಗೆ ದರ ಹೆಚ್ಚಳವಾಗುವ ಅಂದಾಜಿದ್ದು ಅದರಂತೆ ಸುಮಾರು ರೂ.70.00 ಕೋಟಿ ರವರೆಗೆ ದರ ಹೆಚ್ಚಳವಾಗುವ ಅಂದಾಜು ಇದ್ದು ಇದರಿಂದ ರೂ.62.50 ಕೋಟಿ ಯಿಂದ 68.75 ಕೋಟಿ ಹೆಚ್ಚಿನ ಹೊರೆ ಬೀಳುವ ಸಂಭವವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹೆಚ್ಚಳವಾಗುವ ಸುಮಾರು ರೂ.70.00 ಕೋಟಿ ಅಧಿಕ ಆರ್ಥಿಕ ಹೊರೆಯನ್ನು ಸರ್ಕಾರದಿಂದ ರೂ.40.00 ಕೋಟಿ ಹೆಚ್ಚುವರಿ ಅನುದಾನವನ್ನು ಒದಗಿಸುವ ಮೂಲಕ ಮತ್ತು ಸದಸ್ಯರು ಪಾವತಿಸುವ ವಂತಿಗೆ ಮೊತ್ತದಿಂದ ರೂ.30.00 ಕೋಟಿಯನ್ನು ಭರಿಸುವ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಬಹುದೆಂದು ವರದಿ ತಿಳಿಸಿದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.