Bangalore Palace: ಬೆಂಗಳೂರು ಅರಮನೆ ಸ್ವಾಧೀನ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಸ್ತು: ಕಾನೂನು ಸಂಘರ್ಷ ಏನಾಗಬಹುದು
Bangalore Palace: ಮೈಸೂರು ರಾಜವಂಶಸ್ಥರ ಸುಪರ್ದಿಯಲ್ಲಿರುವ ಬೆಂಗಳೂರು ಅರಮನೆ ಸ್ವಾಧೀನ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ಕರ್ನಾಟಕ ರಾಜ್ಯ ಸರ್ಕಾರ ವಶಕ್ಕೆ ಪಡೆಯುವ ಕಾಯಿದೆಗೆ ಒಪ್ಪಿಗೆ ದೊರೆತಿದ್ದು, ಸರ್ಕಾರವು ರಾಜ್ಯಪತ್ರದ ಮೂಲಕ ಆದೇಶ ಹೊರಡಿಸಿದೆ.

Bangalore Palace: ಕೋಟ್ಯಂತರ ರೂ. ಬೆಲೆಬಾಳುವ ಸುಮಾರು 472 ಎಕರೆ ವಿಶಾಲವಾಗಿರುವ ಹಾಗೂ ಮೈಸೂರು ರಾಜವಂಶಸ್ಥ ಕುಟುಂಬದವರ ಸುಪರ್ದಿಯಲ್ಲಿರುವ ಬೆಂಗಳೂರಿನ ಅರಮನೆ ಸ್ವಾಧೀನ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲಾಗಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಉಭಯ ಸದನಗಳಲ್ಲೂ ಒಪ್ಪಿಗೆ ದೊರೆತಿದ್ದ ಬೆಂಗಳೂರು ಅರಮನೆ ಸ್ವಾಧೀನ ಮತ್ತು ವರ್ಗಾವಣೆ ಕಾಯ್ದೆ1996ಗೆ ತಿದ್ದುಪಡಿ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ವಿಧೇಯಕಕ್ಕೆ ರಾಜ್ಯಪಾಲರು ಅಂಗೀಕಾರ ನೀಡಿದ್ದು, ಬೆಂಗಳೂರು ಅರಮನೆ ಸುಗ್ರೀವಾಜ್ಞೆಯನ್ನು ಕರ್ನಾಟಕ ಪತ್ರದ ಮೂಲಕ ಪ್ರಕಟಿಸಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ಅರಮನೆ ಸುತ್ತಮುತ್ತಲ ಪ್ರದೇಶದಲ್ಲಿ ರಸ್ತೆ ವಿಸ್ತರಣೆಯೂ ಸೇರಿದಂತೆ ಸರ್ಕಾರದಿಂದ ಕೈಗೊಳ್ಳಲಾಗುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಅಭಿವೃದ್ದಿ ಹಕ್ಕುಗಳ ವರ್ಗಾವಣೆ( TDR) ತಡೆಯುವ ನಿಟ್ಟಿನಲ್ಲಿ ನೂತನ ವಿಧೇಯಕ ಕೆಲಸ ಮಾಡಲಿದೆ. ಬೆಂಗಳೂರು ಅರಮನೆ ಸ್ವಾಧೀನದ ವಿಚಾರ ಇನ್ನು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಕಾನೂನು ಹೋರಾಟ ಮುಂದುವರಿದಿದೆ. ಈಗ ಇದು ಯಾವ ರೂಪ ಪಡೆಯಲಿದೆ ಎನ್ನುವ ಕುತೂಹಲವಂತೂ ಇದೆ.
