ಮೈಕ್ರೋ ಫೈನಾನ್ಸ್ ನಿಯಂತ್ರಣ ಸುಗ್ರೀವಾಜ್ಞೆ; ಸರ್ಕಾರ ಬರಿ ರೋಗಲಕ್ಷಣ ನೋಡಿ ಮದ್ದು ನೀಡಿದೆ, ಮೂಲ ರೋಗ ಹಾಗೆಯೇ ಉಳಿಸಿದೆ; ಕೃಷ್ಣ ಭಟ್‌ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಕ್ರೋ ಫೈನಾನ್ಸ್ ನಿಯಂತ್ರಣ ಸುಗ್ರೀವಾಜ್ಞೆ; ಸರ್ಕಾರ ಬರಿ ರೋಗಲಕ್ಷಣ ನೋಡಿ ಮದ್ದು ನೀಡಿದೆ, ಮೂಲ ರೋಗ ಹಾಗೆಯೇ ಉಳಿಸಿದೆ; ಕೃಷ್ಣ ಭಟ್‌ ಬರಹ

ಮೈಕ್ರೋ ಫೈನಾನ್ಸ್ ನಿಯಂತ್ರಣ ಸುಗ್ರೀವಾಜ್ಞೆ; ಸರ್ಕಾರ ಬರಿ ರೋಗಲಕ್ಷಣ ನೋಡಿ ಮದ್ದು ನೀಡಿದೆ, ಮೂಲ ರೋಗ ಹಾಗೆಯೇ ಉಳಿಸಿದೆ; ಕೃಷ್ಣ ಭಟ್‌ ಬರಹ

ಕೃಷ್ಣ ಭಟ್‌ ಬರಹ: ಮೈಕ್ರೋಫೈನಾನ್ಸ್ ನಿಯಂತ್ರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆ ತಮಾಷೆಯಾಗಿದೆ. ಏನು ಮಾಡಬೇಕಿತ್ತೋ ಅದನ್ನು ಮಾಡದೇ, ತನ್ನ ವ್ಯಾಪ್ತಿಗೆ ಬರದ್ದನ್ನು ಮಾಡಿದೆ. ಬರಿ ರೋಗಲಕ್ಷಣಗಳನ್ನು ನೋಡಿ ಮದ್ದು ಕೊಟ್ಟಿದೆ. ಮೂಲ ರೋಗ ಹಾಗೆಯೇ ಉಳಿದಿದೆ. ಅದನ್ನು ಗುಣಪಡಿಸದಿದ್ದರೆ ಸ್ವಲ್ಪ ದಿನದಲ್ಲಿ ಬೇರೆ ರೂಪದಲ್ಲಿ ರೋಗಲಕ್ಷಣ ಕಾಣಿಸಲಿದೆ

ಮೈಕ್ರೋಫೈನಾನ್ಸ್ ನಿಯಂತ್ರಣ ಸುಗ್ರೀವಾಜ್ಞೆ ಬಗ್ಗೆ ಕೃಷ್ಣ ಭಟ್‌ ಬರಹ (ಸಾಂಕೇತಿಕ ಚಿತ್ರ)
ಮೈಕ್ರೋಫೈನಾನ್ಸ್ ನಿಯಂತ್ರಣ ಸುಗ್ರೀವಾಜ್ಞೆ ಬಗ್ಗೆ ಕೃಷ್ಣ ಭಟ್‌ ಬರಹ (ಸಾಂಕೇತಿಕ ಚಿತ್ರ) (PC: Canva)

