ಮುಂದಿನ ವರ್ಷ 600 ಕೋಟಿ ವೆಚ್ಚದ ಕರ್ನಾಟಕದ ಅನುಭವ ಮಂಟಪ ಲೋಕಾರ್ಪಣೆ: ಮೈಸೂರಿನ ಬಸವಜಯಂತಿಯಲ್ಲಿ ಸಿದ್ದರಾಮಯ್ಯ ಅಭಯ
ಕನ್ನಡ ಸುದ್ದಿ  /  ಕರ್ನಾಟಕ  /  ಮುಂದಿನ ವರ್ಷ 600 ಕೋಟಿ ವೆಚ್ಚದ ಕರ್ನಾಟಕದ ಅನುಭವ ಮಂಟಪ ಲೋಕಾರ್ಪಣೆ: ಮೈಸೂರಿನ ಬಸವಜಯಂತಿಯಲ್ಲಿ ಸಿದ್ದರಾಮಯ್ಯ ಅಭಯ

ಮುಂದಿನ ವರ್ಷ 600 ಕೋಟಿ ವೆಚ್ಚದ ಕರ್ನಾಟಕದ ಅನುಭವ ಮಂಟಪ ಲೋಕಾರ್ಪಣೆ: ಮೈಸೂರಿನ ಬಸವಜಯಂತಿಯಲ್ಲಿ ಸಿದ್ದರಾಮಯ್ಯ ಅಭಯ

ಮೈಸೂರಿನಲ್ಲಿ ಬಸವ ಬಳಗಗಳ ಒಕ್ಕೂಟದಿಂದ ಆಯೋಜಿಸಿರುವ ಎರಡು ದಿನಗಳ ಬಸವ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಬಸವಣ್ಣನ ವಿಚಾರಗಳ ಕುರಿತು ಮಾತನಾಡಿದ್ದಾರೆ.

ಮೈಸೂರಿನಲ್ಲಿ ಬಸವಜಯಂತಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಮೈಸೂರಿನಲ್ಲಿ ಬಸವಜಯಂತಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ಮೈಸೂರು: ಸಕಲ ವೃತ್ತಿಗಳೂ ಪವಿತ್ರ ಎನ್ನುವ ಮಹಾನ್ ಮಾನವೀಯ ಸಂದೇಶವನ್ನು ಜಗತ್ತಿಗೆ ನೀಡಿದ ಬಸವಣ್ಣನವರು ಕ್ರಾಂತಿಪುರುಷ ಮಾತ್ರವಲ್ಲ, ವಿಶ್ವ ವಿಖ್ಯಾತ ಆರ್ಥಿಕ ತಜ್ಞರೂ ಆಗಿದ್ದರು. ಕಾಯಕ ಮತ್ತು ದಾಸೋಹದ ಶ್ರಮ ಸಂಸ್ಕೃತಿಯ ಮಹತ್ವವನ್ನು ಬಸವಣ್ಣ ಇಡೀ ವಿಶ್ವಕ್ಕೆ ನೀಡಿದರು ಜಾತಿ, ವರ್ಗ ರಹಿತ ಮಾನವೀಯ ಸಮಾಜ ಅವರ ತುಡಿತವಾಗಿತ್ತು. ಬಸವಾದಿ ಶರಣರ ಅನುಭಾವವೇ ವಚನಗಳಾಗಿವೆ. ವಚನ‌ ಎಂದರೆ ಮಾತು. ಕನ್ನಡ ಸಾಹಿತ್ಯದಲ್ಲಿ ವಚನ ಮತ್ತು ದಾಸ ಸಾಹಿತ್ಯ ದೊಡ್ಡ ಮೈಲಿಗಲ್ಲು. ಅಕ್ಷರ ಸಂಸ್ಕೃತಿಯಿಂದ ವಂಚಿತರನ್ನಾಗಿ ಮಾಡಲಾಗಿದ್ದವರಿಗೆ ವಚನ ಸಾಹಿತ್ಯ ಆಡು ಮಾತಿನ ಮೂಲಕ ತಲುಪಿತು. ಬಸವಣ್ಣನವರ ಚಿಂತನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿರುವ 600 ಕೋಟಿಗೂ ಅಧಿಕ ವೆಚ್ಚದ ಅನುಭವ ಮಂಟಪವನ್ನು ಮುಂದಿನ ವರ್ಷ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಆಯೋಜಿಸಿದ್ದ "ಬಸವ ಜಯಂತಿ-2025 ನಮ್ಮ ನಡೆ ಅನುಭವ ಮಂಟಪದ ಕಡೆ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಾದಿ ಶರಣರಿಂದ ಆದ ಜಾತಿ ವ್ಯವಸ್ಥೆ ವಿರುದ್ದದ ಸಾಮಾಜಿಕ ಕ್ರಾಂತಿ ಪ್ರಪಂಚದ ಬೇರೆ ಎಲ್ಲೂ ನಡೆದಿಲ್ಲ. ಸಮ ಸಮಾಜ ಮತ್ತು ಜಾತ್ಯತೀತ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಬಸವಾದಿ ಶರಣರು ನುಡಿದಂತೆ ನಡೆದರು. ಅಸಮಾನತೆ ಹೋಗಿ ಸಮಾನತೆ ತರಲು ಶರಣರು ಕ್ರಾಂತಿ ಮಾಡಿದರು‌.ಜಾತಿ ವರ್ಗರಹಿತ ಮನುಷ್ಯತ್ವ ಕೂಡಿರುವ ಸಮಾಜ ನಿರ್ಮಾಣ ಆಗಬೇಕು. ಮಾತು ಎಂದರೆ ವಚನ.ಶರಣರ ಅನುಭವದ ಮಾತುಗಳೇ ವಚನಗಳಾಗಿವೆ. ಕನ್ನಡದ ವಚನ ಹಾಗೂ ದಾಸ ಸಾಹಿತ್ಯ ಎರಡೂ ಮೈಲಿಗಲ್ಲು ಆಗಿವೆ ಎಂದು ಹೇಳಿದರು.