ಮೈಸೂರನ್ನು ಆಳಿದ ಒಡೆಯರ್ ಯದು ವಂಶಸ್ಥರು ಬೆಂಗಳೂರು ಹಾಗೂ ಮೈಸೂರಿನಲ್ಲಿ ಅರಮನೆಯನ್ನು ನಿರ್ಮಿಸಿದ್ದಾರೆ. ಬೆಂಗಳೂರಿನಲ್ಲಿ 472 ವಿಶಾಲ ಜಾಗದಲ್ಲಿ ಅರಮನೆ ಇದೆ. ಇದೀಗ ವಾಣಿಜ್ಯ ಕೇಂದ್ರದ ರೂಪದಲ್ಲಿ ಮದುವೆ, ವಸ್ತು ಪ್ರದರ್ಶನ, ದೊಡ್ಡ ಕಾರ್ಯಕ್ರಮಗಳ ವಹಿವಾಟು ಕೇಂದ್ರವಾಗಿ ಮಾರ್ಪಟ್ಟಿದೆ. ಇದು ಈಗಲೂ ಮೈಸೂರು ರಾಜವಂಶಸ್ಥರ ಕುಟುಂಬದ ಸ್ವಾಧೀನದಲ್ಲಿದೆ. ಮೈಸೂರು ಅರಮನೆ ಕರ್ನಾಟಕ ಸರ್ಕಾರದ ಸುಪರ್ದಿಯಲ್ಲಿದ್ದು, ಅರಮನೆ ಮಂಡಳಿ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಅರಮನೆಯ ಒಂದು ಭಾಗದಲ್ಲಿ ರಾಜವಂಶಸ್ಥರ ವಾಸಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೂರು ದಶಕದ ಹಿಂದೆಯೇ ಬೆಂಗಳೂರು ಹಾಗೂ ಮೈಸೂರು ಅರಮನೆ ಸ್ವಾಧೀನ ಪಡಿಸಿಕೊಳ್ಳುವ ಆದೇಶವನ್ನು ಕರ್ನಾಟಕ ಸರ್ಕಾರ ಮಾಡಿದೆ. ಆದರೆ ಈ ಕುರಿತ ಕಾನೂನು ಹೋರಾಟ ಈಗಲೂ ಸುಪ್ರೀಂಕೋರ್ಟ್‌ನಲ್ಲಿ ಮುಂದುವರಿದಿದೆ.
ಭಾರತದಲ್ಲಿ ಗಣರಾಜ್ಯ ಆಡಳಿತ ಜಾರಿಗೊಂಡ ನಂತರ ಬಹುತೇಕ ಎಲ್ಲಾ ರಾಜಮನೆತನದ ಆಡಳಿತಗಳು ಕೇಂದ್ರ ಸರ್ಕಾರ ರೂಪಿಸಿದ್ದ 1950 ತ್ರಿಪಕ್ಷೀಯ ಒಪ್ಪಂದದಂತೆ ಆಸ್ತಿ, ಆಡಳಿತದ ಜವಾಬ್ದಾರಿಯನ್ನು ಬಿಟ್ಟುಕೊಟ್ಟಿವೆ. ಇದರಲ್ಲೂ ಮೈಸೂರಿನಲ್ಲಿ ಕೇಂದ್ರ ಸ್ಥಾನದೊಂದಿಗೆ ಆಡಳಿತ ಹೊಂದಿದ್ದ ಯದುವಂಶಸ್ಥರು ಕೂಡ ಆ ಒಪ್ಪಂದಕ್ಕೆ ಬದ್ದರಾಗಿ ನಿಗದಿತ ಆಸ್ತಿಯನ್ನು ಪಡೆದು ಉಳಿಕೆಯದ್ದನ್ನು ಸರ್ಕಾರದ ಸುಪರ್ದಿಗೆ ನೀಡಿದ್ದಾರೆ. ಆಗ ಜಯಚಾಮರಾಜ ಒಡೆಯರ್ ಅವರೇ ಮಹಾರಾಜರಾಗಿದ್ದರು. ರಾಜತ್ವ ಹೋಗಿ ಪ್ರಜಾಪ್ರಭುತ್ವ ಜಾರಿಗೊಂಡ ನಂತರ ಅವರು ಮೈಸೂರು ಹಾಗು ಮದ್ರಾಸ್ ಪ್ರಾಂತ್ಯದ ರಾಜಪಾಲರೂ ಆಗಿದ್ದರು. ಅವರು ತೀರಿಕೊಂಡ ನಂತರ ಅವರ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಲ್ಕು ಬಾರಿ ಸಂಸದರಾಗಿದ್ದರು. ಒಡೆಯರ್ ದತ್ತು ಪುತ್ರ ಯದುವೀರ್ ಒಡೆಯರ್ ಈಗ ಮೈಸೂರು ಕೊಡಗಿನಿಂದ ಬಿಜೆಪಿ ಸಂಸದ.