ಮೈಕ್ರೋಫೈನಾನ್ಸ್ ನಿಯಂತ್ರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆ ತುಂಬ ತಮಾಷೆಯಾಗಿದೆ. ಏನು ಮಾಡಬೇಕಿತ್ತೋ ಅದನ್ನು ಮಾಡದೇ, ತನ್ನ ವ್ಯಾಪ್ತಿ ಬರದ್ದನ್ನು ಮಾತ್ರ ಮಾಡಿದೆ! RBI ನಲ್ಲಿ ನೋಂದಣಿ ಮಾಡಿಕೊಂಡಿರುವ ಯಾವ ಹಣಕಾಸು ಸಂಸ್ಥೆಗಳನ್ನೂ ರಾಜ್ಯ ಸರ್ಕಾರ ನಿಯಂತ್ರಿಸುವ ಅವಕಾಶವಿಲ್ಲ. ಆಂಧ್ರದಲ್ಲಿ 2012 ರಲ್ಲಿ ಇದೇ ರೀತಿ ಆರ್‌ಬಿಐ ನಿಯಮವನ್ನು override ಮಾಡುವ ಕಾನೂನು ಮಾಡಿ, ಅದು ಕೋರ್ಟ್‌ನಲ್ಲಿ ನಿಲ್ಲದೇ ರದ್ದಾಗಿತ್ತು.

ಮೈಕ್ರೋಫೈನಾನ್ಸ್ ಸಂಸ್ಥೆಗಳು ಅದಾಗಲೇ ಆರ್‌ಬಿಐನಲ್ಲಿ ನೋಂದಣಿ ಮಾಡಿಕೊಂಡಿರುತ್ತವೆ. ಮತ್ತೆ ಹೊಸದಾಗಿ ಇನ್ನೊಂದು ಪ್ರಾಧಿಕಾರವನ್ನು ರಚಿಸುವುದು ಅನಗತ್ಯ ಹಾಗೂ ಆ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಉಳಿದಂತೆ ಎಲ್ಲ ನಿಯಮಗಳೂ ಆರ್‌ಬಿಐನ ನಿಯಮಾವಳಿಯಲ್ಲೇ ಇದೆ. ಸಾಲಗಾರರಿಗೆ ಸಾಲದ ಎಲ್ಲ ಮಾಹಿತಿಯನ್ನು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ನೀಡಬೇಕು. ವಸೂಲಿಯನ್ನು ಹೇಗೆ ಮಾಡಬೇಕು, ಯಾವ ಆಧಾರದಲ್ಲಿ ಮೈಕ್ರೋಫೈನಾನ್ಸ್‌ಗಳು ಸಾಲ ನೀಡಬೇಕು ಎಂಬ ಎಲ್ಲದಕ್ಕೂ ವಿವರವಾದ ನಿಯಮಗಳನ್ನು ಆರ್‌ಬಿಐ ಮಾಡಿದೆ. ಕಾಲಕಾಲಕ್ಕೆ ಅದನ್ನು ಅಪ್‌ಡೇಟ್ ಕೂಡ ಮಾಡುತ್ತಿರುತ್ತದೆ.

ಇನ್ನೊಂದು ತಮಾಷೆಯ ಸಂಗತಿಯೆಂದರೆ, ಮೈಕ್ರೋಫೈನಾನ್ಸ್‌ಗಳು ಸಾಲ ನೀಡುವಾಗ ಅಡಮಾನ ಇಟ್ಟುಕೊಳ್ಳುವಂತಿಲ್ಲ ಎಂಬ ಹಾಸ್ಯಾಸ್ಪದ ನಿಯಮವನ್ನೂ ಇದರಲ್ಲಿ ಸೇರಿಸಲಾಗಿದೆ. ಅಡಮಾನ ಇಟ್ಟುಕೊಂಡು ನೀಡುವ ಸಾಲ ಸೆಕ್ಯೂರ್ಡ್ ಸಾಲ. ಅದನ್ನು ಕೊಡುವುದಕ್ಕೆ ಆರ್‌ಬಿಐ ನಿಯಮದ ಪ್ರಕಾರವೇ ಅವಕಾಶವಿಲ್ಲ. ಹಾಗೆ ಸೆಕ್ಯೂರ್ಡ್ ಸಾಲವನ್ನು ಕೊಡುವುದು ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಮಾತ್ರ! ಇದು ಸುಗ್ರೀವಾಜ್ಞೆ ಮಾಡಿದವರಿಗೆ ಗೊತ್ತಿಲ್ಲವೇನು?!