ಸಂಸ್ಕೃತ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸ ಉಯ್ಯುವ ಶಿಕ್ಷೆ ಇದ್ದಿದ್ದರಿಂದ ಶೂದ್ರ ಸಮುದಾಯ ಶಿಕ್ಷಣದಿಂದ ವಂಚಿತರಾದರು. ನನ್ನ ಅಪ್ಪ, ಅಮ್ಮ ಇಬ್ಬರೂ ಶಿಕ್ಷಣದಿಂದ ವಂಚಿತರಾಗಿದ್ದರು. ರಾಜಪ್ಪ ಮೇಸ್ಟ್ರು ಕಾರಣದಿಂದ ನಾನು ನೇರವಾಗಿ ಐದನೇ ತರಗತಿಗೆ ದಾಖಲಾಗಿ ಶಿಕ್ಷಣ ಪಡೆದು ಎರಡು ಬಾರಿ ಮುಖ್ಯಮಂತ್ರಿಯಾದೆ. ಅಂಬೇಡ್ಕರ್ ಅವರ ಕಾರಣದಿಂದ ನನಗೆ ಶಿಕ್ಷಣ ಸಿಕ್ಕರೆ, ಸಂವಿಧಾನದ ಕಾರಣದಿಂದ ನಾನು ಮುಖ್ಯಮಂತ್ರಿಯಾದೆ ಎಂದು ವಿವರಿಸಿದರು.

ಬಹುಸಂಖ್ಯಾತ ಜನರು‌ ಅಕ್ಷರ ವಂಚಿತರಾಗಿದ್ದರು.ಪರಿಣಾಮ ಸಂಸ್ಕೃತ ಕಲಿಯಲು ಸಾಧ್ಯವಾಗಲಿಲ್ಲ. ಒಂದು ಕಾಲದಲ್ಲಿ ಸಂಸ್ಕೃತ ಎಂದರೆ ಬಹುಸಂಖ್ಯಾತರು ಕಲಿಯಲು ಸಾಧ್ಯವಿರಲಿಲ್ಲ. ಏಕೆಂದರೆ ಸಂಸ್ಕೃತ ಮೇಲ್ವರ್ಗದವರ ಸ್ವತ್ತಾಗಿತ್ತು. ನಾನು ಶಿಕ್ಷಣ ಪಡೆಯಲು ಕಾರಣವಾಗಿದ್ದು ಸಂವಿಧಾನ. ಸಂವಿಧಾನ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ, ಹಾಗಾಗಿ ಎಲ್ಲರೂ ಸಂವಿಧಾನ ಉಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಇವನಾರವ ಇವನಾರವ ಇವ ನಮ್ಮವ ಎಂದು 12 ಶತಮಾನದಲ್ಲಿ ಹೇಳಿದರು. ಆದರೆ ಇಂದಿಗೂ ಜಾತಿ ವ್ಯವಸ್ಥೆ ಹೋಗಿಲ್ಲ. ಬಸವಣ್ಣನವರನ್ನು ಸಮಾಜದ ಎಲ್ಲಾ ವರ್ಗದ ಜನರು ಪೂಜಿಸಬೇಕು‌.ಬಸವಣ್ಣ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸಿದ್ದಾರೆ. ಅಸಮಾನತೆ ಹೋಗಿ ಸಮ ಸಮಾಜದ ನಿರ್ಮಾಣ ಆಗಬೇಕು.ಅಂದು ಅನುಭವ ಮಂಟಪವೇ ಸಂಸತ್ ಆಗಿತ್ತು.ಅಲ್ಲಿ ಎಲ್ಲಾ ವರ್ಗದ ಜನರಿಗೂ ಸಮಾನ ಅವಕಾಶವಿತ್ತು. ಯಾವುಯ ಕಟ್ಟುಪಾಡುಗಳು ಇರಲಿಲ್ಲ. ದಾಸೋಹ ಮತ್ತು ಕಾಯಕ ತತ್ವವನ್ನು ಬಸವಣ್ಣಸಾರಿದ್ದಾರೆ. ವೃತ್ತಿಯಿಂದ ಯಾರು ಕೀಳಲ್ಲ, ಮೇಲಲ್ಲ. ಕಸ ಗುಡಿಸುವವನು ಕೀಳಲ್ಲ, ರಾಷ್ಟ್ರಪತಿಯೇ ಮೇಲಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಹೇಳಿದರು.

ಬಸವ ಬಳಗಗಳ ಒಕ್ಕೂಟದ ಬೇಡಿಕೆಯಂತೆ ಬಸವ ಭವನ ನಿರ್ಮಿಸಲು ಹೆಚ್ಚಿನ‌ ಅನುದಾನವನ್ನು ಒದಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ. ಸಚಿವರಾದ ಡಾ.ಮಹದೇವಪ್ಪ ಮತ್ತತಿರರು ಇದ್ದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.