KAS Posting: 11 ಕೆಎಎಸ್ ಅಧಿಕಾರಿಗಳ ವರ್ಗ, ಉಡುಪಿಗೆ ಹೊಸ ಎಡಿಸಿ, ಪುತ್ತೂರಿಗೆ ಎಸಿ, ಧಾರವಾಡ ಕೃಷಿ ವಿವಿಗೆ ಕುಲಸಚಿವರ ನೇಮಕ
KAS Posting: ಕರ್ನಾಟಕ ಸರ್ಕಾರವು ವಿವಿಧ ಹುದ್ದೆಗಳಲ್ಲಿದ್ದ ಹಾಗೂ ಹುದ್ದೆ ನಿರೀಕ್ಷೆಯಲ್ಲಿದ್ದ ಕೆಎಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು: ಕರ್ನಾಟಕ ಸರ್ಕಾರವು ಕರ್ನಾಟಕ ಆಡಳಿತ ಸೇವೆಯ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ. ಉಡುಪಿ ಅಪರ ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ, ಧಾರವಾಡದ ಕೃಷಿ ವಿಶ್ವವಿದ್ಯಾನಿಲಯಕ್ಕೆ ನೂತನ ಕುಲಸಚಿವರನ್ನು ನೇಮಕ ಮಾಡಲಾಗಿದೆ. ಹುದ್ದೆ ನಿರೀಕ್ಷೆಯಲ್ಲಿದ್ದ ಕೆಲವು ಕೆಎಎಸ್ ಅಧಿಕಾರಿಗಳಿಗೆ ಹುದ್ದೆಯನ್ನು ನೀಡಲಾಗಿದೆ. ವರ್ಗ ಆಗಿರುವ ಹಿರಿಯ ಕೆಎಎಸ್ ಅಧಿಕಾರಿಗಳ ಪಟ್ಟಿ ಹಾಗೂ ಅವರು ನಿಯೋಜನೆಗೊಂಡಿರುವ ಹುದ್ದೆಯ ವಿವರ ಹೀಗಿದೆ.
ಸಿಬ್ಬಂದಿ ಆಡಳಿತ ಸುಧಾರಣೆ ಕಾರ್ಯಕ್ರಮ ನಿರ್ದೇಶಕರಾಗಿದ್ದ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ಅವರನ್ನು ಬೆಂಗಳೂರಿನಲ್ಲಿ ನಗರಾಭಿವೃದ್ದಿ ಇಲಾಖೆ ಅಪರ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಲಾಗಿದೆ.
ಹುದ್ದೆ ನಿರೀಕ್ಷೆಯಲ್ಲಿದ್ದ ಹಿರಿಯ ಅಧಿಕಾರಿ ಡಾ.ಎ.ಸೌಜನ್ಯ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಜಾಗೃತಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕರಾಗಿದ್ದ ಅನಿತಾ ಲಕ್ಷ್ಮಿ ಅವರನ್ನು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ನಿಯೋಜನೆ ಮಾಡಲಾಗಿದೆ.
ಮೈಸೂರು ವಿವಿ ಕುಲಸಚಿವರ ಹುದ್ದೆಯಿಂದ ವರ್ಗಗೊಂಡು ಹುದ್ದೆ ನಿರೀಕ್ಷೆಯಲ್ಲಿದ್ದ ವಿ.ಆರ್.ಶೈಲಜಾ ಅವರನ್ನು ಮೈಸೂರು-ಮಡಿಕೇರಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿಯಾಗಿ ನೇಮಿಸಲಾಗಿದೆ. ಈ ಹುದ್ದೆಯಲ್ಲಿದ್ದ ವೈ.ಎನ್.ಚಂದ್ರಮ್ಮ ನಿವೃತ್ತಿಯಿಂದ ಈ ಹುದ್ದೆ ಖಾಲಿಯಾಗಿತ್ತು.
ವಿಜಯಪುರ ಜಿಲ್ಲೆ ಇಂಡಿಯ ಉಪವಿಭಾಗಾಧಿಕಾರಿ ಅಬಿದ್ ಗದ್ಯಾಳ ಅವರನ್ನು ಉಡುಪಿ ಜಿಲ್ಲೆ ಅಪರ ಜಿಲ್ಲಾಧಿಕಾರಿ ಹುದ್ದೆಗೆ ನೇಮಿಸಲಾಗಿದೆ.
ಬೃಹತ್ ಬೆಂಗಳೂರು ನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಜಂಟಿ ಆಯುಕ್ತಾಗಿದ್ದ ಆರ್.ಪ್ರತಿಭಾ ಅವರನ್ನು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಉಪಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಾಗಿದ್ದ ಸ್ಟೆಲ್ಲಾ ವರ್ಗೀಸ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಉಪ ವಿಭಾಗಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳ ಉಪವಿಭಾಗಾಧಿಕಾರಿಯಾಗಿದ್ದ ಡಾ.ಎನ್.ನಯನ ಅವರನ್ನು ಬೆಂಗಳೂರಿನ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ಹಣಕಾಸು ನಿಗಮದ ಉಪಪ್ರಧಾನ ವ್ಯವಸ್ಥಾಪಕ ಹುದ್ದೆಗೆ ನೇಮಿಸಲಾಗಿದೆ.
ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಕುಲಸಚಿವರಾಗಿದ್ದ ಅನುರಾಧ ವಸ್ತ್ರದ್ ಅವರನ್ನು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ನೇಮಿಸಲಾಗಿದೆ.
ಧಾರವಾಡ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾಗಿದ್ದ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರನ್ನು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಸಚಿವರನ್ನಾಗಿ ನೇಮಕ ಮಾಡಲಾಗಿದೆ.
ಸ್ಥಳ ನಿರೀಕ್ಷೆಯಲ್ಲಿದ್ದ ಅಶೋಕ ಈರಪ್ಪ ಗುರಾಣಿ ಅವರನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ವಿಭಾಗ