ರಾಜ್ಯ ಸರ್ಕಾರ ಮಾಡಬೇಕಾಗಿದ್ದು ಬೇರೆಯೇ ಇತ್ತು

ರಾಜ್ಯದಲ್ಲಿ ಆರ್‌ಬಿಐ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳದೇ ಸಾಲ ಕೊಡುವ ಅಪಾರ ಸಂಸ್ಥೆಗಳಿವೆ. ಅವು ಯಾರ ವ್ಯಾಪ್ತಿಗೂ ನಿಲುಕದ ಸಂಸ್ಥೆಗಳು. ಅವುಗಳನ್ನು ಅದಾಗಲೇ ನಿಷೇಧ ಮಾಡಿ ಆಗಿದೆ. ಹಾಗೆ ಆರ್‌ಬಿಐನಲ್ಲಿ ನೋಂದಣಿ ಮಾಡಿಕೊಳ್ಳದೇ ಸಾಲ ಕೊಡುವಂತಿಲ್ಲ. ಇಂಥ ಸಂಸ್ಥೆಗಳ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರ ಒಂದು ವಿಚಕ್ಷಣಾ ದಳವನ್ನು ರಚಿಸಬಹುದು. ಅಂತಹ ಸಂಸ್ಥೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಅವುಗಳನ್ನು ಮುಚ್ಚಿಸುವ ಕೆಲಸ ಸಕ್ರಿಯವಾಗಿ ಆಗುತ್ತಿರಬೇಕು. ಇಂದು ಒಂದು ಸಂಸ್ಥೆಯನ್ನು ಮುಚ್ಚಿದರೆ ಮತ್ತೊಂದು ಸಂಸ್ಥೆ ನಾಳೆ ಹುಟ್ಟಿಕೊಳ್ಳುತ್ತಿರುತ್ತದೆ.

ಸದ್ಯಕ್ಕೆ ಈ ಸುಗ್ರೀವಾಜ್ಞೆ ಕರಡಿನಲ್ಲಿ ಒಂದು ಅಂಶ ಒಳ್ಳೆಯದಿದೆ. ನೋಂದಣಿಯಾಗದ ಸಂಸ್ಥೆಗಳಿಂದ ಸಾಲ ಪಡೆದು, ಸಾಲ ಬಡ್ಡಿ ಕಟ್ಟದಿದ್ದರೆ ಕೋರ್ಟ್‌ಗೆ ಹೋಗುವಂತಿಲ್ಲ ಎಂಬ ನಿಯಮ ಮಾಡಲಾಗಿದೆ. ಆದರೆ, ಈ ನಿಯಮವನ್ನೇ ಈಗ ಯಾರಾದರೂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತಾರೆ. ಹೀಗಾಗಿ, ಸದ್ಯಕ್ಕೆ ಇದೆಲ್ಲದಕ್ಕೂ ತಡೆ ಬರುತ್ತದೆ.

ಇಲ್ಲಿ ಇನ್ನೊಂದು ಗಂಭೀರ ಸಮಸ್ಯೆಯೂ ಇದೆ

ಈಗ ಈ ಸುಗ್ರೀವಾಜ್ಞೆ ಜಾರಿಗೆ ಬಂದ ಮೇಲೆ ಮೈಕ್ರೋಫೈನಾನ್ಸ್‌ಗಳು ಕೋರ್ಟ್‌ಗೆ ಹೋಗುತ್ತವೆ. ಅವು ಕೋರ್ಟ್‌ಗೆ ಹೋಗಿ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ MFI ಗಳು ಕೆಲಸ ನಿಲ್ಲಿಸುತ್ತವೆ. ಅಂದರೆ, ಜನರಿಗೆ ಸಾಲ ಸಿಗದಂತಾಗುತ್ತದೆ.

