Police News: ಎಸ್‌ಸಿ, ಎಸ್‌ಟಿ ಪ್ರಕರಣಗಳ ತನಿಖೆಗೆ 33 ಪೊಲೀಸ್‌ ಠಾಣೆ ಕಾರ್ಯಾರಂಭ; ಅಂಬೇಡ್ಕರ್‌ ಜಯಂತಿಯಂದು ಜಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Police News: ಎಸ್‌ಸಿ, ಎಸ್‌ಟಿ ಪ್ರಕರಣಗಳ ತನಿಖೆಗೆ 33 ಪೊಲೀಸ್‌ ಠಾಣೆ ಕಾರ್ಯಾರಂಭ; ಅಂಬೇಡ್ಕರ್‌ ಜಯಂತಿಯಂದು ಜಾರಿ

Police News: ಎಸ್‌ಸಿ, ಎಸ್‌ಟಿ ಪ್ರಕರಣಗಳ ತನಿಖೆಗೆ 33 ಪೊಲೀಸ್‌ ಠಾಣೆ ಕಾರ್ಯಾರಂಭ; ಅಂಬೇಡ್ಕರ್‌ ಜಯಂತಿಯಂದು ಜಾರಿ

Police News: ಕರ್ನಾಟಕದಲ್ಲಿ ಎಸ್‌ಸಿ ಎಸ್ಟಿ ಮೇಲಿನ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಪೊಲೀಸ್‌ ಠಾಣೆಗಳನ್ನು ಡಾ.ಅಂಬೇಡ್ಕರ್‌ ಅವರ ಜಯಂತಿಯಂದು ಆರಂಭಿಸಲಾಗುತ್ತಿದೆ.ವರದಿ: ಎಚ್‌.ಮಾರುತಿ.ಬೆಂಗಳೂರು

ಕರ್ನಾಟಕದಲ್ಲಿ ಎಸ್ಸಿ ಎಸ್ಟಿ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಠಾಣೆ ಬರಲಿವೆ.
ಕರ್ನಾಟಕದಲ್ಲಿ ಎಸ್ಸಿ ಎಸ್ಟಿ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಠಾಣೆ ಬರಲಿವೆ.

Police News: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆಯುವ ದೌರ್ಜನ್ಯಗಳ ವಿಚಾರಣೆಗೆ ಕರ್ನಾಟಕ ಸರ್ಕಾರ ಪ್ರತ್ಯೇಕ ಪೊಲೀಸ್‌ ಠಾಣೆಗಳನ್ನು ಸ್ಥಾಪಿಸುತ್ತಿದೆ. ಡಾ.ಅಂಬೇಡ್ಕರ್‌ ಜಯಂತಿ ಆಚರಿಸುವ ಏಪ್ರಿಲ್‌ 14 ರಂದು ಬೆಂಗಳೂರು ನಗರವೂ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 33 ವಿಶೇಷ ಪೊಲೀಸ್‌ ಠಾಣೆಗಳು ಆರಂಭವಾಗಲಿವೆ. ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳ ಮೇಲೆ ದಾಖಲಾಗುವ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಪ್ರಮಾಣ ಅತ್ಯಂತ ಕಡಿಮೆ ಇದ್ದು, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಈ ಪೊಲೀಸ್‌ ಠಾಣೆಗಳನ್ನು ಆರಂಭಿಸುತ್ತಿದೆ. 2023-24 ರ ಬಜೆಟ್‌ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಆರ್‌ಇ ಕಾರ್ಯವೈಖರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ಘೋಷಿಸಿದ್ದರು. ಈ ಘೋಷಣೆ ಮಾಡಿದ ಎರಡು ವರ್ಷಗಳ ನಂತರ ಈ ಯೋಜನೆ ಜಾರಿಯಾಗುತ್ತದೆ. ದಲಿತರ ಹಕ್ಕುಗಳನ್ನು ರಕ್ಷಿಸಲು ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಐತಿಹಾಸಿಕ ನಿರ್ಧಾರವಾಗಿದ್ದು ಏಪ್ರಿಲ್‌ 14 ರಂದು ಪೊಲೀಸ್‌ ಠಾಣೆಗಳು ಆರಂಭವಾಗಲಿವೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಖಚಿತಪಡಿಸಿದ್ದಾರೆ.

