ಗೌರವ ಸಂಭಾವನೆ ಹೆಚ್ಚಳ ಬೆನ್ನಲ್ಲೇ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ಕರ್ನಾಟಕ ಸರ್ಕಾರ ಆದೇಶ
ಕರ್ನಾಟಕ ಸರ್ಕಾರವು 51,000 ಅತಿಥಿ ಶಿಕ್ಷಕರನ್ನು ನೇಮಿಸುವ ಆದೇಶ ಹೊರಡಿಸಿದೆ. ಇವರ ಪೈಕಿ 40,000 ಶಿಕ್ಷಕರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹಾಗೂ 11,000 ಶಿಕ್ಷಕರನ್ನು ಸರ್ಕಾರಿ ಪ್ರೌಢ ಶಾಲೆಗಳಿಗೆ ನೇಮಿಸಿ ಆದೇಶಿಸಿದೆ.

ಬೆಂಗಳೂರು: ಕರ್ನಾಟಕ ಸರ್ಕಾರವು 2025–26ರ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 51,000 ಅತಿಥಿ ಶಿಕ್ಷಕರನ್ನು ನೇಮಿಸುವ ಆದೇಶ ನೀಡಿದೆ. ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. 2025ರ ಮೇ 29ರಂದು ಶಾಲೆಗಳು ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಆರಂಭವಾಗಲಿ ಎಂಬ ಉದ್ದೇಶ ಈ ತಾತ್ಕಾಲಿಕ ನೇಮಕಾತಿಗೆ ಆದೇಶ ಹೊರಡಿಸಿದೆ.
2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆದುರಾಗಿ ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲು ಸರ್ಕಾರವು ಮಂಜೂರಾತಿ ನೀಡಿ ಆದೇಶಿಸಿದೆ. ಹೊಸ ಶಿಕ್ಷಕರನ್ನು ಭರ್ತಿ ಮಾಡುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಎಂಬ ಷರತ್ತಿಗೊಳಪಟ್ಟು ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಆದೇಶಿಸಲಾಗಿದೆ.
51,000 ಅತಿಥಿ ಶಿಕ್ಷಕರ ಪೈಕಿ 40,000 ಶಿಕ್ಷಕರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹಾಗೂ ಉಳಿದ 11,000 ಶಿಕ್ಷಕರನ್ನು ಸರ್ಕಾರಿ ಪ್ರೌಢ ಶಾಲೆಗಳಿಗೆ ನೇಮಿಸಿ ಆದೇಶಿಸಿದೆ.
“ವಿದ್ಯಾರ್ಥಿಗಳು ಶಿಕ್ಷಕರ ಕೊರತೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಮುಖ್ಯ ಗುರಿ. ಈ ತ್ವರಿತ ನಿರ್ಧಾರ ಶೈಕ್ಷಣಿಕ ಕೊರತೆಯನ್ನು ಪೂರೈಸಲು ಅಗತ್ಯವಾಗಿದೆ,” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. “ಹೊಸ ಶೈಕ್ಷಣಿಕ ವರ್ಷ ಆರಂಭದ ದಿನದಿಂದಲೇ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗುವುದು ನಮ್ಮ ಆದ್ಯತೆ,” ಎಂದು ತಿಳಿಸಿದ್ದಾರೆ.
ಅತಿಥಿ ಶಿಕ್ಷಕರಿಗೆ ನೀಡಲಾಗುವ ಗೌರವಧನದ ಪಾವತಿಗಾಗಿ ಅವಶ್ಯವಿರುವ ಅನುದಾನದ ವಿವರ ಹಾಗೂ ಅಥಿತಿ ಶಿಕ್ಷಕರ ಜಿಲ್ಲಾ, ತಾಲ್ಲೂಕುವಾರು ವಿವರಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದೆ.
ಗೌರವ ಸಂಭಾವನೆ 2000 ರೂ.ಗಳಷ್ಟು ಹೆಚ್ಚಳ
ಇತ್ತೀಚೆಗಷ್ಟೇ ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿತ್ತು. ಅತಿಥಿ ಶಿಕ್ಷಕರ ಬಹುದಿನದ ಬೇಡಿಕೆಯಂತೆ, ಈ ಎಲ್ಲಾ ಅತಿಥಿ ಬೋಧಕರ ಮಾಸಿಕ ಗೌರವಧನವನ್ನು ತಲಾ 2,000 ರೂ.ಗಳಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿತು.
ಈ ಹಿಂದೆ ಸರ್ಕಾರ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 10,000 ರೂ. ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 10,500 ರೂ. ಗೌರವ ಸಂಭಾವನೆಯನ್ನು ನಿಗದಿಪಡಿಸಿತ್ತು. ಇದೀಗ, ಈ ಮೊತ್ತಕ್ಕೆ ಹೆಚ್ಚುವರಿಯಾಗಿ 2,000 ರೂ.ಗಳನ್ನು ಸೇರಿಸಲಾಗಿದೆ. ಪರಿಷ್ಕೃತ ಗೌರವ ಸಂಭಾವನೆಯು ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 12,000 ರೂ. ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 12,500 ರೂ. ಆಗಲಿದೆ.
ಅತ್ತ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ 2,000 ರೂ.ಗಳಷ್ಟು ಗೌರವಧನ ಹೆಚ್ಚಳವಾಗಲಿದೆ. ಈ ಹಿಂದೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 12,000 ರೂ. ಮಾಸಿಕ ಗೌರವಧನ ನಿಗದಿಯಾಗಿತ್ತು. ಇಂದಿನ ಆದೇಶದ ನಂತರ ಪರಿಷ್ಕೃತ ಗೌರವ ಸಂಭಾವನೆಯು ಅತಿಥಿ ಉಪನ್ಯಾಸಕರಿಕೆ 14,000 ಆಗಲಿದೆ.