ಹಿಂದೆ ಆಗಿರುವ ಒಪ್ಪಂದದಂತೆ ಬೆಂಗಳೂರು ಹಾಗೂ ಮೈಸೂರು ಅರಮನೆಗಳು ರಾಜವಂಶಸ್ಥರ ಸುಪರ್ದಿಯಲ್ಲಿಯೇ ಇವೆ. ಆದರೆ ಮೈಸೂರು ಅರಮನೆ ನಿರ್ವಹಣೆ ಮಾಡುವುದು ಕಷ್ಟ ಎಂದು ಜಯಚಾಮರಾಜ ಒಡೆಯರ್ ಅವರು ಪತ್ರ ಬರೆದ ಹಿನ್ನೆಲೆಯಲ್ಲಿ ನಿರ್ವಹಣೆಯನ್ನು ಸರ್ಕಾರದಿಂದಲೇ ಮಾಡಲಾಗುತ್ತಿತ್ತು. ಇದಾದ ನಂತರ 1996ರಲ್ಲಿ ಎರಡೂ ಅರಮನೆ ಸ್ವಾಧೀನ ಪಡೆಯುವ ಆದೇಶ ಮಾಡಲಾಗಿತ್ತು. ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಬದುಕಿರುವವರೆಗೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ವಾಸವಿರಬಹುದು ಎಂದು ಆದೇಶಿಸಲಾಗಿತ್ತು. ಆದರೆ ಆಗಿನ ಆದೇಶ ಪ್ರಶ್ನಿಸಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕೋರ್ಟ್ ಮೊರೆ ಹೋಗಿ ಅರಮನೆ ಸ್ವಾಧೀನ ನಮ್ಮಲ್ಲೇ ಇರಬೇಕು ಎಂದು ಕಾನೂನು ಹೋರಾಟ ನಡೆಸುತ್ತಲೇ ಇದ್ದಾರೆ. ಶ್ರೀಕಂಠದತ್ತರ ನಂತರ ಪ್ರಮೋದಾದೇವಿ ಕಾನೂನು ಹೋರಾಟ ಮುಂದುವರೆಸಿದ್ದಾರೆ.
ಇದರ ನಡುವೆಯೇ ಅರಮನೆ ಸುತ್ತ ರಸ್ತೆ ಕಾಮಗಾರಿ ನಡೆಸುತ್ತಿದ್ದು. ಇದಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿರುವ ಜಾಗಕ್ಕೆ ಅಭಿವೃದ್ದಿಗಳ ಹಕ್ಕು ವರ್ಗಾವಣೆ ರೂಪದಲ್ಲಿ 3400 ಕೋಟಿ ರೂ. ನೀಡಬೇಕು ಎನ್ನುವ ಬೇಡಿಕೆಯನ್ನು ಇಡಲಾಗಿತ್ತು. ಸುಪ್ರೀಂಕೋರ್ಟ್ ಟಿಡಿಆರ್ ನೀಡಲು ನಿರ್ದೇಶನ ನೀಡಿದೆ.
ಇದಕ್ಕೆ ಬಲವಾಗಿ ವಿರೋಧಿಸುತ್ತಲೇ ಕರ್ನಾಟಕ ಸರ್ಕಾರ ಮೊದಲ ಹಂತದಲ್ಲಿ ರಾಜಮನೆತನದವರು ತಾವು ಹೊಂದಿರುವ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದನ್ನು ನಿರಾಕರಿಸುವ ಮಸೂದೆಯನ್ನು ಅಂಗೀಕರಿಲಾಗಿದೆ. ಆ ಮೂಲಕ ಅರಮನೆ ಮೈದಾನದ ಭೂಮಿಯಲ್ಲಿ ರಸ್ತೆ ವಿಸ್ತರಣೆ ಸಹಿತ ನಾಗರೀಕರ ಬಳಕೆಗೆ ಕಾಮಗಾರಿ ನಡೆಸುವುದು ಇಲ್ಲವೇ ಕೈ ಬಿಡುವ ಹಕ್ಕನ್ನು ರಾಜ್ಯ ಸರ್ಕಾರ ಈಗ ಜಾರಿಗೊಳಿಸಿರುವ ವಿಧೇಯಕದ ಮೂಲಕ ಹೊಂದಲಿದೆ.
ಈಗಾಗಲೇ ಅರಮನೆ ಸ್ವಾಧೀನ ವಿಚಾರದಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ರಾಜವಂಶಸ್ಥರು ಹೊಸ ಕಾಯಿದೆ ಪ್ರಶ್ನಿಸಿ ಹೋರಾಟ ಮುಂದುವರೆಸಬಹುದು ಎಂದು ಮೂಲಗಳು ತಿಳಿಸಿವೆ.