ಜನ ಸಾಲದ ಮೊರೆ ಹೋಗಿದ್ದಕ್ಕೆ ಕಾರಣ ಅವರ ಆದಾಯ ಗಳಿಕೆ ಅವಕಾಶ ಕಡಿಮೆ ಆಗಿದ್ದರಿಂದ. ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಇರುವುದೂ ಕೂಡ ಜನರಿಗೆ ಆದಾಯ ಇಲ್ಲದ್ದರಿಂದ. ಅಂದರೆ ಜನರ ಕೈಯಲ್ಲಿ ಕಾಸು ಓಡಾಡುತ್ತಿಲ್ಲ ಎಂಬುದು ಇದರರ್ಥ. ಮೈಕ್ರೋ ಫೈನಾನ್ಸ್ ದೊಡ್ಡ ಸಾಲ ನೀಡುವುದಿಲ್ಲ. 1-2 ಲಕ್ಷದವರೆಗೆ ಮಾತ್ರ ಸಾಲ ನೀಡುತ್ತವೆ. ಈ ಕಾಲದಲ್ಲಿ ಸರಿಯಾಗಿ 1 ವರ್ಷ ಕೂಲಿ ಕೆಲಸಕ್ಕೆ ಹೋದರೆ ಇಷ್ಟು ಹಣ ದುಡಿಯಬಹುದು.

ಒಂದು ವೇಳೆ ಈಗ MFI ಇಂದಲೂ ಸಾಲ ಸಿಗದೇ ಹೋದರೆ, ರೈತರು ಬೆಳೆ ಇಲ್ಲದೇ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚಾಗುತ್ತದೆ. ಸದ್ಯ, ಬೆಳೆ ಇಲ್ಲದಿದ್ದರೆ, ಪರ್ಯಾಯವಾಗಿ ಮುಂದಿನ ಬೆಳೆ ಬರುವವರೆಗೆ ದಿನ ದೂಡುವುದಕ್ಕೆ ಜನರು MFI ಇಂದ ಸಾಲ ಪಡೆಯುತ್ತಾರೆ. ಮತ್ತೊಂದು ಬೆಳೆ ಬರುವ ಹೊತ್ತಿಗೆ ಒಂದಷ್ಟು ಸಾಲ ತೀರಿಸಿಕೊಂಡಿರುತ್ತಾರೆ. ಈಗ ಜನರಿಗೆ ಆಗಿರುವ ಸಮಸ್ಯೆಯೇನೆಂದರೆ, ಬೆಳೆಯೂ ಸರಿಯಾಗಿ ಕೈಗೆ ಹತ್ತಲಿಲ್ಲ. ಕೂಲಿ ಕೆಲಸವೂ ಕಡಿಮೆಯಾಗಿದೆ. ಇದರಿಂದ ಜನರಿಗೆ MFI ಸಾಲ ತೀರಿಸಲು ಆಗುತ್ತಿಲ್ಲ.

ಈ ಕೂಲಿ ಕೆಲಸದ ಸಾಧ್ಯತೆ ಹೆಚ್ಚಳ ಮತ್ತು ಕೃಷಿ ಆದಾಯವನ್ನು ಹೆಚ್ಚಳ ಮಾಡುವುದಕ್ಕೆ ಸರ್ಕಾರ ಯೋಜನೆ ಮಾಡಿದರೆ, MFI ಸಮಸ್ಯೆ ಸಹಜವಾಗಿಯೇ ನಿವಾರಣೆಯಾಗುತ್ತದೆ.

ಈಗ ಸರ್ಕಾರ ಬರಿ ರೋಗಲಕ್ಷಣಗಳನ್ನು ನೋಡಿ ಮದ್ದು ಕೊಟ್ಟಿದೆ. ಮೂಲ ರೋಗ ಹಾಗೆಯೇ ಉಳಿದುಕೊಂಡಿದೆ. ಅದನ್ನು ಗುಣಪಡಿಸುವುದಕ್ಕೆ ಪ್ರಯತ್ನಿಸದಿದ್ದರೆ, ಇನ್ನು ಸ್ವಲ್ಪ ದಿನಗಳಲ್ಲಿ ಬೇರೆ ರೂಪದಲ್ಲಿ ರೋಗಲಕ್ಷಣ ಕಾಣಿಸಿಕೊಳ್ಳಲಿದೆ.

Whats_app_banner