ಈ ಪೊಲೀಸ್‌ ಠಾಣೆಗಳ ಪೈಕಿ 2 ಬೆಂಗಳೂರಿನಲ್ಲಿ ಮತ್ತು ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ಪೊಲೀಸ್‌ ಠಾಣೆ ಕಾರ್ಯಾರಂಭವಾಗಲಿದೆ. 2020-24 ರ ಅವಧಿಯ 5 ವರ್ಷಗಳಲ್ಲಿ ದೌರ್ಜನ್ಯ ಪ್ರಕರಣಗಳಲ್ಲಿ 10,961 ಪ್ರಕರಣಗಳ ಪೈಕಿ 3,118 ಪ್ರತಿ ದೂರುಗಳು ದಾಖಲಾಗಿದ್ದವು. ಅಂದರೆ ಒಟ್ಟು ಪ್ರಕರಣಗಳಲ್ಲಿ ಶೇ.28 ರಷ್ಟು ಪ್ರತಿದೂರು ದಾಖಲಾಗಿದ್ದವು. ಸಮಾಜ ಕಲ್ಯಾಣ ಇಲಾಖೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತ್ತು. ಈ ವರ್ಷದ ಜನವರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೌರ್ಜನ್ಯ ಪ್ರಕರಣಗಳನ್ನು ಪೊಲೀಸರೇ ದುರ್ಬಲಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಈ ಹಿಂದೆ ಘೋಷಿಸದಂತೆ ಪ್ರತ್ಯೇಕ ಠಾಣೆಗಳನ್ನು ಸ್ಥಾಪಿಸಿ ತನಿಖೆಯನ್ನು ವೃತ್ತಿಪರವಾಗಿಯೇ ಕೈಗೊಳ್ಳಬೇಕು ಎನ್ನುವ ಸೂಚನೆಯನ್ನು ನೀಡಿದ್ದರು. ಅದು ಈಗ ಜಾರಿಯಾಗುವ ಸಮಯವು ಕರ್ನಾಟಕದಲ್ಲಿ ಬಂದಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 2012 ರಿಂದ 2024 ರ ವರೆಗೆ ಶೇ. 2.4 ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 1975ರ ಸರ್ಕಾರದ ಅದೇಶದ ಪ್ರಕಾರ 14 ಅಂಶಗಳನ್ನು ಕುರಿತು ತನಿಖೆ ನಡೆಸಬೇಕು ಎಂದು ಡಿಸಿಆರ್‌ಇಗೆ ಕಡ್ಡಾಯಗೊಳಿತ್ತು. ಆದರೆ ಪೊಲೀಸ್‌ ಠಾಣೆಗಳಿಲ್ಲದ ಕಾರಣಕ್ಕೆ ಡಿಸಿಆರ್‌ಇ ಗೆ ತನಿಖಾ ಅಧಿಕಾರ ಇರಲಿಲ್ಲ.

ಈ ಪೊಲೀಸ್‌ ಠಾಣೆಗಳು ಆರಂಭವಾದರೆ ಡಿಸಿಆರ್‌ ಇ ಎಡಿಜಿಪಿ ಅವರು ತನಿಖಾ ಅಧಿಕಾರಿಯನ್ನುನೇಮಿಸುತ್ತಾರೆ. ಇವರು ಉಪ ವಿಭಾಗ ಪೊಲೀಸ್‌ ಅಧಿಕಾರಿಯಿಂದ ಪ್ರಕರಣವನ್ನು ವಹಿಸಿಕೊಂಡು ತನಿಖೆ ನಡೆಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರೆ.

ಅನೇಕ ದಲಿತ ಸಂಘಟನೆಗಳ ಮುಖಂಡರು ಮತ್ತು ಹೋರಾಟಗಾರರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಪೊಲೀಸ್‌ ಠಾಣೆಗಳು ಕೇವಲ ಪೇಪರ್‌ ಮೇಲಿರಬಾರದು ಬದಲಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕು. ಈ ಪೊಲೀಸ್‌ ಠಾಣೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಈ ಠಾಣೆಗಳಿಗೆ ಶಿಕ್ಷೆಯ ರೂಪದಲ್ಲಿ ಪೊಲೀಸರನ್ನು ವರ್ಗಾವಣೆ ಮಾಡುವಂತಾಗಬಾರದು. ಸಾಮಾಜಿಕ ಬದ್ಧತೆ ಇರುವವರನ್ನು ಮಾತ್ರ ಈ ಠಾಣೆಗಳಿಗೆ ನಿಯೋಜಿಸಬೇಕು ಎಂದು ಸಲಹೆ ನೀಡುತ್ತಾರೆ. ಈ ನಿರ್ಧಾರ ಐತಿಹಾಸಿಕ ಎನ್ನುವುದರಲ್ಲಿ ಎರಡು ಮಾತಿಲ್ಲ, ಅದರೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಈ ಪ್ರಯತ್ನಕ್ಕೆ ಅರ್ಥ ಬರುತ್ತದೆ ಎಂದು ದಲಿತ ಹೋರಾಟಗಾರರು ಕಳಕಳಿ ವ್ಯಕ್ತಪಡಿಸುತ್ತಾರೆ.

ವರದಿ: ಎಚ್.‌ ಮಾರುತಿ, ಬೆಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner